ಹಾಗೆ ಸುಮ್ಮನೆ ಒಂದು ಶಬ್ದದ ಸುತ್ತ

Share Button

ಹಂಗು ಎಂಬ ಶಬ್ದವನ್ನು ತೆಕ್ಕೊಳ್ಳೋಣ. ಇದರ ಮೂಲ ಪಂಗು. ಅಂಗು, ಹಂಗು ಈ ಎರಡು ರೂಪಗಳೂ ಬಳಕೆಯಲ್ಲಿವೆ. ಹಂಗಿನರಮನೆಗಿಂತ ಇಂಗಳದ ಗುಡಿ ಲೇಸು ಎಂದ ಸರ್ವಜ್ಞನ ನುಡಿ, ಹಂಗಿನ ತವರ ಮನಿಸಾಕ ಎಂದ ಜನಪದ ಕವಯತ್ರಿಯ ಅನುಭವವಾಣ ನೆನಪಾಗುತ್ತದೆ. ಹಂಗಿನಲ್ಲಿರುವುದು ಎಂದರೆ state of being crippled ಎಂದು ಕಿಟ್ಟೆಲ್ ನಿಘಂಟಿನಲ್ಲಿ ಅರ್ಥಕೊಡಲಾಗಿದೆ. ಹಂಗಿನಲ್ಲಿರುವ ಭಾವವೆಂದರೆ ಅದು ಕುಬ್ಜನಾದ ಭಾವ. ಯಾರ ಹಂಗಿಗೂ ಒಳಗಾಗದೆ ಯಾರ ಋಣಕ್ಕೂ ಬೀಳದೆ ಬಾಳಬೇಕೆಂಬುದು ನಮ್ಮ ಸಂಸ್ಕೃತಿಯ ಹಿರಿಯ ಆದರ್ಶ.ಯಾರಿಂದಲಾದರೂ ಉಪಕೃತನಾದರೆ ಅದರದೊಂದು ಹಂಗು ಇರುತ್ತದೆ. ಅದಕ್ಕೆ ಪ್ರತ್ಯುಪಕಾರ ಮಾಡುವ ಉತ್ಕಟಾಪೇಕ್ಷೆ ಈ ಹಂಗಿನ ಭಾವಕ್ಕೆ ಒಳಗಾದವರಿಗೆ ಇದ್ದೇ ಇರುತ್ತದೆ. ಹಾಗೆ ಮಾಡದಲ್ಲದೆ ಜೀವ ಕೇಳದು. ಪ್ರತ್ಯುಪಕಾರ ಮಾಡುವ ಅವಕಾಶ ದೊರೆತರೆ ಆ ಜೀವ ಸಂತಸ ಪಡುತ್ತದೆ. ಆದರೆ ಕೆಲವೊಮ್ಮೆ ಉಪಕಾರ ಮಾಡುವವರು, ಸಹಾಯಹಸ್ತ ಚಾಚುವವರು ಕಷ್ಟಕಾಲದಲ್ಲಿ ಆಸರೆ ನೀಡುವವರು ಪ್ರತ್ಯುಪಕಾರವನ್ನು ನಿರೀಕ್ಷಿಸುವುದಿಲ್ಲ. ಅದೊಂದು ಧರ್ಮ, ಅದೊಂದು ಕರ್ತವ್ಯ ಎಂಬಂತೆ ಉಪಕಾರ ಮಾಡಿ ಮರೆತುಬಿಡುತ್ತಾರೆ.

ಇನ್ನು ಕೆಲವರು ತಾವು ಉಪಕಾರ ಮಾಡಿದ್ದನ್ನು ನೆನಪಿನಲ್ಲಿರಿಸಿಕೊಂಡು ಉಪಕೃತನಾದ ವ್ಯಕ್ತಿಯು ತನ್ನ ಹಂಗಿನಲ್ಲಿರಬೇಕೆಂದು ಬಯಸುತ್ತಾರೆ. ಹಾಗೆ ಉಪಕಾರ ಮಾಡಬೇಕಾಗಿ ಬಂದ ಅಸಹಾಯಕ ವ್ಯಕ್ತಿ ತನ್ನ ವಿರೋಧಿ ಬಣದವನು ಎಂದರೆ ಅವರಿಗೆ ವಿಚಿತ್ರವಾದ ಸಂತೋಷ. ಆತನನ್ನು ಹಂಗಿಗೊಳಗಾಗಿಸಿದ ವಿಜಯದ ವಿಕಟನಗೆ. ಬಲದ ಕೈಕೊಟ್ಟದ್ದು ಎಡದ ಕೈಗೆ ಗೊತ್ತಿರದಂತೆ ಗುಪ್ತದಾನ ಮಾಡುವವರು, ತಾವು ಮಾಡಿದ ಸಹಾಯವನ್ನು ಹೇಳಿಕೊಳ್ಳದವರು ಬಹಳ ವಿರಳವೇ ಸರಿ. ಆದರೆ ತಾನೇನು ಕೊಟ್ಟರೂ, ಏನು ಸಹಾಯ ಮಾಡಿದರೂ ಅದರ ಹಿಂದೆ ದೈವಪ್ರೇರಣೆಯಿದೆ ಎಂದು ಭಾವಿಸಿ ನಿರ್ಮಮ ಭಾವದಿಂದ ಕೊಡುವವರು ಅಥವಾ ನೀಡುವವರಿದ್ದಾರಲ್ಲ ಅವರು ಪಡೆದಾತನು ಹಂಗಿನ ಭಾವದಿಂದ ನರಳುವಂತೆ ಮಾಡುವುದಿಲ್ಲ. ಪಡೆದಾತ ಹಂಗಣೆಗೆ ಒಳಗಾಗುವುದಿಲ್ಲ. ಆದರೆ ತನಗೆ ಕಷ್ಟಕಾಲದಲ್ಲಿ ನೆರವಾದವರ ಕುರಿತು ಕೃತಜ್ಞತೆಯ ಒಂದು ಸಹಜಭಾವ ಪಡೆದಾತನಲ್ಲಿರಬೇಕು ಎನ್ನುವುದು ಕೂಡ ಮಾನವೀಯ ನಡೆ. ಆದರೂ ಕೊಟ್ಟದ್ದರ ಬಗ್ಗೆ ಹೇಳಿ ಹೇಳಿ ಹಂಗಿಸುವ ನಡೆ ಕೊಟ್ಟವರಲ್ಲಿ ಇದ್ದರೆ ಅದು ಶೋಭಿಸುವುದಿಲ್ಲ. ಇಲ್ಲಿ ಹಂಗಿಸು ಎನ್ನುವ ಶಬ್ದ ಕೂಡ ಹಂಗಿನಿಂದಲೇ ಬಂದಿರುವಂಥದ್ದು. ಹಂಗಿಸು ಶಬ್ದಕ್ಕೆ ನಿಂದಿಸು, ಬೈಯ್ಯು, ತೆಗಳು ಎಂಬ ಪರ್ಯಾಯ ಪದಗಳನ್ನು ಬಳಸುತ್ತೇವಾದರೂ ಇದಕ್ಕೆ ಸೂಕ್ಷ್ಮ ಅರ್ಥವ್ಯತ್ಯಾಸವಿದೆ. ಮಾಡಿದ ಉಪಕಾರವನ್ನು ಹೇಳಿ ಹೇಳಿ ಚುಚ್ಚುವುದು ಒಂದು ರೀತಿಯ ಹಂಗಣೆಯಾದರೆ ನೀನು ಹೀಗೆ ಹೀಗೆ ಮಾಡಬಹುದೆಂದು ಭಾವಿಸಿದ್ದೆ; ನಿನ್ನಿಂದ ನಿರೀಕ್ಷಿಸಿದ ಇಂತಿಂಥ ಕೆಲಸವನ್ನು ನೀನು ಮಾಡಲೇ ಇಲ್ಲ -ಎಂದು ಹೇಳಿ ವ್ಯಕ್ತಿಯನ್ನು ಕೀಳುಮಾಡುವುದು ಮತ್ತೊಂದು ಬಗೆಯ ಹಂಗಣೆ. ಈ ಹಂಗಣೆ ಹೇಗಿದ್ದರೂ ಮನಸ್ಸಿಗೆ ಘಾಸಿ ಉಂಟುಮಾಡುವಂಥದ್ದು. ಸೂಕ್ಷ್ಮಮನಸ್ಸಿನ ವ್ಯಕ್ತಿ ಹಾಗೆಲ್ಲ ಈ ಹಂಗಣೆಗೆ ಒಳಗಾಗದೆ ಇದರಿಂದ ಪಾರಾಗಬಯಸುತ್ತಾನೆ.

ಈಗ ಹಂಗು ಎನ್ನುವ ಶಬ್ದವನ್ನು ವಿಶಾಲನೆಲೆಯಲ್ಲಿ ಪರಿಭಾವಿಸುವ. ನಾವು ವಾಸಿಸುವ ಈ ಭೂಮಿಯ ಹಂಗು ಎಲ್ಲಕ್ಕಿಂತ ದೊಡ್ಡ ಹಂಗು. ಈ ಹಂಗು ಹರಿಯಬೇಕಾದರೆ ಸಹಜೀವಿಗಳ ಜೊತೆ ನಮಗೆ ಕರ್ತವ್ಯವಿದೆ. ಯಾಕೆಂದರೆ ಈ ಭೂಮಿ ಇಂದು ನಿನ್ನೆಯದಲ್ಲ. ಇಲ್ಲಿ ಬಿತ್ತಿಬೆಳೆದ ಧಾನ್ಯಗಳು, ಅದರ ಬೀಜಗಳು ಎಲ್ಲವಕ್ಕೂ ಪುರಾತನ ಹಿನ್ನೆಲೆ ಇದೆ. ಅದರಲ್ಲಿ ಈ ಭೂಮಿಯಲ್ಲಿ ನಮಗಿಂತ ಮೊದಲೇ ಉದಿಸಿಬಂದ ಅನೇಕರ ಬೆವರು, ಬುದ್ದಿ, ಪ್ರತಿಭೆ- ಎಲ್ಲವುಗಳ ಕೊಡುಗೆ ಇದೆ. ಅದರ ಪ್ರಯೋಜನವನ್ನು ಉಣ್ಣುವ ನಾವು ಈ ಹಂಗಿಗೆ ಒಳಗಾಗದೆ ಇರಲು ಸಾಧ್ಯವೇ? ಈ ಹಂಗಿನಿಂದ ಪಾರಾಗುವುದೆಂದರೆ ಮುಂದಿನವರಿಗೆ ಏನಾದರೂ ಕೊಡುವುದು, ಬಿಟ್ಟುಹೋಗುವುದು. ಕೇವಲ ಮನುಷ್ಯರು ಮಾತ್ರವಲ್ಲ ಗಿಡಮರಗಳು, ಪ್ರಾಣ ಪಕ್ಷಗಳು, ನದಿ ಪರ್ವತಗಳು-ಇವುಗಳಿಗೂ ನಾವು ಹಂಗಿಗರೇ.ಉಸಿರಾಡುವ ಶುದ್ಧಗಾಳಿ, ತಿನ್ನುವ ಫಲವಸ್ತುಗಳು, ಇತರ ಉಪಯೋಗಗಳಿಗೆ ಒದಗುವ ಮರದ ಭಾಗಗಳು- ಇವುಗಳನ್ನಲ್ಲ .ಅನುಭವಿಸುವುದರ ಮೂಲಕ ಒಳಗಾದ ಹಂಗನ್ನು ತೊರೆಯುವುದೆಂದರೆ? ನಿಜ . ನಾವು ಮರವಾಗಲು ಸಾಧ್ಯವಿಲ್ಲ. ಆದರೆ ಮರಗಿಡಗಳನ್ನು ಕಾಪಾಡಬಹುದು.; ಪೋಷಿಸಬಹುದು; ನೆಟ್ಟು ಬೆಳೆಸಬಹುದು.ನಮ್ಮ ಅಳವಿಗೆ ನಿಲುಕುವ ಎಲ್ಲ ವಿಧದ ಸಸ್ಯ ಜಾಲವನ್ನು‌ಉಳಿಸಲು ಪ್ರಯತ್ನ ಮಾಡಬಹುದು.

ಇನ್ನು ಹೆತ್ತವರ ಹಂಗು, ಪೊರೆದವರ ಹಂಗು, ಅರಿವಿನ ಬೆಳಕನ್ನು ನೀಡಿದ ಗುರುಗಳ ಹಂಗು, ಬಂಧುಮಿತ್ರರ ಹಂಗು- ತಿಳಿದು ನೋಡಿದರ ಬಾಳು ಎಂಬುದಿದು ಋಣದ ರತ್ನಗಣಿಯೋ ಎಂದು ಕವಿ ವಿ.ಸೀಯವರು ಸುಮ್ಮನೆ ಹೇಳಲಿಲ್ಲ. ಈ ಹಂಗಿನ ಭಾವದಿಂದ ಮುಕ್ತರಾಗಲು ಇರುವ ದಾರಿಯೆಂದರೆ ದುಡಿಮೆಯಲ್ಲಿ ತೊಡಗಿಕೊಳ್ಳುವುದು, ಕಾರ್ಯತತ್ಪರರಾಗುವುದು, ಪೋಲುಮಾಡದೆ ಮುಂದಿನ ಪೀಳಿಗೆಗೆ ಉಳಿಸುವುದು, ಮುಂದಿನ ಪೀಳಿಗೆಯನ್ನು ಬೆಳೆಸುವುದು ಇದೊಂದೇ.

-ಮಹೇಶ್ವರಿ ಯು.

11 Responses

  1. ಡಾ. ಕೃಷ್ಣಪ್ರಭ ಎಂ says:

    ಚಂದದ ಲೇಖನ

  2. ಬಿ.ಆರ್.ನಾಗರತ್ನ says:

    ಹಂಗಿನ ಪದದ ವ್ಯಾಪ್ತಿಯನ್ನು ಸೂಕ್ತವಾಗಿ ಪರಿಚಯಿಸಿ ಅದರಲ್ಲಿ ನಮ್ಮ ಪಾತ್ರ ವೇನು ಎಂಬುದನ್ನು ಚೆಂದವಾಗಿ ನಿರೂಪಿಸಿದ್ದೀರಿ ಮೇಡಂ.

  3. Samatha.R says:

    ತುಂಬಾ ಚೆನ್ನಾಗಿದೆ ಲೇಖನ.

  4. ಉತ್ತಮ ಬರಹ.ಧನ್ಯವಾದಗಳು

  5. ಹೌದು ಪದವನ್ನು ವಿಶಾಲನೆಲೆಯಿಂದ ತಮ್ಮ ಅನುಭವದಿಂದ ಚಿತ್ರಿಸಿದ್ದೀರ
    ವಂದನೆಗಳು

  6. Anonymous says:

    ಹಂಗಿನರಮನೆಗಿಂತ ವಿಂಗಡದ ಗುಡಿ ಲೇಸು..ಎಂಬಂತೆ ಹಂಗಿಗನೂ ಚಿಂತಿಸುವ ವಾಡಿಕೆ ಇತ್ತು! ಅಂತೂ ಲೇಖನ ಗಹನವಾದ ಆಶಯವನ್ನು ಸರಳವಾಗಿ ಮುಂದಿಡುತ್ತದೆ

  7. ನಯನ ಬಜಕೂಡ್ಲು says:

    ಉತ್ತಮ ಸಂದೇಶವಿದೆ ಲೇಖನದಲ್ಲಿ

  8. ಮಹೇಶ್ವರಿ ಯು says:

    ಧನ್ಯವಾದಗಳು ಎಲ್ಲರಿಗೂ

  9. ಶಂಕರಿ ಶರ್ಮ says:

    ಹಂಗು..ಋಣ..ಬಹಳ ವಿಶಾಲ ಅರ್ಥದಲ್ಲಿ ಮೂಡಿಬಂದ ಲೇಖನ ಬಹಳ ಚೆನ್ನಾಗಿದೆ.

  10. Padma Anand says:

    ಹಂಗು ಪದದ ಅರ್ಥವ್ಯಾಪ್ತಿಯ ಎಲ್ಲ ಪದರಗಳನ್ನು ಬಿಚ್ಚಿಟ್ಟಿರು ಉತ್ತಮ ಲೇಖನ. ಇಷ್ಟವಾಯಿತು

  11. ಬಿ ಸಿ ನಾರಾಯಣ ಮೂರ್ತಿ says:

    ಈ ಭೂಮಿಯ ಹಂಗು, ನಮಗಿಂತ ಮೊದಲೇ ಈ ಭೂಮಿಗೆ ಬಂದು ನಮಗಾಗಿ ಅನುಕೂಲಗಳನ್ನು ಮಾಡಿಟ್ಟವರ ಹಂಗು ನಮ್ಮ ಮೇಲೆ ಇದ್ದೇ ಇರುತ್ತದೆ.ಅದಕ್ಕಾಗಿ ನಾವು ಕೃತಜ್ಞರಾಗಿರಬೇಕು. ಹಂಗಿನ ವಿಷಯ ಚೆನ್ನಾಗಿ ಪ್ರಸ್ತುತ ಪಡಿಸಿದ್ದೀರಿ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: