ರಾಘವೇಂದ್ರ ಕಾಲೋನಿ ಬಾವಿ
ಒಂದು ಬಾವಿ ಬಗ್ಗೆ ಬರೆಯಲೆ ? ತುಂಬಾ ಹಳೆಯದು, ಸೊಗಸಾಗಿ ಧೃಡವಾಗಿ ನಿರ್ಮಿತವಾದದ್ದು. ವೃತ್ತಾಕಾರದ ಎತ್ತರದ ಕಲ್ಲುಕಟ್ಟೆ-ಸುಭದ್ರ-ರಾಟೆ-ಭರ್ಜರಿ ಹಗ್ಗ.ಹತ್ತು ಹನ್ನೆರಡು ಆಡಿಗೆ ಸಿಕ್ತಿದ್ದ ವರ್ಷವಿಡೀ ಸಿಹಿನೀರು.ಪರಿಶುದ್ಧ ವಾತಾವರಣ…
ಚಂದ್ರಿಕಾ+ಗುಡಿ ವಿಜಯ+ಚಂದ್ರಿಕಾ ತಮ್ಮ ಆಬಾವಿಯಂಗಳದಲ್ಲೇ ಹೆಚ್ಚು ಹಾಡು-ಹಸೆ,ಮಾತು,ಆಡಾಟ. ಅಲ್ಲೇ…ಆ ಬಾವಿಯ ಹತ್ತಿರದಲ್ಲೇ ವಿಜಯ ಆಮ್ಮನಿಗೆ ಹೆರಿಗೆ ನೋವು ಕಾಣಿಸಿತ್ತಂತೆ ; ಗುಡಿ-ಬಾವಿ-ವಿಜಯ ಉದ್ದವಾಯ್ತು ಕರೆಯಕ್ಕೆ-“ಗುಡಿವಿಜಯ”-ಹೆಸರು ನಿಂತಿತು. ಚಂದ್ರಿಕಾ+ ವಿಜಯ… ಹದಿನೆಂಟು +. ಚಂದ್ರಿಕಾ ತಮ್ಮ ಮೂರ್ನಾಕುವರ್ಷದ ಚಿಣ್ಣ ಅಷ್ಟೆ.
ಚಂದ್ರಿಕಾ ಮದುವೆ ತರಾತುರಿಯಲ್ಲಿ ಪೋಸ್ಟಲ್ ಇಲಾಖೆ ಉದ್ಯೋಗಿ ಜೊತೆ ಆಗಿಹೋಗಿ ಶಿವಮೊಗ್ಗದ ಹತ್ತಿರ ದೂರಿಗೆ ಹೊರಟೇಹೋದ್ಳು. ಈಗ ವಿಜಯ+ ಆ ಹುಡುಗ…ಇಬ್ಬರೂ ಪರಸ್ಪರ ಹಚ್ಕೋಂಡಿದ್ರು. ಅಕ್ಕನ ಮದುವೆಯಾದ ಕಾಲಕ್ರಮೇಣ, ವಿಜಯ ಕೂಡ, ಬಾವಿ ಹತ್ತಿರ ಕಡಿಮೆ ಹಾಜರಿ-ಗೈರುಹಾಜರಿ ಜಾಸ್ತಿ. ವಿಜಯ ಬಂದರಂತೂ…ಆ ಚಿಣ್ಣನ್ನ ಪಕ್ಕದಲ್ಲಿ ಕೂಡಿಸ್ಕೋಂಡು ಅವನಿಗೆ ಅರ್ಥ-ವಾಗದ್ದು ಏನೇನೋ ಹೇಳಿಕೋತಿದ್ಳು. ಒಮ್ಮೊಮ್ಮೆ ಅವನನ್ನು ತಬ್ಬಿಕೊಂಡು ಮನಸೋಚ್ಛೆ ಅಳ್ತಿದ್ಳೂ ಸಹ.
ಬಾವಿ ರಾಘವೇಂದ್ರ ಕಾಲೋನಿಯ ಗುಡಿ ಆವರಣದಲ್ಲಿತ್ತು. ಕೆಲವು ವಠಾರದ ಮನೆಗಳು ಅಕ್ಕ ಪಕ್ಕ. ಅಕ್ಕನ ಮದುವೆಯಾಗಿ ಒಂಬತ್ತು-ಹತ್ತು ತಿಂಗಳುಗಳಾಗಿರಬೇಕು. ಒಂದು ದಿನ ಸಂಜೆ, ಹಗಲು-ಇರುಳಿನ ಮಧ್ಯೆ ಒಂದಲ್ಲಾ ಒಂದು ನೆಪ…ಅವರಿವರ ಕಣ್ತಪ್ಪಿಸಿ… ಅತಿ ಹೆಚ್ಚು ಬಾರಿ ವಿಜಯ+ ಆ ಚಿಣ್ಣ…ಆ ಬಾವಿಯಂಗಳದಲ್ಲಿ ತುಂಬಾ ಮಾತು-ಕತೆ-ಜೋಕು-ಬಾಯ್ಮಾತಿನ ವಾಗ್ದಾನ ಇತ್ಯಾದಿ. ಅಲ್ಲೇ ಓಡಾಡ್ತಿದ್ದ ವಠಾರದ ಕೆಲ ಹಿರಿಯರು ಗದರಿಸಿ ಬೈದರೂ, ಸಹ. ತಾನು ದೊಡ್ಡವನಾದ ಮೇಲೆ ಕಾಲೇಜು ಲೆಕ್ಚರರ್ ಆಗ್ತೀನಂತ ಮಾತು ಕೊಟ್ಟ ಮೇಲೆ ಎಳೇ ಚಿಣ್ಣನ್ನ ಮೈದಡವಿ ಮನೆಗೆ ಬಿಟ್ಟಿದ್ಳು ವಿಜಯಾ.
ಮಾರನೆಯ ದಿನದಿಂದಲೇ ಗುಡಿ ವಿಜಯಾ ನಾಪತ್ತೆ. ಅಪ್ಪ ಅಮ್ಮ ಅಣ್ಣಂದಿರು ವಠಾರದ ಮಂದಿಯಲ್ಲಾ ಹುಡುಕಿದ್ರು. ಚಂದ್ರಿಕಾ ಹೆರಿಗೆಯಾಯ್ತಲ್ಲಾ ಇಡೀ ಕುಟುಂಬ ಶಿವಮೊಗ್ಗಕ್ಕೆ ಹೋಗಿದ್ರು. ಜೊತೆಗೆ ಇನ್ನೊಂದೂ ಘಟಿಸಿತ್ತು. ಕಛೇರಿ-ತುರ್ತು ಕರೆಯ ಮೇಲೆ ಚಂದ್ರಿಕಾ ತಂದೆ ಮಾರನೆಯ ದಿನವೇ ಇಬ್ಬರು ಗಂಡುಮಕ್ಕಳನ್ನು ಕರಕೊಂಡು ಕಾಲೋನಿಗೆ ವಾಪಸ್ಸು ಬಂದಿದ್ರು. ಬಂದಿಳಿದ ಕೆಲವೇ ನಿಮಿಷಗಳಲ್ಲಿ…ವಿಜಯಾ ಮನೆ ಇಡೀ ಪರಿವಾರ ಚಂದ್ರಿಕಾ ತಮ್ಮ ಆ ಚಿಣ್ಣ ನ-ಮನೆಗೇ ಧಾವಿಸಿತ್ತು. ವಿಜಯಾ ತಂದೆ ಚಂದ್ರಿಕಾ ಪುಟ್ಟ ತಮ್ಮ…ಚಿಣ್ಣನ್ನ ತೊಡೆ ಮೇಲೆ ಕೂಡಿಸಿಕೊಂಡು ಕಣ್ತುಂಬಿಕೊಂಡವರು...’ವಿಜಯಾ ಕಾಣಿಸ್ತಿಲ್ಲಾ ಕಂದ.ಎಲ್ಲಿ ಹೋದಳು, ನಿನಗೆ ಗೊತ್ತಾ?’ ಅಂತ ಕೇಳಿದ್ರು. ತೊಡೆಯಿಂದ ಇಳಿದವನೇ ‘ಗೊತ್ತು, ಬನ್ನಿ ಮಾವ ತೋರಿಸ್ತೀನಿ’ ಅಂತಲೇ ಬಾವಿಕಟ್ಟೆ ತೋರಿಸಿ,ಅದರ ಒಳಗೆ ಹೋದ್ಳು…ಅಂದ.
ವಠಾರದ ಗಂಡಸರೆಲ್ಲಾ ಬಾವಿಗೆ ಹಾರಿದ್ದ, ಹಾರಿ ಪ್ರಾಣಕಳಕೊಂಡಿದ್ದ, ಗುಡಿ-ವಿಜಯಾ ಕಳೇಬರವನ್ನು ಹೊರತೆಗೆದು ಮಾಡಬೇಕಿದ್ದನ್ನ ಮಾಡಿ ಮುಗಿಸಿದರು.
ಇದೆಲ್ಲಾ ಆದದ್ದು ಅರವತ್ತು ವರ್ಷಗಳು-ಆರು ದಶಕಗಳ ಹಿಂದೆ. ನನಗೂ ಈಗ ಅರವತ್ಮೂರು ಮುಗಿದು ಅರವತ್ನಾಲಕ್ಕಕ್ಕೆ ಕಾಲಿಟ್ಟಿದೀನಿ. ಇಷ್ಟೂ ವರ್ಷಗಳಲ್ಲಿ ಕಾಲೋನಿಯಲ್ಲಿ, ಈ ಊರಲ್ಲಿ, ಜಗತ್ತಿನಲ್ಲಿ ಬೇಕಾದಷ್ಟು ನಡೆದು ಹೋಗಿದೆ. ಚಂದ್ರಿಕಾ ಮಗಳಿಗೆ ‘ವಿಜಯ’ ಅಂತಲೇ ಹೆಸರಿಟ್ಟರು. ವಿಜಯಾ-2 ಗೂ ಮೊಮ್ಮಗ ಈಗ. ಯಾರಾದರೂ ಕೇಳಿದರೆ, ‘ ಬಾವಿ ತಳದಲ್ಲಿ ಇರ್ತೀನಿ ಈವತ್ತು ಬೇಡ,ನಾಳೆ….ನಾಳೇ…ತೋರಿಸು….’ ಅಂತ ಹೇಳಿ ಭಾಷೆ ತೊಗೋಂಡಿದ್ದ ಗುಡಿ-ವಿಜಯಾನ್ನ, ಈಗಲೂ ನಾನು ಹುಡುಕ್ತಿರ್ತೇನೆ.
–ಶ್ರೇಯಸ್ ಪರಿಚರಣ್
ಮನಕಲಕಿದ ಸಂಗತಿ. ನೆನಪಿನಾಳದಿಂದ ಹೆಕ್ಕಿ ತೆಗೆದ ಲೇಖನ ಚಿಕ್ಕ ವಯಸ್ಸಿನ ಮುಗ್ದತೆಯನ್ನು ಬಿಡಿಸಿ ಕೊಟ್ಟಿರುವ ರೀತಿ ಚೆನ್ನಾಗಿದೆ ಸಾರ್.
So sad
ಏನೋ ತೋಚುತ್ತಿಲ್ಲ. ಕಣ್ತುಂಬಿ ಬಂತು.
ಮನಕಲಕುವ ಘಟನೆಗೆ ಈ ಬಾವಿ ಸಾಕ್ಷಿಯಾಗಿದ್ದು ಮಾತ್ರ ದುರಂತ!
ಹೌದು,ಕೆಲವೊಮ್ಮೆ ಬಾವಿಯ ಆಳ ದಲ್ಲೀ ದುರಂತ ಕಥೆ ಗಳೂ ಇರುತ್ತವೆ..
ayyo oohisalu agada vishaya