ಉಮಾ ಟಾಕೀಸ್

Share Button

ಮಲೆನಾಡಿನ ತವರೂರಾದ ಮಡಿಕೇರಿ ನನ್ನೂರುಆಗಿನ್ನೂ ನಮ್ಮೂರಿಗೆ ದೂರದರ್ಶನ ಬಂದ ಹೊಸತು. ಈಗಿನಂತೆ ಬೇರೆ ಬೇರೆ ಚಾನೆಲ್ ಗಳು, ಚಾನೆಲ್ ಗೊಂದು ವಾಹಿನಿ ಎಂಬಂತೇನೂ ಇರಲಿಲ್ಲ. ಡಿಡಿ ಚಾನೆಲ್ ಮಾತ್ರ ಇತ್ತು. ಒಂದೇ ಬಟನ್ ಒಂದೇ ಚಾನೆಲ್. ಆನ್ ಆಫ್, ಶಬ್ದಗಳ ಆರೋಹಣ ಅವರೋಹಣ, ಮತ್ತು ಬಣ್ಣಗಳ ಹೊಂದಾಣಿಕೆ ಇವಿಷ್ಟಕ್ಕೆ ಸಂಬಂಧಿಸಿದ ಕೆಲವು ಬಟನ್ಗಳಷ್ಟೇ.

ನಮ್ಮ ಇಡೀ ಬಡಾವಣೆಗಾಗಿ ಒಂದೋ ಎರಡೋ ಶ್ರೀಮಂತರ ಮನೆಗಳಲ್ಲಿ ಮಾತ್ರ ಟಿವಿ ತೆಗೆದುಕೊಂಡಿದ್ದರು. ಹಾಗೇ ದಿನಸಿ ಸಾಮಾನು ಕೊಳ್ಳಲೆಂದು, ನಮ್ಮ ತಂದೆ ತಾಯಿ ಪೇಟೆಗೆ ಹೋಗಿದ್ದರು. ಪಕ್ಕದಲ್ಲೇ ಇದ್ದ ಟಿವಿ ಅಂಗಡಿಯಲ್ಲಿ ಪ್ರಸಾರವಾಗುತ್ತಿದ್ದ, ಕೃಷಿದರ್ಶನದಲ್ಲಿ ಕಂಡ ಪೈರಿನ ಹಚ್ಚ ಹಸಿರು ಬಣ್ಣದ ಚಿತ್ರ  ನನ್ನ ತಾಯಿಯನ್ನು ಆಕರ್ಷಿಸಿತು. ಟಿವಿ ಯೊಳಗಿನ ಬಣ್ಣವನ್ನು, ತನ್ನ ಮನೆಯಲ್ಲಿ ಪಸರಿಸಿಕೊಳ್ಳುವ ಆಸೆ ಮೂಡಿತು. ಅಂಗಡಿಯವನೊಂದಿಗೆ ಮಾತುಕಥೆಯಾಡಿ ಅಂತೂ ಇಂತೂ ಕೋರ್ ಮಾಡಲ್ ಟಿವಿ ಖರೀದಿಸಿ, ಮಧ್ಯಮ ವರ್ಗದವರಿಗೂ ಟಿವಿ ಖರೀದಿಸುವ ತಾಕತ್ತಿದೆ, ಎಂಬುದನ್ನು ತೋರಿಸಿದಂತಾಯ್ತು. ಯಾಕೆಂದರೆ, ಟಿವಿ ಇದ್ದ ನಮ್ಮ ಬಡಾವಣೆಯ ಶ್ರೀಮಂತರು, ಅಕ್ಕಪಕ್ಕದವರೊಂದಿಗೆ ಹರಟುತ್ತಿದ್ದ ಕಾಡು ಹರಟೆಯೊಳಗೆಯೇ, ಟಿವಿ ಕೊಂಡ ಅವರ ಹಣದ ಶ್ರೀಮಂತಿಕೆಯ ಸಾಮರ್ಥ್ಯದ ಬಗ್ಗೆ ಧಿಮಾಕಿನಿಂದ ಬೀಗಿ ಹೇಳಿಕೊಂಡು, ಮಿಕ್ಕವರನ್ನು ಗತಿ ಇಲ್ಲದವರೇನೋ ಎಂಬಂತೆ  ಕಾಣುತ್ತಿದ್ದರು.

ನಮ್ಮ ತಾಯಿ ಮೆಚ್ಚಿದ  ಬ್ರಾಂಡಿನ ಟಿವಿ ಸರಕು ಖಾಲಿ ಯಾಗಿದ್ದು, ಮುಂದಿನವಾರ ಬಂದಾಕ್ಷಣವೇ ಕಳುಹಿಸುವುದಾಗಿ ಹೇಳಲಾಯಿತು. ವಿಳಾಸ ಮತ್ತು ಮುಂಗಡ ಹಣ ತೆಗೆದುಕೊಂಡು ಖರೀದಿಯ ಖಾತ್ರಿಯನ್ನೂ ಪಡಿಸಿಕೊಂಡಾಯಿತು.

ಅಯ್ಯೋ! ಒಂದು ವಾರದ ಒಂದೊಂದು ಕ್ಷಣವೂ ಕಾಯುವುದಂತೂ ನನಗೂ ನನ್ನ ತಮ್ಮನಿಗೂ ಜನ್ಮಗಳೇ ಕಳೆದಂತೆ  ಅನ್ನಿಸುತ್ತಿತ್ತು. ರಾಮನನ್ನು ಕಾದ ಶಬರಿಯ ತಾಳ್ಮೆಯ ಕಥೆ ಹಾಗೇ ಒಮ್ಮೆ ಮನಸಿನಲ್ಲಿ ಸುಳಿದಾಡಿತ್ತು. ಒಂದು ವಾರಾದ ಕಾಯುವಿಕೆಯಲ್ಲಿ, ನಾವು ನೋಡದಿದ್ದರೂ, ಟಿವಿ ರೂಪ, ಚಿತ್ರದ ಮೂಡುವಿಕೆ, ಬಣ್ಣ, ಇತ್ಯಾದಿಗಳ ಬಗ್ಗೆ ತಂದೆತಾಯಿ ಮಾತನಾಡಿಕೊಳ್ಳುತ್ತಿದ್ದುದ್ದನ್ನು ಕೇಳಿಸಿಕೊಂಡಿದ್ದೆವುಕೇಳಿಸಿಕೊಂಡಿದ್ದಕ್ಕಿಂತ ಸ್ವಲ್ಪ ಅತೀ ಎನ್ನುವಂತೆಯೇ, ನಮ್ಮ ಸ್ನೇಹಿತರೊಂದಿಗೆ ಹೇಳಿಕೊಂಡು ಕಾಲ ಕಳೆದಿದ್ದರಿಂದ ಅವರೂ ನಮ್ಮ ಮನೆಗೆ ಬರುವ ಟಿವಿ ಬಗ್ಗೆ ಅಷ್ಟೇ ಉತ್ಸುಕರಾಗಿದ್ದರು.

ಅಮ್ಮನ ಸ್ನೇಹಿತೆಯರೂ ಕೂಡ, ಟಿವಿ ಕೊಳ್ಳುವ ನಿರ್ಧಾರ ಕೈಗೊಂಡ ಅಮ್ಮನ ಘನಕಾರ್ಯಕ್ಕೆ, ಮೆಚ್ಚಿಗೆ ವ್ಯಕ್ತಪಡಿಸಿದ್ದೇ ಪಡಿಸಿದ್ದು. ಯಾಕೆಂದರೆ ಇವರೆಲ್ಲರೂ ಶ್ರೀಮಂತರಿಂದ ಮಾತಿನಲ್ಲೇ ತೇಜೋವಧೆಗೊಳಗಾಗಿದ್ದ ಅಬಲೆಯರಾಗಿದ್ದರುಅವರ ಸೊಕ್ಕು ಮುರಿಯಲು, ಮಧ್ಯಮವರ್ಗದವರಾದ ನಾವು ಟಿವಿ ಕೊಳ್ಳುತ್ತಿರುವುದು ಅವರಿಗೆ ಸಂತೋಷವಾಗಿತ್ತು. ಯಾಕೆಂದರೆ ಅವರೂ ಮಧ್ಯಮವರ್ಗದ ಕುಟುಂಬಕ್ಕೆ ಸೇರಿದ ಮಹಿಳಾಮಣಿಗಳಾಗಿದ್ದರು.

ಅಂತೂ ನಮ್ಮೆಲ್ಲರ ಮನಸ್ಸಿನಲ್ಲಿ ಹೊಯ್ದಾಡುತಿದ್ದ ಕಾತುರತೆಗೆ ಪೂರ್ಣವಿರಾಮ ಸಿಗುವಂತೆ, ಪ್ರೀತಿಯ ಟಿವಿಯು ಪಾದಾರ್ಪಣೆ ಮಾಡುವ ದಿನ ಬಂದೇ ಬಿಟ್ಟಿತು. ಇದು ಬರುವ ಸುದ್ದಿ ತಿಳಿದದ್ದೇ ತಡ, ನಮ್ಮ ಮತ್ತು ನಮ್ಮಮ್ಮನ ಸ್ನೇಹಿತೆಯರೆಲ್ಲರೂ ಮಾಡುತ್ತಿದ್ದ ಕೆಲಸವನ್ನು ಅಷ್ಟಕ್ಕೇ ಬಿಟ್ಟು, ನಮ್ಮ ಮನೆಗೆ ಬಂದು ಟಿವಿಯನ್ನು ಸ್ವಾಗತಿಸಲು ಸುಮಂಗಲಿಯರಂತೆ, ಕಾದು ಕುಳಿತಿದ್ದರು. ಆರತಿ ತಟ್ಟೆ ಒಂದಿಲ್ಲ ಅಷ್ಟೇ. ನಮ್ಮೆಲ್ಲರ ಸಂಭ್ರಮ, ನಮ್ಮ ಮನೆಯನ್ನು ಯಾವ ಮದುವೆ ಮನೆಗೂ ಕಡಿಮೆ ಏನಿಲ್ಲವೆಂಬಂತೆ ಮಾಡಿತ್ತುಅಂತೂ ಇಂತೂ, ನವ ವಧುವಿನಂತೆ ಟಿವಿ ಬಂದೇ ಬಿಟ್ಟಿತು. ಹೆಣ್ಣು ಮಗಳನ್ನು ಗಂಡನ ಮನೆಗೆ ಬಿಡಲೆಂದು ತವರಿನವರು ಬರುವಂತೆ, ಟಿವಿಯನ್ನು ಹೊತ್ತು ಬಂದ ಹುಡುಗರು ನನ್ನ ಕಣ್ಣಿಗೆ ಕಂಡಿದ್ದರು.

ಹೆಂಚಿನ ಮೇಲೆ ಆಂಟೆನಾ ಜೋಡಿಸಿ,ಟಿವಿ ಯನ್ನು ಕನೆಕ್ಟ್ ಮಾಡಿ ತೋರಿಸಿ, ಪ್ರಸಾರದ ಸ್ಪಷ್ಟತೆ ಎಲ್ಲವನ್ನೂ ಖಾತ್ರಿ ಪಡಿಸಿ, ನಮ್ಮ ಜವಾಬ್ದಾರಿಗೆ ಒಪ್ಪಿಸಿ, ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಅಂದು ಸಂಜೆ ಚಿತ್ರಮಂಜರಿ ಕಾರ್ಯಕ್ರಮ ಪ್ರಸಾರವಾಗುತಿತ್ತು. ನಮ್ಮ ಅಣ್ಣಾವ್ರ ‘ಈ ಸಮಯ ಆನಂದಮಯ ಎಂಬ ಹಾಡು ಕೇಳುತ್ತಿದ್ದಂತೆಯೇ, ಯಾವ ಟಾಕೀಸಿಗೂ ಕಡಿಮೆಯೇನಿಲ್ಲವೆಂಬತೆ, ಶಿಳ್ಳೆಗಳ ಹಾಹಾಕಾರ, ಕುತೂಹಲ ಎಲ್ಲವೂ ಸೇರಿ ಸಂತೋಷದ ವಾತಾವರಣ ತುಂಬಿ ಹರಿದಿತ್ತು ಸಂತೋಷವನ್ನು ದ್ವಿಗುಣಗೊಳಿಸಲು, ನಮ್ಮಮ್ಮ ಹೀಗೆ ಮೊದಲೇ ಸಿದ್ಧ ಪಡಿಸಿಟ್ಟಿದ್ದ ಕೊಬ್ರಿ ಮಿಠಾಯಿಯನ್ನು, ಚಕ್ಕುಲಿಯನ್ನು ಟಿವಿ ತಂದ ಹುಡುಗರಿಗೆ ಮತ್ತು ನಮ್ಮನೆಯಲ್ಲಿ ಸೇರಿದ್ದ ಪ್ರತಿಯೊಬ್ಬರಿಗೂ ಹಂಚಿ, ಸಂತೋಷವನ್ನು ಇಮ್ಮಡಿಗೊಳಿಸಿದ್ದಳು.

ಏನೇ ಇರಲಿ ನಮ್ಮಮ್ಮನ ಶ್ರದ್ಧೆ, ಪ್ರೀತಿ ತುಂಬಿದ ತಿಂಡಿಯೊಂದಿಗೆ ಒಂದೇ ಚಾನೆಲ್ ಆದರೂ, ನಾವೆಲ್ಲರೂ ಸೇರಿ ಕೂಡಿಕೊಂಡು ನೋಡುತ್ತಿದ್ದಾಗ ಆಗುತ್ತಿದ್ದ ಸಂತೋಷ ಈಗ ನೂರು ಚಾನೆಲ್ಗಳಿದ್ದರೂ ಸಿಗುತ್ತಿಲ್ಲ. ಪರಿಪೂರ್ಣ ಆನಂದ ಪಡೆಯಲು ಯಾರ ಬಳಿಯೂ ಸಮಯವೂ ಇಲ್ಲ ತಾಳ್ಮೆಯೂ ಇಲ್ಲ.

ಅಂದಿನಿಂದ ಎಂದರೆ ಟಿವಿ ಬಂದಾಗಿನಿಂದ ನಮ್ಮ ಮನೆಗೆ ಪ್ರತೀ ವಾರದ ಚಿತ್ರಮಂಜರಿ, ಚಿತ್ರಹಾರ್, ಶನಿವಾರ ಭಾನುವಾರಗಳ ಚಲನಚಿತ್ರ, ರಾಮಾಯಣ ಹಾಗೂ ಮಹಾಭಾರತ ನೋಡಲು ನಮ್ಮ ಅಗ್ರಹಾರದ ಸ್ನೇಹಿತರೆಲ್ಲರೂ ಸೇರುತ್ತಿದ್ದರು. ಅವರು ಬರುವಷ್ಟರಲ್ಲಿ, ನಮ್ಮಮ್ಮ ಬಜ್ಜಿ, ಬೋಂಡಾ, ಇತ್ಯಾದಿ ಹೀಗೆ ಒಂದಲ್ಲಾ ಒಂದು ತಯಾರಿಸಿ ಕೊಡುತ್ತಿದ್ದಳು. ಎಲ್ಲರೂ ಸೇರಿ ಕುಳಿತುಕೊಂಡು ಟಿವಿ ನೋಡುತ್ತಾ ತಿನ್ನುತ್ತಿದ್ದಾಗ, ಆದರಿಂದ ಸಿಗುತ್ತಿದ್ದ ಆನಂದವೇ ಬೇರೆ. ಹೀಗೆ ಸಂಧೀಲಿ ಸಮಾರಾಧನೆ ಎಂಬಂತೆ ನಮ್ಮಮ್ಮನ ಪಾಕ ಪ್ರಾವೀಣ್ಯತೆಯ ಪ್ರದರ್ಶನವೂ ನಡೆಯುತ್ತಿತ್ತು.

ಗ್ರಹಣ ಕಾಲದಲ್ಲಿನ ರಾಹುವಿನಂತೆ, ಒಮ್ಮೊಮ್ಮೆ ವಿದ್ಯುತ್ ಕಡಿತಗೊಂಡು, ಸರಿಯಾದ ಸಮಯಕ್ಕೆ ಕೈ ಕೊಟ್ಟು, ನಮ್ಮೆಲ್ಲರ ಉತ್ಸಾಹ, ಸಂತೋಷಕ್ಕೆ ತಣ್ಣೀರೆರಚಿದ ದಿವಸಗಳೆಷ್ಟೋಆದ್ರೂ ಕರೆಂಟು ಬರುವ ಸಮಯವನ್ನೇ ನಿರೀಕ್ಷಿಸುತ್ತಾ ಬುಡ್ಡಿ ದೀಪದ ಬೆಳಕಿನಲ್ಲಿ, ಬೋಂಡಾ, ಆಂಬೊಡೆ ತಿನ್ನುತ್ತಾ, ಸಮಯದಲ್ಲಿ ನಾವು ನೋಡಬೇಕಾಗಿದ್ದ  ಕಾರ್ಯಕ್ರಮದ ಬಗ್ಗೆಯೇ ಚರ್ಚಿಸುತ್ತಾ, ಸಮಯ ಕಳೆಯುತ್ತಿದ್ದೆವುಒಮ್ಮೆಮ್ಮೆ ಹೋದ ಕರೆಂಟು ಬೇಗ ಬರುತಿತ್ತು. ಕೆಲವೊಮ್ಮೆ ಎಷ್ಟು ಹೊತ್ತಾದರೂ ಬರದಿದ್ದಾಗ, ತಿಂದ ಸ್ವೀಟು, ಖಾರ ಮತ್ತು ಕಾರ್ಯಕ್ರಮದ ಬಗ್ಗೆ ಹರಟಿದ ವಿಷಯವಷ್ಟೇ ಲಾಭವಾಗಿತ್ತು.

ಅಂತೂ ಹೀಗೆ ಒಂದೆರಡು ವರ್ಷ ಕಳೆಯುತ್ತಿರಲು, ನನ್ನ ಸ್ನೇಹಿತೆಯೊಬ್ಬಳ ಮನೆಯಲ್ಲೂ ಟಿವಿ ತೆಗೆದುಕೊಂಡರು. ಆಗ ಅವಳ ಗತ್ತು, ಗಮ್ಮತ್ತು, ಗಾಂಭೀರ್ಯ ಹೇಳತೀರದು. ನನ್ನ ಸ್ನೇಹಿತ ಸ್ನೇಹಿತೆಯರೆಲ್ಲರಿಗೂ ಮಾರನೆಯ ದಿನದ ಚಿತ್ರಮಂಜರಿ ನೋಡಲು ಆಹ್ವಾನ ಕೊಟ್ಟು, ತನ್ನ ಮನೆಗೂ ಟಿವಿ ಬಂದ ಸುದ್ದಿಯನ್ನು ಸೂಕ್ಷ್ಮವಾಗಿ ತಿಳಿಸಿದ ಬುದ್ಧಿವಂತೆಯಾಗಿದ್ದಳು. ವಿಷಯ ತಿಳಿಯದ ನನಗೆ, ಚಿತ್ರಮಂಜರಿಯ ಸಮಯ ಬಂದರೂ ನಮ್ಮ ಸ್ನೇಹಿತರಾರೂ ಬರದಿದ್ದುದು ಬಹಳ ಬೇಸರದ  ಸಂಗತಿಯಾಯ್ತುಅವರು ಅವಳ ಮನೆಗೆ ಹೋದ ವಿಷಯ, ನಮ್ಮ ತಾಯಿಯ ಸ್ನೇಹಿತೆಯರಿಂದ ಗೊತ್ತಾಗಿತ್ತು. ಸರಿ, ನಮ್ಮಮ್ಮ ಮಕ್ಕಳಿಗೂ ಸೇರಿಸಿ ಮಾಡಿದ್ದ ತಿಂಡಿಯನ್ನು, ಅವಳ ಸ್ನೇಹಿತೆಯರಿಗೆ ಎರಡರ ಜಾಗದಲ್ಲಿ ನಾಲ್ಕಿತ್ತು, ಅವರೆಲ್ಲರ ಮೆಚ್ಚುಗೆ ಗಳಿಸಿದ್ದಳು.

ಮಾರನೆಯ  ದಿನ ಆಶ್ಚರ್ಯವೆಂಬಂತೆ ನನ್ನ ಸ್ನೇಹಿತರ ದಂಡು ನಮ್ಮನೆಯಲ್ಲಿ ಹಾಜರ್ಇದನ್ನು ತಿಳಿದ  ಟಿವಿ ಸ್ನೇಹಿತೆ ಕೋಪಿಸಿಕೊಂಡು, ಎಲ್ಲರನ್ನೂ ತರಾಟೆಗೆ ತೆಗೆದುಕೊಂಡಿದ್ದಳು. “ಯಾಕ್ರೋ ನಮ್ಮನೆಗೆ ನಿನ್ನೆ ಬಂದಿಲ್ಲ?” ಎಂದ ಅವಳ ಪ್ರಶ್ನೆಗೆ ಎಲ್ಲರೂ ಒಕ್ಕೊರಲಿನಿಂದ, ನಾವಿನ್ನು ನಿಮ್ಮನೆಗೆ ಟಿವಿ ನೋಡಕ್ಕೆ ಬರಲ್ಲ. ಯಾಕಂದ್ರೆ ನಿಮ್ಮಮ್ಮ ಯಾವ ತಿಂಡಿನೂ ಕೊಡಲ್ಲಎಂದಿದ್ದರು. ಸದ್ಯ! ಹೀಗೇ ನಮ್ಮಮ್ಮ ಕೊಡುತ್ತಿದ್ದ ತಿಂಡಿಯ ದೆಸೆಯಿಂದಾಗಿ ನನ್ನ ಮತ್ತು ಸ್ನೇಹಿತರ ಸಂಬಂಧದ ಬೆಸುಗೆ ಗಟ್ಟಿಯಾಗಿತ್ತು.

ಹೇಳಿ ಕೇಳಿ, ಮೊದಲೇ ನನ್ನೂರು ಮಳೆಯೂರು. ಒಮ್ಮೊಮ್ಮೆ ನಮ್ಮ ಸಂತೋಷಕ್ಕೆ ತಣ್ಣೀರೆರಚಲೆಂದೇ ಕಾದು ಕುಳಿತಿದ್ದ ಮಳೆರಾಯ, ತನ್ನ ಆಪ್ತ ಮಿತ್ರನಾದ ವಾಯುರಾಯನನ್ನೂ ಸೇರಿಸಿಕೊಂಡುಧೋಎಂದು ಸತತ ಬಿಡದೆ ಎರಡು ದಿನಗಳ ಕಾಲ ಸುರಿದಿದ್ದ ಪರಿಣಾಮ, ಯಾವುದೋ ನನ್ನ ಬುದ್ಧಿಗೆ ನಿಲುಕದ ತಾಂತ್ರಿಕ ಸಮಸ್ಯೆಯ ಜೊತೆಗೆ, ಆಂಟೆನಾದ ಸ್ಥಾನ ಪಲ್ಲಟವಾಗಿದ್ದರಿಂದ, ಟಿವಿ ಯಲ್ಲಿ ಪರದೆ ತುಂಬ ಬರೀ ಮಳೆಯಂತೆ ಚುಕ್ಕಿಗಳು ಕಂಡು ಬಂದಿತುಅದರ ರಿಪೇರಿ ಕಾರ್ಯಕ್ರಮ ಜರುಗಿತು. ಮಳೆಗೆ ಕೊಡೆ ಹಿಡಿದು, ಮನೆಯ ಹೆಂಚಿನ ಮೇಲೇರಿ, ಆಂಟೇನಾ ಸರಿ  ಮಾಡಲು ನಮ್ಮಪ್ಪ, ಹೊರಗಡೆ ಒಬ್ಬ, ಒಳಗೆ ಟಿವಿ ಎದುರು ಮತ್ತೊಬ್ಬಟಿವಿ ಯಲ್ಲಿ ಚಿತ್ರ ಮೂಡಿಬರುತ್ತಿದೆಯೋ ಎಂದು ನೋಡಿ ಹೊರಗಡೆಯವನಿಗೆ ಹೇಳಲು, ಅವನು ಮೇಲೆ ನಿಂತ ನಮ್ಮಪ್ಪನಿಗೆ ಸಂದೇಶ ರವಾನಿಸುತ್ತಿದ್ದ. ಹಾಗೆಯೇ  ಅವರ ಸಲಹೆಗೆ ಅನುಗುಣವಾಗಿ, ನಮ್ಮಪ್ಪ ಆಂಟೇನಾ ತಿರುಗಿಸಿ ಹರ ಸಾಹಸದೊಂದಿಗೆ, ಅಂತೂ ಟಿವಿ ಯಲ್ಲಿ ಚಿತ್ರ ಮೂಡಿಸುವಂತಾಗುತಿತ್ತು. ಹೀಗೇ ಎಷ್ಟೋ ದಿವಸಗಳು ಆಗಿದ್ದು ಉಂಟು.

PC: Internet

ಹೀಗೇ ಎಷ್ಟೋ ಬಾರಿ, ನಮ್ಮ ನಮ್ಮೊಳಗೇ ಕೂರುವ ಜಾಗದ ವಿಷಯಕ್ಕಾಗಿ ಜಗಳವಾಗುತ್ತಿದ್ದಾಗ, ಅದನ್ನು ಬಿಡಿಸುವ ಭರಾಟೆಯಲ್ಲಿ  ನಮ್ಮಮ್ಮ, ತಾನು ನೋಡಬೇಕಾಗಿದ್ದ ಚಿತ್ರಮಂಜರಿ ಹಾಡುಗಳನ್ನು ತ್ಯಾಗಮಾಡಿದ್ದ ತ್ಯಾಗಮೂರ್ತಿಯಾಗಿದ್ದಳು.

ಏನೇ ಇರಲಿ, ಆಗಿನ ನಾವುಗಳು, ಜೀವನದಲ್ಲಿ ಇರುವ ನಿಮಿಷಗಳನ್ನು ಎಣಿಸುವುದಕ್ಕಿಂತ, ಒಂದೊಂದು ನಿಮಿಷದಲ್ಲೂ ಅಡಗಿರುವ ಸುಂದರವಾದ ಜೀವನವನ್ನು ಅನುಭವಿಸಿ ಸವಿಯುವ ಕಲೆಗಾರರಾಗಿದ್ದೆವು.
ಅದೇ ಈಗ ಪ್ರಪಂಚ ತಾಂತ್ರಿಕತೆಯಲ್ಲಿ ಮುಂದುವರಿದಷ್ಟೂ, ಹೊಸ ಹೊಸ ಆವಿಷ್ಕಾರಗಳಾಗುತ್ತಿವೆ. ಆದರೂ ನಮ್ಮ ಕಾಲದಲ್ಲಿ ಎಲ್ಲರೂ ಸಂತೋಷ ಪಡುತ್ತಿದ್ದಷ್ಟು ಅಥವಾ ಜೀವನದ ಚಿಕ್ಕ ಚಿಕ್ಕ ವಿಷಯಗಳಲ್ಲಿ ಅಡಗಿರುವ ದೊಡ್ಡ ದೊಡ್ಡ ಸಂತೋಷಗಳನ್ನು ಅನುಭವಿಸುತಿದ್ದಷ್ಟು, ಯಾರೂ ಅನುಭವಿಸುತ್ತಿಲ್ಲ. ಏಕೆಂದರೆ, ಬಿಸಿಲುಗುದುರೆಯ ಬೆನ್ನೇರಿ, ಓಡುತ್ತಿರುವ ಯಾರೊಬ್ಬರಿಗೂ ಪರಿಪೂರ್ಣ ಸಂತೋಷ ಜೀರ್ಣಿಸಿಕೊಳ್ಳುವಷ್ಟು ಸಮಯವಿಲ್ಲ, ಮೇಲಾಗಿ ತಾಳ್ಮೆಯೇ ಇಲ್ಲ.

-ಸೌಮ್ಯ

22 Responses

  1. Hema says:

    ಸವಿನೆನಪುಗಳು ಮಧುರ….ಬರಹ ಬಹಳ ಇಷ್ಟವಾಯಿತು.

  2. ಬಿ.ಆರ್.ನಾಗರತ್ನ says:

    ದೂರದರ್ಶನದ ಮಧುರ ನೆನಪುಗಳು ನಮ್ಮಲ್ಲೂ ಇವೆ ಅವುಗಳನ್ನು ಆಗಾಗ್ಗೆ ಮೆಲುಕು ಹಾಕುತ್ತಾ ಇರುತ್ತೇವೆ. ಒಳ್ಳೆಯ ಸಂದೇಶ ಹೊತ್ತ ಲೇಖನ ಅಭಿನಂದನೆಗಳು ಮೇಡಂ

  3. K.S.Nagesh Rao says:

    ಸೌಮ್ಯ, ನೀನು‌ ಬರವಣಿಗೆಯಲ್ಲೂ ಇಷ್ಟು ಪ್ರಾವೀಣ್ಯತೆ ಹೊಂದಿರುವೆಯೆಂದು ನನಗೆ ಈಗಲೇ ತಿಳಿದಿದ್ದು. ಭೇಷ್. ಇನ್ನೂ ಇನ್ನೂ ಇನ್ನಷ್ಟು ಬರಿ. ಚೆನ್ನಾಗಿರುತ್ತದೆ. ನಿನ್ನ ಬರವಣಿಗೆಯ ಭಾಷೆಯೂ ಸರಳವಾಗಿ ಸುಂದರವಾಗಿತ್ತು. ಓದಿ ಸಂತೋಷವಾಯಿತು. Keep it up.

    ಆಂದಹಾಗೆ ನಾನು ಯಾರೆಂದು‌ ನೀನು‌ ಮರೆತಿರಲಾರೆ ಎಂದು ಭಾವಿಸುತ್ತೇನೆ. ನಾನು ನಿನ್ನ ಅಮ್ಮನ ಅಣ್ಣ. ಅಂದರೆ, ದೊಡ್ಡಪ್ಪನ‌ ಮಗ.

  4. M.A.Manjunatha says:

    Tumba sogasada article madam

  5. Anonymous says:

    ತುಂಬಾ ಚೆನ್ನಾಗಿ ಬರೆದಿರುವೆ ಅಕ್ಕ.

  6. Sayilakshmi S says:

    ಮಧ್ಸಯಮವರ್ಗದ ಸರಳ ಜೀವನಕ್ರಮದ ಸೊಗಸಾದ ಚಿತ್ರಣ. ಆಪ್ತ ಬರಹ ಅಭಿನಂದನೆ

  7. Nagaraj says:

    Nimma Kannada Proudhime haagoo bhasha soundarya adbhutha Sowmyaji.
    Hats off to you for taking us to our child hood.

  8. ನಯನ ಬಜಕೂಡ್ಲು says:

    ಚಂದದ ಬರಹ, ಹಳೆಯ ನೆನಪುಗಳೆಲ್ಲ ಮತ್ತೊಮ್ಮೆ ನೆನಪಾದವು

  9. ಅಂತೋಣಿ says:

    ಸೌಮ್ಯ ಅಕ್ಕ ಅದ್ಭುತ ಬರಹ

  10. ಶಂಕರಿ ಶರ್ಮ says:

    ಇಂತಹದೇ ಟಿ. ವಿ. ವಾತಾವರಣ ನಮ್ಮಲ್ಲೂ ಇದ್ದುದು ನೆನಪಿಗೆ ಬಂದು, ಆ ದಿನಗಳಲ್ಲಿ ನಡೆದಾಡಿದೆ. ರಾಮಾಯಣ ಪ್ರಾರಂಭವಾಗುತ್ತಿದ್ದಂತೆ, ನಮ್ಮ ಪುಟ್ಟ ಹಾಲ್ ತುಂಬಾ ಜನ..ಮಕ್ಕಳು ಮುಂದಿನ ಸೀಟ್ ಆದರೆ ದೊಡ್ಡವರು ಹಿಂದೆ.. ಮನೆಯವರಿಗೆ ಹಿಂದುಗಡೆ ಸ್ಟೇಂಡಿಂಗ್ ಸೀಟ್! ಆ ದಿನಗಳಲ್ಲಿ ನಮ್ಮಲ್ಲಿ ಟಿ. ವಿ. ನೋಡಿದ್ದ ಚಿಟ್ಳಾರಿಗಳು ಈಗ ಗೌರವಾನ್ವಿತ ವ್ಯಕ್ತಿಗಳಾಗಿದ್ದರೂ ನಮ್ಮನ್ನು ಕಂಡಾಗ ಇಂದಿಗೂ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ. ಚಂದದ ಬರಹ.

  11. ವಿದ್ಯಾ says:

    ಹಳೆಯ ದೆಲ್ಲವೂ ಚೆಂದವೇ,,,ಕೊನೆಯ ಸಾಲು ಸತ್ಯ,, ಬಹುಶಃ ಎಲ್ಲರಿಗೂ ಅವರವರ ಹಳೆಯ ಸವಿ ಸಮಯ ನೆನಪಾಗಿರಬಹುದು

  12. Leena says:

    Very nice article Soumya

  13. Anonymous says:

    Very nice post. I think this will be the experience of all in one or the other way. I too have similar experiences. Makes nice reading. Thanks.

  14. Padma Anand says:

    ಹಳೆಯ ನೆನಪುಗಳೊಂದಿಗೆ ಮುದನೀಡಿದ ಲೇಖನ. ನಾವೂ ನಿಮ್ಮ ಮನೆಗೆ ಟಿ.ವಿ.ನೋಡಲು ಬರುತ್ತೇವೆ., ಏನು ತಿಂಡಿ ಮಾಡುತ್ತೀರಿ?

Leave a Reply to M.A.Manjunatha Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: