ಕಿರು ಕಾದಂಬರಿ: ಭಾವ ಸಂಬಂಧ- ಎಳೆ 4
(ಕಳೆದ ಸಂಚಿಕೆಯಿಂದ : ವಿಶಿಷ್ಟ ಸನ್ನಿವೇಶದಲ್ಲಿ ಭೇಟಿಯಾಗಿ, ಇತ್ತೀಚೆಗೆ ಒಂದೇ ಮನೆಯಲ್ಲಿ ವಾಸಿಸಲಾರಂಭಿಸಿದ ಒಂಟಿಜೀವಗಳಾದ ಸೀತಕ್ಕ ಹಾಗೂ ನರ್ಸ್ ಸರಸ್ವತಿ ಅವರ ನಡುವೆ ಬಹಳ ಆತ್ಮೀಯವಾದ ಬಾಂಧವ್ಯ ಬೆಳೆಯುತ್ತಿದೆ. ಸೀತಕ್ಕ ತನ್ನ ಬಗ್ಗೆ ನಾಳೆ ತಿಳಿಸುವೆನೆಂದು ನಿದ್ರೆಗೆ ಜಾರಿದರೆ, ಸರಸ್ವತಿಯ ಮನಸ್ಸಿನಲ್ಲಿ ತನ್ನ ಬಾಲ್ಯದ ಕಹಿ, ಆಸರೆ ಕೊಟ್ಟ ದಂಪತಿಯ ವಾತ್ಸಲ್ಯ, ತಾನು ನರ್ಸಿಂಗ್ ತರಬೇತಿ ಪಡೆಯುವಂತಾದುದು ..ಇತ್ಯಾದಿ ನೆನಪುಗಳ ಮೆರವಣಿಗೆ ಶುರುವಾಯಿತು.. …..ಮುಂದಕ್ಕೆ ಓದಿ)
ಮೊದಲೇ ಅಚ್ಚುಕಟ್ಟುತನಕ್ಕೆ ಹೆಸರಾದ ಸರಸ್ವತಿ, ಈಗಂತೂ ತನ್ನ ವೇಷಭೂಷಣ, ಸಮಯದ ಪರಿಪಾಲನೆ, ಅದರ ಸದ್ವಿನಿಯೋಗ, ಆರ್ಥಿಕ ಲೆಕ್ಕಾಚಾರ, ಜೀವನದ ʼಉಳಿಸುವುದೂ ಗಳಿಸುವುದರಷ್ಟೇ ಮುಖ್ಯʼ ನೀತಿ, ಹೊರಗಿನವರ ಜೊತೆ ನಡೆದುಕೊಳ್ಳುವ ರೀತಿಯಲ್ಲಿ ತೋರುವ ನಾಜೂಕು, ತನಗೆ ಸರಿ ಅನ್ನಿಸದ್ದನ್ನು ಬೇರೆಯವರಿಗೆ ನೋವಾಗದಂತೆ ನವಿರಾಗಿ ತಿರಸ್ಕರಿಸುವ ಪರಿ, ಸಹಾಯ ಹಸ್ತ ನೀಡುವ ಸೇವಾ ಮನೋಭಾವ, ಎಲ್ಲದರಿಂದ ಎಲ್ಲರಿಗೂ ಹೆಚ್ಚೆಚ್ಚು ಆಪ್ತಳಾಗತೊಡಗಿದಳು.
ರಾಜಮ್ಮ, ರಾಮರಾಯರು ಸರಸ್ವತಿಯ ದಕ್ಷ ರೀತಿ, ನೀತಿಗಳನ್ನು ನೋಡಿ ಅತ್ಯಂತ ಸಂತೋಷಪಟ್ಟರು. ರಾಮರಾಯರಿಗೆ ರಿಟೈರ್ ಆಯಿತು. ರಾಜಮ್ಮನವರಿಗೆ ಮಂಡಿ ಚಿಪ್ಪಿನ ಆಪರೇಷನ್ ಆಯಿತು. ಆದರೂ ಏಕೋ ಪೂರ್ತಿಯಾಗಿ ಸರಿ ಹೋಗಲೇ ಇಲ್ಲ. ಸರಸ್ವತಿಯಂತೂ ಇಬ್ಬರನ್ನೂ ಅಂಗೈಲಿಟ್ಟು, ಮುಂಗೈಮುಚ್ಚಿ ನೋಡಿಕೊಳ್ಳುವುದು ಅನ್ನುತ್ತಾರಲ್ಲಾ ಹಾಗೆ ನೋಡಿಕೊಳ್ಳುತ್ತಿದ್ದಳು. ತನ್ನ ಕೆಲಸದಿಂದ ಮನೆಗೆ ಬಂದ ನಂತರ ಒಂದರಘಳಿಗೆಯೂ ಅವರನ್ನು ಬಿಟ್ಟು ಇರುತ್ತಿಲಿಲ್ಲ. ಅವರ ಸೇವೆಯನ್ನು ಮನಸಾರ ಅವರಿಗೆ ಕಿಂಚಿತ್ತೂ ಸಂಕೋಚವಾಗದಂತೆ ಮಾಡುತ್ತಿದ್ದಳು.
