ಕಿರು ಕಾದಂಬರಿ: ಭಾವ ಸಂಬಂಧ- ಎಳೆ 1
ಸಂಘಜೀವಿಯಾದ ಮಾನವನ ಬದುಕಿನಲ್ಲಿ ಸಂಬಂಧಗಳು ಬೆಸೆಯುವ ಅಥವಾ ಬೆಸೆಯಲಾಗದಿರುವ, ತರ್ಕಕ್ಕೆ ನಿಲುಕದ ಸಂಬಂಧಗಳ ಭಾವಜಾಲಗಳಿರುತ್ತವೆ. ಇದಕ್ಕೆ ಅಕ್ಷರರೂಪ ಕೊಟ್ಟು ‘ಭಾವಸಂಬಂಧ’ ಎಂಬ ಕಾದಂಬರಿಯಾಗಿಸಿದ್ದಾರೆ ಶ್ರೀಮತಿ ಪದ್ಮಾ ಆನಂದ್ ಅವರು.
ಮೂಲತ: ಮೈಸೂರಿನವರಾದ ಪದ್ಮಾ ಆನಂದ್ ಅವರು ಸಾಹಿತ್ಯಾಸಕ್ತರ ಒಡನಾಟದಲ್ಲಿಯೇ ಬೆಳೆದರು. ಜೀವನದ ಪಯಣದಲ್ಲಿ ಭಾರತದ ಹಲವಾರು ಊರುಗಳನ್ನು ಸುತ್ತಿ ಬಂದರು, ವಿವಿಧ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರ ಜೊತೆಗೆ ಹವ್ಯಾಸಿ ಬರಹಗಾರ್ತಿಯಾದರು. ನಾಡಿನ ಹಲವಾರು ಪತ್ರಿಕೆಗಳಲ್ಲಿ ಇವರ ಬರಹಗಳು ಬೆಳಕು ಕಂಡಿವೆ ಹಾಗೂ ಆಕಾಶವಾಣಿಯಲ್ಲಿ ಇವರ ಸಣ್ಣ ಕಥೆಗಳು ಪ್ರಸಾರವಾಗಿವೆ. ಇವರು ತಮ್ಮ ಪತಿಯೊಡನೆ ಸೇರಿ ನಡೆಸುತ್ತಿರುವ ‘ಮೈಸೂರು ಸಾಹಿತ್ಯ ದಾಸೋಹ’ ಸಂಸ್ಥೆಗೆ, ಪ್ರತಿಷ್ಠಿತ, ಸವಿಗನ್ನಡ ಸಾಂಸ್ಕೃತಿಕ ಪ್ರಶಸ್ತಿಯು ಲಭಿಸಿದೆ. ಇವರು ಬರೆದ ಕೈಲಾಶ ಮಾನಸ ಸರೋವರ ಯಾತ್ರೆಯ ಪ್ರವಾಸ ಕಥನ, “ಹಿಮಗಿರಿಯ ಹಂದರದಲ್ಲಿ” , ಸವಿಗನ್ನಡ ಪತ್ರಿಕೆಯಲ್ಲಿ ಅಂಕಣ ಬರಹವಾಗಿ ಪ್ರಕಟಗೊಂಡಿದೆ. ಕಳೆದ ಐದು ವರುಷಗಳಿಂದ ಮೈಸೂರಿನ ಶಿಕ್ಷಣ ಸಂಸ್ಥೆಯಲ್ಲಿ ಗೌರವ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ, “ನೆನಪಿನಂಗಳ” ಎಂಬ ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ.
ಈ ವಾರದಿಂದ ಸುರಹೊನ್ನೆಯಲ್ಲಿ ಶ್ರೀಮತಿ ಪದ್ಮಾ ಆನಂದ್ ಅವರ ‘ ಭಾವ ಸಂಬಂಧ’ ಕಾದಂಬರಿಯು ಪ್ರಕಟವಾಗಲಿದೆ.. ..ಇನ್ನು ಮುಂದಕ್ಕೆ ಓದಿ…..ಹೇಮಮಾಲಾ.ಬಿ
ಭಾವ ಸಂಬಂಧ
ಸರಸ್ವತಿ ಆಸ್ಪತ್ರೆಯಿಂದ ತನ್ನ ಡ್ಯೂಟಿ ಮುಗಿಸಿಕೊಂಡು ಮಧ್ಯಾನ್ಹ ಎರಡು ಗಂಟೆಗೆ ಮನೆಗೆ ಬಂದು ಸ್ನಾನ ಮಾಡಿ ದೇವರ ಮುಂದೆ ಒಂದು ಘಳಿಗೆ ನಿಂತು ಕೈ ಮುಗಿದು ಮನಸ್ಸನ್ನು ಪ್ರಶಾಂತಗೊಳಿಸಿಕೊಂಡು, ತನ್ನೆಲ್ಲಾ ರೋಗಿಗಳನ್ನು ಒಮ್ಮೆ ನೆನೆದು – ಓ, ದೇವಾದಿ ದೇವಾ, ಅವರೆಲ್ಲರೂ ಆರೋಗ್ಯವಂತರಾಗಿ ಅವರವರ ಕುಟುಂಬಗಳನ್ನು ಮತ್ತೆ ಸೇರುವಂತೆ ಮಾಡಪ್ಪಾ ತಂದೆ – ಎಂದು ಮನಸ್ಸಿನಲ್ಲಿ ಪ್ರಾರ್ಥಿಸಿ ಅಡುಗೆ ಮನೆಗೆ ಹೋಗಿ ಸೀತಕ್ಕ ಮಾಡಿಟ್ಟಿದ್ದ ಅನ್ನ, ಗೋರೀಕಾಯಿ ಹುಳಿಯನ್ನು ಒಂದು ತಟ್ಟೆಗೆ ಹಾಕಿಕೊಂಡು ಬಂದು ಕುಳಿತು ನಾಲ್ಕು ತುತ್ತು ತಿನ್ನುವಷ್ಟರಲ್ಲೇ ಆಯಾಸದಿಂದ ಕಣ್ಣು ಎಳೆದುಕೊಂಡ ಹೋದಂತಾಗಿ ತಟ್ಟೆಯಲ್ಲಿದಷ್ಟನ್ನು ಕಷ್ಟ ಪಟ್ಟು ತಿಂದು ಮುಗಿಸಿ, ಮೊಸರನ್ನ ಬಡಿಸಿಕೊಂಡು ತಿನ್ನಲೂ ತ್ರಾಣವಿಲ್ಲದಂತಾಗಿ ಮಂಚದ ಮೋಲೆ ಉರುಳಿಕೊಳ್ಳಲು ಹೋದಾಗ , ಸೀತಕ್ಕ ಹೇಳಿದ್ದ ಮಾತುಗಳು ನೆನಪಾದವು – ಮೊಸರನ್ನ ತಿನ್ನಬೇಕು ಸರಸೂ, ಇಲ್ಲದಿದ್ದರೆ ಹೊಟ್ಟೆ ಉರಿಯುವಂತಾಗುತ್ತದೆ, ಅಕಸ್ಮಾತ್ ಆಗದೇ ಇದ್ದರೆ ಕೊನೆಯ ಪಕ್ಷ ಒಂದು ಲೋಟ ಮಜ್ಜಿಗೆಯನ್ನಾದರೂ ಕುಡಿದು ಮಲಗು. ನಾನು ಉಪ್ಪು, ಕರಿಬೇವು, ಕೊತ್ತಂಬರಿ, ಹಸೀಶುಂಠಿಗಳನ್ನು ಹಾಕಿ ಕಡೆದು ಫ್ರಿಡ್ಜಿನಲ್ಲಿಟ್ಟಿರುತ್ತೇನೆ, ಕುಡಿಯದೇ ಹಾಗೇ ಮಲಗಬೇಡ, – ಎಂಬ ಮಾತುಗಳು ನೆನಪಾಗಿ ಫ್ರಿಡ್ಜಿನಿಂದ ಒಂದು ದೊಡ್ಡ ಲೋಟ ಮಜ್ಜಿಗೆ ಬಗ್ಗಿಸಿಕೊಂಡು ಸೀದಾ ತನ್ನ ಕೋಣೆಗೆ ಹೋಗಿ ಫ್ಯಾನ್ ಹಾಕಿಕೊಂಡು ಒಂದೆರಡು ಗುಟುಕು ನಿಧಾನಕ್ಕೆ ಮಜ್ಜಿಗೆ ಕುಡಿದಾಗ ಜೀವಕ್ಕೆ ಹಾಯೆನಿಸಿ, ಸೀತಕ್ಕನಿಗೆ ಮನದಲ್ಲೇ ಥ್ಯಾಂಕ್ಸ್ ಹೇಳುತ್ತಾ, ಪೂರ್ತಿ ಕುಡಿದು, ಹಾಗೇ ಉರುಳಿಕೊಂಡಾಗ, ಬೆಳಗ್ಗಿನಿಂದ ಮನಃಪೂರ್ವಕವಾಗಿ ರೋಗಿಗಳ ಸೇವೆಯನ್ನು ಮಾಡಿದ ಆತ್ಮತೃಪ್ರಿಯಿಂದಲೂ, ಆಯಾಸದಿಂದಲೂ ಒಳ್ಳೆಯ ನಿದ್ರೆ ದೇಹವನ್ನಾಕ್ರಮಿಸಿತು.
ಸಂಜೆ ಐದು ಗಂಟೆಗೆ ಪಕ್ಕದಲ್ಲಿದ್ದ ಫೋನ್ ರಿಂಗಣಿಸಿದಾಗಲೇ ಎಚ್ಚರವಾದದ್ದು. ನೋಡಿದರೆ ಸೀತಕ್ಕ ಮಾಡಿದ್ದರು – ನನ್ನ ಡ್ಯೂಟಿ ಆಯಿತು ಸರಸು, ಇನ್ನೊಂದರ್ಧ ಗಂಟೆಯಲ್ಲಿ ಹೊರಟು ಬರುತ್ತೇನೆ, ನಿನಗೆ ಸುಸ್ತಾಗಿದ್ದರೆ ಮಲಗಿಕೋ, ಆಯಾಸ ಪಟ್ಟುಕೊಳ್ಳಬೇಡ, ನಾನು ಮನೆಗೆ ಬಂದು ರಾತ್ರಿಯಡುಗೆ ಮಾಡುತ್ತೀನಿ – ಎನ್ನಲು, ಅವರ ಅಂತಃಕರಣಕ್ಕೆ ಮನಸ್ಸು ಆರ್ದ್ರವಾಯಿತು. – ಬನ್ನಿ ಸೀತಕ್ಕ, ಬನ್ನಿ, ನನಗೇನೂ ಆಯಾಸವಿಲ್ಲ, ಆರಾಮವಾಗಿ ಬನ್ನಿ – ಎಂದು ಹೇಳಿ ಪೋನನ್ನು ಇಟ್ಟು ಎದ್ದಾಗ ಒಳ್ಳೆಯ ನಿದ್ರೆಯಿಂದಾಗಿ ಆಯಾಸವೆಲ್ಲಾ ಪರಿಹಾರವಾದಂತೆನಿಸಿ ಮೈ ಮನಗಳು ಫ್ರಫುಲ್ಲವಾಗಿದ್ದವು. ಬಚ್ಚಲು ಮನೆಗೆ ಹೋಗಿ ಮುಖಕ್ಕೆ ತಣ್ಣಿರೆರಚಿಕೊಂಡು, ಸೀತಕ್ಕನಿಗೆಂದು ಬಾಯ್ಲರ್ ಸ್ವಿಚ್ ಹಾಕಿ ಹೊರಬಂದು , ಹೊರಬಾಗಿಲು ತೆಗೆದು ಮನೆಯ ದೀಪಗಳನ್ನು ಹಾಕಿ , ದೇವರ ಕೋಣೆಯೆಡೆಗೆ ನಡೆದಾಗ, ಬೆಳಗ್ಗೆ ಸೀತಕ್ಕ ದೇವರ ಮುಂದೆ ಹಚ್ಚಿಟ್ಟಿದ್ದ ನಂದಾದೀಪ ಇನ್ನೂ ಉರಿಯುತ್ತಿತ್ತು. ಅದಕ್ಕೆ ಇನ್ನೊಂದಿಷ್ಟು ಎಣ್ಣೆಯನ್ನು ಹಾಕಿ ಎರಡು ನಮಸ್ಕಾರಗಳನ್ನು ಮಾಡಿ ಅಡುಗೆ ಕೋಣೆಯೆಡೆಗೆ ನಡೆದಳು ಸರಸ್ವತಿ.
ಸೀತಕ್ಕ ನಾನೇ ಮಾಡುತ್ತೀನಿ, ಎಂದಿದ್ದರೂ – ಪಾಪ, ಹಿರಿಯ ಜೀವ, ಆಸ್ಪತ್ರೆಯ ಕೆಲಸಗಳಿಂದ ಆಯಾಸಗೊಂದು ಬಂದಿರುತ್ತಾರೆ. ಅವರ ಅಗತ್ಯಗಳೋ ತೀರಾ ಕಮ್ಮಿ, ಎಂದುಕೊಳ್ಳುತ್ತಾ ಫ್ರಷ್ ಆಗಿ ಕಾಫಿ ಡಿಕಾಕ್ಷನ್ ಹಾಕಿ, ಫ್ರಿಡ್ಜಿನಿಂದ ಹಾಲು ತೆಗೆದು ಕಾಯಲು ಒಲೆಯ ಮೇಲೆ ಸಣ್ಣ ಉರಿಯಲ್ಲಿಟ್ಟು ಉಪ್ಪಿಟ್ಟಿಗೆಂದು ತರಕಾರಿಗಳನ್ನು ಹೆಚ್ಚ ತೊಡಗಿದಳು.
ಯಾವ ಜನ್ಮದ ನಂಟೋ ಕಾಣೆ, ಹೊಸದಾಗಿ, ಕೇವಲ ಕಳೆದ ಮೂರು-ನಾಲ್ಕು ತಿಂಗಳುಗಳಿಂದ ಪರಿಚಯವಾದ ಸೀತಕ್ಕನೊಂದಿಗಿನ ಭಾಂದವ್ಯ ಇಷ್ಟು ಕಡಿಮೆ ದಿನಗಳಲ್ಲಿ ಗಾಢವಾಗಿ ಬೆಳೆದು, ಹುಟ್ಟಿನಿಂದಲೇ ಒಟ್ಟಿಗೆ ಇದ್ದೇವೆಯೇನೋ ಎಂಬಷ್ಟರ ಮಟ್ಟಿಗೆ ಗಟ್ಟಿಯಾಗಿ ಬಿಟ್ಟಿದೆ. ತನ್ನ ಕಳೆದ ಮೂವತೈದು ವರ್ಷಗಳಲ್ಲಿ ಇಷ್ಟು ಅಕ್ಕರೆಯಿಂದ, ಈ ರೀತಿಯ ಅಂತಃಕರಣದಿಂದ ತನ್ನನ್ನು ಯಾರೂ ಕಂಡಿದ್ದೇ ಇಲ್ಲ. ಪ್ರೀತಿ, ಮಮತೆಗಳಗೆ ಇನ್ನೊಂದು ಹೆಸರೇ ಸೀತಕ್ಕನೇನೋ ಎಂದುಕೊಳ್ಳುತ್ತಲೇ ರವೆ ಹುರಿದು, ಎಲ್ಲ ತರಕಾರಿ, ತುಂಬ ತೆಂಗಿನಕಾಯಿ, ಹಾಕಿ ಉಪ್ಪಿಟ್ಟು ಮಾಡಿ ಮುಗಿಸಿ, ಮೇಲೆ ಒಂದು ಮಿಳ್ಳೆ ಘಂ ಎನ್ನುವ ತುಪ್ಪ ಹಾಕಿ, ನಿಂಬೇಹಣ್ಣು ಹಿಂಡಿ, ಕೊತ್ತಂಬರೀ ಸೊಪ್ಪು ಉದುರಿಸಿ, ಮುಚ್ಚಿಟ್ಟು ಗ್ಯಾಸ್ ಆಫ್ ಮಾಡುವುದಕ್ಕೂ ಹೊರಬಾಗಿಲಲ್ಲಿ ಚಪ್ಪಲಿ ಬಿಟ್ಟ ಶಬ್ಧ ಕೇಳಿ ಬರುವುದಕ್ಕೂ ಸರಿಹೋಯಿತು. ಒಳ ಬಂದ ಸೀತಕ್ಕ, ಸರಸ್ವತಿಯೆಡೆಗೆ ಒಂದು ನಗೆಯನ್ನು ಬೀರಿ, ಸೀದಾ ಬಚ್ಚಲು ಮನೆಗೆ ಹೋಗಿ ಸ್ನಾನ ಮುಗಿಸಿ ಬರುವಷ್ಟರಲ್ಲಿ ಟೇಬಲ್ ಮೇಲೆ ತಟ್ಟೆ ಇಟ್ಟು, ಎಲ್ಲಾ ತಂದಿಟ್ಟು ಕಾಯುತ್ತಾ ಕುಳಿತಳು ಸರಸ್ವತಿ.
ಆಚೆ ಬಂದ ಸೀತಕ್ಕ ದೇವರಿಗೆ ವಂದಿಸಿ ಬರುವಷ್ಟರಲ್ಲಿ ತಟ್ಟೆಗೆ ಬಿಸಿಬಿಸಿಯಾಗಿ ಉಪ್ಪಿಟ್ಟು ಬಡಿಸಿ, – ಇಂದು ಕೆಲಸ ಹೇಗಾಯಿತು ಸೀತಕ್ಕ, ಬನ್ನಿ ಕುಳಿತುಕೊಳ್ಳಿ, ಆಯಾಸವಾಗಿರಬೇಕು ನಿಮಗೆ, ಉಪ್ಪಿಟ್ಟು ಮಾಡಿದ್ದೇನೆ ತಿನ್ನೋಣ – ಎನ್ನುತ್ತಾ ಉಪಚರಿಸಿದಳು ಸರಸ್ವತಿ.
ಅಯ್ಯೋ ನೀನ್ಯಾಕೆ ಮಾಡಲು ಹೋದೆ, ನಾನು ಬಂದು ಮಾಡುತ್ತಿದ್ದೆ, ಹೇಳಿದ್ದೆನಲ್ಲ, ಇರಲಿ, ನನಗಿಷ್ಟವಾದ ಉಪ್ಪಿಟ್ಟು ಮಾಡಿದ್ದೀಯ, ಹೊಟ್ಟೆ ಚುರುಗುಟ್ಟುತ್ತಿದೆ – ಎನ್ನುತ್ತಾ ಇಬ್ಬರೂ ಒಟ್ಟಿಗೆ ಕುಳಿತು ತಿನ್ನುವಾಗ ನಿಧಾನವಾಗಿ ತಂತಮ್ಮ ರೋಗಿಗಳ ವಿಷಯಗಳನ್ನು ಸಂಕ್ಷಿಪ್ತವಾಗಿ ಒಬ್ಬರಿಗೊಬ್ಬರು ಹಂಚಿಕೊಂಡರು. ನಂತರ ದೊಡ್ಡ ಲೋಟದ ತುಂಬಾ ಕಾಫಿ ಬೆರೆಸಿಕೊಂಡು ಇಬ್ಬರೂ ಹಜಾರಕ್ಕೆ ಬಂದು ಕುಳಿತು ಟಿ.ವಿ.ಹಾಕಿದಾಗ, ಮತ್ತದೇ ಕರೋನಾ ಸುದ್ದಿಗಳು. ಇಂದು ಎಷ್ಟು ಹೊಸ ರೋಗಿಗಳು, ಎಷ್ಟು ಸಾವಾಯಿತು, ಎಷ್ಟು ಜನ ಗುಣಮುಖರಾಗಿ ಹಿಂದಿರುಗಿದರು, ಯಾವ್ಯಾವ ರಾಜ್ಯಗಳಲ್ಲಿ, ದೇಶಗಳಲ್ಲಿ ಎಷ್ಟೆಷ್ಟು ಎಂಬ ಅಂಕಿ ಅಂಶಗಳೊಂದಿಗೆ, ತಮ್ಮ ಆಸ್ಪತ್ರೆಯ ವಿವರಗಳೂ ಬರತೊಡಗಿದಾಗ ಇಬ್ಬರೂ ಗಮನವಿಟ್ಟು ಕೇಳ ತೊಡಗಿದರು. ಒಂದರ್ಧ ಗಂಟೆ ಟಿ.ವಿ. ನೋಡಿದ ನಂತರ ದಣಿದ ದೇಹಗಳು ವಿಶ್ರಾಂತಿ ಬಯಸಿದವು.
ಮಲಗುವ ಮುಂಚೆ ಸೀತಕ್ಕ ಕೇಳಿದರು –
ಸರಸು, ನಾಳೆ ನಿನಗೆ ಎಷ್ಟು ಹೊತ್ತಿಗೆ ಡ್ಯೂಟಿಗೆ ಹೋಗಬೇಕು?
ನಾಳೆ ವಿಶ್ರಾಂತಿ ಸೀತಕ್ಕ, ಸಂಜೆ ಏಳು ಗಂಟೆಗೆ ಹೋಗುತ್ತೀನೆ, ರಾತ್ರಿಯ ಡ್ಯೂಟಿ.
ಓ ನನಗೂ ರಾತ್ರಿಯದೇ ಡ್ಯೂಟಿ, ಒಟ್ಟಿಗೆ ಹೋಗುವುದು ಅಲ್ವಾ?
ಹುಂ ಸೀತಕ್ಕ, ನನಗೆ ನಿಮ್ಮೊಬ್ಬರನ್ನೇ ಕಳುಹಿಸುವುದಕ್ಕೆ ಇಷ್ಟವೇ ಇಲ್ಲ, ನಮ್ಮ ಸೂಪರ್ ವೈಸರ್ ಸಹ ಆದಷ್ಟು ನಮ್ಮಿಬ್ಬರಿಗೈ ಒಟ್ಟಿಗೆಯೇ ಡ್ಯೂಟಿ ಹಾಕಿ ಕೊಡುತ್ತಾರೆ. ಕೆಲವೊಂದು ಸಲ, ವಿಧಿಯಿಲ್ಲದೆ ಇಂದಿನಂತೆ ಬೇರೆ ಬೇರೆ ಪಾಳಿ ಬೀಳುತ್ತದೆ. ನಾಳೆ ಸಂಜೆ ಒಟ್ಟಿಗೆ ಹೋಗೋಣ.
ಸರಿ ಸರಸು, ಯಾವ ಜನ್ಮದ ಮಗಳೋ ನೀನು, ಎಷ್ಟೊಂದು ನನ್ನ ಬಗ್ಗೆ ಕಾಳಜಿ, ಅಂತಃಕರಣವನ್ನು ತೋರುತ್ತೀಯ.
ಇರಲಿ, ನಮ್ಮಿಬ್ಬರದು ಮೂರ್ನಾಲ್ಕು ತಿಂಗಳ ಬಾಂಧವ್ಯವೇ ಆದರೂ ಜನ್ಮ ಜನ್ಮದ್ದೋ ಅನ್ನುವಂತೆ ಆಗಿಬಿಟ್ಟಿದೆ.
ನೀನಂತೂ ನನ್ನನ್ನು ಹಳೆಯ ಒಂದೂ ವಿಚಾರಗಳನ್ನೂ ಕೇಳದೆ, ನನ್ನ ಮನಸ್ಸಿಗಾದ ಮಾಯದ ಗಾಯವನ್ನು ಕೊನೆಯ ಪಕ್ಷ ಸಹಿಸುವಂತಹ ಮುಲಾಮು ಹಚ್ಚಿದೆ ಸರಸು. ಅದಕ್ಕೆ ನನ್ನ ಹಿಂದಿನ ಎಲ್ಲಾ ವಿಷಯಗಳನ್ನೂ ನಿನಗೆ ಹೇಳಿಕೊಳ್ಳ ಬೇಕು ಎನ್ನಿಸುತ್ತಿದೆ. ನಾಳೆ ಬೆಳಗ್ಗೆಯೇ ತಿಂಡಿ, ಅಡುಗೆ ಎಲ್ಲವನ್ನೂ ಮಾಡಿಟ್ಟು ಬಿಡೋಣ. ನಂತರ ನಿನ್ನ ಮುಂದೆ ನನ್ನ ಕಂತೆ ಪುರಾಣ ಬಿಚ್ಚಿಡುತ್ತೀನಿ – ಎಂದರು ಸೀತಕ್ಕ.
(ಮುಂದುವರಿಯುವುದು)
-ಪದ್ಮಾ ಆನಂದ್, ಮೈಸೂರು
ಅಭಿನಂದನೆಗಳು ಮೇಡಂ.
ಮೀನಾಕ್ಷಿಯವರೆ ಧನ್ಯವಾದಗಳು.
ಆರಂಭದಲ್ಲೇ ಕಥೆ ಯ ತುಂಬಾ ನವಿರಾದ ಸಂಬಂಧ, ಸ್ನೇಹ ಸಂಬಂಧದ ಸೊಗಡು ತುಂಬಿದೆ. ಮಧುರ ಬಾಂಧವ್ಯದ ಅಲೆ ಆವರಿಸಿದ ಕಥೆ ಆರಂಭವಾದ ರೀತಿಯೇ ಸೊಗಸಾದೆ.
ನಿಮ್ಮ ಸಕಾರಾತ್ಮಕ ಪ್ರತಿಕ್ರಿಯೆಗೆ ಧನ್ಯವಾದಗಳು.
ತುಂಬಾ ಸೊಗಸಾದ ಆರಂಭ
ಧನ್ಯವಾದಗಳು ತಮಗೆ.
ಕಥೆಯ ಆರಂಭವೇ ಸ್ನೇಹ ಸಂಗಮದ ಸುಳುಹು ಕೊಟ್ಟು ಮುಂದೆ ಕುತೂಹಲ ಮೂಡಿಸಿದೆ.ಅಭಿನಂದನೆಗಳು ಗೆಳತಿ
ಧನ್ಯವಾದಗಳು ತಮ್ಮ ಪ್ರತಿಕ್ರಿಯೆಗೆ
ನವಿರಾದ ಕಥಾವಸ್ತು.. ಶುಭಾರಂಭ
ಧನ್ಯವಾದಗಳು ತಮಗೆ.
Looks very interesting
Thank you very much
ಶುಭಾರಂಭ ಸೊಗಸಾಗಿದೆ.
ಮೆಚ್ಚುಗೆಗೆ ಹಾಗೂ ಪ್ರಕಟಿಸಲು ಪರಿಗಣಿಸಿದ್ದಕ್ಕಾಗಿ ಧನ್ಯವಾದಗಳು
ಆರಂಭ ಚೆನ್ನಾಗಿದೆ. ಕೂತೂಹಲ ಮೂಡಿಸುತ್ತಿದೆ.
ಧನ್ಯವಾದಗಳು ತಮಗೆ
ಭಾವ ಸಂಬಂಧ,,, ಹೆಸರೇ ಇಷ್ಟು ಸೊಗಸಾಗಿದೆ ಇನ್ನೂ ಕಾದಂಬರಿ ಹೇಗೊರಬಹುದು,,,ಎನ್ನುವ ಕುತೂಹಲ,,
ಧನ್ಯವಾದಗಳು. ನಿಮ್ಮ ಕುತೂಹಲ ತಣಿಸುವ ಹಂಬಲ ನನ್ನದು.
ಕಥೆಯ ಆರಂಭ ಚೆನ್ನಾಗಿದೆ ಮೇಡಂ
ಧನ್ಯವಾದಗಳು ಸರ್.
ಕಥೆಯ ಪ್ರಾರಂಭವೇ ಕುತೂಹಲಕಾರಿಯಾಗಿದೆ.. ಮುಂದಿನ ಕಂತಿಗೆ ಕಾಯುವೆವು..ದನ್ಯವಾದಗಳು ಮೇಡಂ
ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು
It’s very nice please continue
Thank you very much. Definitely it will continue.
ಕಥೆ ಉತ್ತಮವಾಗಿದೆ….
ನಿಮ್ಮ ಸ್ಪಂದನೆಗೆ ಧನ್ಯವಾದಗಳು
Padma congratulations. Kathe chenagide shuru tumba sogasaagide. All the best