ಯೂಥ್ ಗಳ ಸಾಥ್…

Spread the love
Share Button

ನಿನ್ನೆ ಸಂಜೆ,ಮೈಸೂರಿನ ಶಾರದಾ ವಿಲಾಸ ಕಾಲೇಜಿನ ಶತಮಾನೋತ್ಸವ ಭವನದಲ್ಲಿ, ಯೂಥ್ ಹಾಸ್ಟೆಲ್ ಅಸೋಸಿಯೇಷನ್ ಒಫ಼್ ಇಂಡಿಯ (ಯೈ.ಎಚ್.ಎ.ಐ) ಗಂಗೋತ್ರಿ ಮೈಸೂರು, ಘಟಕದ ರಜತ ಮಹೋತ್ಸವದ ಸಮಾರೋಪ ಕಾರ್ಯಕ್ರಮವಿತ್ತು. ಅದೊಂದು ಆಚ್ಚುಕಟ್ಟಾದ ಸರಳ ಸುಂದರ ಕಾರ್ಯಕ್ರಮವಾಗಿತ್ತು.
ಮೂರು ವರ್ಷಗಳ ಹಿಂದೆ ಯೈ.ಎಚ್.ಎ.ಐ, ಗಂಗೋತ್ರಿ ಘಟಕದ ಪರಿಚಯವಾಯಿತು. ಈ ಒಡನಾಟ ಮುಂದುವರಿದು ನನಗೆ ಚಾರಣದಲ್ಲಿ ಆಸಕ್ತಿ ಮೂಡಬಹುದೆಂಬ ಕಲ್ಪನೆಯೂ ಆಗ ಇದ್ದಿರಲಿಲ್ಲ.

ಅದೆಷ್ಟು ವೈವಿಧ್ಯಮಯ ನಮ್ಮ ದೇಶ? ಚಾರಣ ಎಂಬ ಸರಳ ಮೂರಕ್ಷರ ಪದದ ವ್ಯಾಪ್ತಿ ಅದೆಷ್ಟು ದೊಡ್ಡದು? ಬಲ್ಲವರ ಮಾತಿನಂತೆ ‘ದೇಶ ಸುತ್ತಬೇಕು, ಕೋಶ ಓದಬೇಕು’. ದೇಶ ಸುತ್ತಲು ನಮಗೆ ಅನುಭವಿಗಳ ಮಾರ್ಗದರ್ಶನ, ಸಮಾನಾಸಕ್ತರ ಒಡನಾಟ, ಪರಸ್ಪರ ಕಾಳಜಿ, ತಂಡ ಸ್ಪೂರ್ತಿ, ಸುರಕ್ಷೆ ಹಾಗೂ ಮಿತವ್ಯಯದ ವ್ಯವಸ್ಥೆ ಬೇಕು.  ಇವೆಲ್ಲಾ ಒಂದೇ ಕಡೆ ಸಿಗಬೇಕೆ? ತುಂಬಾ ಸುಲಭ ಉಪಾಯವಿದೆ.

‘ಸಿಂಗಲ್ ವಿಂಡೋ ಸಿಸ್ಟೆಮ್” ಪದ್ಧತಿಯಂತೆ! ಯೈ.ಎಚ್.ಎ.ಐ ಸದಸ್ಯರಾಗಿ, ಸಾಕು! ಇದು ನನ್ನ ಅನುಭವ.
.
ಮೈಸೂರಿನಲ್ಲಿ ನೆಲೆಸಿ ಸುಮಾರು ವರ್ಷಗಳಾಗಿದ್ದರೂ, ಚಾಮುಂಡಿ ದೇವಾಲಯವನ್ನು ಹಲವಾರು ಬಾರಿ ಸಂದರ್ಶಿಸಿದ್ದರೂ ಅದುವರೆಗೆ ಒಂದು ಬಾರಿಯೂ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಹತ್ತಿರಲಿಲ್ಲ. ಯೈ.ಎಚ್.ಎ.ಐ ಸದಸ್ಯೆಯಾದ ಮೇಲೆ, ನಾನು ಮಾಡಿದ ಪ್ರಥಮ ಚಾರಣ ಚಾಮುಂಡಿ ಬೆಟ್ಟಕ್ಕೆ ‘ಪೋನಿ ಟ್ರ್ಯಾಕ್’ ಮೂಲಕ ಹತ್ತುವುದಾಗಿತ್ತು. ಚಾಮುಂಡಿ ಬೆಟ್ಟಕ್ಕೆ ಹತ್ತಲು 15 ಕ್ಕೂ ಹೆಚ್ಚು ಪೋನಿ ಟ್ರ್ಯಾಕ್’ ಗಳಿವೆಯಂತೆ ಎಂದು ಆಗ ಗೊತ್ತಾಯಿತು.
.
ಯೂಥ್ ಎಂದ ತಕ್ಷಣ ಮೂಡುವ ಕಲ್ಪನೆ ಎಳೆಯ ವಯಸ್ಸಿನ ಹುಡುಗ- ಹುಡುಗಿಯರ ಗುಂಪು. ಆದರೆ ಚಾರಣದ ತಂಡದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರೂ ಇದ್ದರು. ಯೈ.ಎಚ್.ಎ.ಐ ಸದಸ್ಯರೆಲ್ಲಾ ಚಿರಜವ್ವನಿಗರು ಎಂಬ ಮೊದಲ ಪಾಠ ಅರ್ಥವಾಯಿತು.ಹಿತಕರವಾದ ವಾತಾವರಣದಲ್ಲಿ, ಪುಟ್ಟ ಕಾಲುದಾರಿಗಳಲ್ಲಿ ಅನುಭವಿ ಚಾರಣಿಗರ ಬೆಂಬಲದಿಂದ ಹೆಜ್ಜೆ ಹಾಕಿದ ನನಗೆ ಸಮಯದ ಪರಿವೆಯೂ ಇರಲಿಲ್ಲ, ದಣಿವೂ ಆಗಲಿಲ್ಲ. ಅಚ್ಚುಕಟ್ಟಾದ ವ್ಯವಸ್ಥೆ, ಸ್ನೇಹಮಯಿ ಸಹಚಾರಣಿಗರು, ರುಚಿಕಟ್ಟಾದ ಊಟ-ತಿಂಡಿ, ಎಲ್ಲದಕ್ಕಿಂತಲೂ ಮೇಲಾಗಿ ಮನಸೆಳೆಯುವ ಪ್ರಕೃತಿ ಸೌಂದರ್ಯ…..ವಾವ್, ಭಾನುವಾರವನ್ನು ಸಂಪನ್ನಗೊಳಿಸಲು ಇವಿಷ್ಟು ಸಾಲದೆ?
.
ಹೀಗೆ ನನ್ನ ಪ್ರಥಮ ಚಾರಣ ತುಂಬಾ ಸಂತೋಷ ಕೊಟ್ಟಿತು. ಇನ್ನು ಮುಂದೆಯೂ ಆಗಿಂದಾಗ್ಗೆ ಯೈ.ಎಚ್.ಎ.ಐ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂಬ ಹುಮ್ಮಸ್ಸು ಮೂಡಿಸಿತು. ಚಾಮುಂಡಿ ಬೆಟ್ಟದಿಂದ ಅರಂಭಗೊಂಡ ನನ್ನ ಚಾರಣ ಹವ್ಯಾಸವು ಮುಂದುವರಿದು ಆಮೇಲೆ ಮುದಗೆರೆ, ಎಡಕಲ್ ಕೇವ್ಸ್, ಮಾವಿನಕೆರೆ ಬೆಟ್ಟ, ಮಾಲೇಕಲ್ ಬೆಟ್ಟ, ಸಿಡಿಲು ಮಲ್ಲಿಕಾರ್ಜುನ ಬೆಟ್ಟ, ಕುಮಾರ ಪರ್ವತ, ಮಂಜರಾಬಾದ್, ಜಮಾಲಾಬಾದ್, ಸಿದ್ದೇಶ್ವರ ಬೆಟ್ಟ, ಕುಂತಿ ಬೆಟ್ಟ, ಕುದುರೆಮುಖ, ಮುಳ್ಳಯ್ಯನಗಿರಿ……ಹೀಗೆ ಮುಂದುವರಿದಿದೆ. ಇವಲ್ಲದೆ ಕೆಲವು ಪ್ರಕೃತಿ ನಡಿಗೆ, ದೂದ್ ಸಾಗರ್ ಗೆ ರೈಲ್ವೇ ಟ್ರ್ಯಾಕ್ ಚಾರಣ, ಬೀಚ್ ಚಾರಣ, ನೆರೆಯ ರಾಜ್ಯದಲ್ಲಿ ಚಾರಣ, ದೂರದ ಜೈಸಲ್ಮೇರ್ ನ ಮರುಭೂಮಿ, ಹಿಮಾವೃತ ಕುಲು ಮನಾಲಿ…..ಹೀಗೆ ಪಟ್ಟಿ ಬೆಳೆದಿದೆ.

ಇದಕ್ಕೆ ಕಾರಣವಾದ ಮೈಸೂರಿನ ಯೈ.ಎಚ್.ಎ.ಐ ಗಂಗೋತ್ರಿ ಘಟಕದ ಎಲ್ಲಾ ಪದಾಧಿಕಾರಿಗಳಿಗೆ ಮತ್ತು ವಿಭಿನ್ನ ಕಾರ್ಯಕ್ರಮಗಳ ಆಯೋಜಕರಿಗೆ ಹೃತ್ಪೂರ್ವಕ ಧನ್ಯವಾದಗಳು ಮತ್ತು ಅಭಿನಂದನೆಗಳು.

ಯೈ.ಎಚ್.ಎ.ಐ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅದರ ಸದಸ್ಯರಾಗಬೇಕು. ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಿ. (ಸಮಯ : ಸಂಜೆ 06.30 ರಿಂದ ರಾತ್ರಿ 0900 ರ ವರೆಗೆ). ತಮ್ಮ ಇಮೈಲ್ ಅನ್ನು ಅವರಲ್ಲಿ ನೋಂದಾಯಿಸಿ. ಪ್ರತಿ ತಿಂಗಳ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನಿಮಗೆ ಇಮೈಲ್ ನಲ್ಲಿ ಬರುತ್ತದೆ.
.
No.84,  9 th Cross,  Saraswathipuram, Mysore, Karnataka 570009
Phone:0821 234 1419  email : yhaigumys@gmail.com
.
– ಹೇಮಮಾಲಾ.ಬಿ

3 Responses

  1. Sangeetha Muraleedhar says:

    Nice article and very informative!

  2. Shivaram Nayak says:

    ವೆಬ್ಸೈಟ್ ಬಹಳ ಚೆನ್ನಾಗಿದೆ. ಧನ್ಯವಾದಗಳು. – ಶಿವರಾಂ ನಾಯಕ್

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: