ಸುಜಯನೊಂದಿಗೆ ಬೆಳಗಿನ ಸುತ್ತಾಟ

Share Button

ನನ್ನ ತಮ್ಮನ ಮೊಮ್ಮಗ ಅಂದರೆ ನನ್ನ ಮೊಮ್ಮಗನೇ- ನಮ್ಮ ಸೌಜನ್ಯಳ ನಾಲ್ಕು ವರ್ಷದ ಪೋರ ಸುಜಯ -ಇವತ್ತು ಬೆಳಗ್ಗೆ ಕಾಫಿ ತಿಂಡಿಮುಗಿಸಿದ ಬಳಿಕ ಓಡೋಡುತ್ತ ಬಂದು ಹೇಳಿದ- ‘ ಅಲ್ಲಿ ಪಕ್ಕದ ಕಾಡಿನಿಂದ ಹಕ್ಕಿಗಳು ಮತ್ತು ಚಿಟ್ಟೆಗಳು ಫೋನ್ ಮಾಡುತ್ತಿವೆ. ಯಾಕೆ ವಾಕಿಂಗ್ ಬರಲಿಲ್ಲ ಎಷ್ಟು ದಿನ ಆಯ್ತು ನೋಡಿ ಅಂತ ಹೇಳ್ತಾ ಇವೆ’- ಅಂದ . ಅವನು ಹೇಳ್ತಾ ಇದ್ದ ರೀತಿ ನೋಡಿದರೆ ಹೌದೇನೋ ಅನ್ನಿಸಬೇಕು. ಒಂದಷ್ಟು ದಿನಗಳ ಹಿಂದೆ ದಿನಾ ಬೆಳಗ್ಗೆ ಅವನ ಕೈಹಿಡಿದು ಅಲ್ಲೆಲ್ಲ ಸುತ್ತಾಡಿದ್ದು ಚಿಟ್ಟೆಗಳನ್ನು ಹಕ್ಕಿಗಳನ್ನು ಮರಗಳನ್ನು ಮಾತಾಡಿಸಿದ್ದು ಅವನ ಮನಸ್ಸಿನಲ್ಲಿ ಬೆಚ್ಚಗೆ ಕುಳಿತಿದೆ. ನನ್ನ ಸೊಂಟನೋವಿನ ಕಾರಣದಿಂದ ಈ ಸುತ್ತಾಟ ನಿಂತು ಕೆಲವು ದಿನಗಳಾಗಿದ್ದವು. ಈಗ ಅದು ವಾಸಿಯಾಗಿರುವ ಸುಳುಹು ಅವನಿಗೆ ಸಿಕ್ಕಿಬಿಟ್ಟಿದೆ. ಈಗ ಬೇರೆ ನೆಪಗಳನ್ನು ಹೇಳುವಂತೆಯೂ ಇಲ್ಲ. ಅವನ ಜೊತೆ ಹಾಗೆ ಸುತ್ತಾಡುವುದು ನನಗೆಂದೇನು, ಯಾರಿಗೂ ಇಷ್ಟವಾಗಬಹುದು.

ಹೀಗೆ ಸುತ್ತಾಟಕ್ಕೆ ಇಳಿವಾಗ ಸೂರ್ಯದೇವರಿಗೆ ಚಾಮಿ( ನಮಸ್ತೇ) ಮಾಡಲು ಅವನಿಗೆ ಹೇಳಿ ನಾನೂ ಮಾಡುತ್ತಿದ್ದೆ. ಸೂರ್ಯಚಾಮಿ ಇರದಿದ್ದರೆ ಏನಾಗಬಹುದು ಗೊತ್ತೇ ಮತ್ತೆ ಬೆಳಗಾಗುವುದೇ ಇಲ್ಲ. ಯಾವಾಗಲೂ ಕತ್ತಲೆಯೇ ಎಂದೆಲ್ಲ ಅವನಿಗೆ ಹೇಳಿದ್ದೆ. ಹಾಗಾಗಿ ಇಂದು ಮನೆಯಿಂದ ಕೆಳಗೆ ಇಳಿದ ಕೂಡಲೇ ಸೂರ್ಯಚಾಮಿಗೆ ನಮೋನಮ: ಎಂದು ಹೇಳುವ ಎಂದು ನೆನಪಿಸಿದ. ಹಾಗೆ ಹೋಗುತ್ತ ಹತ್ತಿರದ ಮನೆಯ ಮಾಷ್ಟ್ರ ಅಂಗಳ ತಲಪಿದೆವು. ಅಲ್ಲಿ ಅಂಗಳ ತುಂಬ ಚೆಲ್ಲ ನಗುತ್ತಿದ್ದ ಪಾರಿಜಾತ ಹೂವುಗಳು! ಅದನ್ನು ನೋಡಿ ಪುಳಕಗೊಂಡು ‘ರಂಗೋಲಿ ಹಾಕಿದ ಹಾಗೆ ಇದೆ ಅಲ್ವಾ ಅಜ್ಜೀ’ ಎಂದು ಕುಣಿದಾಡಿದ ನಾಲ್ಕಾರು ಹೂಗಳನ್ನು ಎತ್ತಿ ಪರಿಮಳವನ್ನು ಆಘ್ರಾಣಿಸಿದ. ನನ್ನ ಮೂಗಿನ ಬಳಿಗೂ ತಂದು ಸವಿಯುವಂತೆ ಹೇಳಿದ. ಅಂಗಳವನ್ನು ದಾಟಿ ಮುಂದುವರಿದು ಕಾಡಾಗಿದ್ದದ್ದು ತೋಟವಾಗುತ್ತಲಿದ್ದ ಈಗ ಅರೆಕಾಡು ಅರೆತೋಟವಾಗಿದ್ದ ಆ ಜಾಗದಲ್ಲಿ ಹೋಗುತ್ತಿದ್ದಂತೆ ಚಿಟ್ಟೆಗಳು ಸ್ವಾಗತಿಸಿದವು. ಹಕ್ಕಿಗಳು ಕೂಗುತ್ತ ನಲಿಯುತ್ತ ಬೆಳಗಿನ ಆನಂದದಲ್ಲಿ ಮೈಮರೆತಿದ್ದವು. ಅವುಗಳ ಜೊತೆ ಇವನ ಸಂಭಾಷಣೆ ಬೆಳೆಯಿತು.

ಅಷ್ಟರಲ್ಲಿ ಪಕ್ಕದಲ್ಲಿ ‘ನೆಕ್ಕರಿಕ’ ಗಿಡದಲ್ಲಿ ಅರಳಿದ ನೇರಳೆ ಸುಂದರಿಯರು ಕಣ್ಸೆಳೆದರು.ಮೋಹಕವಾದ ಬಣ್ಣ ಮತ್ತು ಆಕೃತಿಯಿಂದ ಮೋಡಿ ಮಾಡುವ ಆ ಹೂಗಳನ್ನು ನೋಡಿದ್ದೆ ತಡ ಕೊಯಿದುಕೊಡುವಂತೆ ದುಂಬಾಲುಬಿದ್ದ. ಒಂದೆರಡು ಕೊಯಿದುಕೊಟ್ಟೆ. ಎರಡು ಎಸಳನ್ನು ಬಿಡಿಸಿ ಬಾಯಿಗೆ ಹಾಕಿ ರುಚಿಯನ್ನು ಸವಿದ. ಒಗರು ರುಚಿಯಾದರೂ ಉಗಿಯಲಿಲ್ಲ. ಇದು ತಂಬುಳಿ ಮಾಡುವ ಗಿಡದ ಹೂವಲ್ಲವೇ. ಹೊಟ್ಟೆಗೆ ಒಳ್ಳೆದು ಎಂದು ದೊಡ್ಡವರಂತೆ ಉಪದೇಶ ಮಾಡಿದ. ಅಜ್ಜಿ ಈ ಹೂವನ್ನು ತಂಬುಳಿ ಮಾಡಬಹುದಲ್ಲವೇ ಅಂದ. ಸರಿ ಹಿಂದೆ ಹೋಗುವಾಗ ಮತ್ತಷ್ಟು ಹೂಗಳನ್ನು ಆರಿಸಿಕೊಂಡು ಹೋಗುವ ಎಂದೆ. ಮತ್ತೆ ಅದೇ ಕಾಲ್ದಾರಿಯಲ್ಲಿ ಮುಂದುವರಿದಾಗ ಅಕ್ಕ ಪಕ್ಕದಲ್ಲಿ ಹಬ್ಬಿದ ಬಳ್ಳಿಗಳಲ್ಲಿ ಬಲೆಯಂತಿರುವ ಕವಚವನ್ನು ಹೊದ್ದ ಪುಟಾಣಿ ಹಳದಿಹಣ್ಣು ( ಅದರ ಹೆಸರು?) ಕಣ್ಣಿಗೆ ಬಿತ್ತು. ಸರಿ ಅದು ತನಗೆ ಬೇಕೆಂದ. ಒಂದೆರಡನ್ನು ಬಿಡಿಸಿತಂದೆ. ಬಲೆಯ ಕವಚವನ್ನು ಬಿಡಿಸಿ ಹಣ್ಣನ್ನು ಕಿವುಚಿದಾಗ ಅದರ ಒಳಗಿಂದ ಚಿಮ್ಮಿದ ಪುಟ್ಟಪುಟ್ಟ ಬೀಜದ ಜೊತೆ ಲೋಳೆಯಂತಿರುವ ಭಾಗವನ್ನು ನಾನು ರುಚಿನೋಡಿದೆ ಸಿಹಿಯಾಗಿತ್ತು! ನನ್ನ ಮುಖಭಾವವನ್ನು ನೋಡಿ ತನಗೂ ಬೇಕೆಂದ . ಅವನಿಗೂ ಅದರ ರುಚಿ ಇಷ್ಟವಾಗಿ ಇನ್ನೂ ಬೇಕೆಂದ.ಐದಾರು ಬಿಡಿಸಿಕೊಟ್ಟೆ. ಬಳಿಕ ಈ ಹಣ್ಣುಗಳು ನಮಗೆ ಮಾತ್ರವಲ್ಲ. ಚಿಟ್ಟೆಗಳಿಗೆ ಹಕ್ಕಿಗಳಿಗೆ, ಹುಳಗಳಿಗೆ ಎಲ್ಲರಿಗೂ ಸೇರಿದ್ದು. ಅವು ಕೂಡ ಚಾಮಿದೇವರ ಮಕ್ಕಳಲ್ಲವೇ. ಎಂದೆ. ಆಗ ಹೌದು. ನಾನು ಕೂಡ ಚಾಮಿ ದೇವರ ಮಗನೇ. ನಾನು ತಿಂದರೆ ಚಾಮಿದೇವರಿಗೆ ಸಂತೋಷವಾಗಬಹುದಲ್ಲವೇ. ಎಂದ. ‘ಹೌದು ಆದರೆ ಚಾಮಿ ದೇವರ ಬೇರೆ ಮಕ್ಕಳಿಗೂ ಬೇಕಲ್ಲ ‘ಎಂದೆ ‘ಹೂಂ’ ಅಂದ.

