ಬೆಳಕು-ಬಳ್ಳಿ

ಶಾಪ

Share Button

ಜಗವ ಬೆಳಗುವ ರವಿಗೆ,
ಉರಿದು ಅಸ್ತಮಿಸುವ ಶಾಪ,
ಬಾನಿಗೆ ಅಂದ ನೀಡುವ ಚಂದ್ರಮನಿಗೆ,
ಕರಗಿ ಕಾಣದಾಗುವ ಶಾಪ,
ಬಣ್ಣದ ಹಸೆಯಂದದ ಕಾಮನಬಿಲ್ಲಿಗೆ,
ಮಾಸಿ ಮರೆಯಾಗುವ ಶಾಪ,
ಜೀವ ನೀಡುವ ಪ್ರಕೃತಿಗೆ,
ಸ್ವಾರ್ಥ ಮನುಜ ಲೋಕದ ಶಾಪ.

ಖಾಲಿ ಹಾಳೆಗೆ ಅರ್ಥ ನೀಡುವ ಲೇಖನಿಗೆ,
ಶಾಯಿ ಮುಗಿಯುವ ಶಾಪ,
ಜ್ಞಾನಸುಧೆಯನು ಸುರಿವ ಪುಸ್ತಕಕೆ,
ತಾ ಯೋಗ್ಯನಿಗೆ ಸಿಗದಿರೆ ಶಾಪ,
ದೀಪ ಬೆಳಗಿಸೊ ಎಣ್ಣೆಗೆ,
ತೀರಿಹೋಗುವ ಶಾಪ,
ಜ್ಯೋತಿಯನು ಹೊತ್ತ ಬತ್ತಿಗೆ,
ಸುಟ್ಟು ಕರಕಲಾಗುವ ಶಾಪ.

ಬೆಳಕು ಚೆಲ್ಲುವ ಜ್ಯೋತಿಗೆ,
ಉರಿದು ಮುಗಿಯುವ ಶಾಪ,
ಇವರ ಹೊರುವ ಹಣತೆಗೆ,
ತಾ ತಬ್ಬಲಿಯಾಗುವ ಶಾಪ,
ಇಳೆಯ ಪರಿಚಯಿಸುವ ತಾಯಿಗೆ,
ಹೆರಿಗೆ ನೋವನು ಅನುಭವಿಸುವ ಶಾಪ
ಸಲಹಿ ಬಾಳನು ನೀಡಿದ ತಂದೆಗೆ,
ಮಗನ ಧಿಕ್ಕರತನದ ಶಾಪ,
ದಾರಿ ತೋರಿದ ಜನನಿ ಜನಕರಿಗೆ,
ವೃದ್ಧಾಶ್ರಮದಿ ಕ್ಷಣಗಳೆಣಿಸುವ ಶಾಪ,
ಸೃಷ್ಟಿಸಿದ ದೇವರಿಗೆ,
ಶಾಶ್ವತದ ನೆಲೆ ಕೊಡಲಾಗದ ಶಾಪ.

ಎಲ್ಲಕೂ ಕೊನೆ ಇಹುದು,
ಅಂತ್ಯಕೂ‌ ಇತಿ‌ ಇಹುದು,
ಇದರನೆಲ್ಲವ‌ ಅರಿತು ಬಾಳುವ ಹೊತ್ತಿಗೆ,
ಮುಗಿವ ಜೀವದ ಶಾಪ.

-ಸೌಮ್ಯ

9 Comments on “ಶಾಪ

  1. ಪ್ರತಿಯೊಂದಕ್ಕೂ ಆದಿ, ಅಂತ್ಯಗಳು ಸಹಜ ಕ್ರಿಯೆಗಳು.. ಅಂತ್ಯವೇ ಶಾಪವೇ.?? ಸುಂದರ ಭಾವನಾತ್ಮಕ ಕವನ.

  2. ಪ್ರತಿಯೊಂದು ಕ್ರಿಯೆಗೂ ಇಲ್ಲಿ ಒಂದು ಅರ್ಥವಿದೆ ಅನ್ನುವುದನ್ನು ಸಾರುವ ಕವನ

  3. ಅರ್ಥವತ್ತಾದ ಕವನ ವಿಷಾದದ ಛಾಯೆಯಿದ್ದರೂ ವಾಸ್ತವದ ಕಹಿಸತ್ಯದಲ್ಲೊಂದು ಭರವಸೆಯ ಬೆಳ್ಳಿಮಿಂಚು. ಅಭಿನಂದನೆ.

  4. ಒಳ್ಳೆಯ ಮನಮುಟ್ಟಿ ಎಚ್ಚರಿಕೆ ನೀಡುವಂತೆಯೂ ಇರುವ ಈ ಪದ್ಯ ರಚನೆ ಚೆನ್ನಾಗಿದೆ.
    ಲೇಖಕಿಗೆ ನಮೋ ನಮಃ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *