ಹೊಸಭಾವ
ಹಚ್ಚಿಟ್ಟ ಹಣತೆಯಿಂದ
ಬೆಳಗಿದ ಬೆಳಕಿನ ಕಿರಣಕೆ
ಅಂಧಕಾರವು ಮರೆಯಾಗಿ
ಅಲೆಅಲೆಯಾಗಿ ಬಿಡುತ್ತಿತ್ತು
ಚೈತ್ರ ಮಾಸದ ಸುವಾಸನೆ
ನೀರಿನ ಒಳ ಗರ್ಭದಿಂದ
ಮೇಲೇರಿತು ಸುಂದರವಾದ
ಅರಳಿದ ತಾವರೆ ಹೂ
ಪೊರೆ ಪೊರೆಯಾಗಿದ್ದ ನೀಲಾಗಸದಲ್ಲಿ
ರಂಗು ರಂಗಿನ ಹೊಂಬಣ್ಣದ
ಸೂರ್ಯನ ನವ ಕಿರಣಗಳು
ನನ್ನ ಮೈ ಸೋಕಿತು
ಮೆಲ್ಲನೆ ಮುತ್ತಿನಂತೆ
ಮಂಪರು ನಿದ್ದೆಯಲ್ಲಿರುವಾಗಲೇ
ನೆನಪಾಯಿತು ಇಂದು ಯುಗಾದಿ ..!!
ಎಲ್ಲೆಲ್ಲೂ ಚೈತ್ರದ ಹಸಿರು
ಏನು ಸೊಬಗು!
ಮೊಗ್ಗು ಹೂವಾಗಿ
ಹೂ ಹಣ್ಣಾಗುವ
ಸೋಜಿಗದ ಕಲೆ
ಅರಳಿದ ಮನವೊಂದು
ಹಾಡಿತು ಹೊಸರಾಗ
ಚೈತ್ರದಿಂದ ಪುಳಕಗೊಂಡು
ಹೊಳೆಯಿತು ಬಾಳಿಗೆ
ಹೊಸ ಭಾವ.
–ಪ್ರಭಾಕರ ತಾಮ್ರಗೌರಿ ಗೋಕರ್ಣ
ಚೈತ್ರದ ತೋರಣ ಪ್ರಕೃತಿಯ ಹೂರಣದೊಂದಿಗೆ ಬರುವ ಯುಗಾದಿಯ ಆಗಮನದ ಕವನ ಮನಕೆ ಮುದ ನೀಡಿತು.ಅಭಿನಂದನೆಗಳು ಮೇಡಂ.
ಧನ್ಯವಾದಗಳು ಮೇಡಂ . ಯುಗಾದಿ ಹಬ್ಬ ಮಂಗಳವಾರ ಅದಕ್ಕೇ ಮೊದಲೇ ಬರೆದಿದ್ದು . ನಂತರ ಅಂದರೆ ಹಬ್ಬ ಮುಗಿದು ಹೋಗಿರುತ್ತೆ.
ಯುಗಾದಿಯ ಸಂಭ್ರಮ ತುಂಬಿದ ಕವನ ಓದಿ ಆಹ್ಲಾದ ತುಂಬಿತು ಮನದಲ್ಲಿ
ಥ್ಯಾಂಕ್ಸ್ ಮೇಡಂ. ಯುಗಾದಿ ಹಬ್ಬಕ್ಕೋಸ್ಕರನೇ ಬರೆದ ಕವನ .
ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂಬ ಗೀತೆ ನೆನಪಿಗೆ ಬಂತು ಧನ್ಯವಾದಗಳು
ಥ್ಯಾಂಕ್ಯೂ ಮೇಡಂ. ಯುಗಾದಿ ಹಬ್ಬಕ್ಕಾಗಿ ಬರೆದ ಕವನ.
ಹೊಸ ಯುಗಾದಿಗೆ “ಹೊಸ ಭಾವ” ಕವನ ತೋರಣದ ಸ್ವಾಗತ.. ಬಹಳ ಸೊಗಸಾಗಿದೆ ಮೇಡಂ.
ಥ್ಯಾಂಕ್ಯೂ ಶಂಕರಿ ಮೇಡಂ