‘ನೆಮ್ಮದಿಯ ನೆಲೆ’-ಎಸಳು 12

Spread the love
Share Button


(ಇದುವರೆಗಿನ ಕಥಾಸಾರಾಂಶ: ಸುಕನ್ಯಾಳ ಮನಸ್ಸಿನಲ್ಲಿ ತನ್ನ ಗತಕಾಲದ ನೆನಪಿನ ಸುರುಳಿ ಬಿಚ್ಚಲಾರಂಭಿಸಿದೆ. ಆಕೆಯ ಸರಳ ವಿವಾಹ, ಅಚ್ಚುಮೆಚ್ಚಿನ ಸೊಸೆಯಾಗಿ, ಆರತಿಗೊಂದು, ಕೀರುತಿಗೊಂದು ಮಕ್ಕಳಾಗಿ, ಆಧುನಿಕ ಮನೋಭಾವನೆಯೊಂದಿಗೆ ತಮ್ಮ ವಿವಾಹದ ವ್ಯವಸ್ಥೆ ತಾವೇ ಮಾಡಿಕೊಳ್ಳುವುದು ಬಿಸಿತುಪ್ಪದಂತಾಗುತ್ತದೆ. ಮಗ ತಮ್ಮ ಅಗತ್ಯಕ್ಕಾಗಿ ಅಮೇರಿಕಾಕ್ಕೆ ಕರೆಯಿಸಿಕೊಳ್ಳುತ್ತಾನೆ, ಬರಬರುತ್ತಾ ಸೊಸೆಯ ಅನಾದರ ಗಮನಕ್ಕೆ ಬರುತ್ತದೆ….ಮುಂದಕ್ಕೆ ಓದಿ)

ನನ್ನ ಮಗ ಫೋನ್ ಮಾಡಿದ್ದ ವಿಷಯವನ್ನು ನನ್ನವರಿಗೆ ತಿಳಿಸಿದೆ. “ಅಲ್ಲಾ ಅವನಿಗೆ ಬುದ್ಧಿ ಬೇಡವೇ? ಎನೋ ಪಕ್ಕದೂರಿನಲ್ಲಿದ್ದೇವೇನೋ ಎಂಬಂತೆ ಕರೆಯುತ್ತಾನೆ. ಮದುವೆಯಾದಾಗಿನಿಂದ ಬರೀ ಅವನ ಸೇವೆ ಮಾಡುವುದಕ್ಕೇ ಟೊಂಕಕಟ್ಟಿ ನಿಂತ ಹಾಗಾಯಿತು”ಎಂದು ಬೇಸರಪಟ್ಟರು.

“ಕೋಪಮಾಡಿಕೊಳ್ಳಬೇಡಿ, ಆಕ್ಷೇಪಿಸಲೂ ಬೇಡಿ. ನಮ್ಮನ್ನಲ್ಲದೆ ಅವನು ಇನ್ಯಾರನ್ನು ಕರೆಯುತ್ತಾನೆ. ಬೀಗರನ್ನು ಕರೆಸಿಕೊಳ್ಳುತ್ತಾನೆಂದರೆ ಅವರುಗಳ ಆರೋಗ್ಯ ಅಷ್ಟಕಷ್ಟೇ. ಸದ್ಯಕ್ಕೆ ನಾನಿನ್ನೂ ಚೆನ್ನಾಗಿದ್ದೇನೆ. ಅದಕ್ಕೇ ಎಡತಾಕಬೇಕಾಗಿದೆ. ಮಕ್ಕಳು ದೊಡ್ಡವರಾಗುವವರೆಗೆ. ಅಲ್ಲದೆ ನಮ್ಮ ಮಗಳ ಬಸಿರು, ಬಾಣಂತನ ಅಂತ ಏನಾದರೂ ಪ್ರಾರಂಭವಾದರೆ ಎಲ್ಲಿಗೆ ಹೋಗುವುದೂ ಕಷ್ಟ”ಎಂದೆ. “ಆಯಿತು ಬಿಡು ನೀನೂ ಅವನ ಮಾತಿಗೇ ತಾಳಹಾಕುತ್ತೀಯೆ. ನನಗೇನು ಎಷ್ಟು ಬೇಗ ಬುಕಿಂಗ್ ಸಿಗುತ್ತದೆಯೋ ಅಷ್ಟು ಬೇಗ ಟಿಕೆಟ್ಟಿನ ವ್ಯವಸ್ಥೆ ಮಾಡಿಸುತ್ತೇನೆ” ಎಂದರು ಮುಗುಮ್ಮಾಗಿ.

ನಾನೂ ವಿಷಯವನ್ನು ಹೆಚ್ಚು ಬೆಳೆಸಲು ಹೋಗಲಿಲ್ಲ. ನಾನು ಮತ್ತೆ ವಿದೇಶಕ್ಕೆ ಹೋಗುವ ತಯಾರಿ ನಡೆಯುತ್ತಿತ್ತು. ಅದೇ ಸಂದರ್ಭದಲ್ಲಿ ನನ್ನ ಮಗಳು “ಅಮ್ಮಾ ನಾನೊಂದು ಪ್ರಶ್ನೆ ಕೇಳಲೇ? “ಎಂದಳು. “ಅದೇನಮ್ಮಾ” ಎಂದೆ. “ನೀನು ಮೊದಲ ಸಾರಿ ಅಲ್ಲಿಗೆ ಹೋದಾಗ ಅಪ್ಪನೇ ದುಡ್ಡು ಕೊಟ್ಟಿದ್ದು ಗೊತ್ತು. ಆ ನಂತರ ಮತ್ತೆಮತ್ತೆ ಎಲ್ಲವೂ ನಿನ್ನ ಹಣದಲ್ಲೇ ವ್ಯವಸ್ಥೆ ಆಗುತ್ತಿದೆ. ಯಾಕೆ? ಹೀಗೆ” ಎಂದಳು. “ಹಾ ನಿನ್ನಪ್ಪನಿಗೆ ನನಗೆ ನಮ್ಮಪ್ಪನಿಂದ ನನ್ನ ಪಾಲಿನ ಹಣ ಬಂದಿದ್ದು ತಿಳಿದಿದೆ. ಆದ್ದರಿಂದ ಹೀಗೆ. ಏನು ಮಾಡಲಿ ನೀನೇ ಹೇಳು ಮಾಧವಿ. ಬಾಯಿಬಿಟ್ಟು ಕೇಳಲು ನನಗೆ ನನ್ನ ಸ್ವಾಭಿಮಾನ ಅಡ್ಡಬರುತ್ತದೆ. ಈ ಬಗ್ಗೆ ಅಪ್ಪ, ಮಗ ಇಬ್ಬರೂ ಗಮನವನ್ನೇ ಕೊಡುತ್ತಿಲ್ಲ. ಕಂಡೂ ಕಾಣದಂತೆ ವರ್ತಿಸುತ್ತಾರೆ. ಸೊಸೆಯಿಂದ ಕಾರು ತೆಗೆದುಕೊಂಡಾಗಿದೆ. ಅದರಷ್ಟು ಹಣ ಮುಗಿಯುವವರೆಗೂ ನಾನೇ ಕೊಡಬೇಕೇನೋ ನೋಡೋಣ” ಎಂದೆ.

“ಅದು ಹಾಗಲ್ಲಾ ಎಲ್ಲವನ್ನೂ ನೀನು ನಿನ್ನ ಮುದ್ದಿನ ಮಗನಿಗೇ ಕೊಟ್ಟುಬಿಟ್ಟರೆ ನನಗೇನು ಉಳಿಯುತ್ತದೆ? ಅವನು ಓದುವಾಗ ಈ ಅಜ್ಜಿ ಕೊಟ್ಟದ್ದನ್ನು ಕೊಟ್ಟೆ.. ಈಗ ತಾತ ಕೊಟ್ಟಿದ್ದ ಎಲ್ಲವನ್ನೂ ಹೋಗಿ ಬರಲು ಉಪಯೋಗಿಸುತ್ತಿದ್ದೀ” ಎಂದಳು.

ಅವಳ ಮಾತಿನ ಹಿಂದಿರುವ ಉದ್ದೇಶ ಈಗ ಸ್ಪಷ್ಟವಾಗಿ ತಿಳಿದ ನಾನು, ‘ಒಹೋ ನನ್ನ ಬಗ್ಗೆ ಕಾಳಜಿಗಲ್ಲ. ಅವಳ ಪಾಲಿಗೆ ಬರುವ ಮೊತ್ತದ ಚಿಂತೆ’ ಎಂದುಕೊಂಡು “ನೋಡು ಮಾಧವಿ, ನಿಮ್ಮಣ್ಣನಂತೂ ವಿದೇಶದಲ್ಲೇ ಸೆಟ್ಲ್ ಆಗೋ ಇರಾದೆ ಹೊಂದಿದಂತಿದೆ. ಮನೆಗಿನೆ ಎಲ್ಲವನ್ನೂ ಅಲ್ಲಿ ಮಾಡಿಕೊಂಡಿದ್ದಾನೆ. ಇಷ್ಟರಲ್ಲೇ ಅವರಿಗೆ ಗ್ರೀನ್‌ಕಾರ್ಡ್ ಕೂಡ ಸಿಕ್ಕಿರಬಹುದು. ಇನ್ನು ಇಲ್ಲಿರುವ ಸೈಟುಗಳು, ಹಣಕಾಸು, ಒಡವೆಗಳು ನಾವಿರುವವರೆಗೆ ನಮ್ಮದು. ನಂತರ ಎಲ್ಲವೂ ನಿನ್ನದೇ. ನೀನೂ ಬೇಗಬೇಗ ಒಂದೆರಡು ಮಕ್ಕಳನ್ನು ಮಾಡಿಕೋ. ನಾನು ಗಟ್ಟಿಯಾಗಿರುವಾಗಲೇ ಕೈಲಾದಮಟ್ಟಿಗೆ ನೆರವಾಗುತ್ತೇನೆ. ನಿನ್ನ ಮಕ್ಕಳನ್ನೂ ಬೆಳೆಸಿಕೊಡುತ್ತೇನೆ”ಎಂದ ಮಾತಿಗೆ ಉತ್ತರಿಸದೆ ಸರಿದುಹೋದಳು.

