ಅವ್ವ ಗಂಗಾವಳಿ
ಕಷ್ಟಪಟ್ಟು ಕಟ್ಟಿದ್ದ ಮನೆ
ಕಣ್ಣ ಮುಂದೆ ಕರಗಿ ಹೊಯ್ತು
ಕೂಡಿಟ್ಟ ಧಾನ್ಯ ದವಸಗಳು
ಕ್ಷಣದಲ್ಲೆ ಮಾಯವಾಯ್ತು
ತೊಟ್ಟ ಬಟ್ಟೆ ಒಂದೇ
ಜೊತೆಯಲ್ಲಿ ….
ಕಳೆದುಕೊಂಡೆ ಎಲ್ಲ
ಆದರೂ
ಒಂದಿಷ್ಟು ಬೇಸರವಿಲ್ಲ
ಅವ್ವ ಗಂಗಾವಳಿಯೇ
ನಿನ್ನಲ್ಲಿ ನನಗೆ
ನನ್ನ ನೆನಪಿದ್ದಂತೆ ನೀ
ಎಂದೂ ಮುನಿಸಿದ್ದಿಲ್ಲ.
ನಿನ್ನ ಈ ತುಸು ಮುನಿಸಿಗೆ
ಕಾರಣವಿಲ್ಲದೇ ಇಲ್ಲ
ನನ್ನ ದುರಾಸೆಯ ಲೋಪವು
ಕಾರಣವಿರಬಹುದೇ ಅವ್ವ
ಕೊನೆಗೂ…
ನೀ ಶಾಂತವಾದೆಯಲ್ಲ
ನನಗಷ್ಟೇ ಸಾಕು
ಅಪ್ಪ ಅಜ್ಜನ ಕಾಲದಿಂದಲೂ
ನೀನೇ ನಮ್ಮ ಪೊರೆದವಳು
ಅದೇಗೆ ತೊರೆಯುವೆ ಇಂದು
ಕಳೆದುಕೊಂಡದ್ದೆಲ್ಲ ಮತ್ತೆ ಗಳಿಸುವೆ
ನನ್ನಲ್ಲಿನ ಈ ಭರವಸೆಯೂ ನೀನೆ
ಮತ್ತೆ ಉತ್ತು ಬಿತ್ತುತ್ತೇನೆ
ಹಸಿರಾಗಿಸಿ ಬೆಳೆಯುತ್ತೇನೆ
ನಿನ್ನ ಮಡಿಲಲ್ಲೆ ಉಂಡು
ಮಗುವಾಗುತ್ತೇನೆ.
ಕೈಮುಗಿದು ಬೇಡುವೆನು
ಮತ್ತೆಂದು ಈಮುನಿಸು
ತಾಳದಿರು ಅವ್ವ
-ಉಮೇಶ ಮುಂಡಳ್ಳಿ ಭಟ್ಕಳ
ಗಂಗವ್ವ ಕಾಪಾಡವ್ವ…
ಅರ್ಥಪೂರ್ಣವಾದ ಕವನ. ಧನ್ಯವಾದಗಳು
ಧನ್ಯವಾದಗಳು ಸರ್
ಮುನಿಯದಿರು ತಾಯಿ ಗಂಗವ್ವ
ನೀ ಮುನಿದರೆ ನಮ್ಮ ಬಾಳು ಹೇಂಗವ್ವ?
ಚೆನ್ನಾಗಿದೆ ಸಾರ್
ಗಂಗಾಮಾತೆ ಯಲ್ಲಿ ಕೋರಿಕೆ ಎಲ್ಲಾ ಕಳೆದುಕೊಂಡರೂ ಮತ್ತೆ ಗಳಿಸುತ್ತೇನೆಂಬ ಭರವಸೆ.. ಆದರೆ ಮತ್ತೆ ಮತ್ತೆ ಮುನಿಯದಿರೆಂಬ ಬೇಡಿಕೆ.ಚೆನ್ನಾಗಿ ಮೂಡಿ ಬಂದಿದೆ ಕವಿತೆ ಅಭಿನಂದನೆಗಳು ಸಾರ್.
ಕಮರದ ಭರವಸೆ
ಪ್ರಕೃತಿಯಲ್ಲಿ ಶರಣಾದರಷ್ಟೇ ಬದುಕು ಎಂಬ ಭಾವವನ್ನು ಬಿಂಬಿಸುವ ಸುಂದರ ಕವನ.
ಮುನಿದ ಗಂಗೆಯ ಪಾಲಾದ ಸರ್ವಸ್ವವನ್ನೂ ಮತ್ತೆ ದುಡಿದು ಪಡೆಯಲು ಅವಳ ಕೃಪೆಯೇ ಬೇಕಲ್ವೇ.. ಚಂದದ ಕವನ.
ನಿಮ್ಮ ಆಶಾವಾದ ಕವನದಲ್ಲಿ ಸೊಗಸಾಗಿ ಮೂಡಿಬಂದಿದೆ
meaningful poetic expression!