ಪುಸ್ತಕ ಪರಿಚಯ: ನಾನು ದೀಪ ಹಚ್ಚಬೇಕೆಂದಿದ್ದೆ

Share Button

 

2020 ರ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಸ್ವೀಕೃತ ಕೃತಿಯಾದ  ಅಕ್ಷತಾ ಕೃಷ್ಣಮೂರ್ತಿಯವರ ನಾನು ದೀಪ ಹಚ್ಚಬೇಕೆಂದಿದ್ದೆ ಕವನ ಸಂಕಲನ ಹಚ್ಚಿದ ದೀಪ ಸದಾ ಬೆಳಗುತಿರುವಂತಹ ರೂಪದ ಕವಿತೆಗಳು. “ಎದೆಯ ದನಿಗು ಮಿಗಿಲು ಶಾಸ್ತ್ರವಿಹುದೇನು? ” ಎಂಬ ಕುವೆಂಪುವಾಣಿಯ ಸಾಲೊಂದು ಕವಿತೆಗಳನ್ನು ಓದಿದ ನಂತರ ನಮ್ಮ‌ಮನಸ್ಸಿಗೆ ಬಂದು ನೆಲೆಸುತ್ತದೆ.  ಎದೆಯ ದನಿಯನ್ನು ಹಾಗೆಯೆ ಅಕ್ಷರಕ್ಕಿಳಿಸಿ , ಮನಸ್ಸನ್ನು ಹಗುರಗೊಳಿಸಿ ನಿರಾಳವಾದ ಭಾವ , ಕವಿತೆಗಳನ್ನು ಎದೆಗಿಳಿಸಿಕೊಂಡ ನಂತರ ನಮ್ಮನ್ನು ಆವರಿಸಿಕೊಳ್ಳುತ್ತದೆ. ನಿರಾಳತೆ ಎನ್ನುವುದು ಮನುಷ್ಯನ ಸ್ವಾತಂತ್ರ್ಯದ  ಒಂದು ಭಾಗವು ಹೌದು . ಕವಿತೆಯ ರೂಪದಲ್ಲಿ ಬಂದ ವಿಭಿನ್ನ ಸಾಲುಗಳ ನಂತರ ಪ‌‌ಂಜರದ ಹಕ್ಕಿಯ ಬಾಗಿಲು ತೆರೆದ ತೆರದಿ ಕವಯತ್ರಿ ನಿರಾಳವಾಗಿಬಿಡುತ್ತಾರೆ.

ನನಗೆ ಬಿರುಗಾಳಿ/ ಎದ್ದುಬಿಟ್ಟಿದೆ ಅನಿಸುತ್ತದೆ/ ಪ್ರತಿ ಮಧ್ಯಾಹ್ನವು / ಮರವ ಮರೆತು/ ಎಲೆಗಳೆಲ್ಲ /ಗಾಳಿಯೊಡನೆ ಹೊರಟಿದ್ದಕ್ಕೆ…….. ಗಾಳಿಯಲ್ಲಿ ಗುದ್ದಾಡುವ ಎಲೆಗಳು ತಮ್ಮ ಸ್ವಭಾವವನ್ನು ಮರೆತು ಬೇರೆ ಕಡೆಗೆ ಮುಖಮಾಡಿ ತೆರಳುತ್ತವೆ. ಇದನ್ನು ಪ್ರಶ್ನಿಸುವ ಕವಯತ್ರಿ ಸ್ವಭಾವದ ಸಂಕುಚಿತ ಭಾವನೆಗಳನ್ನು ಪರಾಮರ್ಶಿಸುತ್ತಾರೆ.

