ಡಿ.ನಳಿನ ಅವರ ‘ಬೆಳಕ ಜೋಳಿಗೆ’ಯಲ್ಲಿ ಭಾವಗಳ ಗಂಟು
ಒಂದು ಕಥೆ ಅಥವಾ ಕಾದಂಬರಿಗೆ ಇಂತಹದೇ ಅರ್ಥ ಎಂಬುದು ಇರುತ್ತದೆ. ಆದರೆಒಂದು ಕವನಕ್ಕೆ ನಾನಾ ಅರ್ಥಗಳು ಮೂಡಬಹುದು. ಒಂದೇ ಕವನವನ್ನು ಓದಿದ ಅನೇಕರು ಅನೇಕ ರೀತಿಯಲ್ಲಿ ಅರ್ಥಗಳನ್ನು ಕೊಡಬಹುದು. ಹಾಗಾಗಿ ಕವನದ ಒಳಹು, ಕವನದ ಅಥ ಇದೇ ಎಂದು ಹೇಳಲಾಗುವುದಿಲ್ಲ.
ತಮ್ಮ ಕವನಗಳಿಗೆ ಇದೇ ಅಥ ಎಂದು ಯಾರು ಏನೇ ಹೇಳಿದರೂ ಅದನ್ನು ಓದಿದವರು ಅರ್ಥೈಸಿಕೊಳ್ಳುವುದು ಬೇರೆಯೇ ಆಗುತ್ತದೆ. ಒಟ್ಟಿನಲ್ಲಿ ಒಂದು ಕವನ ಓದಿದಾಗ ಅದರನೋ ಹೊಳೆಯುತ್ತದೆ, ಒಂದು ಅರ್ಥ ಮೂಡುತ್ತದೆ ಎಂದರೆ ಅಲ್ಲಿಗೆ ಕವನ ಸಾರ್ಥಕ. ಡಿ.ನಳಿನ ಅವರ ಕವನಗಳು ಆ ಸಾರ್ಥಕತೆಯ ಹಾದಿಯಲ್ಲಿ ಸಾಗುವುದನ್ನು ‘ಬೆಳಕ ಜೋಳಿಗೆ‘ಯಲ್ಲಿ ಕಾಣಬಹುದು.
ಹದವಾಗಲಿಲ್ಲ, ಅರಿವಾಗಲಿಲ್ಲ,
ತಿದ್ದಿ ತೀಡಿಕೋಬೇಕು
ತನ್ನ ತಾನೇ ನೇರದಾರಿಗೆ
ಸ್ಪಷ್ಟತೆಗೆ ಗಟ್ಟಿತನ ಕೊಟ್ಟು
ದೂರವಿರಬೇಕು ಗಾಂಪರ ಗುಂಪಿನಿಂದ
ಪರಿಸ್ಥಿತಿ ಏನೇ ಇರಲಿ ತಾನು ಗಟ್ಟಿತನ ಮೆರೆಯಬೇಕು, ತನ್ನ ಸ್ಪಷ್ಟತೆಗೆ ತಾನೇ ‘ಆಹ್ವಾನ’ ನೀಡಬೇಕು ಎಂದು ಸಾರುವ ಮೂಲಕ ಆರಂಭವಾಗುವ ‘ಬೆಳಕ ಜೋಳಿಗೆ’ಯಲ್ಲಿನ ಭಾವಗಳ ಗಂಟು,
‘ಸಾವು ಸುಲಭವಲ್ಲ,
ನೆನಪುಗಳು ಸಾಯಬೇಕಿಲ್ಲ’
ಎಂಬಲ್ಲಿಗೆ ಮುಗಿಯುತ್ತವೆ.
ಐದು ಅನುವಾದಿತ ಕವನಗಳ ಜೊತೆಗೆ ಗಾಂಧೀ ಕುರಿತ ಎರಡು ಕವನಗಳೂ ಸೇರಿ ಒಟ್ಟು 106 ಕವನಗಳ ವಿವಿಧ ಭಾವ ಪಕ್ಷಿಗಳು ಬೆಳಕ ಜೋಳಿಗೆಯಲ್ಲಿ ಹಾರಾಡುತ್ತಿದ್ದು, ಅವುಗಳ ಕಲರವವನ್ನು ಕೇಳಬಹುದು.
ಕಲಬೆರಕೆಯ ಭಾವನೆಗಳಲಿ
ಮುಳುಗೇಳುತಲಿ
ಸವೆದು ಅಳಿಯುತ್ತಾರೆ
ಎನ್ನುವಲ್ಲಿ ಸ್ಪಷ್ಟ ನಿಲುವು ಇಲ್ಲದ ಮುಖವಾಡದ ಬದುಕಿನ ಬಗ್ಗೆ ಛೇಡಿಸಿದ್ದಾರೆ. ಇದೇ ರೀತಿ ಈ ಪುಸ್ತಕದಲ್ಲಿನ ಕವನಗಳು ಅನೀತಿ, ಅಧಮ, ಅನ್ಯಾಯದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತವೆ.
ಬೆಳಕ ಜೋಳಿಗೆಯಲ್ಲಿನ ಕೆಲವು ಕವನಗಳು ಹಲವಾರು ಪತ್ರ್ರಿಕೆಗಳಲ್ಲಿ ಪ್ರಕಟವಾಗಿವೆ ಹಾಗೂ ನಳಿನ ವಿಶೇಷ ಸಂದರ್ಭಗಳಿಗಾಗಿಯೇ ಕೆಲವು ಕವನಗಳನ್ನು ರಚಿಸಿದ್ದು, ಅವನ್ನು ಕಾರ್ಯಕ್ರಮಗಳಲ್ಲಿ ವಾಚನ ಮಾಡಿದ್ದಾರೆ ಕೂಡ.
ತಾಳು ಭಾರತೀಯರ ಪಿತನೇ ತಾಳು
ನೀನೆದ್ದು ಬಂದಂತೆಯೇ
ನನ್ನ ಮಕ್ಕಳೆಲ್ಲರೂ ಜಾಗೃತರಾಗಲಿzರೆ ತಾಳು
ಅಚ್ಚಳಿಯದೆ ಮೂಡಲಿವೆ
ಕುಡಿಗಳೆದೆ ಎದೆಯಲ್ಲೂ
ದೇಶಭಕ್ತಿ,
ವಿಕೃತಿ ಅಳಿಸುವ ಶಕ್ತಿ
ಅಶಾಂತಿ ಅಳಿಸಿ
ಗಾಂಧಿ ತತ್ವವ ಬೆಳೆಯುವ ಪರ್ವಕಾಲ
ಭಾರತಾಂಬೆಗೇ ಈ ನಿರೀಕ್ಷೆಯನ್ನು ಕಲ್ಪಿಸುವ ನಳಿನ, ಭಾರತೀಯ ಮಾತೆಯರೆಲ್ಲರ ನಿರೀಕ್ಷೆಯೂ ಇದೇ ಎಂಬಂತೆ ‘ಋಜುವಾಣಿ’ ಹೊರಡಿಸುತ್ತಾರೆ.
ಹೆಣ್ಣು ಏನೇ ಬರೆಯಬೇಕೆಂದರೂ ತನಗಾಗಿ ಕಾದಿರುವ ಕೆಲಸಗಳನ್ನು ಮುಗಿಸಿ, ಪರಿವಾರದ ಕಾಳಜಿ ವಹಿಸಿ, ಅಗತ್ಯವಾದುದೆಲ್ಲವನ್ನೂ ಪೂರೈಸಿ ಉಸ್ಸಪ್ಪ ಎನ್ನುವಂತಾದಾಗ ಅವಳಿಗೆ ಸಮಯ ಸಿಗುತ್ತದೆ-
ಕವಿತೆ ಕುದಿಯುತ್ತಿದೆ
ಥಳ ಥಳ ರಸಾಥಳದೊಡಲಲ್ಲಿ
ಹೊರಗೆ ಬರುವುದಿದೆ ಇನ್ನೇನು ಪೆನ್ನು
ಬಿಳಿಹಾಳೆ ಕೈಗೆ ತಾಕಬೇಕಷ್ಟೇ? ಇದು ಕನ್ನಡತಿಯ ಕವಿಸಮಯ.
