ದೈವೀ ಸಂಕಲ್ಪ
ಮನೆಯ ಕೆಲಸದಾಕೆ ರಾಧಾಳನ್ನು”ಏನು ರಾಧಾ, ನಿನ್ನ ಮಗಳು ಪೂರ್ಣಿಮಾ ಇತ್ತೀಚೆಗೆ ನಮ್ ಮನೆ ಕಡೆ ಬಂದಿಲ್ಲಾ, ಎನ್ ತುಂಬಾ ಓದುತ್ತಿದ್ದಾಳ, ಅವಳ ವಿದ್ಯಾಭ್ಯಾಸ ಹೇಗೆ ಸಾಗುತ್ತಿದೆ “ಎಂದು ಮನೆಯಾಕೆ ಪದ್ಮ ಎಂದಿನಂತೆ ವಿಚಾರಿಸಿದಳು.
“ಇಲ್ಲ ಅಕ್ಕ, ಒಂದು ಮಾತು, ನಿಮಗೆ ಹೇಗೆ ಹೇಳಬೇಕು ಅಂತ ನಾ ಕಾಣೆ ಕನವ್ವಾ,” ಅಂದಳು. ಹೇಳು ಪರವಾಗಿಲ್ಲ ಎಂದಳು ಪದ್ಮ.
“ಅಕ್ಕಾ, ಅವಳ ಮದುವೆ ಆಯಿತು, ಗಂಡನ ಮನೆಯಲ್ಲಿ ಇದಾಳೆ “ಎಂದು ಓತ್ತಿಕ್ಕೊಂಡು ಬಂದ ಗಂಟಲಿನಿಂದ ತೊದಲಿದಳು ರಾಧಾ.
ಈ ಉತ್ತರವನ್ನು ಕನಸಿನಲ್ಲೂನಿರೀಕ್ಷಿಸಿರಲಿಲ್ಲ ಪದ್ಮ. ಈ ವಿಷಯ ಕೇಳಿಪದ್ಮಳಿಗೆ ಮೂರ್ಛೆ ಹೋಗುವಂತಾಯಿತು. ತನಗೂ ತಿಳಿಸದೆ ಗಡಿಬಿಡಿಯಲ್ಲಿ ಮದುವೆ ಮಾಡಿದ ಬಗ್ಗೆ ಆಶ್ಚರ್ಯ ಹಾಗೂ ದಿಗ್ಭ್ರಮೆ ಏಕಕಾಲಕ್ಕೆ ಉಂಟಾಗಿ ತನ್ನ ಕುತೂಹಲವನ್ನು ಹತ್ತಿಕ್ಕಲಾಗದೆ ಇಷ್ಟು ತರಾತುರಿಯ ಮದುವೆ ಯಾತಕ್ಕಾಗಿ ಎಂದು ಕೇಳಿದಾಗ, ರಾಧಾ ಕೊಟ್ಟ ಉತ್ತರದಿಂದ ದುಃಖಿತಳಾದಳು ಪದ್ಮ.
“ಅಯ್ಯೋ, ಅಕ್ಕಾ, ಏನು ಮಾಡೋದು, ಅವಳು ಓದಿ ಎನ್ ಮಾಡ್ಬೇಕು ಹೇಳಿ, ಯಾರನ್ನು ಉದ್ಧಾರ ಮಾಡ್ಬೇಕು. ಈ ಕರೊನ ಹೆಮ್ಮಾರಿ ನಮ್ಮಂತವರನ್ನು ಮೂರಾಬಟ್ಟೆ ಮಾಡಿದೆ.ಯಾವ ಸಂಪಾದನೇನೂ ಇಲ್ಲ. ಮನೆ ನಿಭಾಯಿಸೋದೆ ಕಷ್ಟವಾಗಿದೆ.ಇನ್ ಓದಿಸೋದು ಎಲ್ಲಿಂದ? ಒಳ್ಳೆ ಕಡೆ ಸಂಬಂಧ ಬಂದಿತ್ತು ವರೋಪಚಾರ ಜಾಸ್ತಿ ಏನು ಇರಲಿಲ್ಲ. ಒಳ್ಳೆ ಹುಡುಗ, ಕೆಟ್ಟ ಚಟ ಇಲ್ಲ. ಮರಗೆಲಸ ಮಾಡ್ತಾ ಇದಾನೆ. ಅರ್ಜೆಂಟಾಗಿ ಶಾಸ್ತ್ರ ಮುಗಿಸಿದೆವು. ಯಾವ ನೆಂಟರಿಷ್ಟರನ್ನು ಹಚ್ಚಿಕೊಳ್ಳಿಲ್ಲ. ನಮ್ ಕೈಲಾದಷ್ಟು ಮದುವೆ ಶಾಸ್ತ್ರ ಮಾಡಿ ಮಗಳನ್ನು ಅವಳ ಅತ್ತೆ ಮನೆಗೆ ಕಳಿಸಿದೆವು. ಸ್ವಲ್ಪ ಕೈಸಾಲ ಮಾಡಿದ್ದೇವೆ ‘ಅಂದಳು .
ಅಪ್ರಾಪ್ತ ವಯಸ್ಸಿನಲ್ಲೇ ಮದುವೆಯ ಬಂಧನಕ್ಕೆ ದೂಡಿದ ರಾಧಾಳನ್ನು ಕಂಡು ಕೊಂದುಬಿಡುವಷ್ಟು ಕೋಪ ಬಂದಿತ್ತು ಪದ್ಮಳಿಗೆ. ಈ ತೆರನ ಉತ್ತರವನ್ನು ಪದ್ಮ ಊಹಿಸಿರಲಿಲ್ಲ.
ಪೂರ್ಣಿಮಾ ಪದ್ಮಳ ಮಕ್ಕಳೊಡನೆ ಆಡುತ್ತಾ ಬೆಳೆದ ಮುಗ್ಧ ಹುಡುಗಿ, ತಾನು ಚೆನ್ನಾಗಿ ಓದಿ ದೊಡ್ಡವಳಾದ ಮೇಲೆ ತನ್ನ ತಂದೆ-ತಾಯಿಯನ್ನು ಜೀತಮುಕ್ತರನ್ನಾಗಿ ಮಾಡುವ ಮಹದಾಸೆ ಯನ್ನು ಎಷ್ಟೋ ಸಲ ಪದ್ಮಳಲ್ಲಿ ಬಿನ್ನಹಿಸಿಕೊಂಡಿದ್ದಳು. ತನ್ನ ಮಕ್ಕಳೊಡನೆ ಬೆರೆತು ಓದುವ ಹುಚ್ಚು ಬೆಳೆಸಿಕೊಂಡಿದ್ದಳು. ಶಾಲೆಯಲ್ಲೂ ಒಳ್ಳೆ ಸಭ್ಯಸ್ತೆ, ಓದಿನಲ್ಲೂ ಮುಂಚೂಣಿಯಲ್ಲಿ ಇದ್ದಳು.ಅವಳ ಬದುಕಿನಲ್ಲಿ ಇಂತಹ ಘೋರ ಘಟನೆ!
ಪೂರ್ಣಿಮಳ ಮನಸಿನ ಹೊಯ್ದಾಟಗಳನ್ನು ನೆನೆದು ಪದ್ಮ ಮಮ್ಮಲ ಮರುಗಿದಳು.ತಾನು ಮದುವೆಯನ್ನು ತಡೆಯಬೇಕಿತ್ತು, ಅವಳನ್ನು ಈ ಸಂಕೋಲೆಯಿಂದ ಬಿಡಿಸಬೇಕೆಂದು, ತಾನು ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿ ಬಂತಲ್ಲ ಎಂದು ಪದ್ಮ ದೇವರನ್ನು ಹಣಿದಳು. ಇಂತಹ ಮುಗ್ಧ ಮಕ್ಕಳ ಕನಸು ನನಸಾಗದೆ ಬತ್ತಿ ಹೋಗುವಂತಾಯಿತಲ್ಲ ಎಂದು ನೊಂದು ಕಣ್ಣೀರು ಹಾಕಿದಳು. ಇಂತಹ ವಿಷಮ ಸ್ಥಿತಿ ಬಂತಲ್ಲ ನಮ್ಮ ದೇಶದಲ್ಲಿ ಎಂದು ಕೊರಗಿದಳು.
ಕರೊನ ಕಾಲಿಟ್ಟಿರುವ ಈ ಒಂದೂವರೆ ವರ್ಷದಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗಿ ನಡೆಯುತ್ತಿವೆ ಎಂದು ಪ್ರಸಾರ ಮಾಧ್ಯಮಗಳಲ್ಲೂ ಕೇಳಿದ್ದಳು. ಕಲಿಕೆ ಮತ್ತು ಆಟದಲ್ಲಿ ಸಕ್ರಿಯವಾಗಬೇಕಾಗಿದ್ದ ಅಮೂಲ್ಯ ಅವಧಿಯಲ್ಲಿ ದಾಂಪತ್ಯ ಜೀವನಕ್ಕೆ ಬಲವಂತವಾಗಿ ತಳ್ಳುತ್ತಿರುವ ಈ ಮೂಢ ಜನಕ್ಕೆ ಎಂದು ಬುದ್ದಿ ಬರುತ್ತದೋ ಗೊತ್ತಿಲ್ಲ. ಈ ಪ್ರವೃತ್ತಿ ಆ ಕುಟುಂಬದಲ್ಲಿನ ಅರಿವಿನ ಕೊರತೆ, ಅನಕ್ಷರತೆ, ಬಡತನ, ಮೂಢನಂಬಿಕೆ, ಗೊಡ್ಡುಸಂಪ್ರದಾಯಗಳು-ಹೀಗೆ ಹತ್ತು ಹಲವಾರು ಅಂಶಗಳು ಕಾರಣವಾಗಿರುವುದು ನಮ್ಮ ದೇಶದ ಹೀನಾಯ ಸಂಗತಿ.