ಕಾವ್ಯವನ್ನೆ  ತಮ್ಮ ಅಭಿವ್ಯಕ್ತಿ ಮಾಧ್ಯಮವಾಗಿಸಿಕೊಂಡ ಸಮಕಾಲೀನ ಕವಯತ್ರಿಗಳಲ್ಲಿ ಇವರು ಪ್ರಮುಖರು. ಸುತ್ತಲಿನ ಬದುಕಿಗೆ ಸಂಪೂರ್ಣವಾಗಿ ಗ್ರಹಿಕೆಯನ್ನು ತೆರೆದಿಟ್ಟು ಆ ಗ್ರಹಿಕೆಯ ಒಳನೋಟವನ್ನು ಗ್ರಹಿಸುವುದಿದೆಯಲ್ಲ ಅದು ಇವರ ಕವಿತೆಗಳಲ್ಲಿ ಪಡಿಮೂಡಿದೆ. ಅತ್ಯಂತ ಸೂಕ್ಷ್ಮವಾದ ಮನಸ್ಸಿನ ಭಾವನೆಗಳನ್ನು ನಾವು ಬೆರಗುಗೊಳ್ಳುವಂತೆ ಧ್ಯಾನಿಸಿ ಕವಿತೆಯಾಗಿಸಿದ್ದಾರೆ.  ನೋಡು ನೀನು ಮಾತನಾಡುವುದೇ ಒಂದು ಕನಸು / ಎಲ್ಲ ತಿಳಿದು ಕಣ್ಕಟ್ಟಿನಾಟ/ ಆಡುವ ಇರುಳು/ ನಿನ್ನ ನೆನಪ ನೇವರಿಕೆ / ಎದೆಗೂಡಲ್ಲಿ ಅಂತರ್ಧಾನವಾಗುತ್ತಲೇ ಇದೆ / ನೀ ಮಾತನಾಡದಿದ್ದರೂ ……. ಬೇಂದ್ರೆಯವರ ಸಖ್ಯದ ಅಖ್ಯಾನವಿದು ಎಂಬ ಸಾಲಿನಂತೆ ಇವರ ಕವಿತೆ ಇಲ್ಲಿ ಪಡಿಮೂಡಿದೆ. ಇವರ ಭಾವಲಹರಿ ನಮ್ಮದು ಎಂಬಂತೆ ನಮ್ಮ ಭಾವನೆಯೊಳಗೆ ಹರಿದು ಬಿಡುತ್ತದೆ. ಇಲ್ಲಿ ಕವಯತ್ರಿಯ ಸಂವೇದನಾ ಶಕ್ತಿ ನಾವೆಲ್ಲರು ಗಮನಾರ್ಹವಾಗಿ ಗಮನಿಸಬೇಕಾದ ಅಂಶ. ಪ್ರತಿ ಕವಿತೆಯಲ್ಲು ಸೃಜನಶೀಲತೆ ಎದ್ದು ಕಾಣುತ್ತದೆ. ಕೊರಗುವುದನ್ನು ನಿಲ್ಲಿಸಬೇಕು/ ಆಗದಿದ್ದರೆ ಕಾಯುವುದನ್ನು ಕಲಿಯಬೇಕು/ ಅದು ಆಗದಿದ್ದರೆ /ಬಿಡುವಿಲ್ಲದ ಕೆಲಸ ಮಾಡಬೇಕು. ಇಂತಹ ಸೃಜನಶೀಲತೆ ಉಕ್ಕಿ ಹರಿಯುವಂತಹ ಹಲವಾರು ಸಾಲು “ನಾನು ದೀಪ ಹಚ್ಚಬೇಕೆಂದಿದ್ದೆ’ ಕೃತಿಯಲ್ಲಿದೆ. ಕಾವ್ಯ ಸಹಜವಾಗಿ ಸ್ಪುರಿಸಿದರೆ ಮಾತ್ರ ಅದು ಓದುಗರ ಮನಸ್ಸನ್ನು ಬಲುಬೇಗ ತಟ್ಟಿ ಬಿಡುತ್ತದೆ . ಅದು ಇವರ ಕವಿತೆಗಳಲ್ಲಿ ಸಿದ್ಧಿಸಿದೆ ಎಂಬುದು ದಿಟ.  ಇಳೆಯ ಜಡೆಯಲ್ಲಿ ಅವಿತ ಇರುಳು / ಪದರು ಪದರಾಗಿ ಬಿಡಿಸಿಕೊಂಡು / ನಕ್ಕಾಗಲೇ ನಸುಕು. ಹೀಗೆ ಭಾವಲಹರಿ ನಮ್ಮೊಳಗೆ ಸಾಂಗವಾಗಿ ಹರಿದು ಬಿಡುತ್ತದೆ.