ಆರೆಂಟು ವರ್ಷಗಳು ಸಲೀಸಾಗಿ ನಡೆದುಕೊಂಡು ಹೋಯಿತು. ಈ ವರ್ಷಗಳು ಅವರುಗಳ ಬಾಳಲ್ಲಿ ಅತೀ ನೆಮ್ಮದಿಯ ದಿನಗಳು ಎಂದು ಭಾವಿಸಬಹುದು. ಸರಸ್ವತಿಗೆ ಬಡ್ತಿಯೂ ದೊರೆಯಿತು. ಆಸ್ಪತ್ರೆಯಿಂದ ಬಂದ ನಂತರ ಅಲ್ಲಿಯ ಸಮಾಚಾರಗಳನ್ನೆಲ್ಲಾ ಚಾಚೂ ತಪ್ಪದೆ ಹೇಳುತ್ತಿದ್ದಳು. ರೋಗಿಗಳು ಅನುಭವಿಸುವ ಯಾತನೆ, ಕೆಲವೊಮ್ಮೆ ಅವರ ಸಂಭಂದಿಕರ, ಮನೆಯವರ ದುಷ್ಟ, ಕ್ರೂರ ಆಲೋಚನೆಗಳು, ಯೋಜನೆಗಳು, ಮತ್ತೆ ಕೆಲವೊಮ್ಮೆ ವೈದ್ಯರು ಬದುಕುಳಿಯಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥತಿಯಲ್ಲೂ ರೋಗಿಗಳ ಸುತ್ತಲಿನವರ ಪ್ರೀತಿ, ವಿಶ್ವಾಸ, ಕಾಳಜಿಯಿಂದ ಆಶ್ಚರ್ಯವೆನಿಸುವ ರೀತಿಯಲ್ಲಿ ಹುಷಾರಾಗಿ ನಗುನಗುತ್ತಾ ಮನೆಗೆ ಹೋಗುವ ಘಟನೆ, ಆಪರೇಷನ್ ಗಳ ಸಮಯದಲ್ಲಿ ವೈದ್ಯರ, ದಾದಿಯರ ಮನಸ್ಸಿನಲ್ಲಿ ನಡೆಯುವ ತುಮುಲಗಳು, ಆತಂಕಗಳು, ಅವು ಯಶಸ್ಚಿಯಾದಾಗ ಆಗುವ ಮನಸ್ಸಂತೋಷ, ಆರೋಗ್ಯ ಮರುಕಳಿಸಿ ಮನೆಗೆ ಹೋಗುವಾಗ ಅವರ, ಹಾಗೂ ಅವರ ಮನೆಯವರ ಕಣುಗಳಲ್ಲಿ ಕಾಣುತ್ತಿದ್ದ ಕೃತಕ್ಞತಾ ಭಾವ, ಎಲ್ಲವನ್ನೂ ಕಣ್ಣಿಗೆ ಕಟ್ಟಿದಂತೆ ವಿವರಿಸುತ್ತಿದ್ದಳು. ದಿನಗಳು ಸವಿದಿದ್ದೇ ತಿಳಿಯಲಿಲ್ಲ.
ಜೀವನ ಚಕ್ರ ತಿರುಗಲೇ ಬೇಕಲ್ಲ. ಎಂಟು ಹತ್ತುತಿಂಗಳುಗಳ ಅಂತರದಲ್ಲೇ ರಾಜಮ್ಮ, ರಾಮರಾಯರಿಬ್ಬರೂ ಒಬ್ಬರ ನಂತರ ಒಬ್ಬರು ಕಾಲವಾದರು. ಹೆಚ್ಚು ನರಳಲಿಲ್ಲ, ಕೊರಗಲಿಲ್ಲ. ಸರಸ್ವತಿಯ ಅಕ್ಕರೆಯ ಆರೈಕೆಯಲ್ಲಿ ನೋವುಂಡದದ್ದೇ ತಿಳಿಯದಂತೆ ಕಾಲಗರ್ಭದಲ್ಲಿ ಲೀನವಾದವರು, ಮೊದಲು ರಾಜಮ್ಮನವರು.
ಈಗ ಇನ್ನೂ ಹೆಚ್ಚಿನ ಕಾಳಜಿಯಿಂದ, ತನ್ನ ಮಾತೃಸ್ವರೂಪರಾದ ರಾಜಮ್ಮನವರ ಸಾವಿನಿಂದ ತನಗಾದ ದುಃಖವನ್ನು ನುಂಗಿಕೊಂಡು, ಹೊರಗೆ ತೋರದೆ, ರಾಮರಾಯರನ್ನು ಮುತುವರ್ಜಿಯಿಂದ ನೋಡಿಕೊಂಡರೂ, ಅವರು ಜೀವನ ಸಂಗಾತಿಯ ಅಗಲಿಕೆಯಿಂದಾದ ನೋವಿನಿಂದ ಹೊರಬರಲೇ ಇಲ್ಲ. ದಿನದಿಂದ ದಿನಕ್ಕೆ ಜೀವನದಿಂದ ವಿಮುಖರಾಗ ತೊಡಗಿದ ಅವರು, ಕಲವೊಮ್ಮೆ ಮಾತ್ರ ಸರಸ್ವತಿಯನ್ನು ಮುಂದೆ ಕೂಡಿಸಿಕೊಂಡು ತಮ್ಮಿಬ್ಬರಿಗೆ ಅವಳಿಂದ ಸಿಕ್ಕ ಸುಖ, ಸಂತೋಷ, ನೆಮ್ಮದಿಗಳ ಭಾವಗಳನ್ನು ಹೊರಹಾಕುತ್ತಿದ್ದರು. ಅವಳಲ್ಲಿ, ಅವಳ ಕತೃತ್ವ ಶಕ್ತಿಯಲ್ಲಿ ತಮಗೆ ಅಪಾರ ನಂಬಿಕೆಯಿರುವುದಾಗಿಯೂ ತಿಳಿಸುತ್ತಾ, ಆದಾಗ್ಯೂ, ಮುಂದೆ ಅವಳು ಒಂಟಿಯಾದರೆ ಆಗ ತೆಗೆದುಕೊಳ್ಳ ಬೇಕಾದ, ಮುನ್ನೆಚ್ಚರಿಕೆ ಕ್ರಮಗಳು, ಜೀವನದ ಬಗ್ಗೆ ಇರಬೇಕಾದ ಸಾತ್ವಿಕ ದೃಷ್ಟಿಕೋನಗಳ ಬಗ್ಗೆ ತಿಳಿಯ ಪಡಿಸುತ್ತಿದ್ದರು. ಸರಸ್ವತಿ, ರಾಯರ ಮಾತುಗಳನ್ನು, ಅರ್ಜುನ ಆಲಿಸಿದ, ಶ್ರೀಕೃಷ್ಣನ ಭಗವದ್ಗೀತೆಯ ಶ್ಕೋಕಗಳೇನೋ ಎನ್ನುವಷ್ಟರ ಮಟ್ಟಿಗೆ ಆಸಕ್ತಿ, ಭಕ್ತಿಯಿಂದ ಕೇಳಿಕೊಂಡು, ಮನನ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಳು. ಒಂದು ಸೋಮವಾರ ಮಧ್ಯಾನ್ಹ, ಅವಳು ಬೆಳಗಿನ ಡ್ಯೂಟಿ ಮುಗಿಸಿ ಮನೆಗೆ ಬಂದ ನಂತರ ಇಬ್ಬರೂ ಒಟ್ಟಿಗೆ ಕುಳಿತು ಊಟಮಾಡಿ ಮುಗಿಸಿದರು. ನಂತರ ರಾಮರಾಯರು –
ಸರಸ್ವತಿ, ಇಂದೇಕೋ ಈಗಲೇ ಕಾಫಿ ಕುಡಿಯ ಬೇಕೆನಿಸುತ್ತದೆ. ರಾಜುಗೆ, ಮಾಡಿಕೊಡುತ್ತಿದ್ದೆಯಲ್ಲ, ಅದೇ ಹದದಲ್ಲಿ ಒಂದು ಲೋಟ ಬಿಸಿ ಬಿಸಿಯಾಗಿ ಸ್ಟಾಂಗ್ ಕಾಫಿ ಮಾಡಿಕೊಡು – ಎಂದರು.
ಅವಳು ಕಾಫಿ ತಂದಾಗ, – ನೀನೂ ಇಂದು ನನ್ನೊಂದಿಗೆ ಕುಡಿ. ನಾಲ್ಕು ಗಂಟೆಗೆ ಮತ್ತೆ ಬೇಕಾದರೆ ಕುಡಿಯುವಂತೆ – ಎಂದು ಹೇಳಿ, ಇಬ್ಬರು ಒಟ್ಟಿಗೆ ಕುಡಿದ ನಂತರ – ನಾನೊಂದು ನಿದ್ರೆ ಮಾಡುತ್ತೇನೆ – ಎಂದರು.
ಅಣ್ಣ, ಕಾಫಿ ಕುಡಿದ ತಕ್ಷಣ ನಿದ್ರೆ ಎಲ್ಲಿ ಬರುತ್ತದೆ, ನಿದ್ರಯಿಂದ ಎಚ್ಚರಗೊಳ್ಳಲು ಅಥವಾ, ನಿದ್ರೆಯನ್ನು ತಡೆಯಲು ಅಲ್ಲವೆ ಕಾಫಿ ಕುಡಿಯುವುದು? – ಎನ್ನಲು,
ರಾಜು, ಮಧ್ಯರಾತ್ರಿಯಲ್ಲಿ ಎದ್ದು ಕಾಫಿ ಕುಡಿದು ಮುಸುಕಿಟ್ಟು ಮಲಗಿ ಗೊರಕೆ ಹೊಡೆಯುತ್ತಿದ್ದಳು. ನನಗೂ ಇಂದು ಅವಳಂತೆ ಮಾಡೋಣ ಅನ್ನಿಸುತ್ತಿದೆ, ಹೋಗು, ನೀನೂ ಒಂದು ಘಳಿಗೆ ಅಡ್ಡಾಗು, ನಾನೂ ಮಲಗಲು ಪ್ರಯತ್ನಿಸುತ್ತೇನೆ ಎನ್ನುತ್ತಾ ಮಗ್ಗುಲಾದರು.
ಸರಸ್ವತಿ ಅವರ ಕಾಲುಗಳ ಮೇಲೆ ಹೊದ್ದಿಕೆಯನ್ನು ಹೊದ್ದಿಸಿ, ಅಡುಗೆ ಮನೆಗೆ ಹೋಗಿ ಅಳುದುಳಿದ ಕೆಲಸಗಳನ್ನು ಮುಗಿಸಿ, ಮಲಗಲು ಹೊರಟವಳು ಒಮ್ಮೆ ಕೋಣೆಯಲ್ಲಿ ಇಣುಕಿದಾಗ, ಅವರು ಏನೋ ಸಂಕಟ ಅನುಭವಿಸುತ್ತಿರುವಂತೆ ಮುಲುಗುಟ್ಟುತ್ತಿರುವುದು ಕಾಣಿಸಿತು. ಹತ್ತಿರ ಬಂದು ಏನಾಯಿತು ಎಂದು ಪರೀಕ್ಷಿಸುವಷ್ಟರಲ್ಲಿ ಉಸಿರಾಡಲು ಕಷ್ಟ ಪಡುತ್ತಿದ್ದ ಅವರು ಜೀವ ಹಿಂಡುತ್ತಿರುವ ನೋವಿನಲ್ಲೂ ಅಭಿಮಾನಪೂರ್ವಕವಾದ ಭಾವದಿಂದ ಅವಳನ್ನು ದೀರ್ಘವಾಗಿ ದೃಷ್ಟಿಸಿ ನೋಡಿದವರು, ನಿರಾಳರಾಗಿಬಿಟ್ಟರು.