ಅವಳು ಹೋದ ದಿಕ್ಕನ್ನೇ ನೋಡುತ್ತಾ ಹುಂ ಈಗನ ಮಕ್ಕಳ ರೀತೀನೇ ಅರ್ಥವಾಗುತ್ತಿಲ್ಲ. ಯಾವ ಕಾಲಕ್ಕೇನು ಆಗಬೇಕೋ ಆದರೇ ಚೆನ್ನ. ಮದುವೆಯಾಗುವಾಗಲೇ ಮೂವತ್ತರ ಆಸುಪಾಸು, ಅನಂತರ ಏನೇನೋ ಪ್ಲಾನು, ದೇವರೇ ಇವರಿಗೆ ಬುದ್ಧಿಯನ್ನು ಕೊಡಬೇಕು. ಈ ವಿಷಯದಲ್ಲಿ ನನ್ನ ಸೊಸೆಯೇ ಬುದ್ಧಿವಂತೆ. ಒಂದೈದು ವರ್ಷದಲ್ಲಿ ಎಲ್ಲವನ್ನೂ ಮುಗಿಸಿಕೊಂಡಳು. ಇನ್ನು ಅವರನ್ನು ಬೆಳೆಸುವುದು ಅಷ್ಟೇ. ಈ ಸಾರಿ ಅಲ್ಲಿಗೆ ಹೋದಾಗ ಆದಿಗೆ ಹೇಳಬೇಕು. ಅಗಲಗಲ ನನ್ನನ್ನು ಕರೆಯಬೇಡವೋ. ಅಪ್ಪನಿಗೂ ವಯಸ್ಸಾಗುತ್ತಾ ಬಂತು. ಮನೆಗೆಲಸ, ಊಟತಿಂಡಿ ಎಲ್ಲವೂ ಫಜೀತಿಯಾಗುತ್ತೆ. ಅಲ್ಲದೆ ನಿನ್ನೊಬ್ಬನಿಗೇ ಗಮನಕೊಟ್ಟರೆ ಮಾಧವಿಗೆ ಅಸಮಾಧಾನವಾಗಬಹುದು ಎಂದು. ಛೇ..ಬೇಡ, ವಿದೇಶದಲ್ಲಿ ಅವರಿಗೆ ಏನೇನು ತಾಪತ್ರಯಗಳೋ, ಈ ಸಾರಿ ಹೋಗಿಬಂದು ಬಿಡುತ್ತೇನೆ. ಈಗ ನನ್ನ ಮಗಳ ಕಿವಿಗೆ ಬಾಣಬಿಟ್ಟಿದ್ದೇನೆ. ಅವಳು ಮಕ್ಕಳ ಕಡೆಗೆ ಯೋಚಿಸಿದರೆ ಅವಳ ಜವಾಬ್ದಾರಿ ಅವಳಿಗೇ ಅರ್ಥವಾಗುತ್ತದೆ. ಎಂದು ಸಮಾಧಾನ ತಂದುಕೊಂಡು ಹೊರಡುವ ತಯಾರಿ ನಡೆಸತೊಡಗಿದೆ.

ಅಂತೂ ಎಲ್ಲ ವ್ಯವಸ್ಥೆಯಾಗಿ ಮೂರನೆಯ ಸಾರಿ ನಾನೊಬ್ಬಳೇ ವಿದೇಶಕ್ಕೆ ಕೊರಟೆ. ಮೊದಲಿನ ಕುತೂಹಲ, ನಂತರದ ಆತಂಕ, ಹೇಗೆ ಏನು ಎತ್ತ ಎನ್ನುವ ಕಳವಳ ಎಲ್ಲವೂ ಮಾಯವಾಗಿ ಸುರಕ್ಷಿತವಾಗಿ ನನ್ನ ಮಗನಿದ್ದ ತಾಣಕ್ಕೆ ತಲುಪಿದೆ. ಯಥಾಪ್ರಕಾರ ಮಗನ ಆಗಮನದಿಂದ ಮನೆ ತಲುಪಿದ್ದಾಯ್ತು. ದೊಡ್ಡ ಮೊಮ್ಮಗನಿಗೆ ನನ್ನ ಗುರುತು ಸಿಕ್ಕಿತು. ಚಿಕ್ಕವೆರಡು ಹೊಸಬರನ್ನು ನೋಡುವಂತೆ ಮಿಕಿಮಿಕಿ ನೋಡಿದವು. ಒಂದೆರಡು ದಿನಗಳಲ್ಲೇ ನನಗೆ ಹೊಂದಿಕೊಂಡುಬಿಟ್ಟವು.

ನಾನಲ್ಲಿಗೆ ತಲುಪಿದಾಗ ನನ್ನ ಸೊಸೆಯು ಯಾವುದೋ ಸೆಮಿನಾರ್ ಇದೆಯೆಂದು ಬೇರೆಕಡೆಗೆ ಹೋಗಿದ್ದವಳು ನಾಲ್ಕು ದಿನಗಳ ನಂತರ ಮನೆಗೆ ಹಿಂದಿರುಗಿದಳು. ನನ್ನನ್ನು ನೋಡಿ ಅಚ್ಚರಿಯಿಂದ “ಏನತ್ತೆ ನೀವು ಇದ್ದಕ್ಕಿದ್ದಂತೆ ಇಲ್ಲಿಗೆ?” ಎಂದಳು. ನಾನು “ಆದಿತ್ಯ, ನಿನಗೆ ಏನೂ ಹೇಳಲಿಲ್ಲವೇ ಪ್ರಣತಿ. ನಾನು ಬರುವುದು ನಿನಗೆ ಗೊತ್ತಿಲ್ಲವೇ?” ಎಂದೆ. ಅವಳು ಚುಟುಕಾಗಿ “ಇಲ್ಲ” ಎಂದಳು. “ನನಗೆ ಅವನು ಎಂ.ಬಿ.ಎ., ಪರೀಕ್ಷೆ ಫೈನಲ್ ಎಕ್ಸಾಮಿದೆ ನೀನು ಬಂದರೆ ಅನುಕೂಲವಾಗುತ್ತದೆಂದು ಫೋನ್ ಮಾಡಿ ಕರೆದ” ಎಂದೆ. “ಏಕೋ ಆದಿ ನಿನ್ನ ಹೆಂಡತಿಗೆ ಈ ವಿಷಯ ಹೇಳಿರಲಿಲ್ಲವೇ?” ಎಂದು ಮಗನನ್ನು ಪ್ರಶ್ನಿಸಿದೆ.

ನಾನು ಬಂದ ಕಾರಣವನ್ನು ಬಾಯಿಬಿಟ್ಟು ಹೇಳಿದನಂತರ ಅವರಿಬ್ಬರ ನಡುವೆ ಮಾತುಕತೆ, ವಾಗ್ವಾದ ನಡೆಯಿತು. ತನ್ನ ಹೆಂಡತಿಗೆ ತಿಳಿಸದೇ ನನಗೆ ಆಹ್ವಾನವಿತ್ತಿದ್ದಾನೆ ಎಂಬುದು ಸ್ಪಷ್ಟವಾಯಿತು. ಹೋಗಲಿ ಬಂದದ್ದಾಯ್ತು. ದಾರಿಯಲ್ಲಿ ನಾವಿಬ್ಬರೇ ಇದ್ದಾಗಲಾದರೂ ಒಂದು ಸೂಚನೆ ಕೊಡಬಹುದಾಗಿತ್ತು. ಕೊಟ್ಟಿದ್ದರೆ ಅವಳಿಗೆ ಸಮಾಧಾನವಾಗುವಂತೆ ಏನಾದರೂ ಬೇರೆ ಕಾರಣ ಹೇಳಬಹುದಿತ್ತು. ಹಾಗೆ ಮಾಡದೆ ಅವನೂ ಪೆದ್ದನಂತೆ ಸಿಕ್ಕಿಕೊಂಡದ್ದಲ್ಲದೆ ನನಗೂ ಇರಿಸುಮುರಿಸು ಉಂಟು ಮಾಡಿದ್ದ ಆದಿ. ಆಕೆ ಮಕ್ಕಳನ್ನು ನೋಡಿಕೊಳ್ಳಲು ಬೇರೇನೋ ಏರ್ಪಾಟು ಮಾಡಿದ್ದಳಂತೆ. ಅದನ್ನು ಧಿಕ್ಕರಿಸಿ ಅವಳಿಗೆ ತಿಳಿಯದಂತೆ ನನಗೇಕೆ ಕರೆಯಿತ್ತ. ಈಗ ಅವಳ ಅಸಹನೆ, ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದ್ದ. ಹೇಗೂ ಬಂದಿದ್ದೇನೆ ಹೆಚ್ಚು ಪ್ರಶ್ನೆ ಮಾಡದೆ ಅವನ ಪರೀಕ್ಷೆ ಮುಗಿಯುವವರೆಗೆ ಬಾಯಿಮುಚ್ಚಿಕೊಂಡಿದ್ದು ಇಲ್ಲಿಂದ ಹೊರಟುಬಿಡುವುದೆಂದು ಮೌನಕ್ಕೆ ಶರಣಾದೆ.

‘ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು’ ಎಂಬಂತೆ ನನ್ನ ಸೊಸೆಯ ಮುಸುಕಿನೊಳಗಣ ಗುದ್ದು ಪ್ರಾರಂಭವಾಯಿತು. ಮೊದಲ ಸಲ ಬಂದಾಗ ನನ್ನ ಸಲಹೆ ಸೂಚನೆಗಳ ಬಗ್ಗೆ ತಾರೀಫು ಮಾಡುತ್ತಿದ್ದಳು. ಎರಡನೆಯ ಸಾರಿ ಬಂದಾಗ ಸ್ವಲ್ಪ ಮಟ್ಟಿಗೆ ಆಕ್ಷೇಪಣೆಗಳನ್ನು ಪರೋಕ್ಷವಾಗಿ ಮಾಡುತ್ತಿದ್ದಳು. ಈ ಸಾರಿ ಪ್ರತಿಯೊಂದಕ್ಕೂ ಕೊಕ್ಕೆ ಹಾಕತೊಡಗಿದಳು. ತಾನು ಕೆಲಸಕ್ಕೆ ಹೋಗುವಷ್ಟರಲ್ಲಿ ದೊಡ್ಡ ಮಗನನ್ನು ಶಾಲೆಯ ಕ್ಯಾಬಿಗೆ ಹತ್ತಿಸಿ ನಂತರ ಮಧ್ಯಾನ್ಹದ ಊಟಕ್ಕೆ ಮಕ್ಕಳಿಗೆ ಕೊಡುವುದರಿಂದ ಹಿಡಿದು ನಾನು ತಿನ್ನುವ ಆಹಾರದವರೆಗೆ ಎಲ್ಲವನ್ನೂ ತಯಾರಿಸಿ ಕ್ಯಾಸರೋಲ್‌ಗಳಲ್ಲಿಟ್ಟು ಅದರಂತೆಯೇ ನಾನೂ ಫಾಲೋ ಮಾಡುವಂತೆ ಮಾಡಿದಳು. ನನಗಿಷ್ಟ ಬಂದದ್ದನ್ನು ತಯಾರಿಸಿಕೊಂಡು ತಿನ್ನುವ ಸ್ವಾತಂತ್ರ್ಯವನ್ನು ಕಸಿದುಕೊಂಡುಬಿಟ್ಟಳು. ಕ್ಲೀನಿಂಗ್, ಮಕ್ಕಳ ಕೇರ್ ಕರ್ತವ್ಯಗಳನ್ನು ಪೂರ್ತಿಯಾಗಿ ನನಗೇ ಒರಗಿಸಿಬಿಟ್ಟಳು.

ವೀಕೆಂಡ್ ಶನಿವಾರ, ಭಾನುವಾರಗಳಂದು ಯಾವುದಾದರೊಂದು ಸಣ್ಣ ವಿಷಯ ಸಿಕ್ಕರೆ ಸಾಕು ಅದನ್ನೆತ್ತಿಕೊಂಡು ಗಂಡಹೆಂಡತಿ ನಾಯಿಬೆಕ್ಕುಗಳಂತೆ ಜಗಳವಾಡುತ್ತಿದ್ದರು ಒಮ್ಮೊಮ್ಮೆ ಇದು ಎಷ್ಟು ತಾರಕಕ್ಕೆ ಹೋಗುತ್ತಿತ್ತೆಂದರೆ ಇಬ್ಬರಲ್ಲಿ ಯಾರಾದರೊಬ್ಬರು ಮನೆಬಿಟ್ಟು ಹೋಗೇ ಬಿಡುತ್ತಾರೇನೋ ಎನ್ನಿಸುತ್ತಿತ್ತು. ಎಲ್ಲವನ್ನೂ ನಾನು ಸುಮ್ಮನೆ ನೋಡಿಕೊಂಡಿರಬೇಕಾಯಿತು. ಏನೂ ಮಾತನಾಡುವ ಹಾಗಿರಲಿಲ್ಲ. ಏನಪ್ಪಾ ಗತಿ? ಇಬ್ಬರಲ್ಲಿ ಯಾರೇ ಆಗಲಿ ಮನೆಬಿಟ್ಟು ಹೋಗಿಬಿಟ್ಟರೆ ಅಥವಾ ಇಬ್ಬರೂ ಹೋಗಿಬಿಟ್ಟರೆ ಮಕ್ಕಳ ಗತಿಯೇನು? ಪರಿಚಯವಿಲ್ಲದ ದೇಶದಲ್ಲಿ ನಾನೇನು ಮಾಡಲಿಕ್ಕೆ ಸಾಧ್ಯ? ದೇವರೇ ಈ ನನ್ನ ಮಗ, ಸೊಸೆಗೆ ಸಹನೆ ಕೊಡಪ್ಪಾ, ಇಂತಹ ಪರಿಸ್ಥಿತಿಯಲ್ಲಿ ನನ್ನ ಮಗನು ತನ್ನ ಪರೀಕ್ಷೆಯ ತಯಾರಿ ಎಷ್ಟು ಮಟ್ಟಿಗೆ ಮಾಡಿಕೊಳ್ಳುತ್ತಾನೋ ಕಾಣೆ. ನಮ್ಮ ದೇಶದಲ್ಲಿ ಒಬ್ಬರನೊಬ್ಬರು ಇಷ್ಟಪಟ್ಟು ತಾವೇ ಆರಿಸಿಕೊಂಡು ಕಟ್ಟಿಕೊಂಡವರು ಇವರು. ಒಬ್ಬರಿಗೊಬ್ಬರು ಅನುಸರಿಸಿಕೊಂಡು ಹೋಗುವ ಮನಸ್ಥಿತಿಯೇ ಇಲ್ಲವಲ್ಲ. ನನ್ನ ಮಗ ಇಂತಹ ಹೆಡ್ಡ ಕೆಲಸವನ್ನೇಕೆ ಮಾಡಿಬಿಟ್ಟ? ಅರ್ಥವಿಲ್ಲದ ಆರೋಪ, ಪ್ರತ್ಯಾರೋಪಗಳು, ಕಚ್ಚಾಟಗಳು. ಇವರನ್ನು ಕಂಡು ನನ್ನ ದೊಡ್ಡ ಮೊಮ್ಮಗ ಐದುವರ್ಷದವನು ಹೆದರಿಕೊಂಡು ನನ್ನನ್ನು ಅಪ್ಪಿಕೊಂಡುಬಿಡುತ್ತಿದ್ದ. ಚಿಕ್ಕವರಿಬ್ಬರೂ ಶಬ್ಧಕ್ಕೆ ಹೆದರಿ ಅಳಲು ಪ್ರಾರಂಭಿಸುತ್ತಿದ್ದರು. ವಿದ್ಯಾವಂತರಾಗಿ ಹೀಗೆ ನಾನು ತಾನೆಂದು ಕಿತ್ತಾಡುವುದನ್ನು ನೋಡಿ ನನಗೆ ಜಿಗುಪ್ಸೆ ಹುಟ್ಟುತ್ತಿತ್ತು. ಆತಂಕದಿಂದ ದಮ್ಮು ಬಿಗಿಹಿಡಿದು ದಿನಗಳನ್ನು ದೂಡುತ್ತಿದ್ದೆ. ನನ್ನವರು ಮತ್ತು ಮಗಳಿಂದ ಫೋನ್‌ಗಳು ಬಂದಾಗಲೆಲ್ಲ ಬಹಳ ಎಚ್ಚರಿಕೆಯಿಂದ ಮಾತನಾಡುತ್ತಿದ್ದೆ. ಎಲ್ಲ ಕೆಲಸ ಮುಗಿಸಿ ಮಕ್ಕಳು ಮಲಗಿದಮೇಲೆ ನನ್ನ ಒಡಲ ದುಃಖವನ್ನೆಲ್ಲ ಅತ್ತು ಹೊರಗೆ ಹಾಕಿ ಹಗುರಾಗುತ್ತಿದ್ದೆ. ಅಸಹನೀಯ ಮೌನ ನನ್ನನ್ನು ಕಂಗೆಡಿಸುತ್ತಿತ್ತು. ಮಕ್ಕಳ ಆಟಪಾಟವಷ್ಟೇ ನನ್ನನ್ನು ಜೀವಂತವಾಗಿಡುವ ಸೇತುವೆಯಾಗಿತ್ತು. ಒಂದೊಂದು ದಿನ ಕಳೆಯುವುದೂ ಒಂದು ಯುಗದಂತೆನ್ನಿಸುತ್ತಿತ್ತು. ಒಗ್ಗದ ಬಗ್ಗದವರೊಡನೆ ಬಾಳುವುದು ಎಷ್ಟು ಕಷ್ಟ ಎಂಬುದರ ಅರಿವು ಚೆನ್ನಾಗಿಯೇ ಆಯ್ತು. ಭಗವಂತ ಈ ವೈರುಧ್ಯಗಳು ನನ್ನ ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ಕಾಪಾಡು ತಂದೆ ಎಂದು ಪ್ರತಿದಿನವೂ ಪ್ರಾರ್ಥಿಸುತ್ತಿದ್ದೆ.

ನನ್ನ ಮಗನ ಪರೀಕ್ಷೆ ಮುಗಿಯಿತೆಂಬ ಸುದ್ಧಿ ಬಂದ ದಿನ ನನಗೆ ಕುಣಿದಾಡುವಷ್ಟು ಸಂತಸವಾಯಿತು. ಅದರ ಹಿಂದೆಯೇ ಈ ವಾತಾವರಣದಲ್ಲಿ ಅದು ಎಷ್ಟರ ಮಟ್ಟಿಗೆ ಸಫಲವಾಗಿರಬಹುದೆಂಬ ಚಿಂತೆಯೂ ಆವರಿಸಿತು. ಏನಾದರಾಗಲೀ ನಾನು ಬಂದ ಕೆಲಸವಾಯಿತಲ್ಲ ಎಂದುಕೊಂಡೆ. ಸ್ವದೇಶಕ್ಕೆ ಹಿಂತಿರುಗಲು ಇನ್ನೂ ಸ್ವಲ್ಪ ಕಾಲಾವಕಾಶವಿದ್ದರೂ ಸಮಯ ನೋಡಿ ನನ್ನ ಮಗನಿಗೆ “ನಾನು ಆದಷ್ಟು ಬೇಗ ಭಾರತಕ್ಕೆ ಹಿಂತಿರುಗಬೇಕು. ಅದಕ್ಕಾಗಿ ಪ್ರಯಾಣವನ್ನು ಪ್ರೀಪೋನ್ ಮಾಡಿಸು, ದಯವಿಟ್ಟು ಅದಕ್ಕಾಗಿ ಪ್ರಯತ್ನಿಸು ಆದಿ” ಎಂದೆ. ನನ್ನ ಮಾತುಗಳನ್ನು ಕೇಳಿದವನೇ “ಅಲ್ಲಮ್ಮಾ ಪ್ರಿಪೋನ್ ಏಕೆ ಮಾಡಿಸಬೇಕು, ಈಗ ತಾನೇ ಪರೀಕ್ಷೆ ಮುಗಿದಿದೆ. ನೀವು ಎರಡು ಸಾರಿ ಬಂದಾಗಲೂ ಎಲ್ಲಿಗೂ ಹೊರಗೆ ಹೋಗಲಾಗಲಿಲ್ಲ. ಈ ಸಾರಿಯಾದರೂ ವೀಕೆಂಡಿನಲ್ಲಿ ಅಲ್ಲಿ ಇಲ್ಲಿ ಸುತ್ತಾಡಿಸೋಣ ಎಂದುಕೊಂಡಿದ್ದೆ. ನೀವು ನೋಡಿದರೆ ಅವಸರ ಮಾಡುತ್ತಿದ್ದೀರಿ” ಎಂದ.

ಅವನ ಮಾತಿಗೆ “ಬೇಡ ಆದಿ, ನನಗೇಕೋ ಮನಸ್ಸಿಲ್ಲ. ಪ್ಲೀಸ್ ಬಲವಂತ ಮಾಡಬೇಡ” ಎಂದೆ. ಮುಂದಕ್ಕೇನೂ ಮಾತನಾಡದೆ ನಾನು ಹಿಂದಿರುಗಲು ಏರ್ಪಾಡು ಮಾಡಿದ. ನಾನು ಸ್ವದೇಶಕ್ಕೆ ಹೊರಡುವ ಹಿಂದಿನದಿನ ರಾತ್ರಿ ಊಟದ ನಂತರ ವಿಚಾರ ಬಹಿರಂಗವಾಯ್ತು. ನಾನು ಅಲ್ಲಿಗೆ ಬಂದಾಗ ಅಚ್ಚರಿಪಟ್ಟಂತೆ ನನ್ನ ಸೊಸೆ ಈಗಲೂ ಅಚ್ಚರಿಪಡುತ್ತಾ “ಇಷ್ಟು ಬೇಗ ! ಇನ್ನೂ ಟೈಮಿದೆಯಲ್ಲಾ?” ಎಂದಳು. “ಹೂಂ ನಾನು ಬಂದ ಕೆಲಸವಾಯ್ತು, ಅನಾವಶ್ಯಕವಾಗಿ ಇಲ್ಲಿದ್ದು ಏನು ಮಾಡಲಿ? ಪ್ರಣತಿ, ನನ್ನ ಮಗ ನಿನಗೆ ಹೇಳದಂತೆ ನನ್ನನ್ನು ಇಲ್ಲಿಗೆ ಕರೆಸಿದ್ದು ನಿನಗೆ ಅಸಮಾಧಾನವಾಗಿರುವುದು ಸಹಜ. ನಾನೂ ಸಹ ಹಿಂದೆಮುಂದೆ ವಿಚಾರಿಸದೇ, ನಿನ್ನನ್ನು ಒಂದು ಮಾತು ಕೇಳದೇ ಬಂದದ್ದೂ ತಪ್ಪು. ಆದರೆ ಅದನ್ನೇ ಹಿಡಿದು ಜಗ್ಗಾಡಿ ಅಸಹನೆ ತೋರಿಸಿ ಮನುಷ್ಯತ್ವವೇ ಇಲ್ಲದಂತೆ ಮಡೆದುಕೊಂಡಿದ್ದು ನಿನಗೆ ಶೋಭೆ ತರುವಂತಹುದಲ್ಲ. ನೀನು ಮಾತನಾಡುವಾಗ ಹೇಳುತ್ತಿದ್ದ ‘ಅತ್ತೆಯವರ ಜೊತೆಗಿರುವುದು ಉಸಿರು ಕಟ್ಟಿಸುತ್ತದೆ’ ಎಂಬ ಮಾತು ನನ್ನ ಕಿವಿಗೂ ಬಿದ್ದಿದೆ. ಅದೇನೂ ಅರ್ಥವಾಗದ ಭಾಷೆಯಲ್ಲ. ಈ ಸಂಕಟ ನಿನಗೆ ಮೂರು ಮಕ್ಕಳ ತಾಯಿಯಾಗುವ ಸಮಯದಲ್ಲಿ ಆಗಿರಲಿಲ್ಲ ಅಲ್ಲವೇ? ‘ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ’ ಎಂಬಂತೆ. ಹೋಗಲಿ ಬಿಡಮ್ಮ, ಇನ್ನೆಂದೂ ನಾನು ಜೀವಂತವಾಗಿರುವವರೆಗೆ ನಿನಗೆ ಹಿಂಸೆ ಕೊಡಲಾರೆ. ಮಗನ ಮೇಲಿನ ಅತಿಯಾದ ಮಮತೆ ನನ್ನನ್ನು ಕುರುಡು ಮಾಡಿತ್ತು. ವಿಚಾರಶೂನ್ಯಳಾಗಿ ನಡೆದುಕೊಂಡೆ. ದಯವಿಟ್ಟು ಕ್ಷಮಿಸು” ಎಂದೆ.

ಅಲ್ಲಿಯೇ ಕುಳಿತಿದ್ದ ಮಗನ ಕಡೆ ತಿರುಗಿ “ಆದಿ ನೀನು ಮಾಡಿದ್ದು ಅಕ್ಷಮ್ಯ ಅಪರಾಧ. ಇನ್ನು ಮೇಲೆ ನೀನು ಹೆಂಡತಿಗೆ ತಿಳಿಸದೆ ಯಾವ ಕೆಲಸಕ್ಕೂ ಕೈಹಾಕಬೇಡ. ನಾನಾದರೋ ನಿನ್ನ ಹೆತ್ತಮ್ಮ ಸಹಿಸಿಕೊಂಡೆ. ಇನ್ಯಾರಿಗೂ ಹೀಗೆ ಮಾಡದಿರು. ಇನ್ಯಾವತ್ತೂ ನನ್ನನ್ನು ಕರೆಯಬೇಡ. ನೀವುಗಳೂ ಅಷ್ಟೆ, ಬರಬೇಕೆನ್ನಿಸಿದರೆ ಬನ್ನಿ, ಮಾತನಾಡಬೇಕೆನ್ನಿಸಿದರೆ ಮಾತನಾಡಿ, ಇಲ್ಲದಿದ್ದರೆ ಅದೂ ಬೇಡ” ಅಷ್ಟು ಹೇಳಿ ಅವರ ಪ್ರತಿಕ್ರಿಯೆಗೂ ಕಾಯದೇ ಎದ್ದು ರೂಮಿಗೆ ಹೋಗಿಬಿಟ್ಟೆ.

(ಮುಂದುವರಿಯುವುದು)

ಈ ಕಾದಂಬರಿಯ ಹಿಂದಿನ ಸಂಚಿಕೆ ಇಲ್ಲಿದೆ:     http://surahonne.com/?p=31705

-ಬಿ.ಆರ್ ನಾಗರತ್ನ, ಮೈಸೂರು

5 Responses

 1. ನಯನ ಬಜಕೂಡ್ಲು says:

  ವಾಸ್ತವದ ಅನಾವರಣ. ಬದುಕಿಗೆ ಹತ್ತಿರದ ಘಟನೆಗಳ ಉಲ್ಲೇಖ.

 2. ಸುಮ ಕೃಷ್ಣ says:

  ಅಬ್ಬಾ ಎಷ್ಟು ಸಂಕಟ ಪಟ್ಟಿರಬೇಕು ತಾಯಿ ಜೀವ ಛೆ…

 3. ಶಂಕರಿ ಶರ್ಮ says:

  ಪರದೇಶದಲ್ಲಿ ಅನಾನುಕೂಲ ವಾತಾವರಣದಲ್ಲಿ ಜೀವನವೆಷ್ಟು ಅಸಹನೀಯ ಎಂಬುದನ್ನು ಮಾರ್ಮಿಕವಾಗಿ ನಿರೂಪಿಸಿದ ಪರಿ ಅನನ್ಯ.. ಚಂದದ ಧಾರಾವಾಹಿ.. ಧನ್ಯವಾದಗಳು ಮೇಡಂ.

 4. ಬಿ.ಆರ್.ನಾಗರತ್ನ says:

  ಸಾಹಿತ್ಯ ಸಹೃದಯರಿಗೆ ನನ್ನ ಧನ್ಯವಾದಗಳು

 5. ವಿದ್ಯಾ says:

  ತಾಯಿ‌ಪಾತ್ರ ಮನ ಕಲಕುತ್ತದೆ

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: