ಸ್ತ್ರೀ ಸಮಾನತೆ – ಸಾಧನಾ ಪರಂಪರೆ ಪುಟ 2
ಸಮಾನತೆ ಸಾಧನೆಯ ಅಸ್ತಿಭಾರ
(ಅ) ವೇದಕಾಲೀನರು
ಮಂತ್ರದ್ರಷ್ಟಾರರು:
ವೇದ, ಉಪನಿಷತ್ತು, ಪುರಾಣಗಳು ನಮ್ಮ ಪ್ರಾಚೀನ ಇತಿಹಾಸವನ್ನು ಅಧ್ಯಯನ ಮಾಡಲು ಇರುವ ಆಕರಗಳು. ವೇದಗಳು ಮಂತ್ರದ್ರಷ್ಟಾರರ ಅಭಿವ್ಯಕ್ತಿ. ಅಸಂಖ್ಯಾತ ಪುರುಷ-ಮಂತ್ರದ್ರಷ್ಟಾರರ ಮಧ್ಯೆ ಎದ್ದು ಕಾಣುವ ಸ್ತ್ರೀಯರು ಲೋಪಾಮುದ್ರೆ, ಸುಲಭಾ, ವಿಶ್ವಾವರಾ, ಸಿಕತಾ, ನಿವಾವರಿ, ಘೋಷಾ, ಇಂದ್ರಾಣಿ, ಶಚಿ. ಇವರು ನಿಶ್ಚಯವಾಗಿ ಋಗ್ವೇದದ 5, 8, 9, 10ನೇ ಮಂಡಳಗಳಲ್ಲಿಯ ಕ್ರಮಾಗತವಾಗಿ 179, 91, 11-20 ಮತ್ತು 81, 39-40, 145 ಮತ್ತು 159ನೇ ಋಕ್ ಗಳ ದ್ರಷ್ಟಾರರು. ದಿನನಿತ್ಯದ ಬ್ರಹ್ಮಯಜ್ಞದಲ್ಲಿ ದಿನವೂ ಗೌರವ ಸಲ್ಲಿಸಬೇಕೆಂದು ನಮ್ಮ ಸಂಪ್ರದಾಯವು ಸೂಚಿಸಿರುವವರ ಪಟ್ಟಿಯಲ್ಲಿರುವ ಸ್ತ್ರೀಯರು ಸುಲಭಾ ಮೈತ್ರೇಯಿ, ವಡವಾ ಪ್ರಾಥಿತೇಯಿ, ಗಾರ್ಗಿ ವಾಚಕ್ನವಿ.
ಕಾಕಕೃತ್ಸ್ನೆಯರು:
ಋಗ್ವೇದದ ಕಾಲದಲ್ಲಿ ಸ್ತ್ರೀಯರೂ ಸಹ ಬ್ರಹ್ಮಚಾರಿಗಳಾಗಿದ್ದುಕೊಂಡು ವೈದಿಕ-ತಾತ್ತ್ವಿಕ ಅಧ್ಯಯನ ಮಾಡುತ್ತಿದ್ದರು. ಕಠಿಣಶಾಸ್ತ್ರವಾದ ಪೂರ್ವಮೀಮಾಂಸಾ ವಿಭಾಗದಲ್ಲಿ ಪರಿಣತಿ ಪಡೆಯುವ ಸಾಹಸಕ್ಕೂ ಕೈಹಾಕುತ್ತಿದ್ದರು. ಕಾಕಕೃತ್ಸ್ನಿ ಎಂಬ ಮೀಮಾಂಸಾ ವಿಭಾಗವನ್ನು ಅಧ್ಯಯನ ಮಾಡಿ ವಿದುಷಿಯರಾದವರನ್ನು ಕಾಕಕೃತ್ಸ್ನಾ ಎಂದು ಪ್ರತ್ಯೇಕ ಹೆಸರಿನಿಂದ ಗುರುತಿಸಬಹುದಾದಷ್ಟು ಗಣನೀಯ ಸಂಖ್ಯೆಯಲ್ಲಿ ಸ್ತ್ರೀಯರು ಇದ್ದರು. ಅವರು ಒಳ್ಳೆಯ ಗಂಡ, ಮಕ್ಕಳು, ಸ್ವಂತ ಆರೋಗ್ಯ, ದನಕರುಗಳು, ಪಚ್ಚೆಪೈರು ಇತ್ಯಾದಿಗಳು ಬೇಕು ಎಂದು ಮಾತ್ರ ಹಂಬಲಿಸುವವರ ಮಧ್ಯೆ ಇದ್ದದ್ದು ಸ್ತ್ರೀ-ಪುರುಷ ಬೌದ್ಧಿಕ ಸಮಾನತೆಯ ಸಾಧನಾಪಥದ ನಿರ್ಮಾಣದ ದೃಷ್ಟಿಯಿಂದ ಗಮನಾರ್ಹ.
(ಆ) ಉಪನಿಷತ್ಕಾಲೀನರು
ಸದ್ಯೋವಹರು:
ಉಪನಿಷತ್ಕಾಲಘಟ್ಟದಲ್ಲಿ ಹುಡುಗಿಯರೂ ಸಹ ಉಪನಯನ ಸಂಸ್ಕಾರಕ್ಕೆ ಒಳಪಟ್ಟು ಗುರುಕುಲಗಳಲ್ಲಿ ಅಥವಾ ಮನೆಯಲ್ಲಿಯೇ ವಿದ್ಯಾಭ್ಯಾಸ ಪಡೆಯುತ್ತಿದ್ದರು. ಅವರದು ಸದ್ಯೋವಹರು ಮತ್ತು ಬ್ರಹ್ಮವಾದಿನಿಯರು ಎಂದು ಎರಡು ವರ್ಗ. ಸದ್ಯೋವಹರು ಮದುವೆಯಾಗುವ ತನಕ ಸುಮಾರು 8-9 ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡುವ ಹುಡುಗಿಯರು. ಇವರು ಮದುವೆಯಾದ ನಂತರ ತಮ್ಮ ಗಂಡನಂತೆ ಬೆಳಿಗ್ಗೆ ಮತ್ತು ಸಂಜೆ ಅಗ್ನಿಹೋತ್ರ ಮಾಡಿ ವೇದಮಂತ್ರಗಳನ್ನು ಪಠಿಸುತ್ತಿದ್ದರು.
ಬ್ರಹ್ಮವಾದಿನಿಯರು:
ಆತ್ಮಶಕ್ತಿಯನ್ನು ಬ್ರಹ್ಮಶಕ್ತಿಯೊಂದಿಗೆ ಬೆಸೆಯುವ ಪ್ರಯತ್ನದ ಫಲವೇ ಉಪನಿಷತ್ತುಗಳು. ಉಪನಿಷದ್ ಜಿಜ್ಞಾಸೆಯಲ್ಲಿ ಸ್ವಾನುಭವದಿಂದ ವಿದ್ವತ್ತಿನೊಂದಿಗೆ ಭಾಗಿಯಾಗುವವರು ಬ್ರಹ್ಮವಾದಿನಿಯರು. ಇವರಲ್ಲಿ ಪ್ರಸಿದ್ಧರಾದವರು ಯಾಜ್ಞವಲ್ಕ್ಯನ ಹೆಂಡತಿ ಮೈತ್ರೇಯಿ, ಜನಕ ಮಹಾರಾಜ ಏರ್ಪಡಿಸಿದ್ದ ತತ್ತ್ವಜಿಜ್ಞಾಸೆಯ ಗೋಷ್ಠಿಯಲ್ಲಿ ಎಲ್ಲಾ ಜಿಜ್ಞಾಸುಗಳ ಪರವಾಗಿ ಯಾಜ್ಞವಲ್ಕ್ಯನನ್ನು ಪರೀಕ್ಷೆಗೆ ಒಡ್ಡಿದ ಗಾರ್ಗಿ, ವಾಲ್ಮೀಕಿ ಋಷಿಗಳ ಬಳಿ ಲವ ಕುಶರಂತೆ ವೇದಾಂತವನ್ನು ಅಧ್ಯಯನ ಮಾಡುತ್ತಿದ್ದ ಆತ್ರೇಯಿ. ಜೈನ ಪರಂಪರೆ ದಾಖಲಿಸಿರುವ ಪ್ರಸಿದ್ಧ ಮಹಿಳೆ ಮಹಾವೀರನೊಂದಿಗೆ ತತ್ತ್ವಜಿಜ್ಞಾಸೆ ನಡೆಸಿದ ಜಯಂತಿ. ಈಕೆ ಸಹಸ್ರಾನೀಕ ಮಹಾರಾಜನ ಮಗಳು.
ಬೌದ್ಧ ಪರಂಪರೆಯಲ್ಲಿ ಬೌದ್ಧ ವಿಹಾರಗಳಲ್ಲಿ ಮೋಕ್ಷಸಾಧನೆಯಲ್ಲಿ ನಿರತರಾಗಿದ್ದ ಸನ್ಯಾಸಿನಿಯರು ದೊಡ್ಡ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ. ಬೌದ್ಧ, ಜೈನ ಧರ್ಮಗಳು ಉಲ್ಲೇಖಿಸುವ ಅಧ್ಯಾತ್ಮವಾದಿ ಸ್ತ್ರೀಯರು ರಾಜಮನೆತನಕ್ಕೆ ಸೇರಿದವರು, ರಾಜಮನೆತನದ ಸುಖ ಸವಲತ್ತುಗಳನ್ನು ಪಡೆದವರು; ಆರಾಧಿಸುವ, ಓಲೈಸುವ ಅಧೀನರ ಗುಂಪನ್ನೇ ತಮ್ಮ ಹಿಂದೆ ಮುಂದೆ ಹೊಂದಿದ್ದವರು. ಮರುಳು ಮಾಡುವ ಭೋಗಭಾಗ್ಯಗಳಿಗಿಂತ ಸತ್ಯಶೋಧನೆಯೇ ಮಿಗಿಲು ಎಂದು ಪುರುಷರೊಂದಿಗೆ ಬೌದ್ಧಿಕವಾಗಿ, ಆಧ್ಯಾತ್ಮಿಕವಾಗಿ ಸಮಾನತೆಯ ನೆಲೆಯಲ್ಲಿ ನಿಂತವರು.
ವೃತ್ತಿ ಪರಿಣತರು:
ವಿದ್ಯಾವಂತ ಗೃಹಿಣಿಯರು ಔದ್ಯೋಗಿಕ ಕ್ಷೇತ್ರದಲ್ಲಿ ತಮ್ಮದೇ ಆದ ರೀತಿಯಲ್ಲಿ ಪುರುಷನೊಂದಿಗೆ ಸಮಾನವಾಗಿ ಹೆಜ್ಜೆ ಇಡುತ್ತಿದ್ದರು. ಅವರು ತಮಗೆ ಆಸಕ್ತಿ ಇರುವ ವೃತ್ತಿಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು, ಆರ್ಥಿಕವಾಗಿ ಸ್ವಾವಲಂಬಿಗಳಾಗಿರುತ್ತಿದ್ದರು. ಇವರಲ್ಲಿ ಬಹುಮಂದಿ ಉಪಾಧ್ಯಾಯರಾಗುತ್ತಿದ್ದರು, ನೂಲು ತೆಗೆಯುತ್ತಿದ್ದರು, ನೂಲಿಗೆ ಮತ್ತು ಬಟ್ಟೆಗೆ ಬಣ್ಣ ಹಾಕುತ್ತಿದ್ದರು, ಕಸೂತಿ ಕೆಲಸ ಮಾಡುತ್ತಿದ್ದರು ಅಥವಾ ಬುಟ್ಟಿ ಹೆಣೆಯುತ್ತಿದ್ದರು. ಕೆಲವರು ಶ್ರೀಮಂತರ, ರಾಜ ಮಹಾರಾಜರ ಮನೆಗಳಲ್ಲಿ ಬಾಗಿಲು ಕಾಯುತ್ತಿದ್ದರು, ಆಯುಧ ಹಿಡಿದು ರಕ್ಷಕರಾಗುತ್ತಿದ್ದರು, ಗುಪ್ತಚಾರಿಣಿಯರಾಗಿ ಶತ್ರುಗಳ ನೆಲೆಗೂ ಹೋಗಿ ಬರುತ್ತಿದ್ದರು. ಇನ್ನು ಕೆಲವರು ಸ್ವತಂತ್ರರಾಗಿ ವ್ಯಾಪಾರ ವಹಿವಾಟೂ ನಡೆಸುತ್ತಿದ್ದರು. ಇವರೆಲ್ಲಾ ಆರ್ಥಿಕ ಸ್ವಾತಂತ್ರ್ಯದ ಜೊತೆಗೆ ಸ್ವತಂತ್ರವಾಗಿ ಓಡಾಡುವ ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನೂ ಅನುಭವಿಸುತ್ತಿದ್ದರು.
(ಇ) ಪುರಾಣಕಾಲದ ಮಹಿಳೆಯರು:
ಪುರಾಣೇತಿಹಾಸಗಳಲ್ಲಿ ಗಮನ ಸೆಳೆಯುವ ಒಬ್ಬಾಕೆ ದೇವಯಾನಿ. ಈಕೆಯ ತಂದೆ ಶುಕ್ರಾಚಾರ್ಯರಿಂದ ಹೇಗಾದರೂ ಮೃತ ಸಂಜೀವಿನಿ ವಿದ್ಯೆಯನ್ನು ಸಿದ್ಧಿಸಿಕೊಳ್ಳಲು ಬಂದವನು ದೇವತೆಗಳ ಗುರು ಬೇಹಸ್ಪತಿಯ ಮಗ ಕಚ. ಅವನು ತನ್ನ ಗುರಿಯನ್ನು ತಲುಪಲು ದೇವಯಾನಿಯನ್ನು ದಾಳವನ್ನಾಗಿ ಮಾಡಿಕೊಂಡ, ಅಂದುಕೊಂಡದ್ದನ್ನು ಸಾಧಿಸಿದ. ಆನಂತರ ಅವಳಿಗೂ. ತನಗೂ ಇನ್ನು ಮುಂದೆ ಯಾವ ಸಂಬಂಧವೂ ಇಲ್ಲ ಎನ್ನುವಂತೆ ಸ್ವರ್ಗಕ್ಕೆ ಹೊರಟು ನಿಂತ. ದೇವಯಾನಿ ಅವನನ್ನು ಪತಿಯನ್ನಾಗಿ ವರಿಸಲು ಇಚ್ಛಿಸಿದುದನ್ನು ಒಪ್ಪಿಕೊಳ್ಳದೆ ಅವಳನ್ನು ಧಿಕ್ಕರಿಸಿದ. ಅವನಿಗೇ ಸೆಡ್ಡು ಹೊಡೆದವಳು ಈ ದೇವಯಾನಿ. ಮುಂದೆ ಅವಳನ್ನು ಮದುವೆಯಾದ ಯಯಾತಿ ಅವಳ ವ್ಯಕ್ತಿತ್ವವನ್ನೇ ಅವಮರ್ಯಾದಿಸಿದಾಗ ಅವನಿಗೆ ಚಳ್ಳೆಹಣ್ಣು ತಿನ್ನಿಸಿದವಳು ಇದೇ ದೇವಯಾನಿ.
ಇನ್ನೊಬ್ಬಾಕೆ ಮಾಧವಿ. ಈಕೆಯನ್ನು ಇವಳ ಸ್ವಂತ ಅಪ್ಪ ಯಯಾತಿ ಮಹಾರಾಜ ಬೇಜವಾಬ್ದಾರಿಯಿಂದ ವಿನಿಮಯದ ವಸ್ತುವಂತೆ, ಹೇಗೆ ಬೇಕಾದರೂ ಬಳಸಿಕೊಳ್ಳಬಹುದಾದ ದಾಸಿಯಂತೆ ಋಷಿಕುಮಾರನಿಗೆ ಕೊಟ್ಟುಬಿಟ್ಟವನು. ಹಲವಾರು ಜನರ ಸೇವೆಯನ್ನು ಮಾಡಿ ಋಷಿಕುಮಾರನ ಋಣಭಾರದಿಂದ ಬಿಡುಗಡೆ ಪಡೆದು ಅಪ್ಪನ ಮನೆಗೆ ಹಿಂತಿರುಗಿದ ಮೇಲೆ ಆ ಅಪ್ಪ ತಾನೊಬ್ಬ ಜವಾಬ್ದಾರಿಯುತ ತಂದೆಯೆನ್ನುವಂತೆ ಅವಳ ಸ್ವಯಂವರವನ್ನು ಏರ್ಪಡಿಸಿದಾಗ ಆ ಅಪ್ಪನನ್ನೂ, ತನ್ನನ್ನು ಮದುವೆಯಾಗಲು ಬಂದ ರಾಜಕುಮಾರರ ಸಮೂಹವನ್ನೂ ಧಿಕ್ಕರಿಸಿದ ಧೀರೆ ಈ ಮಾಧವಿ.
(ಮುಂದುವರಿಯುವುದು….)
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ : http://surahonne.com/?p=31765
-ಪದ್ಮಿನಿ ಹೆಗಡೆ, ಮೈಸೂರು
ಪುರಾಣ ಕಾಲ ಹಾಗೂ ಬಹಳ ಹಿಂದಿನ ಕಾಲದಲ್ಲೂ ಮಹಿಳೆ ಒಂದು ಸೀಮೆ, ರೇಖೆ, ಪರಿಧಿಯಲ್ಲಿ ಇದ್ದುಕೊಂಡೇ ಅದ್ಭುತ ಸಾಧನೆಗಳನ್ನು ಮಾಡಿದ್ದಾಳೆ ಅನ್ನುವ ವಿಚಾರ ಲೇಖನವನ್ನು ಓದುವಾಗ ಚೆನ್ನಾಗಿ ಅರ್ಥವಾಗುತ್ತದೆ.
Good article
ಬಹಳ ಹಿಂದಿನ ಕಾಲದಲ್ಲಿಯೂ ಮಹಿಳೆಯರು ಜ್ಞಾನಾರ್ಜನೆಯಲ್ಲಿ ಮಾಡಿದ ಸಾಧನೆಯ ವಿವರಗಳನ್ನು ತಿಳಿದು ನಿಜಕ್ಕೂ ಆಶ್ಚರ್ಯವಾಗುತ್ತದೆ. ಕುತೂಹಲಕಾರಿಯದ ಚಿಂತನಾತ್ಮಕ ಲೇಖನ ಚೆನ್ನಾಗಿದೆ.