ತೋಟದಲ್ಲಿದ್ದ ಅಡಕೆ ಗಿಡಗಳಿಗೆ ಸ್ಪಿಂಕ್ಲರ್ ನಿಂದ ನೀರು ಹಾರುತ್ತಿತ್ತು. ನೋಡುತ್ತ ನೋಡುತ್ತ ಅವನ ಕೈಯನ್ನು ಗಟ್ಟಿಯಾಗಿ ಹಿಡಿದಿದ್ದಂತೆ ಸ್ವಲ್ಪ ಇಳಿಜಾರಾದ ಆ ದಾರಿಯಲ್ಲಿ ನಾನು ಬಿದ್ದು ಬಿಟ್ಟಿದ್ದೆ.ನಾನು ಕೊಡವಿಕೊಂಡು ಮೇಲೆದ್ದೆ. ಪುಣ್ಯಕ್ಕೆ ಅವನಿಗೆ ಏನೂ ಆಗಲಿಲ್ಲ.ಅವನು ನನ್ನನ್ನು ‘ ಏನೂ ಆಗಲಿಲ್ಲ ಅಜ್ಜಿ ‘ಎನ್ನುತ್ತ ಸಮಾಧಾನಪಡಿಸುತ್ತ ಮೆಲ್ಲಗೆ ಉಜ್ಜಿದ. ‘ಮತ್ತೆ ನನಗೆ ಏನೂ ಆಗಲಿಲ್ಲ ,ಯಾಕೆ ಗೊತ್ತೇ? ನಾನು ಚಾಮಿದೇವರ ಮಗ ಅಲ್ಲವೇ ‘ಎಂದ. ‘ಹೌದಪ್ಪ ‘ಎಂದೆ.’ನಾನು ನಿಮ್ಮ ಕೈಯನ್ನು ಗಟ್ಟಿಯಾಗಿ ಹಿಡಿಯುತ್ತೇನೆ ‘ಎಂದ.ಸ್ವಲ್ಪ ದೂರ ಹಾಗೆ ಹಿಡಿದ ಕೂಡ. ಮತ್ತೆ ನಾನು ಮುಂದುವರಿದಂತೆ ಅವನು ಹಿಂದೆ ಉಳಿದ. ಯಾಕೆ ಎಂದು ನೋಡುತ್ತೇನೆ. ಅವನು ಪಕ್ಕದ ಪೊದರುಗಳನ್ನು ಮೆಲ್ಲನೆ ಕೈಯಿಂದ ಸವರುತ್ತಿದ್ದ. ‘ಏನು ಮಾಡುತ್ತಿದ್ದೀ’ ಎಂದು ಕೇಳಿದೆ. ಅದಕ್ಕೆ ‘ಆಶೀರ್ವಾದ ಮಾಡುತ್ತಿದ್ದೇನೆ’ ಎಂದ. ‘ಯಾಕೆ ‘ಎಂದೆ . ‘ಪಾಪ ಅಲ್ವಾ ,ಅದಕ್ಕೆ ‘ಅಂದ. ಸರಿ ಅಂದೆ.


ಹೀಗೆ ಸುತ್ತಾಡಿ ಮರಳುವಾಗ ಒಂದಷ್ಟು ನೇರಳೆ ಸುಂದರಿಯರನ್ನು ಬಿಡಿಸಿ ಒಂದು ಉಪ್ಪಳಿಗನ ಎಲೆಯಲ್ಲಿ ಸಂಗ್ರಹಿಸಿ ತಂದದ್ದಾಯಿತು. ಮನೆಗೆ ಬಂದ ಮೇಲೆ ಹೂಗಳ ಎಸಳುಗಳನ್ನು ಮಾತ್ರ ಬೇರ್ಪಡಿಸಿ ತುಸುವೇ ತುಪ್ಪದಲ್ಲಿ ಬಾಡಿಸಿ ಸ್ವಲ್ಪ ಜೀರಿಗೆ ಮತ್ತು ಕಾಯಿತುರಿಯೊಂದಿಗೆ ಉಪ್ಪುಹಾಕಿ ಅರೆದು ಮಜ್ಜಿಗೆ ಸೇರಿಸಿ ತಂಬುಳಿ ಮಾಡಿಯೂ ಆಯಿತು.ಮಧ್ಯಾಹ್ನ ಸುಜಯ ಪುಟ್ಟನಿಗೆ ತಂಬುಳಿಯಲ್ಲೇ ಊಟ. ಹೌದು ತುಂಬ ರುಚಿಯಾಗಿತ್ತು ತಂಬುಳಿ. ಆದರೆ ಆ ಮೋಹಕ ನೇರಳೆ ಬಣ್ಣ ಎಲ್ಲಿಗೆ ಹೋಯಿತು ಅಜ್ಜಿ -ಎಂದು ಅವನು ಕೇಳುತ್ತಿದ್ದರೆ ನನ್ನ ಬಳಿಯಲ್ಲಿ ಉತ್ತರವಿರಲಿಲ್ಲ.ನಿಮಗೆ ಗೊತ್ತೇ?

-ಮಹೇಶ್ವರಿ ಯು

7 Responses

  1. Anonymous says:

    ಪುಟ್ಟ ಮಕ್ಕಳ ಒಡನಾಟ ಜೇನುಸವಿದಂತೇ ಅವರಮುಗ್ದತೆ ಮನಸ್ಸಿಗೆ ಮುದ ಆದರೆ ಅವರು ಕೇಳಿವ ಪ್ರಶ್ನೆಗೆ ನಾವು ಉತ್ತರಿಸಲು ತಡಕಾಡುವಂತಾಗುತ್ತದೆ.ಏಕೆಂದರೆ ಅವರು ಈಗಿನ ಮಕ್ಕಳು.. ಅಭಿನಂದನೆಗಳು ಮೇಡಂ.

  2. ನಯನ ಬಜಕೂಡ್ಲು says:

    ಚಂದದ ಬರಹ, ಅಜ್ಜ /ಅಜ್ಜಿ ಹಾಗೂ ಮೊಮ್ಮಕ್ಕಳ ನಡುವಿನ ಒಡನಾಟ ಯಾವಾಗಲೂ ಆಪ್ತ. ಆ ಸಂದರ್ಭದಲ್ಲಿ ಗಮನಕ್ಕೆ ಬರುವ ವಿಚಾರಗಳು ಮಕ್ಕಳ ಮನಸಲ್ಲಿ ಅಚ್ಚೊತ್ತಿದಂತೆ ಸದಾ ಉಳಿದು ಬಿಡುತ್ತವೆ.

  3. Dr. Krishnaprabha says:

    ಚಂದದ ಲೇಖನ…ಪ್ರಕೃತಿಯನ್ನು ಪರಿಚಯಿಸುವ ಜೊತೆಗೆ ಮಗುವಿನ ಮುಗ್ಧತೆಯ ಪರಿಚಯಿಸಿದ್ದೀರಿ…ತನ್ನ ಮೋಹಕ ಬಣ್ಣದಿಂದ ಮನಸೆಳೆಯುವ ನೆಕ್ಕರಿಕ ಹೂವನ್ನು ನಾನು ಸಂಶೋಧನೆಯಲ್ಲಿ ಉಪಯೋಗಿಸಿದ್ದೇನೆ

  4. ಮೊಮ್ಮಗನ ಸಂಗದ ಜೊತೆ ಪ್ರಕೃತಿಯ ಸಂಗವನ್ನು ಸುಂದರವಾಗಿ ಬಣ್ಣಿಸಿದ್ದೀರ ಧನ್ಯವಾದಗಳು

  5. ಮಹೇಶ್ವರಿ ಯು says:

    ಮೆಚ್ಚುಗೆ ಯ ಮಾತುಗಳಿಗೆ ಧನ್ಯವಾದಗಳು

  6. ಶಂಕರಿ ಶರ್ಮ says:

    ನಿಮ್ಮ ಮೊಮ್ಮಗ ಸುಜಯನೊಂದಿಗೆ ನಮ್ಮನ್ನೂ ಸುತ್ತಾಡಿಸಿ ಮನಮೋಹಕ ಪ್ರಕೃತಿಯಲ್ಲಿ ಮಿಂದೇಳುವಂತೆ ಮಾಡಿದಿರಿ..ಧನ್ಯವಾದಗಳು ಮೇಡಂ.

  7. sudha says:

    a very nice way of teaching about environment to children.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: