ಎಲ್ಲಾ ಜೀವಿಗಳಿಗೂ ಹುಟ್ಟು ಸಾವುಗಳಿರುವ ಆದಿ-ಅಂತ್ಯಗಳೆಂಬ ಸ್ಥಿತಿಗಳಿವೆ. ಆದ್ಯಂತರವಿಲ್ಲದವನೆಂದರೆ ಪರಮಾತ್ಮನೊಬ್ಬನೇ. ಮಾನವ ಕುಲಕ್ಕೂ ಮೂಲ ಪುರುಷನೆಂಬ ಒಬ್ಬನಿದ್ದನು. ಆತನೇ ಮನು ಎಂಬ ಹೆಸರಿನಿಂದ ಕರೆಯಲ್ಪಡುವವನು. ಮನುವಿನ ಅಧಿಕಾರ ಕಾಲವನ್ನು ಮನ್ವಂತರಎಂದು ಕರೆಯಲಾಗುತ್ತದೆ. ಮನ್ವಂತರಗಳನ್ನು ನಡೆಸಿದ ಹಲವು ಮನುಗಳಿದ್ದಾರೆ. ಯಾವ ಮನುವಿನ ಕಾಲವೋ ಆತನ ಹೆಸರಿನಿಂದ ಮನ್ವಂತರಗಳನ್ನು ಗುರುತಿಸಲಾಗುತ್ತದೆ. ಮನು ಎಂಬುದು ಪದವಿ. ವೈವಸ್ವತ ಮೊದಲಾದ ಹದಿನಾಲ್ಕು ಮಂದಿ ಮನುಗಳಿದ್ದಾರೆ ಎಂದು ತಿಳಿದು ಬರುತ್ತದೆ. ಈಗ ನಡೆಯುವುದು ವೈವಸ್ವತ ಮನ್ವಂತರ. ಕೃತ, ತ್ರೇತ, ದ್ವಾಪರ, ಕಲಿ ಎಂಬ ಚತುರ್ಯುಗಳು ಎಪ್ಪತ್ತೊಂದು ಬಾರಿ ಮರಳಿ ಬಂದರೆ ಒಂದು ಮನ್ವಂತರ ಮುಗಿಯುತ್ತದೆ. ಒಂದು ಮನ್ವಂತರಕ್ಕೆ 30,67,20,000 ಮಾನವ ಈಗ ವೈವಸ್ವತ ಮನುವಿನ ಬಗ್ಗೆ ತಿಳಿಯೋಣ. ಈತನು ವಿವಸ್ವತನೆಂಬ ಸೂರ್ಯನ ಮಗ. ಈತನ ತಾಯಿ ತ್ವಷ್ಟ (ವಿಶ್ವಕರ್ಮ) ಪ್ರಜಾಪತಿಯ ಪುತ್ರಿಯಾದ ಸಂಜ್ಞಾದೇವಿ. ಈತನಿಂದ ಮನಶಾಸ್ತ್ರ ಧರ್ಮವು ನಿರ್ಮಿತವಾಯಿತು.