ದುಡಿಯುವ ತಾಯಂದಿರು ತಮ್ಮ ಹಸುಗೂಸನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಮುಂದಾಗುವ ಪರಿ, ಮಗು ಹಸಿದಿರಬಹುದೇ, ಮಲಗಿರಬಹುದೇ ಎಂದು ಚಿಂತಿಸುತ್ತಲೇ ಕೆಲಸದಲ್ಲಿ ಮಗ್ನವಾಗುವ ಪರಿ, ತಾಕಲಾಟ- ತಾಯ್ತತನ ಮತ್ತು ದುಡಿಮೆಯ ಜುಗಲ್‌ಬಂಧಿ ಬಗ್ಗೆ ತಿಳಿಸುತ್ತದೆ ‘ತಾಯಂದಿರು’ ಕವನ.
ತನಗೊಬ್ಬಳಿಗಾಗಿ ಮಿಡಿವ ತುಡಿವ, ಎದೆಯುಬ್ಬಿಸಿ ಬಡಿದಾಡುವ
ಅತ್ತರೆ ಸಂತೈಸುವ ಮೋಡಿಗಾರ
ಇಂತಹವನು ಸಿಗುವುದಾದರೆ
ಈ ಆತ್ಮಸಖನಿಗಾಗಿ ಮಿಡುಕಾಟ, ಹುಡುಕಾಟದ ನಡುವೆಯೂ ಕಾರ್ಯಸಿದ್ಧಿಗೆ ತಾಳ್ಮೆಗೆಡದಿರುವ ಎಚ್ಚರಿಕೆಯನ್ನು ಮೆರೆಯುತ್ತಾರೆ ‘ತಾಳ್ಮೆಗೆಡದಿರೆ ಸಿದ್ಧಿ‘ ಕವನದಲ್ಲಿ.
‘ವಿರಹದ ಊರ್ಮಿಳೆ’ ಎಂಬ ಧೀರ್ಘ ಕವನದಲ್ಲಿ ಕೇವಲ ವಿರಹವಷ್ಟೇ ಅಲ್ಲ, ಪ್ರೀತಿ- ಪ್ರೇಮ, ಜಗದ ಕುಹಕ, ಕೋಪ, ಅಸಹಾಯಕತೆ, ಅತ್ತೆಯರ ವೈಧವ್ಯ, ಕಾಯುವ ತಾಳ್ಮೆ ಎಲ್ಲಾ ಭಾವಗಳ ಅನಾವರಣ, ಹಾಗೆಯೇ ‘ದಾಂಪತ್ಯ ದೀವಿಗೆ’ಯಲ್ಲಿ ಪ್ರೀತಿಯ ಮಹತ್ವದ ಹೂರಣ.
ದಾರಿ ನೂರಾರು
ಯಾರ ದಾರಿಗೂ ಕಾಯದೆ
ಯಾವ ಹಾಡಿಗೂ ನಿಲ್ಲದೆ
ಯಾರ ಎದೆಯಲೂ ತಲ್ಲಣಗಳೆಬ್ಬಿಸದೇ
ಸುಮ್ಮನೇ ಸಾಗು..
ಎಂದು ಹೇಳುವಲ್ಲಿ ನಳಿನ, ಜೀವನದಲ್ಲಿ ಏನೇ ಅಡಚಣೆಗಳು ಉಂಟಾದರೂ ಗುರಿ ಮುಟ್ಟುವ ಕಡೆ ಸಾಗಬೇಕು, ‘ಸಂತೆಯ ಸಂತ’ನಂತೆ ಇರಬೇಕು ಎಂದಿದ್ದಾರೆ. ಜೊತೆಗೆ ಜಗಕ್ಕೆ ಒಂದು ನಿಯಮವನ್ನು ಕಲ್ಪಿಸಿ ಬೆಳಗಬೇಕು, ಬೆಳಕಾಗಬೇಕು, ಒಳಗಿನ ಕೊಳೆ ತೊಳೆಯುವ ಸಮಯ ಬಂದಿದೆ ಎಂದು ಎಚ್ಚರಿಸಿದ್ದಾರೆ.
ಜೀವನವೊಂದು ಜೂಟಾಟ
ತಪ್ಪದೆ ಕಲಿಯುವುದಿದೆ ಒಬ್ಬೊಬ್ಬರಿಂದ
ಸಾವು-ನೋವು, ಕಷ್ಟ- ಸುಖ ಎಲ್ಲವು ಕಲಿಕೆಯ ಹಂತಗಳು
ಒಬ್ಬರ ತಳ್ಳದೆ, ತಾನೂ ಬೀಳದೆ ಅಂತರ ಇರಿಸಿ ನಡೆಯಲೇಬೇಕಿದೆ.
ಜೀವನ ನಾವು ಅಂದುಕೊಂಡಂತಲ್ಲ, ಕಾಣುವಂತೆ ಜನರಿಲ್ಲ, ಹೊಗಳುತ್ತಾ ಹಳ್ಳಕ್ಕೆ ಬೀಳಿಸುವವರು, ನಗುನಗುತ್ತಲೇ ಸಂಕಷ್ಟಕ್ಕೀಡು ಮಾಡುವವರು ಎ ತರಹದವರೂ ಇzರೆ. ಇವರ ನೋಡಿ ಕಲಿಯಬೇಕು, ತಾನು ಬೀಳದೆ, ಯಾರನ್ನೂ ಬೀಳಿಸದೇ ಮುನ್ನಡೆಯಬೇಕು ಎಂಬುದು ‘ಜೂಟ್ ಜೂಟಾಟ’ದ ಜೀವನ ಪಾಠ.
ಬಂದದ್ದು ಭಾಗ್ಯವೆಂದುಕೊಂಡರೆ ಬದುಕಿದು ಸುಗಮ
ದುಃಖಕೆ ಕೊರಗಿ ಕೂತರೆ ದಿನಗಳಲ್ಲಿ ನಿರಾಶೆಯ ಉಗಮ
ತಾಳ್ಮೆಯಿಂದಲಿ ನಡೆವುದೇ ಉತ್ತಮ
‘ತಾಳಿಕೋ’ ಕವನದ ಈ ಸಾಲುಗಳು ಸಕಾರಾತ್ಮಕತೆಯ ದಾರಿಯನ್ನು ತೋರಿಸುವಲ್ಲಿ ಯಶಸ್ವಿಯಾಗಿವೆ. ಅಷ್ಟೇ ಅಲ್ಲ, ಈ ಕವನ ಯಾವುದೂ ಶಾಶ್ವತವಲ್ಲ, ಕತ್ತಲಲ್ಲಿ ತಳಮಳಿಸಬೇಡ, ಗುರಿಯಿಂದ ಹಿಂದೆ ಸರಿಯಬೇಡ, ಕತ್ತಲು ಸರಿದು, ಬೆಳಕು ಮೂಡಲಿದೆ, ತಾಳು ತಾಳು ಎಂಬ ಸಂದೇಶವನ್ನು ಸಾರುತ್ತದೆ.
ನಾಕು ದಿನದ ಸಂತೆಯೊಳಗೆ ಕೂತು
ಮೂಕನಾಗಿದೆ ಮನ
ಗಬ್ಬೆದ್ದ ಲೋಕದ ರೀತಿ ಕಂಡು
ನೀತಿ ಮರೆತರೇಕೆ ಜನ
ಎಂದು ಪ್ರಶ್ನಿಸುವಲ್ಲಿ ನಳಿನ ಲೋಕದ ಅಧರ್ಮವನ್ನು ಟೀಕಿಸುತ್ತಾರೆ.
ಈ ಬೆಳಕಿನ ಜೋಳಿಗೆಯಲ್ಲಿ ಸಕಲವೂ ಇದೆ. ಗಾಂಧಿ, ಅಂಬೇಡ್ಕರ್ ಮಿಂಚುತ್ತಾರೆ. ಅಷ್ಟೇ ಅಲ್ಲ ಮುತ್ತುಗದ ಹೂಗಳು, ಕೆಂಡಸಂಪಿಗೆ, ಕಾಮದ ಹೂವು, ಕಾಡುಮಲ್ಲಿಗೆ, ಖಾಲಿ ಹಾಳೆ, ಶುದ್ಧ ಜಲ, ದೇವಿ, ಕಪ್ಪುಜನರನ್ನೂ ಕಾಣಬಹುದು. ಭ್ರೂಣದ ಪಿಸುಮಾತು ಕೇಳಿಸುತ್ತದೆ, ಕನ್ನಡದ ಕಟ್ಟಾಳುವಿನ ಧ್ವನಿ ಆಲಿಸಬಹುದು. ಹಾಗೆಯೇ ರೈತರ ಬಗೆಗಿನ ಕರುಣೆಯೂ ಗೋಚರ.
ಜಗದ ಕೊಂಡಿಯಾಗಿ ಮಳೆಯನ್ನು ನೆನೆಯುವ, ಮಿಂಚನ್ನು ನೆನಪಿನ ಬುತ್ತಿಯಾಗಿಸುವ, ಮುಂಗಾರು ಮಳೆಗೆ ಕರಗಿ ನೀರಾಗುವ, ಕಡಲ ಧ್ಯಾನದಲ್ಲಿ ಮೈಮರೆತಿರುವ, ಮನೆಯೊಳಗೆ ಇದ್ದು, ಕೊಳೆತು ಕಗ್ಗೊಲೆಯಾಗಿರುವ, ಭೂಮಿಯ ಹುರಿದು ಮುಕ್ಕಿ, ಮಂಕಾದ ಭಾವ… ಎಲ್ಲವನ್ನೂ ಕಾಣಬಹುದು.
ಕವಿತೆಗಳೆಂದರೆ ಪದಪುಂಜಗಳಲ್ಲ
ಬೆಳಕಿನ ಬಿಂದುಗಳು
ಎಂದು ನಳಿನ ಹೇಳಿರುವ ಮಾತಿನಂತೆ ಈ ಕವಿತೆಗಳು ಕೇವಲ ಪದಪುಂಜಗಳಷ್ಟೇ ಅಲ್ಲ; ಭಾವಗಳ ಗಂಟು, ಅವುಗಳ ನಂಟು ನಮ್ಮದು, ನಿಮ್ಮದು ಎಲ್ಲರದೂ ಆಗಬಹುದು.
-ಡಿ. ಯಶೋದಾ
ಪುಸ್ತಕ ಪರಿಚಯ ಚೆನ್ನಾಗಿ ಮೂಡಿಬಂದಿದೆ.
ಪುಸ್ತಕವನ್ನು ಪರಿಚಯಿಸಿದ ರೀತಿ ಚೆನ್ನಾಗಿದೆ
ಪುಸ್ತಕವನ್ನು ಪರಿಚಯಿಸಿದ ರೀತಿ ಚೆನ್ನಾಗಿದೆ
ಸೂಪರ್ ನಳಿನ ಕವನಗಳು ಚೆನ್ನಾಗಿ ಬಂದಿದೆ. ಅಭಿನಂದನೆಗಳು . ಯಶೋದ ಚೆನ್ನಾಗಿ ವಿಮರ್ಶೆ ಮಾಡಿರುವಿರಿ , ಅಭಿನಂದನೆಗಳು.
ನಳಿನ ಅವರು ಭರವಸೆ ಮೂಡಿಸುವಂತಹ ಕವಿಯಿತ್ರಿ ಎಂದು ಕಾಣುತ್ತದೆ.. ಯಶೋಧ ಅವರು ಬರೆದಿರುವಂತೆ ಕೆಲವು ಸಾಲುಗಳು ಅರ್ಥಪೂರ್ಣವಾಗಿ ಇವೆ. ನಳಿನ ಅವರಿಗೆ ಶುಭವಾಗಲಿ ಇನ್ನೊಂದಿಷ್ಟು ಕವನದ ಸಾಲುಗಳು ಅವರಿಂದ ಬರಲಿ
ಕವನ ಪುಸ್ತಕವೊಂದರ ಕವನಗಳನ್ನು ಸೊಗಸಾಗಿ ವಿಮರ್ಶಿಸಿ, ವಿಶ್ಲೇಷಿದ ಬಗೆ ಬಹಳ ಇಷ್ಟವಾಯ್ತು.