ಬೆಳಕು-ಬಳ್ಳಿ

ಹಿತ್ತಿಲ ಮಲ್ಲಿಗೆ

Share Button

ಹಿತ್ತಿಲಲಿ ಅರಳಿರುವ ಮಲ್ಲಿಗೆಯ ಹೂವೊಂದು
ಸೋತಿಹುದು ಜನಗಡಣ ಕಣ್ಸೆಳೆಯಲು
ಬೆಳಗು ಬೈಗುಗಳಲ್ಲೇ ದಿನಚರಿಯು ಕಳೆದಿಹುದು
ಅರಳುವಿಕೆಗಡರಿಹುದು ಕಾರ್ಮುಗಿಲು

ಗಂಧವಿಲ್ಲದ ಹೂವೊಂದು ಮುಂಬಾಗಿಲಲಿ ಮೆರೆದು
ಗಳಿಸಿಹುದು ಮೂಜಗದ ಜನ ಮನ್ನಣೆ
ಹಿತ್ತಿಲಿನ ಹೂ ಬಳ್ಳಿ ಒಡ್ಡೊಡ್ಡು ಬೆಳೆದಿರಲು
ಹೆದರಿಹುದು ನೋಡುತ್ತಾ ಕತ್ತರಿಯ ಸಾಣೆ

ನೀರು ಗೊಬ್ಬರದಾರೈಕೆ ಮುಂಬಾಗಿಲಿನ ಗಿಡಕೆ
ಹೆಚ್ಚಿಹುದು ಎಗ್ಗೆಗಳು ಹುಚ್ಚುಗಟ್ಟಿ
ಬಿದ್ದ ತರಗೆಲೆಗಳನೆ ತಾನುಂಡು ಹಿತ್ತಿಲಿನ
ಮಲ್ಲೆ ಹೂ ಬಿಟ್ಟಿಹುದು ಪ್ರೀತಿಹುಟ್ಟಿ..

ಅವರವರ ಆಕಾಶ ಅವರವರ ತಲೆಮೇಲೆ
ಬೊಮ್ಮ ಬರೆದಿಹನೆಲ್ಲ ಹಣೆಯಬರಹ
ತನ್ನದಲ್ಲದ ಪಾಲು ಸಿಗಲೊಲ್ಲದೆಂದೆಂದೂ
ಯಾರಿಲ್ಲ ಭುವಿಯಲ್ಲಿ ಒಂದೇ ತರಹ..

-ವಿದ್ಯಾಶ್ರೀ ಅಡೂರ್, ಮುಂಡಾಜೆ

5 Comments on “ಹಿತ್ತಿಲ ಮಲ್ಲಿಗೆ

  1. ಹೌದು.. ಎಲೆಮರೆಯ ಕಾಯಿಯಂತೆ, ಇದೊಂದು ಹಿತ್ತಿಲ ಮಲ್ಲಿಗೆ. ಪ್ರಚಾರ ಬಯಸದೆ ತನ್ನ ಕರ್ತವ್ಯವನ್ನು ಮಾಡುತ್ತಾ ಜೀವಿಸುವ ಮಂದಿ ಅದೆಷ್ಟೋ..! ಸೊಗಸಾದ ಭಾವಪೂರ್ಣ ಕವನ.

  2. ಮಲ್ಲಿಗೆ ಹಿತ್ತಲಲ್ಲಿದ್ದರೇನು, ಮನೆಯ ಮುಂದಿದ್ದರೇನೆ, ಅದರ ಸೊಗಸಾದ ಕಂಪು ಎಲ್ಲಡೆಯು ಪ್ರಚಾರವಿಲ್ಲದೆಯೂ ಪಸರಿಸುತ್ತದೆ. ಚಂದದ ಕವನ

Leave a Reply to ಗಾಯತ್ರಿ ಸಜ್ಜನ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *