ಕನವರಿಕೆ
ಖಾಲಿಯಾಗಿದೆ ಜೋಲಿಹೊಡೆದಿದೆ
ಮನದ ಒಳಗಿನ ಮಂಥನ
ನಿನ್ನೆ ನೆನಪಲಿ ನಾಳೆ ಭ್ರಮೆಯಲಿ
ಬದುಕು ಸತ್ತಿದೆ ಇಂದಿನ
ಸುತ್ತ ಸಾಗುವ ಜಾತ್ರೆ ದಿಬ್ಬಣ
ಮುಸುಕ ಮಸುಕನು ಕಳೆಯದೇ
ಭಾವ ತಬ್ಬಲಿ ಮರುಗುತಿರುವುದು
ಬೆಳ್ಳಿ ಕಿರಣವು ಹೊಳೆಯದೆ
ನೋವಿನಾಸರೆ ಬೇಕು ಬದುಕಲಿ
ನಲಿವ ಮಹಡಿಯ ಕಟ್ಟಲು
ಆಸೆ ಇಟ್ಟಿಗೆ ಒಲವ ಗಾರೆಯು
ಭರವಸೆಯು ಮಹಡಿಯ ಮೆಟ್ಟಿಲು
ಬೇಲಿಯೊಳಗಡೆ ಬದುಕು ಬಂಧಿ,
ಆಚೆ ಗಂಧವು ಸೆಳೆದಿದೆ..
ನೋಟಕೆಟುಕದ ಆಟವೆಲ್ಲವು
ಮಾಟದಂತೆಯೇ ಕಾಡಿದೆ..
ಪುಟ್ಟ ಬದುಕಲಿ ಬಿಟ್ಟುಹೋಗುವ
ಹೆಜ್ಜೆಗುರುತದು ದೊಡ್ಡದು
ದೊಡ್ಡ ನಾಳೆಯ ನೆನಪಲುಳಿಯುವ
ನನ್ನ ಪಾಲದು ಪುಟ್ಟದು…
–ವಿದ್ಯಾಶ್ರೀ ಅಡೂರ್.
ಸುಂದರವಾದ ಸಾಲುಗಳು. ಇಲ್ಲಿ ಬದುಕಿನ ಪ್ರತಿ ಭರವಸೆ ಹೊಂದೆಂದು ಪ್ರೇರೇಪಿಸುವ ಪಾಠ ಇದೆ
ಧನ್ಯವಾದಗಳು ಮೇಡಂ
ಬದುಕಿನ ಭರವಸೆ ಯನ್ನು ಕವಿತೆ ಯ ಚೌಕಟ್ಟಿನಲ್ಲಿ ಕಟ್ಟಿಕೊಡುವ ಪ್ರಯತ್ನ ಕ್ಕೆ ನನ್ನದೊಂದು ನಮನ
ಗೆಳತಿ.
ಧನ್ಯವಾದಗಳು ಮೇಡಂ…. ಅಲ್ಲಲ್ಲ.. ಗೆಳತಿ
ಚಂದದ ಹಾಡು
ಬದುಕಿನ ಏರಿಳಿತಗಳ ನಡುವೆ ಭರವಸೆಯ ಮೆಟ್ಟಲನ್ನು ತೋರಿಸಿದ ಪರಿ ಬಹಳ ಚೆನ್ನಾಗಿದೆ..ಸೊಗಸಾದ ಕವಿತೆ.