ಬೆಳಕು-ಬಳ್ಳಿ

ಕನ್ನಡ ಸೌರಭ

Share Button

ಕುದಿಯುವ ಉದಕಕ್ಕೆ ತೊಗರಿ ಬೇಳೆಯ ಸುರಿದು
ಕೆನೆ ಬೆಲ್ಲ ಸೇರಿಸಿ ಬೇಯಿಸುವಾಗ ಬರುವ ಪರಿಮಳದಂತೆ ಈ ಕನ್ನಡ
ಚಿಗುರುಲೆಗೆ ಸುಣ್ಣ ಲೇಪನ ಮಾಡಿ ಮಲೆನಾಡ ಅಡಕೆ ಜೊತೆ ಮೆದ್ದಾಗ ಮೂಡುವ ಕಡುಕೆಂಪು ಈ ಕನ್ನಡ
ಹಂಸಗಾಮಿನಿ ಬಾಲೆ ಕಸೆ ಲಂಗ ಹಳದಿ ಕುಸುರಿ ಕುಪ್ಪಸ ತೊಟ್ಟು
ಲಜ್ಜೆಯಿಂದ ಬಳ್ಳಿಯಂತೆ ಬಳುಕಿ ನಡೆಯುವಾಗ
ಬರುವ ಗೆಜ್ಜೆಯ ನಾದದಂತೆ ಈ ಕನ್ನಡ

ನೊರೆ ಹಾಲು ಕುಡಿದು ಸವಿನಿದ್ರೆಯಲಿರುವ ಕಂದ
ಕನಸಲಿ ಮೈ ಮರೆತು  ಕೆಂದುಟಿ ಬೀರಿ ನೀಡುವ ಮುಗುಳ್ನಗೆಯಂತೆ ಈ ಕನ್ನಡ
ಬಟಾ ಬಯಲಿನ ನಾಡಿನಲಿ ಮೋಡಗಳ ಚಿತ್ತಾರದ ಆಗಸದ ಕೆಳಗೆ
ಕರಿ ಮಣ್ಣಿನಲಿ ನೇಗಿಲಿನಿಂದ ಗೇಯ್ದ ಸಾಲುಗಳಲಿ ಇಣುಕುವ ಸಣ್ಣ ಮೊಳಕೆಯಂತೆ‌ ಈ ಕನ್ನಡ
ಹಚ್ಚ ಹಸಿರು ಹೊದ್ದ ಮಲೆಗಳ ಹಿನ್ನಲೆಯಲಿ
ಧೋ ಎಂದು ಸುರಿಯುವ ಮಳೆಗೆ ನವಿರಾಗಿ ಕಂಪಿಸುವ ಭತ್ತದ ತೆನೆಯಂತೆ ಈ ಕನ್ನಡ

ಅಗಾಧ ನೀಲ ಜಲರಾಶಿಯ ಮಧ್ಯೆ  ಕಣ್ಣು ಕುಕ್ಕುವ  ರವಿಯ ಕಿರಣಗಳ ಜೊತೆಗೆ ಸ್ಪರ್ಧೆಗೆ ಇಳಿದು
ತುಂಡುಡುಗೆಯ ಧರಿಸಿ ಮೀನು ಬೇಟೆಗೆ ಹೊರಟ ಬೆಸ್ತರ ರಟ್ಟೆಯ ಕಸುವಿನಂತೆ ಈ ಕನ್ನಡ
ಘಂಟೆ ನಾದದಲಿ ತುಂಬಿ ನಂದಾದೀಪಗಳ ಬೆಳಕಲಿ
ಜೀವಂತಿಕೆ ತೋರಿ ಶಾಂತಿ ನೀಡುವ ಮಂಗಳ ಮೂರುತಿಯ ಪ್ರಭೆಯಂತೆ ಈ ಕನ್ನಡ

ಕವಿದ ಕಾರಿರುಳಲಿ ಸುಳಿಯುವ ನಿದ್ದೆಯ ತೊರೆದು
ಗಡಿ ಕಾದು ರಕ್ಷಣೆ ನೀಡುವ ಸೈನಿಕನ ಪುಟ್ಟ ಬೆವರ ಹನಿಯಂತೆ ಈ ಕನ್ನಡ
ಅಸೌಖ್ಯದೀ ಬಳಲಿ ಬದುಕೇ ಬೇಡವೆನಿಸಿದವರ ಬಾಳಲ್ಲಿ
ಆರೋಗ್ಯದ ಭಾಗ್ಯ ನೀಡುವ ವೈದ್ಯರ ಕಿರುನಗೆಯಂತೆ ಈ ಕನ್ನಡ

ತನ್ನೆದೆಯ ಉಸಿರ ಬಸಿದು ಭೂಮಿಯ ಉಳುಮೆ ಮಾಡಿ
ಉಣ್ಣಲು ಅನ್ನ ನೀಡುವ ನೇಗಿಲಯೋಗಿಯ ಪವಿತ್ರ ಕಾಯಕವೇ ಈ ಕನ್ನಡ
ಬರುವ ಕಲಿಕಾರ್ಥಿಗಳ ಮಾತೃ ಪ್ರೇಮದೀ ನೋಡಿ
ತನ್ನ ಸಕಲ ವಿದ್ಯೆಗಳ ಧಾರೆಯೆರೆವ ಗುರುಗಳ ಮಮಕಾರವೇ ಈ ಕನ್ನಡ

ವಿವಿಧ ಯೋಜನೆಗಳ ರೂಪರೇಷೆ ತಯಾರಿಸಿ
ನಿರ್ಮಿತಿಗಳ ಸಾಕಾರಕೆ ಕಾರಣವಾಗಿ ನಗರ ನಾಡುಗಳ ನಿರ್ಮಾಣಕೆ ಶ್ರಮಿಸುವ ಅಭಿಯಂತರರ ಲೇಖನಿಯ ತುದಿಯೇ ಈ ಕನ್ನಡ
ದೈಹಿಕ ಆಯಾಸ ಮರೆತು ದೊರೆಯುವ ಸಣ್ಣ ಕೂಲಿಗೆ
ಹಗಲಿರುಳು ದುಡಿಯುವ ಹಲವು ಕಾರ್ಮಿಕರ ಮುದ್ದು ಮೊಗವೇ ಈ ಕನ್ನಡ

ಈ ಸೀಮೆಯ ಕಣಕಣದಲಿ ಈ ಭಾಷೆ ಬೆರೆತುಹೋಗಿದೆ
ಬೀಸುವ ಮಂದಪವನ ಸಹಾ ಸಂಗೀತದಲಿ ಈ ನುಡಿಗಳ ಉಲಿದಿದೆ
ಕೆಚ್ಚದೆಯ ವೀರರ ಕರುಣಾ ಮೂರ್ತಿ ಸಂತರ ವಚನಕಾರರ
ಸಂಪ್ರದಾಯ ಮುಂದುವರಿದಿದೆ
ಅಳಿವಿಲ್ಲ ಈ ಮಾತಿಗೆ ಸಾವಿಲ್ಲ ಈ ಸಂಸ್ಕೃತಿಗೆ
ಉಳಿಸಿ ಬೆಳಸುವ ಸಾತ್ವಿಕ ಜನರಿರಲು
ಗಳಿಸಿ ಹಂಚುವ ಮನಸ್ಸುಗಳು ನೆರೆದಿರಲು

ಕೆ.ಯಂ ಶರಣಬಸವೇಶ

9 Comments on “ಕನ್ನಡ ಸೌರಭ

  1. ವಾವ್ ಕನ್ನಡ ಸೌರಭ ವನ್ನು ಒಂದೇ ಕಡೆ ಸಿಗುವಂತೆ ಅಚ್ಚುಕಟ್ಟಾದ ಹೋಲಿಕೆ ಯೊಡನೆ ಕಟ್ಟಿಕೊಟ್ಟಿರುವ ಕವನ ಸೊಗಸಾಗಿದೆ ಧನ್ಯವಾದಗಳು ಸಾರ್

  2. ಕನ್ನಡದ ಕಂಪಿನ ಚಿತ್ರಣವನ್ನು ಭಾವಪೂರ್ಣವಾಗಿ ತಮ್ಮ ಕವನದ ಮೂಲಕ ಚಿತ್ರಿಸಿದ ರೀತಿ ಬಹಳ ಸೊಗಸಾಗಿದೆ.

  3. ನಮ್ಮ ಕನ್ನಡದ ಹತ್ತು ಹಲವು ಚಂದದ ಮುಖಾರವಿಂದದ ಸೊಗಸಾದ ಪರಿಚಯ.

  4. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *