ಹಿತ್ತಿಲ ಮಲ್ಲಿಗೆ
ಹಿತ್ತಿಲಲಿ ಅರಳಿರುವ ಮಲ್ಲಿಗೆಯ ಹೂವೊಂದು
ಸೋತಿಹುದು ಜನಗಡಣ ಕಣ್ಸೆಳೆಯಲು
ಬೆಳಗು ಬೈಗುಗಳಲ್ಲೇ ದಿನಚರಿಯು ಕಳೆದಿಹುದು
ಅರಳುವಿಕೆಗಡರಿಹುದು ಕಾರ್ಮುಗಿಲು
ಗಂಧವಿಲ್ಲದ ಹೂವೊಂದು ಮುಂಬಾಗಿಲಲಿ ಮೆರೆದು
ಗಳಿಸಿಹುದು ಮೂಜಗದ ಜನ ಮನ್ನಣೆ
ಹಿತ್ತಿಲಿನ ಹೂ ಬಳ್ಳಿ ಒಡ್ಡೊಡ್ಡು ಬೆಳೆದಿರಲು
ಹೆದರಿಹುದು ನೋಡುತ್ತಾ ಕತ್ತರಿಯ ಸಾಣೆ
ನೀರು ಗೊಬ್ಬರದಾರೈಕೆ ಮುಂಬಾಗಿಲಿನ ಗಿಡಕೆ
ಹೆಚ್ಚಿಹುದು ಎಗ್ಗೆಗಳು ಹುಚ್ಚುಗಟ್ಟಿ
ಬಿದ್ದ ತರಗೆಲೆಗಳನೆ ತಾನುಂಡು ಹಿತ್ತಿಲಿನ
ಮಲ್ಲೆ ಹೂ ಬಿಟ್ಟಿಹುದು ಪ್ರೀತಿಹುಟ್ಟಿ..
ಅವರವರ ಆಕಾಶ ಅವರವರ ತಲೆಮೇಲೆ
ಬೊಮ್ಮ ಬರೆದಿಹನೆಲ್ಲ ಹಣೆಯಬರಹ
ತನ್ನದಲ್ಲದ ಪಾಲು ಸಿಗಲೊಲ್ಲದೆಂದೆಂದೂ
ಯಾರಿಲ್ಲ ಭುವಿಯಲ್ಲಿ ಒಂದೇ ತರಹ..
-ವಿದ್ಯಾಶ್ರೀ ಅಡೂರ್, ಮುಂಡಾಜೆ
ತೆರೆಮರೆಯಲ್ಲಿರುವ ಎಷ್ಟು ಮಂದಿ
ಮಲ್ಲಿಗೆಯ ಹಾಗೆ
ವಂದನೆಗಳು
ಸುಂದರವಾಗಿದೆ ಕವನ
ಅರ್ಥಪೂರ್ಣವಾಗಿದೆ ನಿಮ್ಮ ಕವನ.ಧನ್ಯವಾದಗಳು
ಹೌದು.. ಎಲೆಮರೆಯ ಕಾಯಿಯಂತೆ, ಇದೊಂದು ಹಿತ್ತಿಲ ಮಲ್ಲಿಗೆ. ಪ್ರಚಾರ ಬಯಸದೆ ತನ್ನ ಕರ್ತವ್ಯವನ್ನು ಮಾಡುತ್ತಾ ಜೀವಿಸುವ ಮಂದಿ ಅದೆಷ್ಟೋ..! ಸೊಗಸಾದ ಭಾವಪೂರ್ಣ ಕವನ.
ಮಲ್ಲಿಗೆ ಹಿತ್ತಲಲ್ಲಿದ್ದರೇನು, ಮನೆಯ ಮುಂದಿದ್ದರೇನೆ, ಅದರ ಸೊಗಸಾದ ಕಂಪು ಎಲ್ಲಡೆಯು ಪ್ರಚಾರವಿಲ್ಲದೆಯೂ ಪಸರಿಸುತ್ತದೆ. ಚಂದದ ಕವನ