ವೈವಸ್ವತ ಮನುವಿಗೆ ಇಕ್ಷಾಕು ಮೊದಲಾದ ಹತ್ತು ಮಂದಿ ಮಕ್ಕಳು. ಇದಕ್ಕೂ ಹಿಂದೆ ಸ್ವಾಯಂಭುವ, ಸ್ವಾರೋಚಿಷ, ಉತ್ತಮ, ತಾಮಸ, ರೈವತ, ಚಾಕ್ಷುಷ ಎಂಬ ಆರು ಮನ್ವಂತರಗಳು ಆಗಿ ಹೋಗಿವೆ. ಮುಂದೆ ಸಾವರ್ಣಿ, ಭೌತ್ಯ, ಶೌಚ್ಯ, ಬ್ರಹ್ಮಸಾವರ್ಣಿ, ರುದ್ರ, ಸಾವರ್ಣಿ, ಮೇರು ಸಾವರ್ಣಿ, ದಕ್ಷ ಸಾವರ್ಣಿ ಎಂಬ ಏಳು ಮನ್ವಂತರಗಳು ಬರಲಿವೆ. ಪ್ರತಿಯೊಂದು ಮನ್ವಂತರಕ್ಕೂ ಮನು, ಋಷಿ, ದೇವಗಣ,ಮನು ಸಂತತಿ ಬೇರೆ ಬೇರೆ ಇರುತ್ತದೆ. ಮೊದಲನೆಯವನಾದ ಸ್ವಾಯಂಭುವ ಮನ್ವಂತರದಲ್ಲಿ ಮರೀಚಿ, ಅತ್ರಿ, ಅಂಗಿರ, ಪುಲಹ, ಕ್ರತು, ಅಗಸ್ಯ, ವಸಿಷ್ಟ ಮೊದಲಾದ ಬ್ರಹ್ಮನ ಏಳು ಮಂದಿ ಮಾನಸ ಪುತ್ರರೇ ಸಪ್ತಋಷಿಗಳೆಂದು ಪೂಜಿಸಲ್ಪಡುತ್ತಾರೆ. ಈ ಮನ್ವಂತರದ ದೇವಗಣವನ್ನು ಯಮನೆಂದು ಕರೆಯುತ್ತಾರೆ.
ಮನು ಮಹರ್ಷಿಗೆ ಯಜ್ಞವೆಂದರೆ ಬಹಳ ಇಷ್ಟ. ಆತನ ಬಳಿ ಒಂದು ಅದ್ಭುತ ಎತ್ತು ಇತ್ತು. ಅದರ ವೈಶಿಷ್ಟ್ಯವೆಂದರೆ ಅದರಲ್ಲೊಂದು ದೈವೀವಾಣಿ ಇತ್ತು. ಆ ಎತ್ತು ಕೂಗಿದರೆ ಇಲ್ಲವೇ ಉಸಿರಾಡಿದರೆ ಆ ದೈವೀವಾಣಿಯು ಕೇಳಿ ಬರುತ್ತಿತ್ತು. ಅದರ ಬಾಯಿಯಿಂದ ಹೊರಬಿದ್ದ ವಾಣಿಯು ಅಸುರರ ಕಿವಿಗೆ ಬಿದ್ದ ಕೂಡಲೇ ಅಸುರರು ತಕ್ಷಣ ಸತ್ತು ಹೋಗುತ್ತಿದ್ದರು. ಇದರಿಂದಾಗಿ ಅಸುರರಿಗೆ ಆ ಎತ್ತು ಹಂತಕವಾಗಿ ಪರಿಣಮಿಸಿತ್ತು. ಅಸುರರು ಏನು ಮಾಡುವುದೆಂದು ತಿಳಿಯದಾದರು. ಅವರಿಗೆ ಆ ಎತ್ತನ್ನು ನಾಶ ಮಾಡಬೇಕಿತ್ತು. ಅವರು ಕಿರಾತ ಮತ್ತು ಆಕಲಿ ಎಂಬ ಚಾಣಾಕ್ಷ ಪುರೋಹಿತರ ಮೊರೆ ಹೊಕ್ಕರು. ಅವರು ಮನುವಿನಿಂದ ಒಪ್ಪಿಗೆ ಪಡೆದು ಯಜ್ಞ ಮಾಡಿ ಅದರಲ್ಲಿ ಆ ಎತ್ತನ್ನು ಬಲಿಯಾಗಿ ಕೊಡುವುದನ್ನು ಒಪ್ಪಿಸಿದರು. ಎತ್ತಿನ ಮರಣಾನಂತರ ಎತ್ತಿನಲ್ಲಿದ್ದ ದೈವೀವಾಣಿಯು ಮನುವಿನ ಪತ್ನಿಯಾದ ಮನಾವಿಯ ಶರೀರದಲ್ಲಿ ಆಶ್ರಯ ಪಡೆಯಿತು. ಮುಂದೆ ಆಕೆಯ ಮಾತು ಕೇಳುತ್ತಲೇ ಅವರು ಮೊದಲಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಾಯತೊಡಗಿದರು.
ವಾಪಾಸು ಅಸುರರು ಆ ದುಷ್ಟ ಪುರೋಹಿತರ ನೆರವನ್ನು ಪಡೆದು ಮನುವಿನ ಪತ್ನಿಯನ್ನೂ ಬಲಿ ಕೊಡಿಸಿದರು. ಆಗ ಆಕೆಯ ಶರೀರದಲ್ಲಿದ್ದ ದೈವೀ ವಾಣಿಯು ಯಜ್ಞ ವೇದಿಕೆಯಲ್ಲಿರಿಸಲಾಗಿದ್ದ ಒಂದು ತಟ್ಟೆಯಲ್ಲಿ ಸೇರಿಕೊಂಡಿತು. ಮುಂದೆ ಆ ತಟ್ಟೆಯಿಂದ ಹೊರಬಿದ್ದು ಅಸುರರನ್ನು ಕೊಲ್ಲುವುದನ್ನು ಬಿಡಲಿಲ್ಲ. ದುಷ್ಟ ಸಂಹಾರ, ಅಸುರೀ ಶಕ್ತಿಯ ದಮನ ಒಂದಿಲ್ಲೊಂದು ರೀತಿಯಿಂದ ಆಗಿಯೇ ಆಗುತ್ತದೆ ಎಂಬುದಕ್ಕೆ ಇದು ಶ್ರೇಷ್ಠ ಉದಾಹರಣೆ.
-ವಿಜಯಾ ಸುಬ್ರಹ್ಮಣ್ಯ, ಕುಂಬಳೆ
ಪ್ರಕಟಿಸಿದ ಹೇಮಮಾಲಾ ಹಾಗೂ ಓದುಗರಿಗೆ ಧನ್ಯವಾದಗಳು.
ಎಂದಿನಂತೆ ಪುರಾಣ ಕಥೆಯು ಚೆನ್ನಾಗಿ ಮೂಡಿ ಬಂದು ಮರೆತು ಕಥೆಗಳ ನೆನಪಿಸುವಿಕೆ ಕೆಲವು ಸಲ ಕೇಳಿದ್ದರೂ ಸರಿಯಾಗಿ ಗೊತ್ತಿಲ್ಲದ ಮತ್ತೆ ಕೇಳಿ ತಿಳಿಯಬೇಕೆಂಬ ಕಥೆಗಳು ನಿಮ್ಮ ಈ ಬರವಣಿಗೆ ಯಿಂದ ಲಬ್ಯವಾಗುತ್ತಿದೆ ಧನ್ಯವಾದಗಳು ಮೇಡಂ.
ಮೂಲಪುರುಷ ಮನುವಿನ ವಿಸೃತ ವೃತ್ತಾಂತ ವಿವರನಾತ್ಮಕವಾಗಿ ಚೆನ್ನಾಗಿ ಮೂಡಿ ಬಂದಿದೆ. ಅಭಿನಂದನೆಗಳು.
ನೈಸ್
ರಸವತ್ತಾದ ಪೌರಾಣಿಕ ಕಥೆಗಳು ನಮ್ಮನ್ನು ಬೇರೆಯೇ ಲೋಕಕ್ಕೆ ಕೊಂಡೊಯ್ಯುವುದು ಸುಳ್ಳಲ್ಲ. ಎಂದಿನಂತೆ ಚಂದದ ಕಥೆ…ಮನು ಮತ್ತು ಮನ್ವಂತರದ ಬಗ್ಗೆ… ಧನ್ಯವಾದಗಳು ವಿಜಯಕ್ಕ.