ಹೃದಯ, ಮನಸ್ಸು, ಬುದ್ಧಿ, ಭಾವ ಇತ್ಯಾದಿ
ಕಣ್ಣು ಮುಚ್ಚಿ ಅಂತರ್ಮುಖಿಯಾದಾಗ ಒಳಗಿನ ಲೋಕ ಏನು ಹೇಳುತ್ತದೆ? ಒಳಗಿನ ಲೋಕ ಇರುವುದಾದರೂ ಎಲ್ಲಿ?ಹೃದಯದಲ್ಲಿ? ಹೃದಯದಲ್ಲಿ ಏನಿದೆ? ಆಸೆ? ಅದು ಹೃದಯದ್ದೋ ಮನಸ್ಸಿನದ್ದೋ. ಸಂತೋಷ, ದು:ಖ- ಅದು ಹೃದಯದ್ದೋ ಮನಸ್ಸಿನದ್ದೋ? ಮಗುವಿನ ತೊದಲು ನುಡಿ, ಅದರ ಚೇಷ್ಟೆ, ಆಟ ಪಾಟಗಳು ಮುದವನ್ನು ನೀಡುವುದು ಮನಸ್ಸಿಗೋ ಹೃದಯಕ್ಕೋ? ಭಾವವುದಿಸುವುದು ಹೃದಯದಲ್ಲೋ ಮನಸ್ಸಿನಲ್ಲೋ? ಪ್ರೇಮದ ಮೂಲಸ್ಥಾನ ಹೃದಯವೆನ್ನುತ್ತಾರಲ್ಲ- ಯಾಕೆ? ಭಾವದ ತೀವ್ರತೆ ಅದು ಯಾವುದೇ ಇರಲಿ ಹೃದಯ ಡಬ್ ಡಬ್ ಬಡಿದುಕೊಳ್ಳುತ್ತದಲ್ಲ- ಅದಕ್ಕೆ ತಾನೆ? ಹಾಗಾದರೆ ಹೃದಯ ಪ್ರೇಮಕ್ಕೆ ಮಾತ್ರವಲ್ಲ ಇತರ ಭಾವಗಳಿಗೂ ಮೂಲ. ಅಂದ ಮೇಲೆ ಮನಸ್ಸು? ಹೃದಯ ಎನ್ನುವುದು ದೇಹದ ಒಂದು ಅಂಗವೂ ಹೌದು. ಮನಸ್ಸು ಹಾಗೆ ಒಂದು ಅಂಗ ಎನ್ನುವ ಹಾಗಿಲ್ಲ.ಮೆದುಳು ಒಂದು ಅಂಗ. ಮನಸ್ಸು ಮೆದುಳಿನ ಚಟುವಟಿಕೆಯ ಭಾಗ. ಭಗವದ್ಗೀತೆಯಲ್ಲಿ ಮನಸ್ಸನ್ನು ಒಂದು ಇಂದ್ರಿಯವೆಂದು ಹೇಳಲಾಗಿದೆ. ಆದರೆ ಅದು ಅಮೂರ್ತ. ಮನಸ್ಸು ಯೋಚಿಸುವ ಕೆಲಸ ಮಾಡುತ್ತದೋ ಅಥವಾ ಅದು ಸಂವೇದನೆಯ ಮೂಲವೋ? ಯಾರಿಗಾದರೂ ಸಹಾಯ ಮಾಡಲು ‘ಮನಸ್ಸು ಬೇಕು’ ಎನ್ನುತ್ತಾರೆ . ನಮ್ಮಲ್ಲಿ ಮನ:ಸ್ಸಾಕ್ಷಿ ಎಂಬ ಪದವೂ ಬಳಕೆಯಲ್ಲಿದೆ. ಮನಸ್ಸು ಎಲ್ಲವನ್ನೂ ಸಾಕ್ಷಿಯಾಗಿ ನೋಡುತ್ತಿರುತ್ತದೆ. ಅದರಿಂದ ತಪ್ಪಿಸಿಕೊಳ್ಳುವ ಹಾಗಿಲ್ಲ ಎಂಬ ಆಶಯವನ್ನು ಮನುಷ್ಯ ಮಾತ್ರನಾದವನು ಕಡೆಗಣಿಸುವ ಹಾಗಿಲ್ಲ..ಹಾಗೆಯೇ ‘ಮನಸ್ಸಿದ್ದರೆ ಮಾರ್ಗ’ ಎನ್ನುವ ಮಾತೂ ಮನಸ್ಸಿನ ಮಹತ್ವವನ್ನು ಹೇಳುತ್ತದೆ.ಹಾಗಾದರೆ ಮನಸ್ಸು ಎನ್ನುವುದು ಬಯಕೆ, ಅಪೇಕ್ಷೆ, ಉಪೇಕ್ಷೆ, ತಿರಸ್ಕಾರ, ಕ್ರೋಧ- ಈ ಮೊದಲಾದ ಭಾವಗಳ ಕೇಂದ್ರವೇ? ಶಾಂತವಾಗಿರುವುದೇ ಮನಸ್ಸಿನ ಸಹಜ ಸ್ಥಿತಿಯೇ? ಚಿಕ್ಕಮಗುವಿನ ಮನಸ್ಸು ಎನ್ನುತ್ತಾರಲ್ಲ- ನಿಷ್ಕಲ್ಮಶವಾದ, ಕಳಂಕರಹಿತವಾದ ಪರಿಶುದ್ಧ ಮನಸ್ಸನ್ನು ಹಾಗೆ ಹೋಲಿಸುತ್ತಾರೆ. ದೊಡ್ಡವರ ಅಂದರೆ ಬೆಳೆದವರ ಮನಸ್ಸಿನಲ್ಲಿ ಸ್ವಾರ್ಥಮೂಲವಾದ ನಾನಾ ರಾಗದ್ವೇಷಗಳು ಎಡೆ ಪಡೆದಿರುತ್ತವೆ. ಸ್ವಾರ್ಥ ಎಂದರೆ? ತಾನು, ತನಗೆ – ಎಂಬ ಈ ಭಾವ ಮೂಡುವುದೆಲ್ಲಿ? ಮನಸ್ಸಿನಲ್ಲಿ?
ಮಾನಸಿಕವಾದ ಅಸ್ವಾಸ್ತ್ಯವುಳ್ಳವರು ಎನ್ನುತ್ತೇವಲ್ಲ-ಹಾಗಂದರೆ? ಅದಕ್ಕೂ ಮೊದಲು ಸ್ವಸ್ಥಮನಸ್ಸು ಎಂದರೇನು ಎಂದು ತಿಳಿದುಕೊಳ್ಳಬೇಕು. ದೇಹವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕೆಂಬ ಪ್ರಜ್ಞೆ,, ,ಮಾತನ್ನು ಎಲ್ಲಿ, ಯಾವಾಗ, ಏನನ್ನು ಆಡಬೇಕು -ಏನನ್ನು ಆಡಬಾರದು- ಎಂಬ ಅರಿವು, ಭಾವನೆಗಳ ನಿಯಂತ್ರಣ, ಮನಸ್ಸಿನಲ್ಲಿ ಉದಿಸಿಬರುವ ಆಲೋಚನೆಗಳನ್ನೆಲ್ಲ ಬಡಬಡಿಸದೆ ಅಗತ್ಯವಿರುವಷ್ಟನ್ನೆ ಸುಸಂಗತವಾದುದನ್ನೆ ಪ್ರಕಟಗೊಳಿಸುವ ಎಚ್ಚರ, ಗಂಡು- ಹೆಣ್ಣು ಬಂಧು- ಬಳಗ ಇಷ್ಟಮಿತ್ರರ ಜೊತೆ ಸಂಯಮದಿಂದ ಕೂಡಿದ ರೂಢಿಮೀರದ ವ್ಯವಹಾರ, ಆಹಾರ ಸೇವನೆಯಲ್ಲಿ ಶುಚಿರುಚಿಗಳನ್ನು ಅರಿತು ಸೇವಿಸುವುದು, ಹಗಲು ರಾತ್ರಿಗಳ ವ್ಯತ್ಯಾಸವನ್ನರಿತು ಯಥೋಚಿತ ದುಡಿಮೆ ಮತ್ತು ವಿಶ್ರಾಂತಿಯನ್ನು ಪಾಲಿಸುವುದು – ಹೀಗೆ ಇತ್ಯಾದಿ ಇತ್ಯಾದಿ ವಿಚಾರಗಳನ್ನು ಸ್ವಸ್ಥಮನಸ್ಸಿನ ಭಾಗವಾಗಿ ಪರಿಗಣಿಸಬಹುದು. ಈಗ ಅಸ್ವಸ್ಥ ಮನಸ್ಸು ಎಂದರೇನೆಂದು ತಿಳಿದುಕೊಳ್ಳುವುದು ಸುಲಭ.
ನಾವು ಅಸ್ವಸ್ಥ ಮನಸ್ಸಿನವರನ್ನು ಮೊದಲು ಗುರುತಿಸುವುದು ಅವರು ಧರಿಸಿದ ಬಟ್ಟೆಯ ಅವಸ್ಥೆಯಿಂದ. ಬಟ್ಟೆ- ಹರಿದರೆ ಕೊಳೆಯಾದರೆ ಅದರ ಬಗ್ಗೆ ಗೊಡವೆಯಿರದ ಮಾತ್ರವಲ್ಲ ,ಅದನ್ನು ಧರಿಸುವ ರೀತಿಯಲ್ಲೂ ಒಂದು ಅಸ್ತವ್ಯಸ್ತತೆ, ಮಾತು ಏನೇನೋ ಆಗಿರುತ್ತದೆ. ದೇಹದ ಶುಚಿತ್ವದ ಕಡೆಗೆ ಗಮನವಿರುವುದಿಲ್ಲ. ಪ್ರಶ್ನೆಗೆ ಉತ್ತರವಿರದೆ ತಮ್ಮಷ್ಟಕ್ಕೇ ಮಾತನಾಡಿಕೊಳ್ಳುತ್ತಾರೆ. ಹಳೆನೆನಪಿನ ಪದ್ಯಗಳನ್ನು ಗುನುಗುತ್ತಾರೆ.. ಇತರರ ಗೊಡವೆ ಕೆಲವೊಮ್ಮೆ ತೀರ ಇರುವುದಿಲ್ಲ. ಕೋಪಬಂದರೆ, ಅಥವಾ ಸಿಟ್ಟಿಗೆಬ್ಬಿಸಿದರೆ ನಿಯಂತ್ರಣವಿರದೆ, ಕೊಲೆಯಂತಹ ಕೆಲಸವನ್ನೂ ಮಾಡಬಹುದು. ಆಗ ತಂದೆ, ತಾಯಿ, ಮಗು ಮೊದಲಾದ ಸಂಬಂಧಗಳೂ ನೆನಪಿರಲಾರವು. ಆಹಾರ ಸೇವನೆಯಲ್ಲೂ ಶುಚಿರುಚಿಯ ಪರಿಜ್ಞಾನವಿರದೆ ಹಸಿದ ಹೊಟ್ಟೆಗೆ ಆಹಾರ ಎಂಬಷ್ಟೇ ಇದ್ದು, ಎಂಜಲೆಲೆಯಿಂದಲೂ ಅಗುಳನ್ನು ಆರಿಸಿ ತಿನ್ನಬಹುದು. ಹಗಲು ನಿದ್ದೆಮಾಡಬಹುದು. ರಾತ್ರಿ ಎಚ್ಚರವಾಗಿದ್ದು ಕೆಲವೊಮ್ಮೆ ಅಳುತ್ತ ಕೆಲವೊಮ್ಮೆ ನಗುತ್ತ ಹೇಗೆ ಹೇಗೋ ಕಾಲಕಳೆಯಬಹುದು. ಈ ಮನೋವೈಕಲ್ಯವು ಯಾವುದರಿಂದ ಉಂಟಾಗುತ್ತದೆ ಎಂದರೆ ತಡೆಯಲಾರದ ಸಂಕಟ, ಅವಮಾನ, ದು:ಖ. ಮಾನಸಿಕ ಆಘಾತ ಇತ್ಯಾದಿಗಳಿಂದ ಬರಬಹುದು. ಮನೋವೈಕಲ್ಯವನ್ನು ಬುದ್ಧಿಭ್ರಮಣೆ ಎಂದೂ ಹೇಳುತ್ತಾರಲ್ಲ? ಹಾಗಾದರೆ ಬುದ್ಧಿ ಮತ್ತು ಮನಸ್ಸು ಒಂದೇಯಾ? ಬುದ್ಧಿ ಎನ್ನುವುದು ಎಲ್ಲಿದೆ ಅದರ ಮೂಲ ಯಾವುದು? ಮಿದುಳು ಬುದ್ಧಿಯ ಚಟುವಟಿಕೆಯ ಮೂಲವೂ ಹೌದಲ್ಲ? ಅಸ್ವಸ್ಥಮನಸ್ಸಿನೊಂದಿಗೆ ಬುದ್ಧಿಯೂ ಅಸ್ವಸ್ಥಗೊಳ್ಳುತ್ತದೆ.
ಬುದ್ಧಿ ತಾರ್ಕಿಕತೆಗೆ ಸಂಬಂಧಿಸಿದ್ದು. 2+2 ಎಂದರೆ ನಾಲ್ಕು ಎಂಬ ಲೆಕ್ಕಾಚಾರಕ್ಕೆ ಸಂಬಂಧಿಸಿದ್ದು ಕಾರ್ಯಕಾರಣಗಳ ಸಂಬಂಧವನ್ನು ಪರಿಭಾವಿಸಿ ತಿಳಿದುಕೊಳ್ಳುವುದಕ್ಕೆ ಸಂಬಂಧಿಸಿದ್ದು. ಬುದ್ದಿಜೀವಿಗಳು ಎನ್ನುತ್ತೇವಲ್ಲ. ಅವರಲ್ಲಿ ಏನಿದೆ ವಿಶೇಷ? ಅವರು ವಿಶ್ಲೇಷಣಾ ಶಕ್ತಿಯನ್ನು ಹೊಂದಿದ್ದು ಕಾರ್ಯಕಾರಣ ಸಂಬಂಧವನ್ನು ತಾರ್ಕಿಕವಾಗಿ ಅರಿತು ವಿವರಿಸಬಲ್ಲರು. ವಿಜ್ಞಾನಿಗಳಲ್ಲಿ ಈ ಶಕ್ತಿ ಪ್ರಖರವಾಗಿರುತ್ತದೆ. ಹಾಗಾದರೆ ಸಾಹಿತ್ಯ, ಕಲೆಯ ಸೃಷ್ಟಿಗೆ ಬುದ್ಧಿಯ ಕೊಡುಗೆ ಇಲ್ಲವೇ? ಅದರಲ್ಲಿ ಮನಸ್ಸು ಮತ್ತು ಭಾವದ ಪಾತ್ರವೇ ಮಿಗಿಲೇ? ಓರ್ವ ಕಲಾವಿದನಲ್ಲಿ ಕಲಾಸೃಷ್ಟಿಯ ವೇಳೆ ಬೌದ್ಧಿಕತೆಗಿಂತಲೂ ಭಾವನೆಯ ನೆಲೆಗಟ್ಟು ಪ್ರಧಾನವಾಗಿರುತ್ತದೆ ಎನ್ನೋಣವೇ? ಹೌದು. ಶಿಲ್ಪಕಲೆ, ಸಂಗೀತ ಸಾಹಿತ್ಯ – ಈ ಎಲ್ಲ ಕಲೆಗಳಿಗೂ ಅದರದ್ದೇ ಆದ ಲೆಕ್ಕಾಚಾರವಿದೆ. ಶಿಲ್ಪಕಲೆಯಲ್ಲಿ ನಿಶ್ಚಿತ ಅಳತೆ ,ಪ್ರಮಾಣದ ನಿಖರತೆ, ಸಂಗೀತದಲ್ಲಿ ತಾಳಮೇಳದ ಹೊಂದಾಣಿಕೆ, ಗುರುಲಘುಗಳ ಲೆಕ್ಕಾಚಾರ, ಸಾಹಿತ್ಯದಲ್ಲಿ ಅದರದ್ದೇ ಆದ ವ್ಯಾಕರಣದ ಪಾಲನೆ- ಇಲ್ಲೆಲ್ಲ ಬೌದ್ಧಿಕ ಕೌಶಲ್ಯ, ಜಾಣ್ಮೆ- ಇವುಗಳ ಅಗತ್ಯವಿದ್ದೇ ಇದೆಯಲ್ಲ. ಆದರೆ ಅಷ್ಟರಿಂದಲೇ ಕಲೆಯಾಗಲಾರದು. ಕಲೆಯಲ್ಲಿ ಜೀವರಸ ಓಡಿಯಾಡಲು ಸಂವೇದನೆಗೆ , ಭಾವನೆಗೆ ಪ್ರಾಶಸ್ತ್ಯ. ಬುದ್ಧಿ ಆರ್ಥೈಸಿಕೊಳ್ಳುತ್ತದೆ. ಮನಸ್ಸು ಅನುಭವಿಸುತ್ತದೆ. ತಾರ್ಕಿಕತೆಗೆ ಮೀರಿದ ಅನುಭವವು ಕಲೆಯನ್ನಾಳುತ್ತದೆ. ಅದನ್ನು ಬೌದ್ಧಿಕವಾಗಿ ವಿವರಿಸಲಾಗದು. ಹೀಗೆ ನಾವು ಬಗೆದಷ್ಟೂ ಬಗೆ ಬಗೆಯಾಗಿ ತೆರೆದುಕೊಳ್ಳುತ್ತದೆ ನಾವು ‘ಬಗೆ’ಯೆಂದೂ ಕರೆಯುವ ಮನಸ್ಸಿನ ಹಾಗೂ ಬುದ್ಧಿಯ ವೈಖರಿ.ನೀವೂ ಯೋಚಿಸಿ ನೋಡಿ ಇನ್ನಷ್ಟು ಹೊಳೆಯಬಹುದು.
-ಡಾ.ಮಹೇಶ್ವರಿ. ಯು
Very informative.
ಹೃದಯ ಮನಸ್ಸು ಬುದ್ಧಿ ಭಾವ ಅರ್ಥಪೂರ್ಣವಾದ ಲೇಖನ ಚೆನ್ನಾಗಿ ಮೂಡಿ ಬಂದಿದೆ ಅಭಿನಂದನೆಗಳು ಮೇಡಂ.
ಸ್ವಸ್ಥ ಹಾಗೂ ಅಸ್ವಸ್ಥ ಮನಸ್ಸಿನ ವ್ಯವಸ್ಥೆ, ಅವ್ಯವಸ್ಥೆಯ ಅನಾವರಣ ಮನಸ್ಸಿನಾಳಕ್ಕಿಳಿಯಿತು. ಅಭಿನಂದನೆಗಳು.
ಮನಸ್ಸಿನಾಳದ ಮಾತುಗಳು…ಬುದ್ಧಿ, ಭಾವಗಳ ಸಮತೋಲನದ ಕ್ಲಿಷ್ಟಕರ ಪರಿಸ್ಥಿತಿ.. ಇತ್ಯಾದಿಗಳ ಬಗೆಗಿನ ಚಿಂತನಾತ್ಮಕ ಲೇಖನ ಬಹಳ ಚೆನ್ನಾಗಿದೆ.
ಮಾಹಿತಿಪೂರ್ಣ ಬರಹ, ತುಂಬಾ ಚೆನ್ನಾಗಿದೆ.
ಧನ್ಯವಾದಗಳು.
ಧನ್ಯವಾದಗಳು