ಕವಯತ್ರಿ ತನ್ನ ಸುತ್ತಲಿನ ಬದುಕನ್ನು ವಿಭಿನ್ನವಾಗಿ ನೋಡುತ್ತಾ ಆ ಮೂಲಕ  ಜನಜೀವನವನ್ನು ಜೊತೆಗೆ ಮನಸ್ಸಿನ ಭಾವನೆಗಳನ್ನು ಆಳವಾಗಿ ಕವಿತೆಯಲ್ಲಿ ಬೇರೂರಿಸುತ್ತಾರೆ. ಬೇರು ಆಳಕ್ಕೆ ಹೋದಾಗ ಕವಿತೆ ಗಟ್ಟಿಯಾಗಿ ನಿಲ್ಲುತ್ತದೆ ಎಂಬ ಸತ್ಯ ಕವಯತ್ರಿಯ ಕವಿತೆಗಿದೆ . ಇದುವೆ ಅವರ ಕವಿತೆಗಳ ಅಂತಸತ್ವ. ಕೃಷ್ಣ ರಾಧೆ ಮುಗಿಯದ ಚಿತ್ರ / ಮುಚ್ಚಿಟ್ಟರು ಮನ್ನಲೆಗೆ ಬಂದು ನಿಲ್ಲುವ ಪಾತ್ರ . ಎಂಬ ರೋಮಾಂಚನವಾಗುವ ಸಾಲುಗಳು ಇವರ ಕಾವ್ಯದ ಅಸ್ತಿತ್ವವನ್ನು ಹೇಳುತ್ತದೆ ಮತ್ತು ‌ಸಾರುತ್ತದೆ. ನಾನು ದೀಪ ಹಚ್ಚಬೇಕೆಂದಿದ್ದೆ ಕೃತಿ ಸರ್ವರ ಹೃದಯದಲ್ಲಿ ಸದಾ ಜ್ವಲಿಸುವ ದೀಪವಾಗಿ ಬೆಳಗುತ್ತಿರುತ್ತದೆ ಎಂಬುದರಲ್ಲಿ ಸಂಶಯವಿಲ್ಲ.

-ಸಂಗೀತ ರವಿರಾಜ್ , ಮಡಿಕೇರಿ

7 Responses

  1. ನಯನ ಬಜಕೂಡ್ಲು says:

    ಗಹನವಾಗಿ ಓದಿದಾಗ ಗೊತ್ತಾಗುತ್ತದೆ ಕವಿತೆಗಳೂ ಒಂದೊಂದು ಕಥೆ ಹೇಳುತ್ತವೆ ಅಂತ. ಸುಂದರವಾದ ಕೃತಿ ಪರಿಚಯ.

  2. ಸಂಗೀತ ರವಿ ರಾಜ್ says:

    ಧನ್ಯವಾದಗಳು ಸುರಹೊನ್ನೆ ಹೇಮಕ್ಕ ಮತ್ತು ತಂಡಕ್ಕೆ

  3. ಸಂಗೀತ ರವಿ ರಾಜ್ says:

    ಧನ್ಯವಾದಗಳು ನಯನರವರೆ

  4. Akshata krishnmurthy says:

    ಪುಸ್ತಕ ಪರಿಚಯದ ಮೂಲಕ ಆಪ್ತ ಬರಹ ನೀಡಿದ ಸಂಗೀತಾ ಅವರಿಗೆ ಧನ್ಯವಾದ. ಪ್ರಕಟಿಸಿದ ಸುರಹೊನ್ನೆಗೆ ಧನ್ಯವಾದಗಳು

  5. ಶಂಕರಿ ಶರ್ಮ says:

    ಪ್ರಶಸ್ತಿ ಪಡೆದ ಕವನ ಸಂಕಲನದ ವಿಮರ್ಶಾತ್ಮಕ ಕೃತಿ ಪರಿಚಯ ಮನಸ್ಸಿಗೆ ಮುದ ನೀಡಿತು.. ಧನ್ಯವಾದಗಳು ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: