ಯಾರಿವನು ಅಪರಿಚಿತ?
ಒಮ್ಮೆ ಸ್ಕಾಟ್ ಲ್ಯಾಂಡಿನಲ್ಲಿ ವಾಸವಾಗಿದ್ದ ಮಗನ ಮನೆಯಿಂದ ಇಂಗ್ಲೆಂಡಿನಲ್ಲಿದ್ದ ತಮ್ಮನ ಮನೆಗೆ ರೈಲಿನಲ್ಲಿ ಬಂದೆ. ಪಯಣದುದ್ದಕ್ಕೂ ನಮ್ಮನ್ನು ಹಿಂಬಾಲಿಸಿ ಬರುತ್ತಿದ್ದ ಕಡಲ ತೀರ, ಅಲ್ಲಲ್ಲಿ ಹಸಿರು ಹೊದ್ದ ಬೆಟ್ಟ ಗುಡ್ಡಗಳು, ಜೂನ್ ತಿಂಗಳಾದ್ದರಿಂದ ಎಲ್ಲಿ ನೋಡಿದರೂ ಮರ ಗಿಡಗಳಲ್ಲಿ ಬಣ್ಣ ಬಣ್ಣದ ಹೂಗಳು ಅರಳಿ ನಿಂತಿದ್ದವು. ಸುಮಾರು ಆರು ಗಂಟೆಗಳ ಕಾಲ ಪಯಣ. ಮಗ, ‘ವಿಮಾನದಲ್ಲಿ ಹೋಗು, ಕೇವಲ ಒಂದೂವರೆ ಗಂಟೆಯಲ್ಲಿ ಊರು ತಲುಪುತ್ತೀಯ’ ಎಂದ. ಆದರೆ ನನಗೆ ರೈಲಿನಲ್ಲಿ ಪಯಣಿಸುವ ಆಸೆಯಿತ್ತು. ಅಚ್ಚರಿಯ ಸಂಗತಿ ಎಂದರೆ ವಿಮಾನದ ಟಿಕೆಟ್ ದರಕ್ಕಿಂತ ರೈಲಿನ ಟಿಕೆಟ್ ದರವೇ ಹೆಚ್ಚಿತ್ತು. ಅಲ್ಲಿನ ಮತ್ತೊಂದು ವಿಚಿತ್ರ ಎಂದರೆ – ವಾರದ ದಿನಗಳಲ್ಲಿರುವ ಟಿಕೆಟ್ ದರಕ್ಕಿಂತ ವಾರದ ಕೊನೆಯಲ್ಲಿ ಅಂದರೆ ಶನಿವಾರ, ಬಾನುವಾರದಂದು ದರ ಹೆಚ್ಚು. ಒಂದೆರಡು ತಿಂಗಳು ಮುಂಚಿತವಾಗಿ ಸೀಟು ಕಾದಿರಿಸಿದವರಿಗೆ ದರ ಮತ್ತಷ್ಟು ಕಡಿಮೆ. ಅವರ ವ್ಯಾಪಾರೀ ಮನೋಭಾವ ಕಂಡು ಅಚ್ಚರಿಯಾಯಿತು.
ತಮ್ಮನ ಮನೆಯಲ್ಲಿ ನಾಲ್ಕು ದಿನ ಇದ್ದು , ನಂತರ ಸ್ಕಾಟ್‌ಲ್ಯಾಂಡಿಗೆ ಹಿಂತಿರುಗಿ ಹೊರಟೆ. ರೈಲ್ವೆ ನಿಲ್ದಾಣಕ್ಕೆ, ತಮ್ಮನ ಹೆಂಡತಿ ಬನು ಬಂದಿದ್ದಳು. ಸಮಯ ಮೀರಿದರೂ ರೈಲು ಬರಲಿಲ್ಲ, ನಾವು ಅಲ್ಲಿ ಪ್ರಕಟವಾಗಿದ್ದ ಪ್ರ್ರಕಟಣೆಯ ಕಡೆ ಗಮನ ಹರಿಸಿರಲಿಲ್ಲ. ಹಿಂದಿನ ದಿನ ಬಾರೀ ಮಳೆಯಾಗಿದ್ದರಿಂದ, ಅಲ್ಲಲ್ಲಿ ಮರಗಳು ರೈಲ್ವೆ ಹಳಿಗಳ ಮೇಲೆ ಉರುಳಿ ಬಿದ್ದುದರಿಂದ ಅಂದಿನ ರೈಲು ರದ್ದಾಗಿತ್ತು. ನನ್ನದು ಓಪನ್ ಟಿಕೆಟ್ ಆಗಿದ್ದುದರಿಂದ, ನಾನು ಆ ತಿಂಗಳಲ್ಲಿ ಎಂದಾದರೂ ಪಯಣಿಸಬಹುದಿತ್ತು. ಬೇರೆ ದಾರಿಯಿಲ್ಲದೇ ಮನೆಗೆ ವಾಪಸ್ ಆದೆವು. ಮಾರನೆಯ ದಿನ ರೈಲಿನಲ್ಲಿ ಜನಜಂಗುಳಿ ಇತ್ತು. ಎರಡು ದಿನದ ಪ್ರಯಾಣಿಕರು ಒಂದೇ ರೈಲಿನಲ್ಲಿ ಹೋಗಬೇಕಿತ್ತಲ್ಲ. ನಾನು ನಿಂತು ಪಯಣಿಸಬೇಕಾದ ಪರಿಸ್ಥಿತಿ ಬಂತು. ರೈಲಿನ ಪ್ರವೇಶ ದ್ವಾರದಲ್ಲಿಯೇ ಇದ್ದ ಶೆಲ್ಫ್‌ನಲ್ಲಿ ನನ್ನ ಸೂಟ್‌ಕೇಸ್ ಇಟ್ಟು, ಒಂದು ಸೀಟಿನ ಬಳಿ ನಿಂತೆ. ನಮ್ಮೂರಿನಲ್ಲಿ ಇದು ಸರ್ವೇ ಸಾಮಾನ್ಯ ಅಲ್ಲವೇ?
ಅರ್ಧ ಗಂಟೆ ಕಳೆದಿರಬಹುದು, ಎರಡು ಸೀಟು ಮುಂದಿದ್ದ ಸಹ ಪ್ರಯಾಣಿಕನೊಬ್ಬ ನನ್ನನ್ನು ಕರೆದ. ಅಪರಿಚಿತರ ಮಧ್ಯೆ ಯಾರು ನನ್ನನ್ನು ಕರೆಯಲು ಸಾಧ್ಯ, ಬಹುಶಃ ನನ್ನ ಮುಂದೆ ನಿಂತಿದ್ದ ಬಿಳಿಯ ಹೆಣ್ಣುಮಗಳನ್ನು ಇರಬಹುದೇನೂ, ಎಂದು ನಾನು ಸುಮ್ಮನೆ ನಿಂತೆ. ನನ್ನ ಮುಂದೆ ನಿಂತಿದ್ದ ಹೆಣ್ಣೊಬ್ಬಳು, ‘ಓ, ಥ್ಯಾಂಕ್ಯೂ’ ಎಂದು ಅವನ ಸೀಟಿನಲ್ಲಿ ಕೂರಲು ಹೋದಳು. ಅವನು, ‘ಸಾರಿ, ನಾನು ಆಹ್ವಾನಿಸಿದ್ದು ಅವರನ್ನು’ ಎಂದು ಮತ್ತೆ ನನ್ನೆಡೆಗೆ ತೋರಿಸಿದ. ನನಗೋ, ನನ್ನ ಕಿವಿಯನ್ನು ನಾನೇ ನಂಬಲಾಗಲಿಲ್ಲ. ಅನ್ಯ ಮಾರ್ಗವಿಲ್ಲದೆ, ಅಪರಿಚಿತ ನೀಡಿದ್ದ ಸೀಟಿನಲ್ಲಿ ಕುಳಿತೆ. ಅರ್ಧ ಗಂಟೆ ಕಳೆದಿರಬಹುದು, ಕ್ಯಾಂಟೀನಿನ ಸಿಬ್ಬಂದಿ ಬಂದು ಪ್ರಯಾಣಿಕರಿಗೆ – ಕಾಫಿ, ಟೀ, ಸ್ನಾಕ್ಸ್ ನೀಡುತ್ತಿದ್ದರು. ನನಗೆ ಎರಡು ಬಿಸ್ಕೆಟ್ ಜೊತೆಗೆ ಕಾಫಿ ನೀಡಿದಾಗ, ಕಾಫಿ ಹೀರುತ್ತಾ ಸ್ವಲ್ಪ ರಿಲ್ಯಾಕ್ಸ್ ಆದೆ. ಆದರೆ, ನನ್ನ ಕಾಫಿಗೆ ಹಣ ಕೊಟ್ಟ ಮಹಾಶಯ, ಆ ಅಪರಿಚಿತನೇ.
ಕೊನೆಗೂ ನಾನು ಇಳಿಯಬೇಕಾಗಿದ್ದ ಊರು ಬಂತು. ಧಾವಿಸಿ ಬಂದ ಅಪರಿಚಿತ, ನನ್ನ ಸೂಟ್‌ಕೇಸ್ ಇಳಿಸುವಾಗ ಮತ್ತೆ ನೆರವಿನ ಹಸ್ತ ಚಾಚಿದ. ನಾನು ಹೋಗಬೇಕಾಗಿದ್ದ ಅಡ್ರೆಸ್ ವಿಚಾರಿಸಿದ. ಮಗ ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ವಿವರ ತಿಳಿಸಿದೆ. ನಾನು ಮಗನಿಗೆ ಫೋನ್ ಮಾಡಿದಾಗ, ‘ಆಸ್ಪತ್ರೆಯಲ್ಲಿ ಕೆಲಸ ಮುಗಿಸಿ ಬರಲು ಅರ್ಧ ಗಂಟೆ ತಡವಾಗಬಹುದು. ರೈಲ್ವೆ ನಿಲ್ದಾಣದಲ್ಲಿಯೇ ಕುಳಿತಿರು’, ಎಂದು ಹೇಳಿದ. ಮಗ ಬರುವವರೆಗೂ, ಅಪರಿಚಿತ, ಪರಿಚಿತನಂತೆ ನನ್ನ ಜೊತೆ ಮಾತಾಡುತ್ತಾ ನಿಂತಿದ್ದ. ಅವನ ಬಹು ಪಾಲು ಮಾತುಗಳು ಅರ್ಥವಾಗುತ್ತಿರಲಿಲ್ಲ. ಆದರೂ ನಮ್ಮ ಮಾತುಕತೆ ಸಾಗಿತ್ತು.
ಮಗ ಬರುವುದು ದೂರದಲ್ಲಿ ಕಂಡಾಗ, ನಾನು ಸಂಭ್ರಮದಿಂದ ಅವನಿಗೆ ಮಗನನ್ನು ತೋರಿಸಿದೆ. ಮಗ ಹತ್ತಿರ ಬಂದಾಗ, ಅಪರಿಚಿತನನ್ನು ಪರಿಚಯಿಸಲು ತಿರುಗಿ ನೋಡಿದರೆ, ಅವನಲ್ಲಿರಲಿಲ್ಲ. ಅರೆ, ಇಲ್ಲಿಯೇ ಇದ್ದನಲ್ಲ, ಎಲ್ಲಿ ಹೋದ? ಅವನು ಆ ಜನ ಜಂಗುಳಿಯಲ್ಲಿ ಕರಗಿ ಹೋಗಿದ್ದ. ನಾನೊಂದು ಥ್ಯಾಂಕ್ಸ್ ಸಹ ಹೇಳಿರಲಿಲ್ಲ. ಇವನಾರು – ನನ್ನ ಊರಿನವನಲ್ಲ, ಪರಿಚಯದವನೂ ಅಲ್ಲ, ಸಂಬಂಧಿಕನಲ್ಲ, ನನ್ನ ಗೆಳೆಯನೂ ಅಲ್ಲ – ನನಗೆ ತನ್ನ ಸೀಟು ಬಿಟ್ಟು ಕೊಟ್ಟವನು, ಸುಮಾರು ಆರು ಗಂಟೆಗಳ ಕಾಲ ನಿಂತೇ ಪಯಣಿಸಿದ್ದ. ಆತ್ಮೀಯನಂತೆ ಮಾತನಾಡಿಸಿದ್ದ, ಮಗ ಬರುವವರೆಗೂ ಜೊತೆಯೇ ನಿಂತಿದ್ದ. ನಂತರ ಅದೃಶ್ಯನಾಗಿದ್ದ.
ಗೆಳೆಯಾ, ನೀನಂದು ನೀಡಿದ ನೆರವು, ನಾನೆಂದೂ ಮರೆಯಲು ಸಾಧ್ಯವಿಲ್ಲ. ನಿನ್ನ ಹೆಸರೂ ಗೊತ್ತಿಲ್ಲ ನನಗೆ. ಆದರೆ, ದೂರದೂರಿನಲ್ಲಿರುವ ನಿನ್ನ ನೆನಪು ನನ್ನ ಹೃದಯದಲ್ಲಿ ಚಿರಸ್ಥಾಯಿಯಾಗಿದೆ.
-ಡಾ.ಗಾಯತ್ರಿದೇವಿ ಸಜ್ಜನ್
ಯಾರಿವನು ಅಪರಿಚಿತ ಲೇಖನ ಕುತೂಹಲದಿಂದ ಓದಿಸಿಕೊಂಡು ಹೋಯಿತು ಧನ್ಯವಾದಗಳನ್ನು ತಿಳುಸುವಷ್ಟರಲ್ಲಿ ಮಾಯವಾದದ್ದು ಅಚ್ಚರಿ ಮೂಡಿಸಿತು ಎಷ್ಷೋ ಸಾರಿ ಈ ರೀತಿಯ ಘಟನೆ ನೆಡೆಯುತ್ತದೆ..ಕೈಕೊಡುವವರೂ ಇರುತ್ತಾರೆ ನಮ್ಮ ಅದೃಷ್ಟ
ಮೇಡಂ.
ಹೌದು ನನಗೂ ಸಂದೇಹ ಅನುಮಾನ ಕಾಡಿತು
ನಂತರ ಮೂಡಿತು ಕೃತಜ್ಞತಾಭಾವ
ನಿರೂಪನೆ ಬಹಳ ಚೆನ್ನಾಗಿದೆ ಮೇಡಂ. ಅದ್ಭುತ ಅನುಭವ.
ಕುತೂಹಲಕಾರಿ
ಅಪರಿಚಿತರು ಸಹಾಯಕ್ಕೆ ಬಂದರೆ ಕೆಲವೊಮ್ಮೆ ಹೆದರಿಕೆ, ಸಂಶಯಪಡುವುದು ಈ ಕಾಲದಲ್ಲಿ ಸಹಜ. ನೀವು ಭೇಟಿಯಾದ ಸಜ್ಜನರು ಪುಣ್ಯವಶಾತ್, ನಿಜವಾಗಿಯೂ ಒಳ್ಳೆಯವರಾಗಿದ್ದುದು ಪುಣ್ಯ! ಸೊಗಸಾದ ನಿರೂಪಣೆ. ಧನ್ಯವಾದಗಳು.. ಗಾಯತ್ರಿ
ಮೇಡಂ ಅವರಿಗೆ.
ವಂದನೆಗಳು
ನಿಮ್ಮ ಹೆಸರಿನಲ್ಲಿ ಯೇ ಸಜ್ಜನ ಇದೆ ಮೇಡಂ. ನಿಮ್ಮ ಸಹಾಯಕ್ಕೆ ಸಜ್ಜನ ರು ಒದಗಿದರು ನೋಡಿ. ಅಭಿನಂದನೆ ಗಳು ಮೇಡಂ
ನಿಮ್ಮ ಅಭಿಮಾನದ ನುಡಿಗಳಿಗೆ ವಂದನೆಗಳು
ಅಬ್ಬ, ನಂಬಲಿಕ್ಕೇ ಸಾಧ್ಯವಾಗದಂತೆ, ಕನಸಿನಂತೆ ಇದೆ, ನಿಮ್ಮ ಈ ಪ್ರವಾಸೀ ಅನುಭವ. ಆಪತ್ಬಾಂಧವ ಶಬ್ಧಕ್ಕೆ ಹೇಳಿ ಮಾಡಿಸಿದಂಥಹ ಅಪರಿಚಿತ ಸಹಾಯ ಹಸ್ತ “ಹೀಗೂ ಉಂಟೆʼ ಅನ್ನುವಂತಿದೆ. ಲೇಖನ ಓದಿದಾಗ ಮನ ಪುಳಕಿತಗೊಂಡಿತು.
ವಂದನೆಗಳು
ವಿಚಿತ್ರ ಅನುಭವ
ನಿರೂಪಣೆ ಸೊಗಸಾಗಿದೆ.