ಅಕ್ಕಾ ಕೇಳವ್ವಾ…ಚರಣ 3-ಆರು ಹಿತವರು?
ಬದುಕಿನಲ್ಲಿ ಬೇವು ಬೆಲ್ಲವನ್ನು ಸವಿದು, ಏಳು ಬೀಳುಗಳನ್ನು ಕಂಡಿದ್ದೆ. ಹಾಲಾಹಲವನ್ನೇ ಕಂಠದಲ್ಲಿ ಧರಿಸಿದ ನೀಲಕಂಠನ ನೆನೆದು ಹೆಜ್ಜೆಯಿಡುತ್ತಿದ್ದೆ. ನನಗಾಗಿ ಶಿಕ್ಷಕ ವೃತ್ತಿ ಆಯ್ಕೆ ಮಾಡಿದ್ದ ಅಪ್ಪಾಜಿಗೆ ನಮೊ ನಮೋ. ತರಗತಿಗಳಲ್ಲಿ ಪಠ್ಯದ ಜೊತೆಜೊತೆಗೇ ಬದುಕಿನ ಅರ್ಥ, ಮಾನವೀಯ ಮೌಲ್ಯಗಳು, ವಿದ್ಯೆಯಿಂದ ಅಳವಡಿಸಿಕೊಳ್ಳಬೇಕಾದ ಸಂಸ್ಕಾರ-ಎಲ್ಲವನ್ನೂ ಹದಿಹರೆಯದ ವಿಧ್ಯಾರ್ಥಿಗಳಿಗೆ ಹೇಳುವ ಅವಕಾಶ, ಸಾಹಿತ್ಯ ಬೋಧಿಸುವ ನನಗೆ ಲಭ್ಯ. ಕಾಲೇಜಿಗೆ ‘ನ್ಯಾಕ್'(N A A C) ಹೆಜ್ಜೆಯಿಟ್ಟಾಗ ನನಗೆ ದೊರೆತಿದ್ದು ‘ಕೌನ್ಸೆಲಿಂಗ್ ವಿಭಾಗ’. ಪಾಠದ ಜೊತೆ ಇದೊಂದು ಉಪದ್ರ ಎಂಬ ಗೊಣಗಾಟ ಕೆಲವರದು. ಆದರೆ ನನಗಂತೋ ಖುಷಿಯೋ ಖುಷಿ. ತರಗತಿಗಳಲ್ಲಿ ಹೇಳುತ್ತಿದ್ದುದನ್ನೇ ಇನ್ನೂ ವಿಸ್ತರಿಸಿ ಹೇಳತೊಡಗಿದೆ. ಉದಾಹರಣೆಗೆ- ನಮ್ಮ ಕುಟುಂಬಗಳಲ್ಲಿ ಮಗು ಪುಟ್ಟ ಪುಟ್ಟ ಹೆಜ್ಜೆಯಿಡಲು ಕಲಿತಾಗ ಅಜ್ಜ, ಅಜ್ಜಿ ದೂರ ದೂರ ಕುಳಿತು ಮಗುವಿನ ಕೈಲಿ ಬಿಸ್ಕತ್ತು ಕೊಟ್ಟು, ಅಜ್ಜಿಗೆ ಕೊಡು ಮರಿ ಎನ್ನುವ ಅಜ್ಜ – ಮಗು ಅಜ್ಜಿಗೆ ಬಿಸ್ಕತ್ತು ಕೊಟ್ಟಾಗ ಅಜ್ಜನ ಚಪ್ಪಾಳೆ. ಇನ್ನು ಅಜ್ಜನಿಗೆ ಬಿಸ್ಕತ್ತು ಕೊಡು ಎನ್ನುತ್ತಾ ಮಗುವಿನ ಕೆನ್ನೆಗೆ ಮುತ್ತಿಡುವ ಅಜ್ಜಿ. ಹೀಗೆ ಅಜ್ಜ ಅಜ್ಜಿಯರ ಕೊಂಡಾಟದಲ್ಲಿ ಮಗು ಕಲಿಯುವುದು ಒಂದು ಮಹತ್ತರವಾದ ಮಾನವೀಯ ಮೌಲ್ಯ. – ತನ್ನಲ್ಲಿರುವುದನ್ನು ಪರರೊಂದಿಗೆ ಹಂಚಿಕೊಳ್ಳುವ ಕ್ರಿಯೆ.
ಮಗು ಐದು ವರ್ಷದವಳಾದಾಗ – ‘ಅಕ್ಷರಾಭ್ಯಾಸದ ಆರಂಭ ಶೃಂಗೇರಿಯ ಶಾರದೆಯ ಸನ್ನಿಧಿಯಲ್ಲಿ. ವಿದ್ಯೆ ಬರೀ ಜ್ನಾನ ಸಂಪಾದಿಸುವುದಕ್ಕಲ್ಲ, ಧರ್ಮ, ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಲಲು ಎಂಬುದರ ಸಂಕೇತ. ಶಂಕರರ ‘ಅಹಂ ಬ್ರಹ್ಮಾಸ್ಮಿ’ ಎಂಬ ತತ್ವದ ಸಾರ – ನಾನು ಎಂದರೆ ಇಡೀ ಬ್ರಹ್ಮಾಂಡ. ನನ್ನ ಬದುಕಿನ ಯಶಸ್ಸು ಇಡೀ ಮಾನವ ಕುಲದ ಯಶಸ್ಸಿನ ಅಡಿಪಾಯದ ಮೇಲೆ ನಿಂತಿದೆ.
ಇನ್ನು ‘ಕೌನ್ಸೆಲಿಂಗ್’ ಮಾಡಲು ಹೊರಗಿನವರು ಏಕೆ ಬೇಕು – ಕುಟುಂಬದಲ್ಲೇ ಇದ್ದಾರಲ್ಲ ಅತ್ತೆ, ಅಜ್ಜಿ, ಚಿಕ್ಕಮ್ಮ –ಹೀಗೆ ಬೆಲ್ಲಾಗುವವರೆಗೆ ಸಾಗುತ್ತಿತ್ತು ನನ್ನ ಮಾತುಗಳು. ನನ್ನ ಮಾತು ಆಲಿಸುತ್ತಾ ಆತ್ಮೀಯರಾದ ವಿಧ್ಯಾರ್ಥಿಗಳ ಜೊತೆ ನಡೆದ ಕೆಲವು ಘಟನೆಗಳನ್ನು ನಿಮ್ಮೊದಿಗೆ ಹಂಚಿಕೊಳ್ಳಲೇ?
ಒಂದು ದಿನ ಮಧ್ಯಾನ್ಹ, ಒಂದು ಪುಟ್ಟ ಮಗುವನ್ನು ಎತ್ತಿಕೊಂಡ ಇಪ್ಪತ್ತೈದರ ಹರೆಯದ ಹೆಣ್ಣುಮಗಳೊಬ್ಬಳು ನನ್ನ ಹುಡುಕಿಕೊಂಡು ಬಂದಳು. ತುಂಬಾ ಆತಂಕ, ಗೊಂದಲದಲ್ಲಿದ್ದಳು. ಏನೋ ವೈಯುಕ್ತಿಕವಾಗಿ ಮಾತನಾಡಬೇಕೆಂದು ಹೇಳಿದಳು. ಹೇಗೂ ಕೌನ್ಸೆಲಿಂಗ್‌ಗೆಂದೇ ಒಂದು ಕೊಠಡಿ ಇತ್ತು. ಅಲ್ಲಿಗೇ ಕರೆದೊಯ್ದು ಕಾಫಿ ತರಿಸಿಕೊಟ್ಟೆ. ಮಗು ಅವಳ ತೊಡೆಯ ಮೇಲೆ ಮಲಗಿತ್ತು. ಇದ್ದಕ್ಕಿದ್ದಂತೆ ಅವಳು ಅಳಲು ಶುರುಮಾಡಿದಳು. ಅತ್ತು ಹಗುರಾಗಲಿ, ನಂತರ ಮಾತಾಡಿಸೋಣ ಎಂದು ಮೌನವಾಗಿ ಅವಳನ್ನೇ ದಿಟ್ಟಿಸಿದೆ. ಲಕ್ಷಣವಾದ ಹುಡುಗಿ. ಅತ್ತು ಅತ್ತು ಕಣ್ಣು ಕೆಂಪಾಗತ್ತು. ಕೂದಲು ಕೆದರಿತ್ತು. ಉಡುಪು ಅಸ್ತವ್ಯಸ್ತವಾಗಿತ್ತು. ಐದು ನಿಮಿಷದ ನಂತರ ಕಣ್ಣೊರೆಸಿಕೊಂಡು ತನ್ನ ಕಥೆ ಹೇಳತೊಡಗಿದಳು. ಅವಳು ನಮ್ಮ ಕಾಲೇಜಿನ ವಿಧ್ಯಾರ್ಥಿನಿಯೇ. ಈಗ ಸರ್ಕಾರಿ ಕಛೇರಿಯೊಂದರಲ್ಲಿ ಕೆಲಸ, ಗಂಡನೂ ಅದೇ ಕಛೇರಿಯಲ್ಲೇ ಕೆಲಸ ಮಾಡುತ್ತಿದ್ದ. ಇಬ್ಬರದೂ ಪ್ರೇಮ ವಿವಾಹ. ಜಾತಿ ಒಂದೇ ಆದ್ದರಿಂದ ಇಬ್ಬರ ಮನೆಯವರೂ ಒಪ್ಪಿ ಮದುವೆ ಮಾಡಿದ್ದರು. ಮದುವೆಯಾಗಿ ವರ್ಷದಲ್ಲೇ ಮಗು ಆಯಿತು. ಸುಖೀ ಸಂಸಾರ. ಆದರೆ ವಿಧಿ ಸುಖವಾಗಿರಲು ಬಿಡಬೇಕಲ್ಲ. ಅವರ ಮನೆಯ ಬಳಿಯೇ ಇದ್ದ ಪಿ.ಜಿ. ಒಂದರಲ್ಲಿ ಇದ್ದು ಕಾಲೇಜಿನಲ್ಲಿ ಬಿ.ಎಸ್.ಸಿ. ಓದುತ್ತಿದ್ದ ಒಬ್ಬ ಹುಡುಗಿ ಪರಿಚಯವಾದಳು. ಅವಳಿಗೆ ಮಗೂನ ಕಂಡರೆ ತುಂಬಾ ಪ್ರೀತಿ. ಸಂಜೆ ಹೊತ್ತು ಬಂದು ಆಟವಾಡಿಸುತ್ತಿದ್ದಳು. -ಚೆಂದದ ಹುಡುಗಿ. ಕೆಲವು ಬಾರಿ ಊಟ ಮಾಡಿಸಿಯೇ ಕಳುಹಿಸುತ್ತಿದ್ದೆ. ಅವಳೂ ಊರಿನಿಂದ ತಂದ ತಿಂಡಿಯನ್ನು ತಂದು ಕೊಡುತ್ತಿದ್ದಳು. ಹಬ್ಬ ಹರಿದಿನಗಳಲ್ಲಿ ನನಗೆ ಆಸರೆಯಾಗುತ್ತಿದ್ದಳು. ಪುಟ್ಟನ ಹುಟ್ಟು ಹಬ್ಬದಲ್ಲಂತೂ ಅವಳದೇ ಓಡಾಟ. ನನಗೆ ಅಕ್ಕಾ ಎಂದೇ ಕರೆಯುತ್ತಿದ್ದಳು. ನಾನೂ ಅವಳನ್ನು ತಂಗಿಯ ಹಾಗೆ ವಿಶ್ವಾಸದಿಂದಲೇ ನೋಡುತ್ತಿದ್ದೆ. ಒಂದು ದಿನ ಮಧ್ಯಾನ್ಹ ತುಂಬಾ ತಲೆ ನೋಯುತ್ತಿತ್ತು. ಆಫೀಸಿಗೆ ಆರ್ಧ ದಿನ ರಜೆ ಹಾಕಿ ನೇರ ಮನೆಗೆ ಬಂದೆ. ಮನೆಯ ಬೀಗ ತೆಗೆದಿತ್ತು. ಮನೆಯವರು ಮೀಟಿಂಗ್ ಇದೆ ಎಂದು ಬೆಳಿಗ್ಗೆಯೇ ಆಫೀಸಿನಿಂದ ಹೊರ ಹೋಗಿದ್ದವರು ಮನೆಯಲ್ಲಿ ಆ ಹುಡುಗಿಯ ಜೊತೆ ಮಾತಾಡುತ್ತಾ ಕುಳಿತಿದ್ದರು. ನನ್ನ ನೋಡಿದಾಕ್ಷಣ ಆ ಹುಡುಗಿ ಗಾಬರಿಯಿಂದ ಎದ್ದು ಹೊರಟುಬಿಟ್ಟಳು. ನನ್ನ ಗಂಡ ಮೀಟಿಂಗ್ ಕ್ಯಾನ್ಸಲ್ ಆಯಿತು, ಆದ್ದರಿಂದ ಬೇಗ ಮನೆಗೆ ಬಂದೆ ಎಂದರು. ನಾನು ಮುಂದೇನೂ ಕೇಳಲಿಲ್ಲ.
ಅಂದಿನಿಂದ ನಾನು ಅವರಿಬ್ಬರನ್ನೂ ಸೂಕ್ಷ್ಮವಾಗಿ ಗಮನಿಸತೊಡಗಿದೆ. ನಮ್ಮಿಬ್ಬರ ಮಧ್ಯೆ ಸಣ್ಣ ಸಣ್ಣ ಕಾರಣಕ್ಕೂ ಮನಸ್ತಾಪ, ಜಗಳ ಶುರುವಾಯಿತು. ಆ ಹುಡುಗಿ ಮನೆಗೆ ಬರುವುದನ್ನೇ ನಿಲ್ಲಿಸಿ ಬಿಟ್ಟಳು. ಆದರೂ ನನ್ನ ಅನುಮಾನ ಕಡಿಮೆಯಾಗಲೇ ಇಲ್ಲ. ಪ್ರೀತಿಸಿ ಮದುವೆಯಾದ ಆಸಾಮಿ ನನ್ನನ್ನು ಅಲಕ್ಷಿಸತೊಡಗಿದ್ದ. ಆಫೀಸಿನಿಂದ ಕೆಮ್ಮಣ್ಣುಗುಂಡಿಗೆ ಪಿಕ್‌ನಿಕ್ ಇಟ್ಟಾಗ ಮಗೂಗೆ ತುಂಬಾ ಜ್ವರ ಇದ್ದುದರಿಂದ ನಾನು ಹೋಗಲಿಲ್ಲ. ಮಾರನೆಯ ದಿನ ನನ್ನ ಸಹೋದ್ಯೋಗಿಯೊಬ್ಬಳು -‘ಯಾಕೇ ನೀನು ಬರಲಿಲ್ಲ. ನಿನ್ನ ಯಜಮಾನರ ಜೊತೆ ನಿನ್ನ ಕಸಿನ್ ಬಂದಿದ್ದಳು. ಸ್ವಲ್ಪ ಹುಷಾರು. ಈ ಗಂಡಸರನ್ನು ನಂಬಲಿಕ್ಕೆ ಆಗಲ್ಲ’- ಎಂದು ಉಸುರಿದಳು.
ಆ ದಿನ ನಾನು ನೇರವಾಗಿ ಗಂಡನನ್ನು ಕೇಳಿಯೇ ಬಿಟ್ಟೆ -‘ಏನು ನಡೆಸಿದ್ದೀರಿ ಆ ಹುಡುಗಿಯ ಜೊತೆ? ನನ್ನ ಜೊತೆ ಕಣ್ಣು ಮುಚ್ಚಾಲೆ ಆಟ ಆಡಬೇಡಿ.’ ನನ್ನ ಗಂಡ ತುಂಬಾ ಜಾಣ. -‘ನಿನ್ನನ್ನು ಎಂದೂ ಬಿಡಲು ಸಾಧ್ಯವಿಲ್ಲ. ಪುಟ್ಟನಿಂದ ದೂರವಾಗುವುದು ನಾನು ಸತ್ತ ಮೇಲೆಯೇ. ಆ ಹುಡುಗಿ ತುಂಬಾ ಒಳ್ಳೆಯ ಹುಡುಗಿ. ನನ್ನನ್ನು ತುಂಬಾ ಪ್ರೀತಿಸುತ್ತಾಳೆ. ಆಕೆ ಮದುವೆಯಾದ್ರೆ ನಿಮ್ಮನ್ನೇ, ಇಲ್ಲವಾದರೆ ಸತ್ತೇ ಹೋಗ್ತೀನಿ ಎನ್ನುತ್ತಾಳೆ. ನಿನ್ನನ್ನು ಅಕ್ಕಾ ಎಂದೇ ಕರೆಯುತ್ತಾಳೆ. ನೀನು ದೊಡ್ಡ ಮನಸ್ಸು ಮಾಡಿ ಅವಳನ್ನು ಮನೆ ತುಂಬಿಸಿಕೋ. ಎಲ್ಲರೂ ಸಂತೋಷ, ನೆಮ್ಮದಿಯಿಂದ ಬಾಳೋಣ’- ಎಂದು ನನ್ನ ಕಣ್ಣೀರು ಹಾಕಿದರು. ನನಗೆ ಭೂಮಿ ಕುಸಿದಂತಾಯಿತು. ಮನೆಯಲ್ಲಿ ಹೇಳೋಣ ಎಂದರೆ ‘ಪ್ರೀತಿಸಿ ಮದುವೆಯಾದೆ. ಅನುಭವಿಸು ಎನ್ನುತ್ತಾರೆ.’ ಒಮ್ಮೊಮ್ಮೆ ಗಂಡನಿಗೆ ಬೇಡವಾಗಿ ಏಕೆ ಬದುಕಬೇಕು? ಎನ್ನಿಸುತ್ತೆ. ಆದರೆ ಮಗುವನ್ನು ಬಿಟ್ಟು ಹೋಗಲು ಮನಸ್ಸು ಬರಲ್ಲ. ನೀವು ತರಗತಿಗಳಲ್ಲಿ ಹೇಳುತ್ತಿದ್ದ ಮಾತುಗಳನ್ನು ನೆನಪಿಟ್ಟಿದ್ದೆ. ಹಳಿ ತಪ್ಪಿದ ನನ್ನ ಬದುಕನ್ನು ನೀವೇ ಸರಿದಾರಿಗೆ ತರಬೇಕು. ಆ ಹುಡುಗಿ ನಿಮ್ಮ ಕಾಲೇಜಿನಲ್ಲಿಯೇ ವ್ಯಾಸಂಗ ಮಾಡುತ್ತಿದ್ದಾಳೆ. ಅವಳಿಗೆ ನೀವು ಬುದ್ಧಿ ಹೇಳಲು ಸಾಧ್ಯವೇ? ನನ್ನ ಗಂಡ ಅಂತೂ ಅವಳನ್ನು ಮದುವೆಯಾಗುವ ನಿರ್ಧಾರ ಮಾಡಿಬಿಟ್ಟಿದ್ದಾರೆ. ಎಂದು ಸುಮ್ಮನಾದಳು.
ಒಂದರೆಗಳಿಗೆ ಸುಮ್ಮನಿದ್ದೆ. ನನ್ನ ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು. ಪ್ರೀತಿ, ಪ್ರೇಮ ಅಂತೆಲ್ಲಾ ನಾಟಕವಾಡಿ ಮದುವೆಯಾದ ಹುಡುಗ ಮೂರೇ ವರ್ಷದಲ್ಲಿ ಬೇರೊಂದು ಪ್ರೀತಿಯ ನಾಟಕದಲ್ಲಿ ಭಾಗವಹಿಸಲು ಸಿದ್ದನಾಗುತ್ತಿದ್ದ. ನಾನು ಅವಳಿಗೆ ಒಂದು ಚೀಟಿ ಕೊಟ್ಟು ಆ ಹುಡುಗಿಯ ಹೆಸರು, ಮೊಬೈಲ್ ನಂಬರ್ ಬರೆಯಲು ತಿಳಿಸಿದೆ. ಚೀಟಿಯಲ್ಲಿ ವಿವರ ಬರೆದ ಹುಡುಗಿ -‘ಮೇಡಂ, ನೀವು ಆದಷ್ಟು ಬೇಗ ಆ ಹುಡುಗಿಯ ಬಳಿ ಮಾತನಾಡಿ. ಇಲ್ಲವಾದರೆ ನನಗೆ ಸಾವೇ ಗತಿ’-ಎಂದು ತನ್ನ ಎಲ್ಲಾ ಹೊರೆಯನ್ನೂ ನನ್ನ ಮೇಲೆ ಹೊರೆಸಿ ಹೊರಟುಬಿಟ್ಟಳು. ನಾನು ಅವಳ ಹೆಸರನ್ನಾಗಲೀ, ಅವಳ ಗಂಡನ ಹೆಸರನ್ನಾಗಲಿ ಕೇಳಲೇ ಇಲ್ಲ. ಕೊನೆಗೆ ಅವಳ ಆಫೀಸಿನ ವಿವರವನ್ನೂ ಕೇಳಿರಲಿಲ್ಲ. ನನ್ನ ಪುಣ್ಯ. ಆ ಚೀಟಿಯಲ್ಲಿ ಹುಡುಗಿಯ ವಿವರಗಳೊಂದಿಗೆ ತನ್ನ ಮೊಬೈಲ್ ನಂಬರ್ ಬರೆದಿದ್ದಳು.
ಆ ದಿನ ರಾತ್ರಿ ನನಗೆ ನಿದ್ರೆ ಬರಲೇ ಇಲ್ಲ. ಆ ಹುಡುಗಿಯ ಜೊತೆ ಏನು ಮಾತಾಡಲಿ? ಇವಳ ಬಾಳನ್ನು ಸರಿ ಪಡಿಸುವುದು ಹೇಗೆ? ಎಂದೆಲ್ಲಾ ಯೋಚಿಸುತ್ತಿದ್ದ ಹಾಗೆಯೇ ಬೆಳಗಾಯಿತು. ಕಾಲೇಜಿಗೆ ರಜೆ ಹಾಕಿ ಆ ಹುಡುಗಿಗೆ ಫೋನ್ ಮಾಡಿ ಬರಲು ಹೇಳಿದೆ. ಅವಳನ್ನು ಕರೆದುಕೊಂಡು ಲೇಡೀಸ್ ಹಾಸ್ಟೆಲ್ಲಿನ ಒಂದು ಕೊಠಡಿಯಲ್ಲಿ ಕೂರಿಸಿಕೊಂಡು ಮಾತನಾಡಿಸಿದೆ. ಚೆಂದದ ಹುಡುಗಿ. ಮುಗ್ಧತೆ ಇನ್ನೂ ಮಾಸಿಲ್ಲ. ತಂದೆ ತಾಯಿಗೆ ಒಬ್ಬಳೇ ಮಗಳು. ಸಾಕಷ್ಟು ಸ್ಥಿತಿವಂತರೇ. ಹುಡುಗಿ ಬುದ್ಧಿವಂತೆ. ನೋಡಿದಾಕ್ಷಣ ಗೊತ್ತಾಗುತ್ತಿತ್ತು ಅವಳು ಒಳ್ಳೆ ಮನಸ್ಸಿನವಳೆಂದು. ಅವಳ ಓದಿನ ಬಗ್ಗೆ, ಅಪ್ಪ, ಅಮ್ಮನ ಬಗ್ಗೆ ಕೇಳುತ್ತಾ ಮೆಲ್ಲಗೆ ಅವಳ ಅಂತರಂಗದೊಳಗೆ ಇಣುಕಿದೆ.
ಆ ಹುಡುಗಿ ನಿಧಾನವಾಗಿ ತನ್ನೆಲ್ಲಾ ಗೊಂದಲಗಳನ್ನು ನನ್ನ ಮುಂದೆ ಬಿಡಿಸಿಟ್ಟಳು. – ‘ಮೇಡಂ, ಅಕ್ಕ ಮತ್ತು ಸರ್‌ನ ನೋಡಿದರೆ ನನಗೆ ತುಂಬಾ ಪ್ರೀತಿ, ವಿಶ್ವಾಸ. ಸರ್‌ಗೆ ನನ್ನ ಕಂಡರೆ ತುಂಬಾ ಕಾಳಜಿ. ಚೆನ್ನಾಗಿ ಓದು ಎಂದು ಪ್ರೋತ್ಸಾಹಿಸುತ್ತಾರೆ. ನನಗೇ ಗೊತ್ತಿಲ್ಲದಂತೆ ಅವರ ಆಕರ್ಷಣೆಗೆ ಒಳಗಾದೆ. ನನ್ನ ಹುಟ್ಟು ಹಬ್ಬಕ್ಕೆಂದು ಬೆಲೆಬಾಳುವ ಮೊಬೈಲ್ ಉಡುಗೊರೆ ನೀಡಿದರು. ನಿನ್ನಂತಹ ಹೆಂಡತಿಯನ್ನು ಪಡೆಯುವವನೇ ಪುಣ್ಯವಂತ ಎನ್ನುತ್ತಿದ್ದರು. ನಿನ್ನಕ್ಕನಿಗೆ ಹೇಳಬಾರದೆ -ಸದಾ ಕೆದರಿದ ಕೂದಲು, ಸುಕ್ಕು ಸುಕ್ಕಾದ ಉಡುಪು. ಅವಳಿಗೆ ನನ್ನೊಂದಿಗೆ ಮಾತನಾಡಲೂ ಪುರುಸೊತ್ತಿಲ್ಲ. ಮನೆಗೆಲಸ, ಆಫೀಸು, ಇಲ್ಲವಾದರೆ, ಮಗುವಿನ ಲಾಲನೆ ಪಾಲನೆ ಅಂತ ಸದಾ ನನ್ನಿಂದ ದೂರ ಓಡುತ್ತಲೇ ಇರುತ್ತಾಳೆ. – ಹೀಗೆ ಅಕ್ಕನ ಬಗ್ಗೆ ದೂರು ಹೇಳುತ್ತಿದ್ದರು. ನಾನು ಏನು ಹೇಳಲಿ? ಸುಮ್ಮನೇ ನಕ್ಕು ಬಿಡುತ್ತಿದ್ದೆ. ನೀವು ಪ್ರೀತಿಸಿ ಮದುವೆಯಾದವರು ಅಲ್ಲವೇ ಎಂದು ಗೇಲಿ ಮಾಡುತ್ತಿದ್ದೆ. ಆಗ ಸರ್ ‘ನಿನ್ನಂತಹ ಹುಡುಗಿ ಸಿಗಲಿಲ್ಲ ನನಗೆ’ ಎಂದು ಹಲುಬುತ್ತಿದ್ದರು. ಒಂದು ದಿನ ಫೋನು ಮಾಡಿ -‘ನಿನ್ನ ಬಳಿ ಸ್ವಲ್ಪ ಮಾತಾಡುವುದಿದೆ. ಕಾಲೇಜಿಗೆ ರಜ ಹಾಕಿ ಬಾ ಎಂದರು. ಆ ದಿನ ..ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ. ನನ್ನ ಮದುವೆಯಾಗುತ್ತೀಯ? ಅಕ್ಕನನ್ನು ಒಪ್ಪಿಸುವ ಜವಾಬ್ದಾರಿ ನನಗಿರಲಿ. ನೀನು ಒಪ್ಪದಿದ್ದರೆ ನಾನು ಜೀವಸಹಿತ ಉಳಿಯುವುದಿಲ್ಲ. ನೀನಿಲ್ಲದೆ ನನಗೆ ಬದುಕಲು ಸಾಧ್ಯವೇ ಇಲ್ಲ ಎಂದರು.’ ನಾನು ಮೌನಕ್ಕೆ ಶರಣಾದೆ. ಅಕ್ಕನ ಬದುಕನ್ನು ಹೊಸಕಿ ಹಾಕಲು ಮನಸ್ಸು ಒಪ್ಪುತ್ತಿಲ್ಲ, ಆದರೆ ನನ್ನ ಹೃದಯ ಸರ್‌ನ ಅಪ್ಪಿಕೊಂಡುಬಿಟ್ಟಿತ್ತು. ನನ್ನ ಪುಣ್ಯ, ಅಕ್ಕ ತಲೆನೋವೆಂದು ರಜಾ ಹಾಕಿ ಬಂದು ನನ್ನನ್ನು ಸಂಕಷ್ಟದಿಂದ ಪಾರು ಮಾಡಿದ್ದರು. ಒಂದು ವಾರ ಕಳೆದಿತ್ತು, ಸರ್ – ‘ಎಲ್ಲರೂ ಕೆಮ್ಮಣ್ಣುಗುಂಡಿಗೆ ಪಿಕ್‌ನಿಕ್ ಹೊರಟಿದ್ದೇವೆ. ಪುಟ್ಟನ ಜೊತೆ ನೀನೂ ಬಾ’- ಎಂದಾಗ ನಾನೂ ಹೋದೆ. ಆದರೆ ಅಕ್ಕ ಬಂದಿರಲಿಲ್ಲ. ಪುಟ್ಟನಿಗೆ ರಾತ್ರಿ ಜ್ವರ ಎಂದರು. ನಾನು ಆದಷ್ಢು ದೂರದಲ್ಲಿಯೇ ಇದ್ದೆ. ಅಂದಿನಿಂದ ನಾನು ಅವರ ಮನೆಗೆ ಹೋಗಿಲ್ಲ. ಸರ್ ದಿನಕ್ಕೆ ಇಪ್ಪತ್ತು ಬಾರಿ ಫೋನು ಮಾಡುತ್ತಾರೆ. ನಾನು ಉತ್ತರಿಸುತ್ತಿಲ್ಲ.’ ಕಂಗಾಲಾಗಿದ್ದ ಹುಡುಗಿಗೆ ಹಾಸ್ಟೆಲ್ಲಿನಲ್ಲಿಯೇ ಊಟ ಮಾಡಿಸಿ ಮತ್ತೆ ಅವಳ ಬಳಿ ಮಾತು ಮುಂದುವರೆಸಿದೆ.
ನೋಡು ನೀನು ವಿಜ್ಞಾನದ ವಿಧ್ಯಾರ್ಥಿ. ನಡೆದ ಘಟನೆಗಳನ್ನು ವಿಭಜಿಸಿ ನೋಡು. ಭಾವನೆಗಳಿಗೆ ಬಲಿಯಾಗಬೇಡ. ಅಕ್ಕನನ್ನು ಪ್ರೀತಿಸಿ ಮದುವೆಯಾದವನು ಮೂರೇ ವರ್ಷದಲ್ಲಿ ಅವಳನ್ನು ಮರೆತು ನಿನ್ನಿಂದ ಆಕರ್ಷಿತನಾಗಿದ್ದಾನೆ. ಹೆಂಡತಿಯ ಬಗ್ಗೆ ದೂರು ಹೇಳುವುದರ ಬದಲು ಮನೆಗೆಲಸದಲ್ಲಿ, ಮಗುವನ್ನು ನೋಡಿಕೊಳ್ಳಲು ಹೆಂಡತಿಗೆ ನೆರವಾಗಿದ್ದರೆ, ಅವಳಿಗೂ ಕೆಲಸ ಹಗುರಾಗುತ್ತಿತ್ತು. ಅವಳೂ ಗಂಡನೊಡನೆ ಸಮಯ ಕಳೆಯಬಹುದಿತ್ತು. ಆದರೆ ಅವನು ತನ್ನ ಜವಾಬ್ದಾರಿಯಿಂದ ನುಣುಚಿಕೊಂಡು ಅವಳ ಮೇಲೇ ಗೂಬೆ ಕೂರಿಸಿ ನಿನ್ನ ಬಳಿ ಪ್ರೀತಿಯ ನಾಟಕವಾಡುತ್ತಿದ್ದಾನೆ. ನಿನ್ನನ್ನು ಮದುವೆಯಾಗಿ ಎರಡು ವರ್ಷ ಕಳೆದ ಮೇಲೆ ಇದೇ ನಾಟಕ ಪುನರಾವರ್ತನೆ ಆದೀತು. ಎರಡನೆಯದಾಗಿ ಸರ್ಕಾರಿ ಕೆಲಸದಲ್ಲಿರುವರು ಎರಡೆರೆಡು ಮದುವೆ ಯಾದರೆ ಶಿಕ್ಷೆಯಾಗುತ್ತದೆ. ನಿನ್ನ ಮದುವೆ ಊರ್ಜಿತವಾಗುವುದಿಲ್ಲ. ನಿನಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ. ನಿನ್ನ ಓದು ಮುಗಿದಿಲ್ಲ. ಕೆಲಸ ಇಲ್ಲ. ನಿನ್ನ ತಂದೆ ತಾಯಿ ಈ ಮದುವೆಗೆ ಒಪ್ಪಲು ಸಾಧ್ಯವೇ ಇಲ್ಲ. ಹೇಗೆ ಅವನನ್ನು ನಂಬಿ ನಿನ್ನ ಕೊರಳಿಗೆ ನೀನೇ ಉರುಳು ಹಾಕಿಕೊಳ್ಳುತ್ತೀಯ? ಅವನ ಮಾತುಗಳಿಗೆ ಮರುಳಾಗಬೇಡ. ಅವನು ತನ್ನ ಹೆಂಡತಿಗೆ ಬರೆದ ಪ್ರೇಮ ಪತ್ರಗಳನ್ನು ಆಕ್ಕ ನನ್ನ ಬಳಿ ಕೊಟ್ಟಿದ್ದಾಳೆ. ಓದಿ ನೋಡು. ಆಲೋಚಿಸು. ನಾಳೆ ಬಾ. ಇಬ್ಬರೂ ಸೇರಿ ಸೂಕ್ತ ಪರಿಹಾರ ಹುಡುಕೋಣ. ಹುಡುಗಿ ಮಾರನೆಯ ದಿನ ಬಂದಳು. ನೀವು ಹೇಳಿದ್ದು ಸರಿ ಎಂದಳು. ಪರೀಕ್ಷೆ ಹತ್ತಿರ ಇದೆ. ನೀನು ಅವರ ಮನೆ ಬಳಿ ಇರುವ ಪಿ.ಜಿ. ಖಾಲಿ ಮಾಡಿ ಹಾಸ್ಟೆಲ್ಲಿಗೆ ಬಂದು ಬಿಡು. ಅವನ ಬಳಿ ಏನೂ ಮಾತಾಡಬೇಡ. ಅವನ ಫೋನ್ ಕರೆಗಳಿಗೆ ಉತ್ತರಿಸಬೇಡ. ಅವನು ಸಾಯುವುದಿಲ್ಲ. ಬೇರೆಯವರ ಸಾವಿಗೆ ಕಾರಣನಾಗುತ್ತಾನೆ ಅಷ್ಟೆ. ಅಂದಿನಿಂದ ಅವಳ ಜೊತೆ ಆಗಾಗ್ಗೆ ಮಾತಾಡುತ್ತಿದ್ದೆ. ಪರೀಕ್ಷೆಯಲ್ಲಿ ಒಳ್ಳೆ ಅಂಕ ತೆಗೆದಳು. ಎಮ್.ಎಸ್.ಸಿ.ಗೆ ಸೇರಿ ಕೊಂಡಳು.
ಹತ್ತು ವರ್ಷ ಕಳೆದಿರಬಹುದು. ಆ ಹುಡುಗಿ ತನ್ನ ಗಂಡ ಮತ್ತು ಮಗುವಿನೊಂದಿಗೆ ಬಂದು ಭೆಟ್ಟಿಯಾದಳು. ಅಮೇರಿಕದಲ್ಲಿ ಇದ್ದಾಳೆ. ಅವಳ ಗಂಡ ಹೇಳಿದ -ಮೇಡಂ, ನನ್ನ ಹೆಂಡತಿ ನಿಮ್ಮನ್ನು ನೆನಸದೇ ಇರುವ ದಿನವೇ ಇಲ್ಲ. ನೀವು ಏನು ಮೋಡಿ ಮಾಡಿದ್ದೀರೋ ಗೊತ್ತಿಲ್ಲ ಅವಳು ಒಂದು ದೊಡ್ಡ ಚಾಕಲೇಟ್ ಬಾಕ್ಸ್ ನೀಡಿ, ಕಣ್ಣಲ್ಲೇ ವಂದಿಸಿ ಹೊರಟಳು.
ಸರಿ, ಇನ್ನೊಂದು ಸಂಸಾರ ಹೇಗಿದೆ ನೋಡೋಣವೇ? ಅವರಿಗೆ ಇನ್ನೊಂದು ಮಗುವಾಗಿದೆ. ಅವನ ಇನ್ನೂ ಒಂದೆರಡು ಪ್ರೇಮ ಪ್ರಸಂಗಗಳು ನಡೆದಿವೆ. ಹೆಂಡತಿ ಈಗ ಜಾಣೆಯಾಗಿದ್ದಾಳೆ. ಹೇಗೋ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದಾಳೆ. ಬದುಕು ಬಂದಂತೆ ಸ್ವೀಕರಿಸಬೇಕು ಎಂಬ ಸತ್ಯ ಅರಿತಿದ್ದಾಳೆ. ಮಕ್ಕಳಿಗೆ ಅಪ್ಪನನ್ನು ಕಂಡರೆ ಜೀವ. ಅವನಿಗೂ ಅಷ್ಟೆ, ಮಕ್ಕಳನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ನಮ್ಮ ದೇವರಿಗೇ ಇಬ್ಬಿಬ್ಬರು ಹೆಂಡಿರು ಇರುವಾಗ ನಮ್ಮಂತಹ ಹುಲು ಮಾನವರು ಏನು ತಾನೇ ಮಾಡಲಾದೀತು? ಅವಳದೇ ಸ್ವಂತ ದುಡಿಮೆ ಇದೆ. ಗಂಡನ ಮುಂದೆ ಕೈ ಚಾಚಬೇಕಾಗಿಲ್ಲ. ಮಗನಿಗೆ ಹತ್ತು ವರ್ಷ. ಮಗಳಿಗೆ ನಾಲ್ಕು. ಗಂಡನಿಗೆ ಹೊರಗಿನ ಆಕರ್ಷಣೆ ಇನ್ನೆಷ್ಡು ದಿನ ಉಳಿದೀತು? ಅವಳಿಗೆ ಡೈವೋರ್ಸ್ ಕೊಟ್ಟು ಬದುಕುವ ಧೈರ್ಯವಿಲ್ಲ. ಗಂಡನನ್ನು ಬಿಟ್ಟು ಬಾಳಲು ತಂದೆ, ತಾಯಿ ಒಪ್ಪುವುದಿಲ್ಲ. ಗಂಡನನ್ನು ಬಿಟ್ಟವಳು ಎಂದು ಸಮಾಜ ತಾತ್ಸಾರದಿಂದ ಕಂಡೀತು. ಮನೆಯೊಳಗೆ ಒಬ್ಬ ರಾವಣ ಇದ್ದರೆ ಮನೆಯ ಹೊರಗೆ ಇನ್ನೆಷ್ಟು ಜನ ರಾವಣರಿದ್ದಾರೋ ಗೊತ್ತಿಲ್ಲ. ಸಂಸಾರದಿಂದ ಹೊರಬಿದ್ದರೆ ನೀರಿನಿಂದ ಹೊರಬಿದ್ದ ಮೀನಿನಂತೆ ಚಡಪಡಿಸಬೇಕಾದೀತು ಎಂಬ ಎಚ್ಚರದಲ್ಲಿ ಬದುಕು ಸಾಗಿಸುತ್ತಿದ್ದಾಳೆ.
-ಡಾ.ಗಾಯತ್ರಿದೇವಿ ಸಜ್ಜನ್
Beautiful narration
ವಾಸ್ತವದಿಂದ ಕೂಡಿದ, ವಿವೇಚನೆಯನ್ನು ಹುಟ್ಟು ಹಾಕುವ ಬರಹ.
ವಂದನೆಗಳು
ನಿಮ್ಮ ನುಡಿಗಳಿಗೆ ವಂದನೆಗಳು
ವಾವ್ ನಿಮ್ಮ ಅನುಭವದ ನಿರೂಪಣೆ ಬದುಕಿನ ಒಡಂಬಡಿಕೆ ವಾಸ್ತವಿಕ ಸತ್ಯವನ್ನು ಮನದಟ್ಟು ಮಾಡಿಕೊಟ್ಟಿರುವ ಲೇಖನ ನಿಜಕ್ಕೂ ಅನನ್ಯ.ಅಭಿನಂದನೆಗಳು ಮೇಡಂ.
Thanks
madam
i could imagine myself in your place. i too have faced things like this in my career. i had to do councelling for a sexually abused girl. She came out of it and it is unforgettable day to me. i am dr. s.sudha retd principal maharani’science college mysore.
ಸಂಸಾರದಲ್ಲಿ ತಲೆದೋರುವ ಕೆಲವೊಂದು ಸಮಸ್ಯೆಗಳು, ಅವುಗಳ ಪರಿಹಾರಕ್ಕಿರುವ ಮಾರ್ಗ ಇತ್ಯಾದಿಗಳನ್ನು ಅತ್ಯಂತ ಸೊಗಸಾಗಿ, ಮನಮುಟ್ಟುವಂತೆ ನಿರೂಪಿಸಿರುವಿರಿ.