ಅನುಭವಿ ದಾದಿಯಾದ ಸರಸ್ವತಿಗೆ ಪರಿಸ್ಥಿತಿಯ ಅರಿವಾಯಿತು. ಅವರಿಷ್ಟದಂತೆಯೇ ಎಲ್ಲಾ ಕರ್ಮಾಂತರಗಳನ್ನು ಮುಗಿಸಿದಳು. ಬಂದವರು, ಶರಣರ ಸಾವು, ಮರಣದಲ್ಲಿ ನೋಡು ಅನ್ನುವಂತೆ, ಸೋಮವಾರ ಸಾವು ಕೊಡು, ಮಧ್ಯಾನ ಮರಣ ಕೊಡು, ಅನ್ನುವಂತೆ ಸುಖವಾದ ಸಾವು ರಾಯರದು ಎಂದುಕೊಳ್ಳುತ್ತಾ, ಸಾತ್ವಿಕ ದಂಪಂತಿಗಳ ಗುಣಗಾನ ಮಾಡುತ್ತಾ ಎಲ್ಲಾ ಹೊರಟು ಮನೆಯಲ್ಲಿ ಒಂಟಿಯಾಗಿ ಕುಳಿತಾಗ, ಜೀವನದಲ್ಲಿ ಮೊದಲ ಬಾರಿಗೆ ಅನಾಥ ಪ್ರಜ್ಞೆ ತೀವ್ರವಾಗಿ ಕಾಡಿ ಮುಖ ಮುಚ್ಚಿಕೊಂಡು ಜೋರಾಗಿ ಅತ್ತುಬಿಟ್ಟಳು.
ಅಷ್ಟೆ, ಮುಂದೆ ತನ್ನಲ್ಲಿ ತಾನೇ ಸಮಾಧಾನಗೊಂಡು, ಪೂರ್ಣವಾಗಿ ರೋಗಿಗಳ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಬಿಟ್ಟಳು. ಅವರಿಷ್ಟದಂತೆ ಅವರ ಆಸ್ತಿಪಾಸ್ತಿಗಳಿಗೆಲ್ಲಾ ಒಂದು ವ್ಯವಸ್ಥೆ ಮಾಡಿ ಅದರಲ್ಲಿ ಬರುವ ಉತ್ಪನ್ನಗಳನ್ನು ಸಮಾಜದಲ್ಲಿ ಅಗತ್ಯವಿರುವವರಿಗಾಗಿ ವಿನಿಯೋಗಿಸುತ್ತಿದ್ದಳು. ತನ್ನ ವಾಸ್ತವ್ಯವನ್ನು ಕ್ವಾರ್ಟಸ್ಸಿಗೇ ವರ್ಗಾಯಿಸಿಕೊಂಡು ಬಿಟ್ಟಳು. ಎರಡು ಮೂರು ವರುಷಗಳು ಏರಿಳಿತಗಳಿಲ್ಲದೆ ಜೀವನ ಸಾಗ ತೊಡಗಿತು.
ಅಷ್ಟರಲ್ಲೇ ಬಂದೆರಗಿತು ಮನುಕುಲಕ್ಕೆ ಮಾರಕವಾದ ʼಕರೋನಾʼ ಎಂಬ ಹೆಮ್ಮಾರಿ. ಡಾಕ್ಟರ್ ಗಳು, ನರ್ಸ್ ಗಳು ವೈದ್ಯಕೀಯ ಸಿಬ್ಬಂದಿ, ಪೋಲೀಸರು, ಆಡಳಿತಾಧಿಕಾರಿಗಳು, ಎಲ್ಲರಲ್ಲೂ ತಲ್ಲಣ. ಯಾವುದು ಸರಿ, ಯಾವುದು ತಪ್ಪು, ಏನು ಮಾಡಬೇಕು, ಏನು ಮಾಡಬಾರದು, ಒಂದೂ ತಿಳಿಯದ ಅತಂತ್ರ ಸ್ಥಿತಿ. ಎಲ್ಲರೂ ನಿದ್ರೆ, ನೀರಡಿಕೆ , ಊಟ, ತಿಂಡಿ, ಬಂಧು, ಬಾಂಧವರು, ಪುಟ್ಟ ಕಂದಮ್ಮಗಳು, ಎಲ್ಲವನ್ನು, ಎಲ್ಲರನ್ನು, ಬಿಟ್ಟು ಸೇವೆಗೈದರೂ ಹತೋಟಿಗೆ ಬರುತ್ತಿರಲಿಲ್ಲ. ಎರಡು ದಿನ ಹತೋಟಿಯಲ್ಲಿದೆ ಅಂದುಕೊಂಡರೆ, ಮೂರನೆ ದಿನ ಮತ್ತೆ ಸೋಂಕಿತರ ಸಂಖ್ಯೆ ಹೆಚ್ಚಾಗುತಿತ್ತು.
ಜಿಲ್ಲೆ ಡಿ.ಸಿ.ಯವರು, ಪೋಲೀಸ್ ಕಮೀಷನರ್ ಅವರು , ಸರ್ಕಾರೀ ಮುಖ್ಯ ಆಸ್ಪತ್ರೆಯ ವೈದ್ಯಾಧಿಕಾರಿಗಳೂ, ಜನ ಪ್ರತಿನಿಧಿಗಳೂ ಕೂಡಿ ಕಲೆತು ವಿಚಾರ ವಿನಿಮಯ ಮಾಡಿಕೊಂಡು ಎಲ್ಲಾ ಸಿಬ್ಭಂದಿಯನ್ನು ಗುಂಪುಗಳಾಗಿ ವಿಂಗಡಿಸಿ, ತಮ್ಮನ್ನು ತಾವು ಸೇವೆಯಲ್ಲಿ ತೊಡಗಿಸಿಕೊಳ್ಳಲು ತೀರ್ಮಾನಿಸಿದರು. ಹೆಚ್ಚು ಜನಸಂಖ್ಯೆಯಿರುವ ನಗರ ಪ್ರದೇಶದ ಒಂದು ಮುಖ್ಯ ತಂಡಕ್ಕೆ ಅತ್ಯಂತ ದಕ್ಷ, ಸೇವಾಮನೋಭಾವವಿರುವ ಸರಸ್ವತಿಯನ್ನು ಮುಖ್ಯಸ್ಥಳನ್ನಾಗಿ ಮಾಡಿದರು. ಎಲ್ಲರೂ ಹಗಲು ರಾತ್ರಿಯೆನ್ನದೆ ದುಡಿದು ಜಿಲ್ಲೆಯಲ್ಲಿ ʼಕರೋನಾʼ ಮಾರಿಯ ಹರಡುವಿಕೆಯನ್ನು ಒಂದು ಹತೋಟಿಗೆ ತರುವಲ್ಲಿ ಯಶಸ್ವಿಯಾದರು.
ಅಂತಹುದೇ ಒಂದು ಸಮಯದಲ್ಲಿ ನಗರದ ಮೇಲ್ಮಧ್ಯಮ ವರ್ಗದ ಬಡಾವಣೆಯೊಂದರಲ್ಲಿ ಅರವತ್ತೆಂಟು ವರ್ಷದ, ವೈದ್ದರೊಬ್ಬರಿಗೆ ಕರೋನಾ ಹರಡಿರುವ ಸಾಧ್ಯತೆ ದಟ್ಟವಾಗಿದೆಯೆಂದೂ, ಮನೆಯಲ್ಲಿ ವೃದ್ಧ ದಂಪತಿಗಳು ಮಾತ್ರ ಇದ್ದಾರೆಂದೂ, ಯಜಮಾನರು ಸೋಂಕಿತರಾಗಿರುವ ಸಾಧ್ಯತೆಯಿದೆಯೆಂದು ಅವರ ಮನೆಗೆ ಹೋಗಿ ಅವರ ಹೆಂಡತಿಗೆ ಸಮಾಧಾನ, ತಿಳಿವಳಿಕೆಗಳನ್ನು ನೀಡಿ, ರೋಗಿಯನ್ನು ಆಸ್ಪತ್ರೆಗೆ ಕರೆತರಬೇಕಿರುವುದರಿಂದ, ಪರಿಸ್ಥಿತಿಯ ಸೂಕ್ಮವರಿತ ಸರಸ್ವತಿ, ತಾನೇ ಖುದ್ದಾಗಿ ಬರುವುದಾಗಿ ತಿಳಿಸಿ, ಆಂಬ್ಯಲೆನ್ಸಿನಲ್ಲಿ ಬಂದು ಕುಳಿತಳು.
ಅವರ ಮನೆ ತಲುಪಿ ಪ್ರಾಥಮಿಕ ಹಂತದ ವಿಚಾರಣೆ ನಡೆಸಿದಾಗ ತಿಳಿದದ್ದು, ಮನೆಯಲ್ಲಿ ಇಬ್ಬರೇ ಇರುವುದು. ಇರುವ ಒಬ್ಬ ಮಗಳು ಮದುವೆಯಾಗಿ ಅಮೆರಿಕಾದಲ್ಲಿ ಇದ್ದಾಳೆ. ಈ ಮನೆಯನ್ನು ಭೊಗ್ಯಕ್ಕೆ ಹಾಕಿಕೊಂಡು ದಂಪತಿಗಳಿಬ್ಬರೇ ವಾಸ ಮಾಡುತ್ತಿದ್ದಾರೆ. ಇಬ್ಬರೂ ಚಟುವಟಿಕೆಯಿಂದ ಕೂಡಿದ ಸರಳ ಜೀವನ ನಡೆಸುತ್ತಿದ್ದಾರೆ. ನೆರೆಹೊರೆಯವರೊಂದಿಗೆ ಆತ್ಮೀಯ ಒಡನಾಟವನನ್ನು ಇಟ್ಟುಕೊಂಡಿದ್ದಾರೆ. ವಾಯುವಿಹಾರ, ಯೋಗಾಸನ ತರಗತಿಗಳು, ಆಸಕ್ತಿಯಿರುವ ಸಾರ್ಜನಿಕ ಕಾರ್ಯಕ್ರಮಕ್ಕೆ ಹೋಗುವುದು, ಸಿನಿಮಾ, ಕ್ರೀಡೆಗಳಲ್ಲೂ ಆಸಕ್ತಿ. ಪೂಜೆ, ಪುನಸ್ಕಾರ, ಹಬ್ಬ ಹರಿದಿನಗಳು ಹೀಗೆ ಚಟುವಟಿಕೆಯಿಂದ ಕೂಡಿದ ಜೀವನ ಶೈಲಿ. ಆದಾಗ್ಯೂ, ಸತೀಶರಾಯರಿಗೆ ಬಿ.ಪಿ., ಶುಗರ್, ತಗುಲಿಹಾಕಿಕೊಂಡಿತ್ತು. ರಾಯರು ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದರು. ಅಷ್ಟು ಬಾಯಿ ಕಟ್ಟುತ್ತಿರಲಿಲ್ಲ. ಪತ್ನಿ ಸೀತಮ್ಮ ಹೇಳಿದರೂ ಕೇಳುತ್ತಿರಲಿಲ್ಲ. – ನಾನು ಇಂದು ವಾಕಿಂಗ್ ಜಾಸ್ತಿ ಮಾಡುತ್ತೇನೆ, ನಿನ್ನೆ ತಾನೆ ಟೆಸ್ಟ್ ಮಾಡಿಕೊಂಡಿದ್ದೆ, ಎಲ್ಲಾ ನಾರ್ಮಲ್ ಆಗಿದೆ, ಎಂದು ಹೆಂಡತಿಯ ಬಾಯಿ ಮುಚ್ಚಿಸಿ ಬಿಡುತ್ತಿದ್ದರು. ಸಿಹಿ ಸಿಕ್ಕರೆ ತಿಂದು ಬಿಡುತ್ತಿದ್ದರು. ಚಟುವಟಿಕೆಯಿಂದಿದ್ದಾರಲ್ಲಾ ಹೋಗಲಿ ಬಿಡು, ಎಂದು ಸೀತಮ್ಮನವರೂ ಸುಮ್ಮನಾಗಿ ಬಿಡುತ್ತಿದ್ದರು.
ಸರಸ್ವತಿ, ತನ್ನ ತಂಡದ ಜೊತೆ ಅವರ ಮನೆ ಪ್ರವೇಶಿಸಿದಾಗ, ಸತೀಶರಾಯರ ಸ್ಥಿತಿ ಸ್ವಲ್ಫ ಗಂಭಿರವಾಗಿಯೇ ಇತ್ತು. ಉಸಿರಾಡಲು ಸ್ವಲ್ಪ ಕಷ್ಟ ಪಡುತ್ತಿದ್ದರು.
ಸರಸ್ವತಿ ಸೀತಮ್ಮನವರನ್ನು ಕುರಿತು ಹೇಳಿದಳು. ಸೀತಮ್ಮನವರೇ, ಸತೀಶರಾಯರಿಗೆ ಈಗ ವೈದ್ಯಕೀಯ ನೆರವಿನ ಅಗತ್ಯವಿದೆ. ಅವರನ್ನು ನಾವು ಈಗ ಆಸ್ಪತ್ರೆಗೆ ದಾಖಲು ಮಾಡಲು ಕರೆದೊಯ್ಯುತ್ತೇವೆ. ಅವರೊಂದೆಗೇ ನೀವು ಇದ್ದುದರಿಂದ ನೀವು ಹುಷಾರಾಗಿದ್ದರೂ ನಿಮ್ಮ ಗಂಟಲ ದ್ರವವನ್ನು ಈಗ ಕೊಂಡೊಯ್ಯುತ್ತೇವೆ. ಪರಿಕ್ಷಾ ವರದಿ ಬರುವ ತನಕ ನೀವು ಮನೆಯಿಂದ ಹೊರಗೆ ಬರುವ ಹಾಗಿಲ್ಲ. ನಿಮಗೆ ಅಗತ್ಯವಾಗಿ ಬೇಕಾಗುವ ಸಾಮಾನುಗಳನ್ನೂ ಔಷಧಿಗಳನ್ನೂ ನಾವೇ ತಂದುಕೊಡುತ್ತೇವೆ. . . .
ಸೀತಮ್ಮ ಮಧ್ಯದಲ್ಲೇ ತಡೆದು, – ನೋಡಮ್ಮಾ ತಾಯಿ, ಸರಸ್ವತೀ, ನಾವು ಮನೆಯಲ್ಲಿ ಇಬ್ಬರೇ ಇರುವುದು. ದೂರದ ಸಂಬಂಧಿಗಳು, ಸ್ನೇಹಿತರು ಹಲವಾರು ಜನರು ಇದ್ದಾರಾದರೂ, ನನಗೆ ಅವರು, ಅವರಿಗೆ ನಾನು ಇರಲೇ ಬೇಕು, ಹಾಗೆ ನಮ್ಮಿಬ್ಬರ ಜೀವನ ಹಾಸುಹೊಕ್ಕಾಗಿದೆ. ಇರುವ ಒಬ್ಬಳು ಮಗಳು ಈ ಕರೋನಾ ಸಮಯದಲ್ಲಿ ಬೇಕೆಂದರೂ ಬರಲು ಸಾಧ್ಯವಿಲ್ಲ. ನಾವುಗಳೂ ದಿನಾ ದಿನಾ ಟಿ.ವಿ., ನ್ಯೂಸ್ ಪೇಪರುಗಳಲ್ಲಿ ದಿನ ದಿನದ ವಿದ್ಯಾಮಾನಗಳನ್ನು ಗಮನಿಸುತ್ತಲೇ ಇದ್ದೇವೆ. ಈಗ, ಹತ್ತು ಹದಿನೈದು ದಿನಗಳ ಮುಂಚೆ ಪೇಪರಿನಲ್ಲಿ ಬಂದಿದ್ದ ಸುದ್ದಿಯನ್ನು ನಾನು ಗಮನಿಸಿ ಅಂದೇ ನಿರ್ಧರಿಸಿ ಬಿಟ್ಟಿದ್ದೆ. ಅದೇ, ಸ್ವಯಂಸೇವಕರ ಕೊರತೆಯಿದೆ, ಆಸಕ್ತರು ಮುಂದೆ ಬಂದರೆ, ಅವರ ಯೋಗಕ್ಷೇಮದ ಹೊಣೆ ನಮ್ಮದು. – ಎಂಬ ಸುದ್ದಿಯನ್ನು ನೋಡಿದ್ದೆ. ಆಗಲೇ ನಾನು ನಿರ್ಧರಿಸಿದ್ದೇನೆಂದರೆ, ಅಕಸ್ಮಾತ್, ಇವರಿಗೇನಾದರೂ ಕರೋನಾ ವೈರಾಣು ತಗುಲಿದರೆ, ನಾನೂ ಅವರೊಂದಿಗೆ ಆಸ್ಪತ್ರೆಗೆ ಹೋಗುವುದು ಎಂದು.
ನೀನೇ ಒಪ್ಪಿಕೊಳ್ಳುವಂತಿದ್ದರೆ ಸರಿ, ಇಲ್ಲದಿದ್ದರೆ, ನಿಮ್ಮ ಮೇಲಧಿಕಾರಿಗಳು ಯಾರಿದ್ದಾರೆ, ಫೋನ್ ಮಾಡಿಕೊಡು, ನಾನು ಮಾತನಾಡುತ್ತೇನೆ. ನನಗೆ ಈಗ ತಾನೆ, ಅಂದರೆ ಒಂದೂವರೆ ತಿಂಗಳ ಹಿಂದಷ್ಟೇ ಅರವತ್ತು ವರುಷಗಳು ತಿಂಬಿದೆ. ಆರೋಗ್ಯವಾಗಿದ್ದೇನೆ. ಯೋಗ ತರಗತಿಗಳಿಗೆ ನಾಲ್ಕು ವರುಷಗಳಿಂದ ಹೋಗುತ್ತಿದ್ದೇನೆ. ಹಾಗಾಗಿ, ಸ್ವಾಮಿ ಕಾರ್ಯ, ಸ್ವ ಕಾರ್ಯ ಎಂಬಂತೆ, ಇವರೊಂದಿಗೆ ನಾನೂ ಬರುತ್ತೇನೆ. ಇವರಿಗೆ ಕರೋನಾ ರೋಗಾಣು ತಗುಲಿರುವುದು ನಿಜವೇ ಆದಲ್ಲಿ, ಅವರ ಪ್ರಥಮ ಸಂಪರ್ಕದಲ್ಲಿ ಇರುವುದರಿಂದ ನನಗೂ ತಗಲಿರುವ ಸಾಧ್ಯತೆಯಂತೂ ಅಧಿಕವಾಗಿರುತ್ತದೆ. ನಾನು ಇವರೊಂದಿಗೆ ಇತರ ರೋಗಿಗಳ ಸೇವೆಯನ್ನೂ ಮಾಡುತ್ತೇನೆ. ಖಂಡಿತಾ ಯಾರಿಗೂ ತೊಂದರೆ ಕೊಡುವುದಿಲ್ಲ. ಬದಲಾಗಿ ಸ್ವಯಂಸೇವಕಳಾಗಿ ನಿಷ್ಟೆಯಿಂದ, ಸೇವೆ ಮಾಡುತ್ತೇನೆ. ಅವರುಗಳಿಗೆ ಸರಳ ಯೋಗ, ಪ್ರಾಣಾಯಾಮ ಹೇಳಿಕೊಡುತ್ತೇನೆ. ನನ್ನ ಕುಟುಂಬದ ಹಲವು ನಿಕಟವರ್ತಿಗಳು ಮರಣಶಯ್ಯೆಯಲ್ಲಿದ್ದಾಗ ಅವರುಗಳ ಸೇವೆ ಮಾಡಿದ್ದ ಅನುಭವ ನನಗಿದೆ. ಇಲ್ಲಿರುವ ಸ್ವಾರ್ಥ ಎಂದರೆ, ನಾನು ನನ್ನ ಪತಿಯೊಂದಿಗೆ ಇರಬಹುದು ಎಂಬುದಷ್ಟೇ. ನಾನಂತೂ ಇವರು ಒಬ್ಬರನ್ನೇ ಕಳುಹಿಸುವುದಿಲ್ಲ. ನೀನು ನನ್ನ ಮಗಳಂತೆ ಇದ್ದೀಯ, ನನ್ನ ಭಾವನೆಗಳನ್ನು ಅರ್ಥಮಾಡಿಕೊಂಡು, ನಿನ್ನ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆಯಾಡಿ ನನ್ನನ್ನು ಕರೆದೊಯ್ಯಲೇ ಬೇಕು. –
ಎಂದು ಆಗ್ರಹಪೂರ್ವಕವಾಗಿ ಹೇಳುತ್ತಾ ಮುಂದುವರೆಸಿದರು. –
ನಾವುಗಳು ಜೀವನದಲ್ಲಿ ಹಲವು ಸಿಹಿ ಕಹಿಗಳನ್ನು ಉಂಡು ಕೊನೆಯ ಹಂತಕ್ಕೆ ಬಂದು ನಿಂತಿದ್ದೇವೆ. ಒಳ್ಳೆಯದಾದರೆ ಎಲ್ಲಾ ಸರಿ, – ಒಂದು ಕ್ಷಣ ತಡೆದು ಭಾವುಕಾರಾಗಿ ಹೇಳಿದರು – ಇಲ್ಲದಿದ್ದರೂ ಏನು? ಎಂದೂ ಯೋಚಿಸಬೇಕಲ್ಲವೆ? ನಮ್ಮಿಬ್ಬರಿಗೂ, ಇನ್ನೂ ಜೀವನದಲ್ಲಿ ಆಗಬೇಕಾದ್ದು, ಇರಲೇಬೇಕು ಎನ್ನುವಂತಹ ಯಾವುದೇ ಕರ್ತವ್ಯಗಳೂ, ಮೋಹಗಳೂ ಇಲ್ಲ. ಮಗಳು ಅವಳ ಪಾಡಿಗೆ ಅವಳ ಸಂಸಾರದಲ್ಲಿ ಮುಳುಗಿದ್ದಾಳೆ. ಬರಬೇಕೆಂದರೂ ಈಗ ಬರುವಂಥಹ ಪರಿಸ್ಥಿತಿ ಇಲ್ಲ. ಕಳೆದ ವಾರ ಮುಂದಿನ ಬೀದಿಯಲ್ಲಿರುವ ಒಂದು ಕುಟುಂಬದಲ್ಲಿ, ಒಬ್ಬ ವ್ಯಕ್ತಿಯು ಕರೋನಾ ಸೋಂಕಿನಿಂದ ಮೃತ್ಯುವನ್ನಪ್ಪಿದರು. ಅವರ ಮೃತ ದೇಹವನ್ನೂ ನೀಡಲಿಲ್ಲ. ಹಾಗಾಗಿ ನಾವಿಬ್ಬರೂ ಒಟ್ಟಿಗೆ ಇರುತ್ತೇವೆ. ಬಂದದ್ದನ್ನು ಧೈರ್ಯವಾಗಿ ಎದುರಿಸುತ್ತೇವೆ.
ನಾನು ಬೇಕಿದ್ದರೆ, ಮುಚ್ಚಳಿಕೆ ಪತ್ರವನ್ನು ಬರೆದು ಕೊಡುತ್ತೇನೆ. ಮನಸಾರೆ ಸ್ವಯಂಸೇವಕಳಾಗಿ ಕೆಲಸ ನಿರ್ವಹಿಸುವೆ.
ಬೇರೆ ಯಾರೇ ಸಿಬ್ಬಂದಿಯಾಗಿದ್ದರೂ, ಸೀತಮ್ಮನವರ ಬೇಡಿಕೆಯನ್ನು ಇಳ್ಳಿಹಾಕಿ, ಸತೀಶರಾಯರವನ್ನು ಕರೆದೊಯ್ಯುತ್ತಿದ್ದರೋ ಏನೋ, ಆದರೆ ಸರಸ್ವತಿ, ತನ್ನ ಹಿನ್ನೆಲೆಯಿಂದಾಗಿ ಅವರ ಭಾವನೆಗಳ ತೀವ್ರತೆಯನ್ನರಿತುಕೊಂಡಳು. ಹೊರಗಡೆ ಬಂದು ತನ್ನ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ, ಅವರ ಪೂರ್ಣ ಜವಾಬ್ದಾರಿಯನ್ನು ತಾನು ಹೊರುವುದಾಗಿಯೂ, ಅವರನ್ನು ಸ್ವಯಂಸೇವಕರ ಪಟ್ಟಿಯಲ್ಲಿ ದಾಖಲು ಮಾಡಿಕೊಳ್ಳುವಂತೆಯೂ ವಿನಂತಿಸಿಕೊಂಡಳು.
ಹಿರಿಯ ಅಧಿಕಾರಿಗಳು ಸುತಾರಾಂ ಒಪ್ಪಲಿಲ್ಲ, – ಅವರು ಆಗಲೇ ವಯಸ್ಸು ಅರವತ್ತು ದಾಟಿದೆ ಅನ್ನುತ್ತೀರಿ, ಹೀಗೆ ನಾವು ಸೇರಿಸಿಕೊಳ್ಳುತ್ತಾ ಹೋದರೆ, ಎಲ್ಲಾ ಒಬ್ಬೊಬ್ಬ ರೋಗಿಯ ಜೊತೆ ಇನ್ನೊಬ್ಬೊಬ್ಬರು ಬರತೊಡಗುತ್ತಾರೆ. ಆಗ ನಿಯಂತ್ರಣ ಕಷ್ಟವಾಗುತ್ತದದೆ, ಇದು ಬಿಲ್ಕುಲ್ ಸಾಧ್ಯವೇ ಇಲ್ಲ – ಎಂದರು. ಅಷ್ಟರಲ್ಲಿ ಆಚೆ ಬಂದ ಸೀತಮ್ಮನವರು, ಸರಸ್ವತಿಯ ಕೈಯಿಂದ ಫೋನ್ ತೆಗೆದುಕೊಂಡು, ತನ್ನ ನಿಲುವು ಎಷ್ಟು ಸಮಂಜಸ ಎಂದು ಮತ್ತೊಮ್ಮೆ ಅವರಿಗೆ ಅರಿಕೆ ಮಾಡಿ, ತಾನು ಮನಸಾರೆ ಯಜಮಾನರೂ ಸೇರಿ ಎಲ್ಲ ರೋಗಿಗಳ ಸೇವೆಗೆ ಬದ್ಧ ಎಂದು ಕಳಕಳಿಯಿಂದ ಕೇಳಿಕೊಂಡರು.
ಮತ್ತೊಮ್ಮೆ ಸರಸ್ವತಿ, ಅವರ ಹೊಣೆ ತಾನು ಹೊರುವುದಾಗಿ ಹೇಳಿದಳು. ಪೂರ್ಣ ಜವಾಬ್ದಾರಿ ಅವಳು ತೆಗೆದುಕೊಂಡ ನಂತರ, ಅಲ್ಲದೇ ಸ್ವಯಂಸೇವಕರ ಕೊರತೆಯೂ ಸಾಕಷ್ಟು ಇದ್ದುದರಿಂದ, “ವಿಶೇಷ ಪರಿಸ್ಥಿತಿ”, ಎಂದು ಪರಿಗಣಿಸಿ ಒಪ್ಪಿಗೆ ಇತ್ತರು. ಸೀತಮ್ಮ ಲಗುಬಗೆಯಿಂದ ಅತ್ಯಗತ್ಯ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಸರಸ್ವತಿ ಮತ್ತು ಸಿಬ್ಬಂದಿಯೊಂದಿಗೆ ಹೊರಟರು.
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಸಂಚಿಕೆ ಇಲ್ಲಿದೆ : http://surahonne.com/?p=32393
-ಪದ್ಮಾ ಆನಂದ್, ಮೈಸೂರು
ಕಥೆ ಸಾಗುತ್ತಿರುವ ರೀತಿ ತುಂಬಾ ಚೆನ್ನಾಗಿದೆ. ಪ್ರಸ್ತುತ ಪರಿಸ್ಥಿತಿ ಯನ್ನು ಕಥೆಯಲ್ಲಿ ತಂದದ್ದು ಕುತೂಹಲ ಮೂಡಿಸುತ್ತಿದೆ
ಹೌದು.
ತಮ್ಮ ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದಗಳು.
ಸೊಗಸಾದ ಕಥಾ ಹಂದರ…ಕಥೆಯು ಸಾಗುತ್ತಿರುವ ರೀತಿ ಬಹಳ ಕುತೂಹಲಕಾರಿಯಾಗಿದೆ.
ಧನ್ಯವಾದಗಳು.