ಕೃತಿ ಪರಿಚಯ:’ಸಂಜೀವಿನಿ’, ಲೇ: ಸಂಜೋತಾ ಪುರೋಹಿತ

Share Button
ಸಂಜೋತಾ ಪುರೋಹಿತ

ಇದು ತೆಳು ಮನಸಿನ ಮೆಲು ಹುಡುಗಿ ಸಂಜೋತಾ ಪುರೋಹಿತ ರವರ ಮೊದಲ ಪ್ರೀತಿಯನ್ನು ಸದಾ ಜೀವಂತವಾಗಿರಿಸುವ ‘ಸಂಜೀವಿನಿ’ ಕಾದಂಬರಿ. ವೃತ್ತಿಯಲ್ಲಿ ಅಭಿಯಂತರರು ಆಗಿರುವ ಪ್ರಸ್ತುತ ಅಮೇರಿಕಾದಲ್ಲಿ ನೆಲೆಸಿರುವ ಇವರು ತಮ್ಮ ಪ್ರೌಢಶಾಲಾ ವಯಸ್ಸಿನಿಂದಲೇ ಸಾಹಿತ್ಯದ ಒಲವು ಹೊಂದಿದ್ದದವರು. ಆಗಾಗ ಸಣ್ಣಕಥೆ, ಕವಿತೆ, ಲೇಖನಗಳನ್ನು ಬರೆದು ಅಂತರ್ಜಾಲ ಪತ್ರಿಕೆಗಳಲ್ಲಿ (ಬ್ಲಾಗ್) ಪ್ರಕಟಿಸುತ್ತಿದ್ದ ಲೇಖಕಿ ಕಾದಂಬರಿವರೆಗೂ ತಮ್ಮ ಬರಹದ ವಿಸ್ತಾರವನ್ನು ಚಾಚಿದ್ದರ ಫಲವಾಗಿ ಹುಟ್ಟಿದ್ದೇ ಈ “ಸಂಜೀವಿನಿ”. ಕೆಲ ದಿನಗಳ ವಿರಾಮದ ನಂತರ ವಿಭಿನ್ನ ಕಥಾ ಶೈಲಿಯ “ಪುನರಪಿ ಜನನಂ” ಎನ್ನುವ ಕಿರುಕಾದಂಬರಿಯನ್ನು ಇವರು ಪ್ರಕಟಿಸಿದ್ದಾರೆ. ಪ್ರತಿವರ್ಷ ಅಮೇರಿಕನ್ನಡಿಗರೊಂದಿಗೆ ಸೇರಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುವ ಇವರು ತಮ್ಮ ಕನ್ನಡ ಪ್ರೀತಿಯಿಂದ ಮನ ಗೆಲ್ಲುತ್ತಾರೆ. ಕೆಲ ದಿನಗಳ ಹಿಂದೆ ಏರ್ಪಡಿಸಲಾಗಿದ್ದ “ನಾವಿಕ ಕಥಾಸ್ಪರ್ಧೆ” ಯಲ್ಲಿ ತೀರ್ಪುಗಾರರ ತಂಡದಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಹೊಸ ಹಾದಿಗೆ ತಮ್ಮನ್ನು ತೆರೆದುಕೊಂಡಿರುವುದು ಅಭಿನಂದನಾರ್ಹ.

ಇನ್ನು ಇವರ ಸಂಜೀವಿನಿ ಕಾದಂಬರಿಯು ಒಂದು ಅಮೋಘ ಪ್ರೇಮಕಥೆಯುಳ್ಳ ಕೃತಿ. ಅದರಲ್ಲೂ ಬಹುತೇಕ ಲೇಖಕಿಯ ಸ್ವಂತ ಕಥೆಯಿದ್ದು ಕೆಲವು ಕಡೆ ಕಾದಂಬರಿಗೆ ಇನ್ನಷ್ಟು ಮೆರಗು ನೀಡುವ ದೃಷ್ಟಿಯಿಂದ ಕಾಲ್ಪನಿಕ ಸನ್ನಿವೇಶಗಳನ್ನು ಸೇರಿಸಿ ಕಥೆ ಹೆಣೆದಿದ್ದಾರೆ. ಕಥಾನಾಯಕಿ ‘ಪುನರ್ವಸು’ಳ ಸೋದರಮಾವನ ಮನೆ ಗೃಹಪ್ರವೇಶ ಸಮಾರಂಭದಿಂದ ಪ್ರಾರಂಭವಾಗುವ ಕಥೆಯು ಅನೇಕ ತಿರುವುಗಳೊಂದಿಗೆ ಆಸಕ್ತಿದಾಯಕವಾಗಿ ಓದಿಸಿಕೊಂಡು ಹೋಗುತ್ತದೆ.

ಆ ಸಮಾರಂಭದಲ್ಲಿ ನಾಯಕಿಯು ತನ್ನ ಸೋದರ ಸಂಬಂಧಿಯ ಸ್ನೇಹಿತನಾದ ಕಥಾನಾಯಕ ಪ್ರಮಥನಿಗೆ ಮನಸೋತು ಅವನನ್ನು ಪಡೆಯುವ ಹಂಬಲದಿಂದ ತನ್ನ ಮನದ ಅಭಿಲಾಷೆಯನ್ನು ವ್ಯಕ್ತಪಡಿಸಲು ತನ್ನ ಹೃದಯದಲ್ಲಿ ಅಂಕುರಗೊಂಡ ಮೊದಲ ಪ್ರೀತಿಯನ್ನು ತಿಳಿಸಲು ಚಡಪಡಿಸುತ್ತಾಳೆ. ನಾಯಕ ಸುಲಭವಾಗಿ ಆಕೆಯ ಪ್ರೀತಿಯನ್ನು ಒಪ್ಪುವುದಿಲ್ಲ. ಒಪ್ಪದಿರುವುದಕ್ಕೆ ಸ್ಪಷ್ಟವಾದ ಕಾರಣವನ್ನು ನೀಡುವುದಿಲ್ಲ. ಆಗ ಬೇಸರಗೊಂಡ ನಾಯಕಿ ಒತ್ತಾಯಪೂರ್ವಕವಾಗಿ ಆತನನ್ನು ಮರೆಯಲು ಪ್ರಯತ್ನಿಸುತ್ತಾಳೆ. ಅದರಿಂದ ಹೊರ ಬರುವ ಸಲುವಾಗಿ ನಾಯಕಿ ತನ್ನ ಮುಂದಿನ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಒಲವು ತೋರಿ ನಡೆಯುತ್ತಾಳೆ. ಇಂಜಿನಿಯರಿಂಗ್ ಕಾಲೇಜ್ ಸೇರಿ ತನ್ನ ಇಷ್ಟದ ವಿಷಯವನ್ನು ಆಯ್ಕೆ ಮಾಡಿಕೊಂಡು ಶಿಕ್ಷಣವನ್ನು ಮುಂದುವರೆಸುತ್ತಾಳೆ. ನಾಲ್ಕು ವರ್ಷಗಳ ಕಾಲ ಕಾಲೇಜಿನ ಹಾಸ್ಟೆಲ್ ವಸತಿಯಲ್ಲಿ ಅನೇಕ ಗೆಳತಿಯರ ಪರಿಚಯ ಸ್ನೇಹದಿಂದ ತನ್ನ ಮೊದಲ ಪ್ರೀತಿಯೆಡೆಗೆ ಮತ್ತಷ್ಟು ಮನಸ್ಸು ಎಳೆಯುತ್ತದೆ. ತನ್ನ ಪ್ರೀತಿಯ ಪ್ರಮಥನನ್ನು ಕಾಣುವ, ಸೇರುವ, ಮನವೊಲಿಸುವ ಪ್ರಯತ್ನ ಆಕೆಯ ಮನಸ್ಸಿನಲ್ಲಿ ಸದಾ ಜಾರಿಯಿರುತ್ತದೆ. ಹದಿಹರೆಯದ ವಯಸ್ಸಿನಲ್ಲಿ ಚಿಗುರಿದ ಪ್ರೀತಿಯು ಯಾವಾಗಲೂ ವಯೋಸಹಜ ಆಕರ್ಷಣೆಯಾಗಿರುವುದಿಲ್ಲ. ಅದನ್ನು ಸದಾ ಜೀವಂತವಾಗಿರಿಸುವ ಉತ್ಕಟತೆಯಿಂದ ನಾಯಕಿಯು ಹುಚ್ಚು ಖೋಡಿ ಮನಸ್ಸು ಚಂಚಲತೆಯಿಂದ ಬೇರೆಡೆಗೆ ವಾಲದಂತೆ ಜಾಗ್ರತೆ ವಹಿಸುತ್ತಲೇ ಇರುತ್ತಾಳೆ. ಒಂದಲ್ಲಾ ಒಂದು ದಿನ ತನ್ನ ಪ್ರಮಥ ಮರಳಿ ಬರುತ್ತಾನೆ. ತನ್ನ ಪ್ರೀತಿಯನ್ನು ಅರಿತು ತನ್ನನ್ನು ಒಪ್ಪಿಕೊಂಡು ಜೀವನ ಸಂಗಾತಿಯಾಗಿ ಸ್ವೀಕರಿಸುತ್ತಾನೆ ಎನ್ನುವ ಹಂಬಲದಿಂದ ಕಾಯುತ್ತಿರುತ್ತಾಳೆ.

ಈ ನಡುವೆ ಆಕೆಯ ಬದುಕಿನಲ್ಲೂ ಒಂದಷ್ಟು ಅನಿರೀಕ್ಷಿತ ಬದಲಾವಣೆಗಳು ನಡೆಯುತ್ತವೆ. ವಾರಿಗೆಯ(ಓರಗೆಯ) ಸ್ನೇಹಿತೆಯರಲ್ಲಿ ಒಂದಿಬ್ಬರು ವಯೋಸಹಜ ಆಕರ್ಷಣೆಯನ್ನೇ ಪ್ರೀತಿಯೆಂದು ತಿಳಿದು ತಮ್ಮ ವಿದ್ಯಾಭ್ಯಾಸದ ಗುರಿಯೆಡೆಗೆ ಗಮನ ಬಿಟ್ಟು ಇಲ್ಲದ ರಂಪ ಮಾಡಿಕೊಳ್ಳುತ್ತಾರೆ. ಇದೆಲ್ಲವೂ ನಾಯಕಿ ಪುನರ್ವಸು ವಿನ ಮನಸ್ಸು ಘಾಸಿಗೊಳಿಸಿದರೂ ಆಕೆಯನ್ನು ಪ್ರಮಥನ ಆಲೋಚನೆಯಿಂದ ದೂರ ಸರಿಯಲು ಬಿಡುವುದಿಲ್ಲ.

ನಾಯಕಿ ತನ್ನ ವಿದ್ಯಾಭ್ಯಾಸ ಮುಗಿಸಿ ಕ್ಯಾಂಪಸ್ ಸಂದರ್ಶನದಲ್ಲಿ ವಿದೇಶದ ಕಂಪನಿಯಲ್ಲಿ ಕೆಲಸ ಸಿಕ್ಕು ಅಲ್ಲಿಗೆ ತೆರಳುವ ಸಂದರ್ಭದಲ್ಲಿ ತನ್ನ ಸೋದರ ಸಂಬಂಧಿಯ ಮೂಲಕ ಪ್ರಮಥನನ್ನು ಕಾಣುವ ಇಚ್ಛೆ ವ್ಯಕ್ತಪಡಿಸುತ್ತಾಳೆ. ಆದರೆ ಆತನ ಮನದಲ್ಲಿ ತನ್ನ ಕುರಿತು ಪ್ರೀತಿಯ ಭಾವನೆ ಇಲ್ಲದಿರುವುದನ್ನು ತಿಳಿದು ಇನ್ನೆಂದೂ ಈ ಕುರಿತು ಯೋಚಿಸುವುದಿಲ್ಲ ಎಂದು ತನ್ನ ಉನ್ನತ ವ್ಯಾಸಂಗ ವೃತ್ತಿ ಜೀವನದ ಸಾಧನೆಯ ಬಗ್ಗೆ ದೃಢವಾಗುತ್ತಾಳೆ. ಮನೆಯಲ್ಲಿ ಆಕೆಯ ಸೋದರ ಸಂಬಂಧಿಗಳನ್ನು ಹೊರತುಪಡಿಸಿ ಉಳಿದ ಯಾರಿಗೂ ಪ್ರೀತಿಯ ವಿಚಾರ ತಿಳಿದಿರುವುದಿಲ್ಲ. ಆಕೆಗೀಗ ಮದುವೆಯ ವಯಸ್ಸು ಅನುರೂಪನಾದ ವರನನ್ನು ಹುಡುಕಿ ಮದುವೆ ಮಾಡಬೇಕೆಂದು ತೀರ್ಮಾನ ಮಾಡುತ್ತಾರೆ. ನಾಯಕಿಯು ಪ್ರಮಥನನ್ನು ಮರೆತು ಬೇರೆ ಹುಡುಗನೊಂದಿಗೆ ಮದುವೆ ಆಗಲು ಒಪ್ಪುವಳೇ? ಇಲ್ಲ ಪ್ರಮಥನ ನೆನಪಿನಲ್ಲೇ ಜೀವನವನ್ನು ಕಳೆಯುವವಳೇ? ತಿಳಿಯಲು ನೀವು ಖುದ್ದು ಕಾದಂಬರಿಯನ್ನು ಓದಬೇಕು.

ಹೀಗೆ ಒಟ್ಟಾರೆ ಹದಿಹರೆಯದ ವಯಸ್ಸಿನಲ್ಲಿ ಹುಟ್ಟುವ ಪ್ರೀತಿ, ಮನಸ್ಸಿನ ತಾಕಲಾಟಗಳು, ಪ್ರೇಮಿಯನ್ನು ಪಡೆಯುವ ಉತ್ಕಟತೆ, ಹಾಸ್ಟೆಲ್ ಜೀವನ, ಸ್ನೇಹಿತೆಯರ ಒಡನಾಟ, ರಂಗು ರಂಗಾದ ವಿದ್ಯಾರ್ಥಿ ಜೀವನ, ಭವಿಷ್ಯದ ಚಿಂತನೆ, ಎಲ್ಲವನ್ನೂ ಲೇಖಕಿ ಬಹಳ ನವಿರಾಗಿ ನಿರೂಪಣೆ ಮಾಡಿದ್ದಾರೆ. ಓದುಗರಿಗೆ ಒಂದೊಂದು ಪುಟ ತಿರುವಿದಂತೆ ತಮ್ಮದೇ ಕಥೆಯೇನೊ ಪಾತ್ರಗಳಲ್ಲಿ ತಾವೇ ಇದ್ದೇವೆಯೊ ಏನೊ ಎಂಬಂತೆ ಅನಿಸುತ್ತದೆ.

ಆದರೆ ಇದು ಲೇಖಕಿಯ ಮೊಟ್ಟಮೊದಲ ಪ್ರಯತ್ನವಾದ್ದರಿಂದ ಸಣ್ಣಪುಟ್ಟ ದೋಷಗಳನ್ನು ಎತ್ತಿ ಹಿಡಿಯುವುದು ಒಳ್ಳೆಯದಲ್ಲ. ಕಾದಂಬರಿಯು ಹದಿಹರೆಯದವರ ಪ್ರೇಮಕಥೆಗೆ ಸಂಬಂಧಿಸಿದ ಕಥಾವಸ್ತು ಹೊಂದಿರುವ ಕಾರಣದಿಂದ ಪ್ರಾಯಶಃ ಎಲ್ಲ ವಯೋಮಾನದವರಿಗೂ ಇಷ್ಟವಾಗಲಿಕ್ಕಿಲ್ಲ. ಲೇಖಕಿ ಕಾದಂಬರಿಯನ್ನು ಬರೆಯುವಾಗ ಅದರ ಹರವು, ವಿಸ್ತಾರ, ನಿರೂಪಣೆ, ಪಾತ್ರಗಳ ಪೋಷಣೆ, ಸನ್ನಿವೇಶಗಳಲ್ಲಿ ನೈಜತೆಯನ್ನು ಅಭಿವ್ಯಕ್ತಿ ಪಡಿಸುವ ಚಾಕಚಕ್ಯತೆ ಹೀಗೆ ಕೆಲವು ವಿಚಾರಗಳಲ್ಲಿ ಇನ್ನಷ್ಟು ಹೆಚ್ಚಿನ ಅಭ್ಯಾಸ, ಅಧ್ಯಯನ ರೂಢಿಸಿಕೊಂಡಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಕಾದಂಬರಿಗಳನ್ನು ಕನ್ನಡ ಸಾಹಿತ್ಯಲೋಕಕ್ಕೆ ನೀಡುವಲ್ಲಿ ಸಂಶಯವಿಲ್ಲ.

ಕೃತಿಯ ಹೆಸರು : ಸಂಜೀವಿನಿ
ಲೇಖಕರು : ಸಂಜೋತಾ ಪುರೋಹಿತ
ಮೊದಲ ಮುದ್ರಣ : 2018
ಪ್ರಕಾಶನ : ಪ್ರಗತಿ ಗ್ರಾಫಿಕ್ಸ್
ಪುಟಗಳು : 152
ಮುಖಬೆಲೆ : ರೂ. 200/-

-ಮೇಘನಾ ಕಾನೇಟ್ಕರ್

4 Responses

  1. ನಾಗರತ್ನ ಬಿ. ಅರ್. says:

    ಕಾದಂಬರಿಯನ್ನು ಓದಲೇಬೇಕೆಂಬ ರೀತಿಯಲ್ಲಿ ಪುಸ್ತಕ ಪರಿಚಯ ಮಾಡಿಕೊಟ್ಟಿರುವುದು ಸ್ತುತ್ಯರ್ಹ ವಾಗಿದೆ.ಧನ್ಯವಾದಗಳು ಮೇಡಂ.

  2. ನಯನ ಬಜಕೂಡ್ಲು says:

    ತುಂಬಾ ಚೆನ್ನಾಗಿದೆ

  3. . ಶಂಕರಿ ಶರ್ಮ says:

    ಸೊಗಸಾದ ಕಾದಂಬರಿಯೊಂದರ ವಿಮರ್ಶಾತ್ಮಕ ವಿಶ್ಲೇಷಣೆಯು ಅತ್ಯಂತ ಸುಂದರವಾಗಿ ಮೂಡಿ ಬಂದಿದೆ.

  4. Padma Anand says:

    ಸೊಗಸಾದ ಕೃತಿ ಪರಿಚಯ, ಓದುವ ಹಂಬಲವನ್ನು ಹುಟ್ಟು ಹಾಕುವು ನಿಟ್ಟಿನಲ್ಲಿ ಅತ್ಯಂತ ಯಶಸ್ವಿಯಾಗಿ ಮೂಡಿ ಬಂದಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: