ಬಾಲ್ಯದ, ಅಜ್ಜಿಮನೆಯ ಸವಿ ಸವಿ ನೆನಪುಗಳು.
ಅಬ್ಬಾ! ಅಜ್ಜಿ ಮನೆ ಎಂದೊಡನೆ ನಿಜಕ್ಕೂ ಸವಿ ಸವಿ ನೆನಪುಗಳ ಚಿತ್ತಾರ ಮನದಲ್ಲಿ ಮೂಡುತ್ತದೆ. ಬಾಲ್ಯದ ಅಜ್ಜಿ ಮನೆಯ ನೆನಪು ನನಗೆ ಇನ್ನೂ ಹಸಿ ಹಸಿಯಾಗಿದೆ. ಅದು ಒಂದು ರೀತಿಯಲ್ಲಿ ನನ್ನ ಪಾಲಿಗೆ ಅಕ್ಷಯಪಾತ್ರೆ ಇದ್ದಂತೆ!. ಬರಿ ನೆನಪುಗಳು ನೆನಪುಗಳು ನೆನಪುಗಳು!. ವರ್ಣರಂಜಿತವಾಗಿದ್ದ ಕಾಲ. ನನ್ನ ಮನದಾಳದ ಅನಿಸಿಕೆಗಳನ್ನು ಹಂಚಿಕೊಳ್ಳುವುದಕ್ಕೆ ಪೀಠಿಕೆ ಎನ್ನುವಂತೆ ಒಂದೇ ಒಂದು ವಾಕ್ಯದಲ್ಲಿ ಹೇಳುವುದಾದರೆ “ಇಂದು ಅಜ್ಜಿ ಮನೆಯೂ ಇಲ್ಲ, ಅಜ್ಜಿಯೂ ಇಲ್ಲ!.”
ಆದರೆ ನೆನಪು ಮಾತ್ರ ಅಗಾಧವಾಗಿದೆ. ನಮ್ಮ ತಂದೆ ಮನೆಯವರು ಸಹ ಒಟ್ಟು ಕುಟುಂಬ. ಇವತ್ತಿನವರೆಗೂ ಸಹ ನಾವೆಲ್ಲ ಒಟ್ಟಾಗಿ ಕಾಳಿಹುಂಡಿ ಗ್ರಾಮದಲ್ಲಿ ದೊಡ್ಡ ಮನೆಯಲ್ಲಿ ವಾಸಿಸುತ್ತಿದ್ದೇವೆ. ಮನೆ ಹಿಂದೆಯೂ ಸಹ ವಿಶಾಲವಾದ ಹಿತ್ತಲು, ವಿಶಾಲವಾದ ಸ್ಥಳ ಇದೆ. ತಂದೆಯ ಮನೆಯಲ್ಲಿ ನಮಗೆ ಅಜ್ಜ -ಅಜ್ಜಂದಿರ ನೆನಪು ಇಲ್ಲ. ನಾನು ಹುಟ್ಟುವ ಮೊದಲೇ ನಮಗೆ ಅಜ್ಜ-ಅಜ್ಜಿ ನಮ್ಮನ್ನಗಲಿದರು. ಇದರಿಂದಾಗಿ ಅಜ್ಜ ಅಜ್ಜಿಯರ ನೆನಪನ್ನು ಮೂಡಿಸುವ ನಮ್ಮ ದೊಡ್ಡಪ್ಪ- ದೊಡ್ಡಮ್ಮ, ಚಿಕ್ಕಪ್ಪ- ಚಿಕ್ಕಮ್ಮ ಅತ್ತೆ- ಮಾವ ಇವರನ್ನು ಒಳಗೊಂಡಂತೆ ಅನೇಕ ಹಿರಿಯರು ದೊಡ್ಡ ಕುಟುಂಬದಲ್ಲಿ ಇದ್ದರು. ಒಬ್ಬೊಬ್ಬರಿಂದಲೂ ಒಂದೊಂದು ಬಗೆಯ ಜೀವನ ಮೌಲ್ಯವನ್ನು, ಸಂಸ್ಕಾರವನ್ನು ಕಲಿತೆವು.
ಒಂದು ರೀತಿಯಲ್ಲಿ ನಾವು ಅಜ್ಜ-ಅಜ್ಜಿಯರ ನೆನಪೇ ಇಲ್ಲದಿದ್ದರೂ ಕೂಡ ಅವರ ಮುಂದುವರಿದ ಭಾಗವಾಗಿ ನಂತರದಲ್ಲಿ ಬರುವ ಹಲವು ಪ್ರಮುಖ ಘಟನೆಗಳೊಂದಿಗೆ ನಮ್ಮ ಬಾಲ್ಯದ ಪಯಣದಿಂದ ಹಿಡಿದು ಇವತ್ತಿನವರೆಗೂ ಸಾಗಿಬಂದು ಮುಂದುವರೆದು ನಿರಂತರವಾಗಿ ಸಾಗುತ್ತಿದೆ. ಇದು ಒಂದಡೆಯಾದರೆ…….
