ಸೋಜಿಗದ ಜಾಜಿ ಮಲ್ಲಿಗೆಗೆ….
ಓ ಮುದ್ದು ಮುದ್ದು ಜಾಜಿ ಮಲ್ಲಿಗೆಯೇ..ನೀನೆಲ್ಲಿಂದ ಬಂದೇ ಹೇಳು ಈ ಬುವಿಗೆ? ನಿನಗೆ ಈ ಹೆಸರಿಟ್ಟವರು ಯಾರೋ?! ನಿನ್ನ ಚೆಲುವಿಗೆ ಸರಿಯಾದ ಹೆಸರು. ನಿನ್ನ ಪರಿಮಳಕೆ ಎಲ್ಲಿದೆ ಹೋಲಿಕೆ?ನೀನೆಂದರೆ ಅಂದೂ ಪ್ರೀತಿ. ಇಂದೂ ಆ ಪ್ರೀತಿ.bಅದು ಎಂದೆಂದಿಗೂ ಒಂದೇ ರೀತಿ.ನಿನ್ನನು ನೋಡುವಾಗಲೆಲ್ಲ ಅದೇಕೋ ಒಂದು ಮಧುರ ಭಾವ ನನ್ನ ಮನದಲಿ. ಮೊಗ್ಗಾದರೂ ಅಂದ. ಹೂವಾದರೂ ಚಂದ. ನಿನ್ನಿಂದ ಮನಕೆ ಮಹದಾನಂದ.
ಬಾಲ್ಯದಲಿ ನಿನ್ನ ಸಂಗವಂತೂ..ಓಹ್. ಜೋರು ಮಳೆ ಸುರಿಯುವಾಗಲೇ ನಿನ್ನ ಆಗಮನ ತಾನೇ. ಮಳೆಜೋರಿದ್ದರೆ ನೀ ಬೇಗ ಅರಳುವೆ . ಮಧ್ಯಾಹ್ನ 12 ಘಂಟೆಗೆ ನಿನ್ನನ್ನು ಗಿಡದಿಂದ ಮನೆಗೆ ತಳಬೇಕು ಆ ದಿವಸ. ಹನಿ ಹನಿ ಮಳೆಗೆ ನಿನ್ನನ್ನು ಒಂದೊಂದಾಗಿ ಆರಿಸುವುದೇ ಸಂಭ್ರಮ. ನಿನ್ನನ್ನು ತೊಟ್ಟ ಉದ್ದನೆಯ ಲಂಗದಲಿ ತುಂಬಿಸಿಕೊoಡೆ ಅಭ್ಯಾಸ. ಮನೆಗೆ ಓಡಿ ಓಡಿ ಬಂದು ಬಾಳೆ ಎಲೆಯಲ್ಲಿ ನಿನ್ನ ರಾಶಿ ಹಾಕುವೆ. ತಲೆ,ಮೈ ಎಲ್ಲ ಒದ್ದೆ. ಮೆಲ್ಲನೆ ಕನ್ನಡಿಯಲ್ಲಿ ಇಣುಕಿದರೆ…ನನ್ನ ಮುoಗುರುಳ ತುಂಬಾ ಮಳೆ ಹನಿಗಳ ಮುತ್ತಿನ ಮಾಲೆ..ತುಂಟ ಕಂಗಳು..ತುಟಿಯ ಮೇಲಿನ ಹುಸಿ ನಗು,ಹಣೆಯಲಿದ್ದ ದುಂಡು ಬೊಟ್ಟು ಮಳೆಹನಿ ಬಿದ್ದು ಕರಗಿ ಇಳಿದು ಉದ್ದ ಬೊಟ್ಟು!,. ಓಹ್. ಆ ಕನ್ನಡಿಯೊಳಗಿನ ಹುಡುಗಿ ಬಲು ಚೆಲುವೆ.
ಇನ್ನು ನಿನ್ನನು ಬಾಳೆಯ ಬಳ್ಳಿಯಲಿ ಮಾಲೆ ಮಾಡುವ ಗೌಜಿ. ಉದ್ದುದ್ದ ಮೊಗ್ಗು. ಮಾಲೆ ಮಾಡಲು ಬಲು ಸುಲಭ. ಎರಡು ಜಡೆ ತುಂಬಾ ನೀನು. ನಾನು ಓಡಿಯಾಡುವಾಗ ನೀನು ಕುಣಿದು..ನನ್ನ ಕೆನ್ನೆಗೆ ಕಚಗುಳಿ ಇಡುವೆ..ಅಲ್ಲವೇ..ತುಂಟಿ ನೀನು.
ಇನ್ನು ನಿನ್ನ ಉದ್ದುದ್ದಾ ಮಾಲೆ ಮುಡಿದ ದಿನ…”ಒಮ್ಮೆ ತಿರುಗಿ ನಿಲ್ಲೆ.ಇಂದು ಎಷ್ಟುದ್ದದ ಮಾಲೆ ಮುಡಿದೆ..ನೋಡೋಣ” ಎಂದು ನುಡಿದ ನನ್ನವರು …ಮೆಲ್ಲಗೆ ಒಂದು ಮುತ್ತು ಮಾಲೆಗಿತ್ತು ನಕ್ಕರೆ…ನೀನೇಕೆ ಕೆನ್ನೆಯ ಬಳಿ ಬಾಗಿ ನೋಡಿ ನಗುತ್ತಿದ್ದೆ.! ಆ ಮುತ್ತು ನಿನಗೆಂದು ನೀ ಅಂದುಕೊಂಡರೆ ಹೇಗೆ ಹೇಳು..ಓ ಜಾಜಿಯೇ.
ನಿನ್ನ ಕುರಿತು ಹೇಳಿದಷ್ಟೂ ಮುಗಿಯದು. ಚಂದಿರ ಆಗಮಿಸುವ ಸಮಯದಲಿ ನಿನ್ನ ಚೆಲುವು, ಆಸೊಬಗನ್ನು ಹೇಗೆ ವರ್ಣಿಸಲಿ ನಾನು?
ವರುಷಗಳು ಉರುಳಿವೆ. ಇಂದಿಗೂ ಜಾಜಿ ಹೂಮಾಲೆ …ಅಟ್ಟ ಮುಟ್ಟ ಮುಡಿದು,ಕನ್ನಡಿ ಬಳಿ ಸಾರುವೆ. ಓರೆಯಾಗಿ ನಿಂತು ಆ ಚೆಲುವ ನೋಡುವೆ. . ಶ್.. ಶ್..ಈ ವಿಷಯ ಯಾರಿಗೂ ಹೇಳಬೇಡವೇ ನೀನು. ಬಾಲ್ಯದಿಂದಲೇ ನನ್ನನ್ನು ಬಲ್ಲವಳು ನೀನು. ಅದಕ್ಕೆ ಈ ಗುಟ್ಟು ಹೇಳಿದೆ.
ನೀನು ನಮ್ಮ ಮನೆಯಂಗಳದಲ್ಲಿ…ದೇವರ ಮಂಟಪದಲ್ಲಿ..ಮನದಲ್ಲಿ, ಮುಡಿಯಲ್ಲಿ ಎಲ್ಲೆಡೆ ಅರಳಿ ನಗುತಿರ ಬೇಕು. ಆ ಚೆಲುವ ನೋಟವನ್ನು ನಾ ಸವಿಯುತಿರಲೇ ಬೇಕು. ಸದ್ಯಕ್ಕೆ ಇಷ್ಟು ಸಾಕಲ್ಲವೇ ನಿನ್ನ ಕುರಿತು ಬರೆದದ್ದು..
–ಅರುಣಾ.ಜಿ.ಭಟ್ . ಬದಿಕೋಡಿ.
ಮಲ್ಲಿಗೆ ಕಂಪು ಸುರಹೊನ್ನೆ ಯಲಿಪಸರಿಸಿತು ಆಹಾ!!
ಮಲ್ಲಿಗೆ ಕಂಪಿನ ಜೊತೆ ಜೊತೆಗೆ ಮನದಲ್ಲಿ ಮೂಡಿದ ಸುಂದರ ನೆನಪು.ಚೆನ್ನಾಗಿ ಮೂಡಿ ಬಂದಿದೆ ಕವಿತೆ.ಅಭನಂದನೆಗಳು.
ಮಲ್ಲಿಗೆಯಷ್ಟೇ ಸುಂದರ ಬರಹ
ತುಂಬಾ ಚೆನ್ನಾಗಿದೆ ಲೇಖನ
ಚೆನ್ನಾಗಿದೆ.
ಮಲ್ಲಿಗೆಗಳಲ್ಲಿ ಜಾಜಿಮಲ್ಲಿಗೆ ಎಲ್ಲರ ಮನಗಳಲ್ಲಿ ಅಗ್ರಸ್ಥಾನ ಪಡೆದಿದೆ. ವಿಶ್ವವ್ಯಾಪಿಯಂತಿರುವ ಇದು ಅಮೆರಿಕದಲ್ಲೂ ಮೆರೆದಿದೆ…ಆದರೆ ನಮ್ಮ ಜಾಜಿಯಷ್ಟು ಘಂ ಇಲ್ಲ! ತಮ್ಮ ಮುದ್ದು ಮುದ್ದಾದ ಲೇಖನವು ಜಾಜಿಯಷ್ಟೇ ಪರಿಮಳ ಬೀರಿತು ಅರುಣಾ ಮೇಡಂ…ನಮ್ಮ ಸುರಹೊನ್ನೆಯಲ್ಲಿ!
ನಿಮ್ಮ ಜಾಜಿ ಹೂಗಳ ಮೇಲಣ ಪ್ರೇಮವನ್ನು ನೋಡಿ , ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತು ಎಂಬ ಸಾಲುಗಳು ನೆನಪಾದವು. ಮುದ ನೀಡಿದ ಲೇಖನಕ್ಕಾಗಿ ಅಭಿನಂದನೆಗಳು
ಮುಸ್ಸಂಜೆಯ ಹೊತ್ತು ಗಿಡದಲ್ಲಿ ಅರಳುವ ಜಾಜಿ ಮಲ್ಲಿಗೆ ಹೂಗಳ ಆ ಪರಿಮಳ…ಆಹಾ… ಲೇಖನ ಚೆನ್ನಾಗಿದೆ