ಹೆಣ್ಣು ಸಂತಾನ ಕುಟುಂಬಕ್ಕೆ ಹೊರೆ ಎಂಬಮನೋಭಾವ ಇನ್ನು ಜೀವಂತವಾಗಿ ಉಳಿದಿರುವುದು ನಮ್ಮ ಸಮಾಜದ ದುರ್ದೈವ. ಮದುವೆಯ ನಿರ್ದಿಷ್ಟ ವಯಸ್ಸಿಗೆ ಮೊದಲೇ ಬಾಲ್ಯ ವಿವಾಹ ಮಾಡಿಸಿ ಕೈ ತೊಳೆದುಕೊಳ್ಳುವ ಸಾಮಾಜಿಕ ಪಿಡುಗು ಆತಂಕಕಾರಿ. ಈ ಪ್ರಕರಣಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣುತ್ತಿದ್ದು, ನಗರಗಳಲ್ಲೂ ಅಲ್ಲೊಂದು-ಇಲ್ಲೊಂದು ಕಂಡುಬರುತ್ತಿರುವುದು ನೋವಿನ ಸಂಗತಿ. ಲಿಂಗ ಬೇಧ, ಅಸಮಾನತೆ ಬಗ್ಗೆ ಜಾಗ್ರತಿ ಮೂಡಿಸುವ ಈ ಸಂಧಿಗ್ಧ ಕಾಲದಲ್ಲಿ ಈ ತರಹದ ಸನ್ನಿವೇಶಗಳು ಬಹಳ ಕಾಡುತ್ತವೆ. ಕರೊನ ಬಡಜನರ ಪಾಲಿಗೆ ಮೃತ್ಯುಕೂಪವಾಗಿದೆ. ಬಾಲ್ಯವಿವಾಹ ತಡೆ ಖಾಯ್ದೆ ಪ್ರಸ್ತುತ ಹೆಚ್ಚು ಪರಿಣಾಮಕಾರಿಯಾಗಿ ಈ ಪಿಡುಗನ್ನು ಹತ್ತಿಕ್ಕುವಲ್ಲಿ ಕೆಲಸ ಮಾಡಬೇಕಾಗಿದೆ. ಈ ಸುಧಾರಣೆಯ ಕಾರ್ಯವನ್ನು ಜಾಗ್ರತಗೊಳಿಸುವ ಜವಾಬ್ದಾರಿಯನ್ನು ಹೊತ್ತ ಪದ್ಮ ಈಗ ಹಳ್ಳಿಹಳ್ಳಿಗಳಲ್ಲಿ ಸಂಚಾರ ಮಾಡಿ, ಬಾಲ್ಯ ವಿವಾಹದ ಸಮಸ್ಯೆಗಳು, ವಿದ್ಯಾಭ್ಯಾಸದ ಅನುಕೂಲಗಳ ಬಗ್ಗೆ ಜಾಗ್ರತೆ ಮೂಡಿಸುವ ಸಮಾಜ ಮುಖಿ ಸೇವೆ ಮಾಡುವ ತೀರ್ಮಾನ ಮಾಡಿದ್ದಾಳೆ.
ಪದ್ಮಳ ಈ ಸಂಕಲ್ಪಕ್ಕೊಂದು ದೊಡ್ಡ ಸಲಾಂ. ಎಲ್ಲರೂ ಪದ್ಮಳಂತೆ ಆದಲ್ಲಿ ಸ್ವಸ್ಥ ಸಮಾಜ ದೂರವೇನಿಲ್ಲ ಅಲ್ವಾ?
–ವತ್ಸಲ ಹೆಬ್ಬಾಲೆ.
ಜಾಗೃತಿ ಮೂಡಿಸುವ ಕೆಲಸ ಆಗಬೇಕು ಆಗುತ್ತಿದೆ ಆದರೆ ಅದು ಎಷ್ಟರಮಟ್ಟಿಗೆ ಸಫಲವಾಗುತ್ತದೆ.ದೇವರೇ ಬಲ್ಲ ಕಣ್ತಿರಿಸುವ ಲೇಖನ ಧನ್ಯವಾದಗಳು ಮೇಡಂ.
ಹೆಣ್ಣು ಎಷ್ಟೇ ಓದಿ ಉನ್ನತ ಸ್ಥಾನ ಹೊಂದಿದ್ದರೂ ಸಂಸಾರ ನಿರ್ವಹಣೆ ಅವಳ ಜವಾಬ್ದಾರಿ ಅಂತಾನೇ ಆಗೋಗಿದೆ.
Very nice article with a message
ಸಾಮಾಜಿಕ ಕಳಕಳಿಯನ್ನು ಬಿಂಬಿಸುವ ಉತ್ತಮ ಲೇಖನ. ಪದ್ಮ ಸಫಲಳಾಗಲಿ.
ಅನನ್ಯ ಸಾಮಾಜಿಕ ಕಳಕಳಿಯಿಂದ ಕೂಡಿದ ವಿಚಾರಪೂರ್ಣ ಬರಹ.
ಚೆನ್ನಾಗಿದೆ
ಚೆನ್ನಾಗಿದೆ
ನಿಮ್ಮ ಸಾಮಾಜಿಕ ಕಳಕಳಿಗೆ ಧನ್ಯವಾದಗಳು
ವಿಚಾರಪೂರ್ಣ ಬರಹ.