ಇನ್ನ ನಮ್ಮ ತಾಯಿಯ ಮನೆಯಾದ ಅಂತರಸಂತೆ ಯಲ್ಲಿನ ನಮ್ಮ ಅಜ್ಜಿ ಮನೆಯ ನೆನಪು ಮಾತ್ರ ಎಂದಿಗೂ ಮರೆಯಲು ಸಾಧ್ಯವಿಲ್ಲ!. ಏಕೆಂದರೆ ನಮ್ಮ ತಾಯಿ ಸೌಭಾಗ್ಯಮ್ಮ ಇವರ ತಾಯಿ ಅಂದರೆ ನಮ್ಮ ಅಜ್ಜಿ ಚಿನ್ನಮ್ಮ ನಾವು ಚಿಕ್ಕವರಿದ್ದಾಗ ಅವರು ಇದ್ದರು. ಅವರೊಂದಿಗಿನ ಒಡನಾಟ, ಆತ್ಮೀಯತೆ, ಪ್ರೀತಿ ತುಂಬಿದ ಭಾವ ಎಲ್ಲವನ್ನು ಇನ್ನೆಲ್ಲಿ ಮರೆಯಲಿ. ನಮ್ಮ ತಾತ (ತಾಯಿಯ ತಂದೆ) ಅಪ್ಪಣ್ಣ ಗೌಡರು ಶತಾಯುಷಿ ಗಳಾಗಿ 108 ವರ್ಷಗಳ ತುಂಬು ಜೀವನ ನಡೆಸಿ ಮರಳಿ ಬಾರದ ಲೋಕಕ್ಕೆ ಹೋಗಿಬಿಟ್ಟರು. ಇವರದು ಕೂಡ ದೊಡ್ಡ ಕುಟುಂಬವೇ ನಮ್ಮ ತಾತನಿಗೆ ಐದು ಜನ ಹೆಣ್ಣುಮಕ್ಕಳು, ನಾಲ್ಕು ಜನ ಗಂಡು ಮಕ್ಕಳು. ಕೊನೆಯವರೆಗೂ ಸಹ ನಮ್ಮ ತಾತನ ಹುಟ್ಟು ಹಬ್ಬದ ಸಂಭ್ರಮವನ್ನು ಎಲ್ಲಾ ಮೊಮ್ಮಕ್ಕಳು, ಮುಮ್ಮಕ್ಕಳು ಎಲ್ಲಾ ಸೇರಿ ವರ್ಷವರ್ಷವೂ ಸಡಗರ ಸಂಭ್ರಮದಿಂದ ಆಚರಿಸಿ, ಸಂಬಂಧಿಕರು, ಊರವರನ್ನೆಲ್ಲ ಕರೆದು ಊಟ ಹಾಕಿಸಿ, ಫೋಟೋ
ತೆಗೆಸಿಕೊಂಡು, ಸಂಭ್ರಮ ಪಡುತ್ತಿದ್ದೆವು. ಇದು ಮಾದರಿಯ ಹುಟ್ಟು ಹಬ್ಬದ ಸಂಭ್ರಮಾಚರಣೆ ಆಗಿತ್ತು. ಹಲವರು ಬಂದು ಸಂಭ್ರಮದಿಂದ ಈ ಆಚರಣೆಯಲ್ಲಿ ಭಾಗವಹಿಸುತ್ತಿದ್ದರು. ಇಂತಹ ಸಂದರ್ಭಗಳಲ್ಲಿ ನಮ್ಮ ಅಜ್ಜಿ ಇಲ್ಲವಲ್ಲ ಎಂಬ ನೆನಪೇ ನನಗೆ ಕಾಡುತ್ತಿತ್ತು.
ಇನ್ನು ನಮ್ಮಜ್ಜಿ ಚಿನ್ನಮ್ಮ ಅವರ ಬಗ್ಗೆ ಹೇಳುವುದಾದರೆ ಇವರ ಹಿರಿಯ ಮೊಮ್ಮಗ ನಾನೇ. ನಾಲ್ಕು ಮಕ್ಕಳು ಒಂದಲ್ಲ ಒಂದು ಕಾರಣದಿಂದ ಸತ್ತ ನಂತರ ನಾನು ಹುಟ್ಟಿದ್ದು. ಇದರಿಂದಾಗಿ ಬಹಳ ಪ್ರೀತಿಯಿಂದ ನನ್ನನ್ನು ಸಾಕಿದ್ದರು. ನನ್ನನ್ನು ಒಳಗೊಂಡಂತೆ ಎಲ್ಲಾ ಮೊಮ್ಮಕ್ಕಳನ್ನು ಒಂದೇ ರೀತಿಯಲ್ಲಿ ನೋಡಿಕೊಂಡರು. ಬೇಸಿಗೆ ರಜಗೋ ದಸರಾ ರಜೆಗೆ ಅಂತರಸಂತೆ ಗ್ರಾಮಕ್ಕೆ ಹೋದಾಗ ನಮಗೆಲ್ಲರಿಗೂ ಹಬ್ಬವೇ ಹಬ್ಬ!. ಏಕೆಂದರೆ ರುಚಿರುಚಿಯಾದ ಸಿಹಿತಿಂಡಿಗಳು, ಕಾರ ತಿನಿಸುಗಳು ತಯಾರಾಗುತ್ತಿದ್ದವು.
ಎಲ್ಲರನ್ನೂ ಮನೆಯ ಅಟ್ಟದ ಮೇಲೆ ಕರೆದುಕೊಂಡು ಹೋಗಿ ಒಬ್ಬೊಬ್ಬರಾಗಿ ತಿಂಡಿಗಳನ್ನು ಕೊಟ್ಟು ತುಂಬಾ ಖುಷಿ ಪಡುತ್ತಿದ್ದರು ನಮ್ಮಜ್ಜಿ. ಆ ತಿಂಡಿ ತಿನಿಸಿನ ಸವಿರುಚಿ ನಮ್ಮ ನಾಲಿಗೆ ಮೇಲೆ ಇನ್ನೂ ಕೂಡ ಹಸಿಹಸಿಯಾಗಿಯೇ ಇದೆ!. ನೆನಪಿಸಿಕೊಂಡರೆ ಬಾಯಲ್ಲಿ ನೀರೂರುತ್ತದೆ!!. ಅಂತರಸಂತೆ ಗ್ರಾಮದ ಮಧ್ಯ ಭಾಗದಲ್ಲಿ ಅಜ್ಜಿಯ ಮನೆ ಇತ್ತು. ನಮ್ಮ ಅಜ್ಜಿಗೆ ಅಳಿಯಂದರು ಮೊಮ್ಮಕ್ಕಳು ಎಂದರೆ ಎಲ್ಲಿಲ್ಲದ ಪ್ರೀತಿ ವಿಶ್ವಾಸವಿತ್ತು. ಅವರು ಬಂದು ಹೋಗುವವರೆಗೂ ಸಹ ಅವರನ್ನು ಬಹಳ ಮುತುವರ್ಜಿ ವಹಿಸಿ ನೋಡಿಕೊಳ್ಳುತ್ತಿದ್ದರು.
ಮೊದಲೇ ವಠಾರದ ಮನೆಯಾಗಿತ್ತು. ಆ ವಠಾರದ ಒಂದು ಭಾಗದಲ್ಲಿ ನಮ್ಮಜ್ಜಿಯ ಮನೆ ಇತ್ತು. ದೊಡ್ಡದಾದ ತೊಟ್ಟಿ ಮನೆ. ಅಲ್ಲಿ ಸುಮಾರು ಆರು ಬೇರೆ ಬೇರೆ ಕುಟುಂಬಗಳು ವಾಸಿಸುತ್ತಿದ್ದರು. ಆ ಕುಟುಂಬಗಳ ಮಕ್ಕಳೊಂದಿಗೆ ನಾವುಗಳೆಲ್ಲರೂ ಸೇರಿದರೆ ಒಂದು ದೊಡ್ಡ ಸೈನ್ಯವೇ ತಯಾರಾದಂತೆ ಆಗುತ್ತಿತ್ತು!. ತೊಟ್ಟಿಮನೆಯ ಮಧ್ಯದಲ್ಲಿಯೇ ನಮ್ಮೆಲ್ಲರ ಸ್ಥಾನ, ಆಟ-ಪಾಠಗಳು ನಡೆಯುತ್ತಿದ್ದವು. ನೆಂಟರಿಷ್ಟರು ಹೆಚ್ಚು ಬಂದಾಗ ತೊಟ್ಟಿ ಮನೆ ಒಳಗಿನ ಹಜಾರದಲ್ಲಿ ಎಲ್ಲರೂ ಈಗಿನ ರೀತಿಯಲ್ಲಿ ಪ್ರತ್ಯೇಕ ರೂಮುಗಳು ಇರಲಿಲ್ಲ, ಹಾಸಿಗೆಯೂ ಇರಲಿಲ್ಲ. ಹೊದ್ದಿಕೊಳ್ಳಲು, ಹಾಗೂ ತಲೆಗೆ ದಿಂಬು ಕೂಡ ಸರಿಯಾಗಿ ಇರುತ್ತಿರಲಿಲ್ಲ. ನಮ್ಮ ಪುಣ್ಯಕ್ಕೆ ದೊಡ್ಡದೊಂದು ಚಾಪೆ (ಮಂದಲಿಗೆ) ಸಿಗುತ್ತಿತ್ತು. ಇಷ್ಟು ಸಿಕ್ಕರೆ ಸಾಕು ನಮಗೆ ನಿದ್ದೆ ಮಹಾರಾಜ ಎಲ್ಲಿದ್ದನೋ ನಾಕಾಣೆ 5 ನಿಮಿಷದಲ್ಲಿ ಬಂದೇ ಬಿಡುತ್ತಿದ್ದ. ಒಟ್ಟಾಗಿ ಗೊರಕೆ ಸೌಂಡ್ ಕೇಳಿಸುತ್ತಿತ್ತು!. ಆ ನಾದದ ಝೇಂಕಾರದ ಅನುಭವ ಈಗಲೂ ನನ್ನ ಕಿವಿಯಲ್ಲಿ ಗುಯ್ ಗುಡುತ್ತದೆ!. ಒಮ್ಮೊಮ್ಮೆ ನಗು ಕೂಡ ಬರುತ್ತದೆ.
ಮಳೆ ಬಂದಾಗಲಂತೂ ಇನ್ನೂ ಮಜಾ ಏಕೆಂದರೆ ಕೈ ಹಂಚಿನ ಮನೆಯಾಗಿದ್ದರಿಂದ (ಮಂಗಳೂರು ಹಂಚಿನ ಮನೆಯ ಕೂಡ ಕಡಿಮೆಯೇ.) ಮಣ್ಣಿನ ಗೋಡೆಗಳು ಇವೇ ಹೆಚ್ಚು. ಇದರಿಂದಾಗಿ ಮನೆಯ ಹೆಚ್ಚುಭಾಗ ಸೋರುತ್ತಿತ್ತು!. (ಸೋರುತಿಹುದು ಮನೆಯ ಮಾಳಿಗೆ ಎಂಬ ಅಶ್ವಥ್ ರವರು ಹಾಡಿರುವ ಗೀತೆ ಈಗ ನನಗೆ ನೆನಪಾಗುತ್ತದೆ!.) ಹಣಕಾಸು ವ್ಯವಸ್ಥೆಗಳಿಂದ ಸ್ವಲ್ಪ ಅನುಕೂಲವಿದ್ದವರು ಆರ್ ಸಿ ಸಿ ಮನೆಯನ್ನು ಕಟ್ಟಿಕೊಂಡಿದ್ದರು. ಟಿವಿಗಳು ಇಲ್ಲದ ಕಾಲ. ಚಂದನ ಟಿವಿ ಇದ್ದವರು ಶ್ರೀಮಂತರಾಗಿದ್ದರು!. ನನಗೆ ಇನ್ನೂ ನೆನಪಿದೆ ಒಂದು ದಿನ ಭಾನುವಾರ ಚಲನಚಿತ್ರ ವೀಕ್ಷಣೆ ಮಾಡಲು ಅಜ್ಜಿಗೆ ಏನೋ ಒಂದು ಸುಳ್ಳು ನೆಪ ಹೇಳಿ ಊರೊಳಗಿನ ಮನೆಯೊಂದಕ್ಕೆ ಹೋಗಿದ್ದೆವು. ನಾವು ಹೋಗಿದ್ದ ವಿಷಯ ನಮ್ಮ ತಾತನಿಗೆ ಹೇಗೋ ಗೊತ್ತಾಗಿ ಸುಮಾರು ಹೊತ್ತು ಮನೆಗೆ ಸೇರಿಸದೆ ಹೊರಗಡೆ ನಿಲ್ಲಿಸಿದ್ದರು. ನಮ್ಮ ಅಜ್ಜಿ ಈ ಸಂದರ್ಭದಲ್ಲಿ ಏನೋ ಒಂದು ಸಮಜಾಯಿಸಿ ಹೇಳಿ ಮನೆ ಒಳಗೆ ಕರೆದು ಎಲ್ಲರಿಗೂ ಊಟ ಬಡಿಸಿ ಹಾರೈಕೆ ಮಾಡಿದರು. ನಿನ್ನಿಂದಲೇ ಇವರೆಲ್ಲ ಹೆಚ್ಚೆಚ್ಚು ಹೆಚ್ಚುಕೊಂಡಿದ್ದಾರೆ ಎಂದು ನಮ್ಮ ತಾತ ಅಜ್ಜಿಗೆ ಬೈದ ದಿನಗಳೇ ಹೆಚ್ಚು.
ಕುಡಿಯಲು ನಲ್ಲಿ ನೀರು ಕೂಡ ಸರಿಯಾಗಿ ಬರುತ್ತಿರಲಿಲ್ಲ ಇದರಿಂದಾಗಿ ದೂರದಲ್ಲಿದ್ದ ಬೋರ್ವೆಲ್ ಗಳಿಂದ ನೀರನ್ನು ತರಬೇಕಾಗಿತ್ತು. ನಮ್ಮ ಸೈನ್ಯವೆಲ್ಲ ಬಿಂದಿಗೆಯಿಂದ ಬಿಂದಿಗೆ ಮೂಲಕ ನೀರನ್ನ ಮನೆಗೆ ತರುತ್ತಿದ್ದೆವು. ಹಳೆಯ ಬೈಸಿಕಲ್ ಇದ್ದರಂತೂ ಮುಗಿಯಿತು ಏಳೆಂಟು ಬಿಂದಿಗೆ ನೀರು ಒಮ್ಮೆಲೆ ಮನೆಗೆ ಬರುತ್ತಿತ್ತು. ಇನ್ನು ಬಟ್ಟೆ ಒಗೆಯಲು ಅಂತೂ ವಾರಕ್ಕೆ ಒಮ್ಮೆಯಾದರೂ ಊರಿನ ಹೊರಭಾಗದಲ್ಲಿದ್ದ ಕಪಿಲಾ ನದಿಯ ಹಿನ್ನೀರಿನ ಸ್ಥಳ ನಾಲ್ಕೈದು ಕಿಲೋಮೀಟರ್ ದೂರದಲ್ಲಿತ್ತು. ಮಳೆಗಾಲದಲ್ಲಿ ನೀರು ಹತ್ತಿರದಲ್ಲಿ ಇರುತ್ತಿತ್ತು. ಬೇಸಿಗೆಕಾಲ ಬಂದಾಗ ಮತ್ತೆರಡು ಕಿಲೋಮೀಟರ್ ದೂರಕ್ಕೆ ಹೋಗಬೇಕಾಗಿತ್ತು. ಗಾಡಿಯನ್ನು ಕಟ್ಟಿಕೊಂಡು ಅದರಲ್ಲಿ ಬಟ್ಟೆಯನ್ನೆಲ್ಲ ತುಂಬಿಕೊಂಡು, ಸ್ವಲ್ಪ ಮಧ್ಯಾಹ್ನಕ್ಕೆ ತಿಂಡಿತಿನಿಸು ಕಟ್ಟಿಕೊಂಡು, ಹಲವು ಹಿರಿಯರು ಹೋಗುತ್ತಿದ್ದರು. ಅಲ್ಲಿ ಬಟ್ಟೆ ಒಗೆದು ನಂತರ ಅದನ್ನು ಒಣಗಿಸಿಕೊಂಡು ಬಟ್ಟೆಯನ್ನು ಮಡಿಸಿಕೊಂಡು ಮತ್ತೆ ಅದೇ ಗಾಡಿಯಲ್ಲಿ ಹಾಕಿಕೊಂಡು ಮನೆಗೆ ಬರುವಾಗ ಗೋಧೂಳಿಯ ಸಮಯವಾಗಿರುತ್ತಿತ್ತು. ಆಗ ನಾವು ಕದ್ದುಮುಚ್ಚಿ ಒಂದಿಬ್ಬರು ಹೋಗುತ್ತಿದ್ದೆವು. ಅವರೆಲ್ಲಾ ಬಟ್ಟೆ ಒಗೆಯುವವರಿಗೆ ನಾವು ನೀರಿನಲ್ಲಿ ಸ್ನಾನ ಮಾಡಿದ್ದೆ ಮಾಡಿದ್ದು. ಮನೆಗೆ ಬಂದಾಗ ಮಾತ್ರ ದಂಡಂ ದಶಗುಣಂ ಕಾದಿತ್ತು. ಹೀಗೆ ನೀರೊಂದಗಿನ ನಮ್ಮ ಬಾಂಧವ್ಯ ಮಾತ್ರ ಎಂದೆಂದಿಗೂ ಮರೆಯಲಾಗದ ಅನುಭವ. ವಾರಕ್ಕೆ ಎರಡು ಬಾರಿ ಮಾತ್ರ ಸ್ನಾನ. ಬುಧವಾರ, ಶನಿವಾರಗಳಂದು ಮಾತ್ರ.
ಇನ್ನು ವಠಾರ ದಲ್ಲಿದ್ದ ಏಳೆಂಟು ಮನೆಗಳಲ್ಲಿ ವರ್ಷದಲ್ಲಿ ಏನಾದರೊಂದು ಸಮಾರಂಭ ಇದ್ದೇ ಇರುತ್ತಿತ್ತು. ಇವಾಗಿನ ರೀತಿ ಕಲ್ಯಾಣ ಮಂಟಪಗಳಲ್ಲಿ ಮದುವೆ ಮಾಡುತ್ತಿರಲಿಲ್ಲ. ಮನೆಯ ಮುಂದೆ ದೊಡ್ಡದಾದ ಚಪ್ಪರ ಹಾಕುತ್ತಿದ್ದರು. ಪೆಂಡಲ್ ಭರಾಟೆ ಇರಲಿಲ್ಲ. ಆದರೆ ಮೈಕಾಸುರನ ಹಾವಳಿ ಮಾತ್ರ ಇರುತ್ತಿತ್ತು. ಊರಿನೊಳಗೆ ಮೈಕ್ ಧ್ವನಿ ಕೇಳುತ್ತಿದೆ ಎಂದರೆ ಏನೋ ಕಾರ್ಯಕ್ರಮ ಇದೆ ಎಂದು ಭಾಸವಾಗುತ್ತಿತ್ತು. ಈ ರೀತಿಯ ಮದುವೆ, ಇನ್ನಿತರ ಶುಭಕಾರ್ಯಗಳು ಜರುಗುವ ವಿಷಯ ಮೊದಲು ತಿಳಿದಾಗ ನಮಗೆ ಎಲ್ಲಿಲ್ಲದ ಸಡಗರ ಸಂಭ್ರಮ. ಚಿಕ್ಕವರೆಲ್ಲ ಸೇರಿ ನಾಳೆ ಏನು ತಿಂಡಿ ಮಾಡಬಹುದು ಎಂಬ ಲೆಕ್ಕಾಚಾರ ಮಾಡುತ್ತಿದ್ದೆವು. ಅಡುಗೆ ಮಾಡಲು ಭಟ್ಟರು ಬರುತ್ತಿರಲಿಲ್ಲ. ಮನೆಮಂದಿಯಲ್ಲಾ ಸೇರಿ ರುಚಿರುಚಿಯಾದ ಅಡುಗೆ ಮಾಡುತ್ತಿದ್ದರು. ಬಾಳೆಎಲೆ ಊಟದ ಬದಲು ,ಇಸ್ತ್ರಿ ಎಲೆಯಲ್ಲಿನ ಊಟ. ಒಂದೆರಡು ಪಲ್ಯ, ಉಪ್ಪಿನಕಾಯಿ, ಹೆಚ್ಚೆಂದರೆ ಒಂದು ಹಪ್ಪಳ. ಸಿಹಿ ತಿಂಡಿಯ ಬದಲು ಪಾಯಸ ಮತ್ತು ಸಿಹಿ ಬೂಂದಿ ಇರುತ್ತಿತ್ತು. ಒಮ್ಮೊಮ್ಮೆ ದೊನ್ನೆಯ ಮೂಲಕ ಪಾಯಸವನ್ನು ಕುಡಿಯುತ್ತಿದ್ದೆವು. ಇಡೀ ಊರಿನ ಜನರು ಊಟಮಾಡುತ್ತಿದ್ದರು.
ಇನ್ನು ನಮ್ಮ ಅಜ್ಜಿ ಮನೆಯ ಜಾತ್ರೆಯ ಸೊಬಗಿನ ಬಗ್ಗೆ ಹೇಳಲೇಬೇಕು. ಊರಿನ ಹೊರಭಾಗದಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯ ನವೀಕರಣಗೊಂಡು ಅದ್ದೂರಿಯಾಗಿ ಜಾತ್ರೆ ನಡೆಯುತ್ತದೆ. ಆದರೆ ಆ ಕಾಲದಲ್ಲಿ ಜಾತ್ರೆ ಸರಳ ಸುಂದರವಾಗಿ ನಡೆಯುತ್ತಿತ್ತು. ನಮಗೆ ಜಾತ್ರೆಯೆಂದರೆ ಅಜ್ಜಿಮನೆ ನೆನಪಿಗೆ ಬರುತ್ತಿತ್ತು. ಜನವರಿ , ಫೆಬ್ರವರಿ ತಿಂಗಳಿನಲ್ಲಿ ಜಾತ್ರೆ ನಡೆಯುತ್ತಿತ್ತು. ನಮಗೆ ಆಗ ಪರೀಕ್ಷಾ ಸಮಯವಾಗಿದ್ದರೂ ಕೂಡ ಒಂದೆರಡು ದಿನಗಳ ಅಳತೆಗೆ ಬಂದು ಹೋಗುತ್ತಿದ್ದೆವು. ಅದರಲ್ಲೂ ಸೋಮವಾರ, ಮಂಗಳವಾರ , ಬುಧವಾರ ಜಾತ್ರೆ ಮೂರು ದಿನ ನಡೆಯುತ್ತಿತ್ತು . ಬುಧವಾರ ತೇರಿನ ದಿನವಾಗಿತ್ತು. ಅಂದ್ರೆ ಜಾತ್ರೆ ಬಲುಜೋರು. ಊರಿಗೆ ಬಂದವರೆಲ್ಲ ನಮ್ಮ ಮನೆಗೆ ಭೇಟಿ ಕೊಟ್ಟಾಗ, ನಮಗೆ ಐದು ರೂಪಾಯಿ, ಹತ್ತು ರೂಪಾಯಿ ಕೊಡುತ್ತಿದ್ದರು. ಅವೆಲ್ಲವನ್ನೂ ನಾವು ಒಂದು ಸಂಗ್ರಹ ಮಾಡುತ್ತಿದ್ದೆವು. ಒಮ್ಮೊಮ್ಮೆ ನೂರು ರೂಪಾಯಿ ಆಗಿದ್ದು ಉಂಟು,!. ಆ ನೂರಿನ ನೋಟು ನಮಗೆ ಸಾವಿರ ರೂಗಳ ಸಮವಾಗಿತ್ತು. ಅದರಲ್ಲಿ ಅರ್ಧದಷ್ಟು ಹಣವನ್ನು ಖರ್ಚು ಮಾಡಿ ಇನ್ನರ್ಧ ಹಣವನ್ನು ಮುಂದಿನ ಜಾತ್ರೆಗೆ ಉಳಿಸಿಕೊಳ್ಳುತ್ತಿದ್ದೆವು. ಮಿತವಾಗಿ ಖರ್ಚು ಮಾಡಲು ನಮಗೆ ಹಿರಿಯರು ಹೇಳಿದ್ದರು. ನಮಗೆ ಜಾತ್ರೆ ಬಂದರೆ ಹೇಗೋ ಸಂಭ್ರಮ ಅದೇ ರೀತಿ ನಮ್ಮ ಅಜ್ಜಿಗೂ ಸಹಾ ಜಾತ್ರೆ ಬಂದರೆ ತುಂಬಾ ಸಂತಸವಾಗುತ್ತಿತ್ತು. ಏಕೆಂದರೆ ಎಲ್ಲ ಮೊಮ್ಮಕ್ಕಳು ಒಂದೆಡೆ ಸೇರುತ್ತಿದ್ದರು. ಹಾಗೂ ಅವರಿಗೆ ಬಗೆಬಗೆಯ ತಿಂಡಿ ಮಾಡಿ ಕೊಟ್ಟು, ನಾವು ತಿನ್ನುವುದನ್ನು ತದೇಕ ಚಿತ್ತದಿಂದ ನೋಡಿ ತುಂಬಾ ಸಂಭ್ರಮ ಪಡುತ್ತಿದ್ದರು. ಆ ಕ್ಷಣ ನನಗಿನ್ನೂ ನೆನಪಿದೆ.
ಇನ್ನು ಅಂತರಸಂತೆ ನಮ್ಮ ಅಜ್ಜಿ ಊರಿನ ಸಿನಿಮಾ ಟೆಂಟಿನ ಬಗ್ಗೆ ಹೇಳಲೇಬೇಕು. ಸುಮಾರು 30 ಕಿಲೋಮೀಟರ್ ದೂರದಿಂದ ಕಾಳಿಹುಂಡಿ ಗ್ರಾಮದ ಆಜುಬಾಜು ನಿಂದ ಹಿಡಿದು ಅಂತರಸಂತೆ ಗ್ರಾಮದ ಆಜುಬಾಜಿನ ವರೆಗೂ ಸಹ ಸಿನಿಮಾ ಟೆಂಟ್ ಇರಲಿಲ್ಲ. ತಾಲೂಕು ಕೇಂದ್ರದಲ್ಲಿ ಮಾತ್ರ ಇತ್ತು. ಆದರೆ ನಮ್ಮ ಪುಣ್ಯವೇನೋ ನಮ್ಮ ಅಜ್ಜಿ ಊರಾದ ಅಂತ ಸಂತೆಯಲ್ಲಿ ಸಿನಿಮಾ ಟೆಂಟ್ ಇದ್ದುದರಿಂದ ಊರಿಗೆ ಹೋದಾಗಲೆಲ್ಲ ನಾವು ಕೂಡಿಟ್ಟ ಹಣದಿಂದಲೇ ಕದ್ದುಮುಚ್ಚಿ ಸಿನಿಮಾ ವೀಕ್ಷಿಸುತ್ತಿದ್ದೇವು. ರಾಜಕುಮಾರ್, ವಿಷ್ಣುವರ್ಧನ್, ಶಂಕರನಾಗ್, ಅಂಬರೀಶ್ ಅವರ ಚಿತ್ರಗಳನ್ನೇ ಹೆಚ್ಚು ನೋಡುತ್ತಿದ್ದೆವು. ” ನಮೋ ತಿರುಮಲೇಶ….. ನಮೋ ವೆಂಕಟೇಶ….. ನಮಸ್ತೆ……ನಮಸ್ತೆ…..” ಎಂಬ ಹಾಡು ಕೇಳುತ್ತಿದ್ದಂತೆ ಸಿನಿಮಾ ಶುರುವಾಯಿತು ಎಂಬ ಶುಭಸೂಚನೆ ನಮ್ಮಪಾಲಿಗೆ!. ಎಲ್ಲಿದ್ದರೂ ಬೇಗ ಬೇಗ ಹೋಗುತ್ತಿದ್ದೆವು. ಮೊದಲು ನಾವು ಮೊದಲು ನೆಲಕ್ಕೂ ಬಾಲ್ಕನಿಗೂ ಟಿಕೆಟ್ ತೆಗೆದುಕೊಳ್ಳುತ್ತಿದ್ದೆವು. ಛೇರಿಗೆ ಟಿಕೆಟ್ ಕೊಂಡರೆ ದುಡ್ಡು ಹೆಚ್ಚಾಗಿರುತ್ತಿತ್ತು. ಈ ಸಮಯದಲ್ಲಿ ನಮ್ಮ ಆಟಗಳು ಒಂದೇ ಎರಡೇ? ಮಧ್ಯಂತರ ಸಮಯದಲ್ಲಿ ನಾವು ಛೇರಿಗೆ ಹೋಗಿ ಕುಳಿತುಕೊಂಡು ನೋಡಿದ್ದುಂಟು.
ನಮ್ಮ ಸೋದರಮಾವಂದಿರು ಕೂಡ ಹೆಚ್ಚೆಚ್ಚು ಹಣವನ್ನು ಕೊಡುತ್ತಿದ್ದರು. ನಮ್ಮ ನಮ್ಮ ತಾತ ಅಜ್ಜಿ ವಾಸವಾಗಿದ್ದ ಚಿಕ್ಕ ಮನೆ ಇಂದಿಗೂ ಇದ್ದರೂ ಕೂಡ ಅಲ್ಲಿ ನಮ್ಮ ಸೋದರ ಮಾವ ವಾಸಮಾಡುತ್ತಿದ್ದಾರೆ. ಆದರೆ ಮನೆಯಲ್ಲಿ ಏನೆಲ್ಲಾ ನಮ್ಮ ಬಾಲ್ಯ ಕಳೆಯಿತು ಎಂಬುದನ್ನು ನೆನೆಸಿಕೊಂಡರೆ ಅಚ್ಚರಿಯಾಗುತ್ತದೆ. ಎಂತೆಂತಹ ಸಂಸ್ಕಾರಗಳನ್ನು, ಸೋಲು-ಗೆಲುವುಗಳನ್ನುಅಜ್ಜಿಮನೆ ಕಲಿಸಿದೆ. ನಮ್ಮ ಅಜ್ಜಿಮನೆ ಈಗ ಸೋದರಮಾವನಿಗೆ ಸೇರಿದೆ. ಅವರು ಈಗಲೂ ಕೂಡ ವಾಸವಾಗಿದ್ದಾರೆ. ಆದರೆ ಈ ಮನೆಗೆ ಹೊಂದಿಕೊಂಡಿದ್ದ ವಠಾರದ ಇನ್ನು ನಾಲ್ಕೈದು ಮನೆಗಳವರು ಯಾರು ಕೂಡ ವಾಸವಾಗಿಲ್ಲ. ಎಲ್ಲರೂ ತಮ್ಮ ಹೊಲಗದ್ದೆಗಳಲ್ಲಿ ಮನೆಗಳನ್ನು ಕಟ್ಟಿಕೊಂಡು, ಇಲ್ಲಿಂದ ಮನೆ ಬಿಟ್ಟು ಹೋಗಿದ್ದಾರೆ. ಆದರೆ ನಾನು ಅಜ್ಜಿ ಮನೆಗೆ ಹೋದಾಗಲೆಲ್ಲ ಆ ಉತ್ತರವನ್ನು ಮಿಸ್ ಮಾಡದೆ ನೋಡುತ್ತೇನೆ. ಒಂದು 10 ನಿಮಿಷ ಕುಳಿತುಕೊಂಡು ಹಳೆಯದನ್ನೆಲ್ಲ ನೆನಪು ಮಾಡಿಕೊಳ್ಳುತ್ತೇನೆ.
ಏಕೆಂದರೆ ನಮ್ಮ ಹೆಚ್ಚು ಬಾಲ್ಯ ಎಲ್ಲ ಇಲ್ಲೇ ಕಳೆದಿದ್ದು. ಈಗ ನಮ್ಮ ಮಿಕ್ಕ ಸೋದರ ಮಾವಂದಿರು ಹೊಸ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಆದರೂ ಸಹ ಅಜ್ಜಿ ಮನೆಯಲ್ಲಿ ವಾಸವಾಗಿದ್ದ ನೆನಪು ಮತ್ತೆ ಮತ್ತೆ ಮತ್ತೆ ಮರುಕಳಿಸದೇ ಇರದು. ನಿರಂತರವಾಗಿ ಕಾಡುತ್ತಲೇ ಇದೆ. ಇದರ ಜೊತೆಗೆ ನಮ್ಮ ಅಜ್ಜಿಯು ಕೂಡ!. ಅವರು ಬಹಳ ಬೇಗನೆ ನಾವು ಚಿಕ್ಕವರಾಗಿದ್ದಾಗ ನಮ್ಮನ್ನಗಲಿದರು. ನಮ್ಮ ಚಿನ್ನಮ್ಮ ಅಜ್ಜಿಯ ನೆನಪು ನಮ್ಮ ಮನದಲ್ಲಿ ಸವಿ ಸವಿ ನೆನಪುಗಳ ಚಿತ್ತಾರ ಮೂಡಿಸುತ್ತದೆ. ಮತ್ತೆ ಅಜ್ಜಿಯ ನೆನಪು ಬಾಲ್ಯದ ನೆನಪು ಕಾಡುತ್ತಲೇ ಇದೆ.
-ಕಾಳಿಹುಂಡಿ ಶಿವಕುಮಾರ್ ಮೈಸೂರು.
ಬರಹ ಬಹಳ ಚೆನ್ನಾಗಿದೆ..ನಮ್ಮಜಿ ಮನೆ ನೆನಪುಗಳು ಬಹುತೇಕ ಹೀಗೆಯೇ ಇವೆ…ಜಾತ್ರೆ,ಟೆಂಟ್ ಸಿನೆಮಾ,ತಿಂಡಿಗಳು,ಕಾಲುವೆಗೆ ಬಟ್ಟೆ ಒಗೆಯಲು ಗಾಡಿ ಕಟ್ಟಿಕೊಂಡು ಹೋಗುವುದು…ಬಾಲ್ಯದ ನೆನಪುಗಳು ಮರುಕಳಿಸಿದ ವು…
ಬಾಲ್ಯದ ನೆನಪಿನಂಗಳದ ಬುತ್ತಿ ಯು ಲೇಖನ ಚೆನ್ನಾಗಿದೆ.ನಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿತು.ಸೊಗಸಾದ ನಿರೂಪಣೆ ಅಭಿನಂದನೆಗಳು ಸಾರ್.
ಸುಂದರ ನೆನಪುಗಳ ಗುಚ್ಚ
Nejaku super
ಮಧುರವಾದ ನೆನಪುಗಳ ಸುಂದರ ನಿರೂಪಣೆ ವಂದನೆಗಳು
ತಮ್ಮಜ್ಜಿ ಮನೆಗೆ ನಮ್ಮೆಲ್ಲರನ್ನೂ ಕರೆದೊಯ್ದು ಪರಿಚಯಿಸಿದ ಪರಿ ಬಹಳ ಸೊಗಾಸಾಗಿದೆ..ಧನ್ಯವಾದಗಳು.
Very nice
Super….good memories…