
ಚಿಂದಿ ಹಾಯುವ ಆಸೆಗಣ್ಣುಗಳ
ಎಳೆ ಮಕ್ಕಳು ತಿಪ್ಪೆಯಲ್ಲಿ
ಬಿದ್ದ ತುತ್ತು ಅನ್ನವ ಹಂಚಿಕೊಂಡು
ಒಬ್ಬರ ಬಾಯಿಗೆ ಒಬ್ಬರು ಉಣಿಸುತ್ತಿದ್ದಾರೆ.
ಕಡಲಾಳದ ಮುತ್ತು ಸಿಕ್ಕಷ್ಟು ಮೊಗದಲ್ಲಿ
ಮುತ್ತಿನ ನಗು!
ಕೈ ಕಾಲು ಕಣ್ಣು ಇಲ್ಲದವರು
ಚಿಲ್ಲರೆ ಕಾಸಿಗಾಗಿ ಇಳಿಸಂಜೆಯವರೆಗೂ
ಯಾಚಿಸಿದರೂ ತುಂಬದ ಅಂಗೈ
ಹರಿದ ಬಟ್ಟೆ, ಅರೆ ಹೊಟ್ಟೆ
ಹತಾಶೆಯ ಛಾಯೆ ಕಣ್ಣುಗಳಲ್ಲಿ…
ಮೈ ಮನಸು ಮಾರಿಕೊಂಡು
ಬೆಂಕಿಯ ಹೊಂಡದೊಳಗೆ ಬಿದ್ದು
ತನ್ನ ತಾನೇ ದಹಿಸಿಕೊಂಡು
ತೊಯ್ದ ಕಣ್ಣುಗಳಲ್ಲಿ ನೀರು ಸುರಿಯುತ್ತಿದ್ದರೂ
ಮೊಗದಲ್ಲಿ ಹುಸಿ ನಗೆಯ ಅಲಂಕಾರ!
ನಗುವ ಮುನ್ನವೇ ಬಾಡಿ ಹೋಗುತ್ತಿರುವ
ಎಳೆಯ ಚಿಗುರುಗಳು, ಬಿತ್ತಿದ ಬೆಳೆ ಫಲಿಸದೆ
ಹತಾಶೆಯಿಂದ ಉರುಳಿಗೆ ಕೊರಳೊಡ್ಡುತ್ತಿರುವ ಮುಗ್ಧಜೀವಗಳು
ರಸ್ತೆಯಲ್ಲಿ, ರಕ್ತದ ಮಡುವಿನಲ್ಲಿ
ಒದ್ದಾಡುತ್ತಿದ್ದರೂ, ಅರೆಕ್ಷಣ ನಿಂತು ಸಾಗುವ ಮರುಳರು!
ಇಳಿಜೀವಗಳು ವೃದ್ದಾಶ್ರಮದಲ್ಲಿ
ಒಬ್ಬೊರು ಮತ್ತೊಬ್ಬರ ಕಣ್ಣೊರುಸುತ್ತಾ
ಮಂಜಾದ ಕಣ್ಣುಗಳಿಂದ ಬರುವಿಕೆಗಾಗಿ ಹಂಬಲಿಸುತ್ತಾ
ನಂಜು ತುಂಬಿದ
ಕೈಗಳಿಂದ ಅಮೃತ ಸವಿಯಬೇಕೆನ್ನುವ ತುಡಿತ…
ಮಣ್ಣಿನೊಳಗೆ ಆಳವಾಗಿ ಬೇರು ಬಿಟ್ಟ
ಮರದಂತೆ! ಕಿತ್ತಷ್ಟು ಮತ್ತೆ ಮತ್ತೆ ಹರಡುತ್ತದೆ
ಎಡವಿ ಬಿದ್ದ ಸಣ್ಣದೊಂದು ಗಾಯ
ದೊಡ್ಡದಾಗಿ ಕೀವು ತುಂಬಿ ಕೊಳೆತು ನಾರುವಂತೆ!
ತನಗೆ ಅಂಟಿಕೊಂಡ ಕೊಂಬೆ ರಂಬೆಗಳು
ಮುರಿದು ಮಣ್ಣು ಅಪ್ಪುತ್ತಿದ್ದರೂ ಮರಕೆ
ಅದ್ಯಾವುದೋ ಕಾಣದ ಮುಗಿಲು ಮುಟ್ಟುವ ತವಕ
ವರ್ತಮಾನವ ಅವಲೋಕಿಸದೆ ಭವಿಷ್ಯಕೆ
ಅದೇನೋ ಕೂಡಿಡುವ ತವಕ
ಮೈಮನಸಿನಲ್ಲಿ ಸೊಕ್ಕಿನ ಸುಕ್ಕಿನ ನರಿಗೆಗಳು
ಒಂದಕ್ಕೆ ಎರಡು, ಎರಡಕ್ಕೆ ಮೂರು
ಬೊಗಸೆ ತುಂಬಿ ಸುರಿಯುತ್ತಿರುವ ಗರಿ ಗರಿ ನೋಟುಗಳು
ಮುಂದುವರಿಯುತ್ತಲೇ ಇದೆ ಕೂಡಿಡುವ ಲೆಕ್ಕ
ಅದೆಷ್ಟು ತುಂಬಿಸಿಕೊಂಡರೂ ಖಾಲಿ ಖಾಲಿ!
–ಸೌಮ್ಯಶ್ರೀ ಎ.ಎಸ್, ಮೈಸೂರು
ವಾಸ್ತವಿಕ ನೆಲೆಗಟ್ಟಿನಲ್ಲಿ ಯ ಚಿತ್ರವನ್ನು ಕವನದಲ್ಲಿ ಕಟ್ಟಿಕೊಟ್ಟಿರುವ ರೀತಿ ಚೆನ್ನಾಗಿದೆ ಮೇಡಂ.
Thank u
ಒಂದೊಂದು ಸಾಲಿನಲ್ಲೂ ಬಹಳ ನೋವು ತುಂಬಿದೆ
Thank u
ಆಳವಾದ ಚಲ್ಲಿದ ಚಿತ್ರದಂತಹ ಅವಲೋಕನ
ಕವನ ಇಷ್ಟವಾಯಿತು.
ಜಗದ ನೋವುಗಳನ್ನು ತನ್ನೊಳಗೆ ಅಡಗಿಸಿಕೊಂಡಿರುವ ಭಾವಪೂರ್ಣ ಕವನ.
ತುಂಬಾ ಮನಮುಟ್ಟುವ ಕವನ