ಸ್ತ್ರೀ ಸಮಾನತೆ – ಸಾಧನಾ ಪರಂಪರೆ- ಪುಟ 1
ಸ್ತ್ರೀ ಪರಿಸರ
ಎರಡನೇ ದರ್ಜೆಯವರು:
ಮಹಿಳೆಯನ್ನು ಪುರುಷನಿಗೆ ಸಮಾನಳಲ್ಲ ಎಂದು ಸಮಾಜ ಪಾಶ್ಚಾತ್ಯ ಪ್ರಾಚ್ಯ ಎಂಬ ಭೇದವಿಲ್ಲದೆ ಪರಿಗಣಿಸಿದೆ. ಅದು ಅವಳಿಗೆ ಎರಡನೇ ದರ್ಜೆಯ ಸ್ಥಾನ ಮಾತ್ರ ಕೊಡಬಹುದು ಎಂದು ಮಾತ್ರ ತಿಳಿದಿದೆ. ವಿಚಾರವಾದಿ ಪುರುಷರೂ ಸಹ ಬಹುಮಟ್ಟಿಗೆ ಸ್ತ್ರೀಯರು ತಮಗೆ ಸರಿಸಮಾನ ಆಗಲಾರರು ಎಂದೇ ವಾದಿಸುತ್ತಾರೆ. ಅದನ್ನು ಒಂದು ಸಿದ್ಧಾಂತದಂತೆಯೇ ಮಂಡಿಸುತ್ತಾರೆ. ಒಂದು ರೀತಿಯ ವಶೀಕರಿಸುವಿಕೆ ಎನ್ನಬಹುದಾದ ರೀತಿಯಲ್ಲಿ ತಮ್ಮ ತರ್ಕವನ್ನೂ, ಸಿದ್ಧಾಂತವನ್ನೂ ಸ್ತ್ರೀಯರೂ ಒಪ್ಪಿಕೊಳ್ಳುವಂತೆ ಮಾಡಿದ್ದಾರೆ. ಮನವೊಲಿಸುವಿಕೆಯಿಂದ ಸಾಧ್ಯವಾಗದಿದ್ದಾಗ ದೈಹಿಕ ಬಲ ಪ್ರದರ್ಶನದಿಂದಲೋ, ವ್ಯಕ್ತಿತ್ವವನ್ನೇ ಅಪಮಾನಿಸುವ ನಿಂದೆಯ ವಾಗ್ಬಾಣದಿಂದಲೋ, ಮನೆಯಿಂದ ಹೊರಹಾಕುವುದರಿಂದಲೋ ತಮ್ಮ ಮೇಲ್ಗೈಯನ್ನು ಪ್ರತಿಷ್ಠಾಪಿಸಿದ್ದಾರೆ.
ನಿರ್ಬಂಧಿಗಳು:
ಬುದ್ಧಿವಂತರೂ, ಸೂಕ್ಷ್ಮಸಂವೇದಿಗಳೂ ಆಗಿರುವ ಹಾಗೂ ಸ್ತ್ರೀ ಮನಸ್ಸಿನ ಮಿಡಿತವನ್ನು ಗ್ರಹಿಸುವ ಪುರುಷರಾದರೋ ಸ್ತ್ರೀಯನ್ನು ದೇವಿ ಎಂದೋ, ಸಕಲ ಜಗದ್ಧಾತ್ರಿ ಎಂದೋ, ಸಕಲ ಸೃಷ್ಟಿ, ಸ್ಥಿತಿಕತೃತ್ವವುಳ್ಳ ಚಿತ್ ಶಕ್ತಿ ಎಂದೋ, ಆದಿಮಾತೆ ಎಂದೋ ಸ್ತುತಿಸಿದ್ದಾರೆ, ಉನ್ನತ ಪೀಠದಲ್ಲಿ ಕುಳ್ಳಿರಿಸಿ ಪ್ರತಿಷ್ಠಾಪಿಸಿದ್ದಾರೆ. ತಾನು ದೇವರಲ್ಲ, ತನಗೂ ಅರಕೆಗಳಿವೆ, ಕೊರತೆಗಳಿವೆ, ಬೇಡಿಕೆಗಳಿವೆ, ದೌರ್ಬಲ್ಯಗಳಿವೆ, ತಾನು ಕೇವಲ ಮನುಷ್ಯಮಾತ್ರದವಳು ಎಂದು ಹೇಳಿಕೊಳ್ಳದಂತೆ ಎಚ್ಚರ ವಹಿಸಿದ್ದಾರೆ. ಮನುಷ್ಯಮಾತ್ರದವಳಂತೆ ವರ್ತಿಸಿದಾಗ ಕ್ರೂರವಾಗಿ ದಂಡಿಸಿದ್ದಾರೆ, ನೀರು ನೆರಳು ಅನ್ನ ಕೊಡದೆ ಬಹಿಷ್ಕರಿಸಿದ್ದಾರೆ, ಬೆಂಕಿಗೆ ತಾನೇ ಬೀಳುವಂತೆ ಮಾಡಿದ್ದಾರೆ. ಸತ್ತಮೇಲೆ ಮಾಸ್ತಿಕಲ್ಲು ನೆಟ್ಟಿದ್ದಾರೆ. ಸುಂದರವಾದ, ಮೃದುವಾದ ಶಾಲಿನಲ್ಲಿ ಚಪ್ಪಲಿಯನ್ನು ಸುತ್ತಿ ಹೊಡೆಯುವ ಚಾಕಚಕ್ಯತೆ ತೋರಿದ್ದಾರೆ. ತಾವು ತಿಂದು ಉಳಿಸಿದುದನ್ನು ಪ್ರಸಾದವಾಗಿ ದಯಪಾಲಿಸಿದ್ದಾರೆ. ಉಸಿರುಗಟ್ಟಿಸುವ ವಾತಾವರಣದಲ್ಲಿ, ಗೃಹಬಂಧನದಲ್ಲಿ ಇರಿಸಿದ್ದಾರೆ. ಹಾಸುಂಡು ಬೀಸಿ ಒಗೆದಿದ್ದಾರೆ.
ಪುರುಷರು ಕಟ್ಟಿಕೊಡುವ ಆದರ್ಶ:
ಎಲ್ಲ ಪುರುಷರೂ ಸ್ತ್ರೀಯರಿಗೆ ಕಟ್ಟಿಕೊಡುವ ಆದರ್ಶವು ಸ್ತ್ರೀಯರು ಪುರುಷರಿಗೆ ಎಲ್ಲ ರೀತಿಯಲ್ಲಿಯೂ ಅಧೀನರಾಗಿರಬೇಕು, ತಂದುಕೊಟ್ಟದ್ದನ್ನು ತಿಂದು, ಉಟ್ಟು ಕೃತಾರ್ಥರಾದೆವೆಂದು ಸಂತೋಷದಿಂದ ಬೀಗಬೇಕು; ಪುರುಷರು ಅಡಿಯಿಟ್ಟೆಡೆಯಲ್ಲಿ ತಮ್ಮ ಅಡಿ ಇರಿಸಬೇಕು; ಅವರ ಬೇಕು ಬೇಡಗಳನ್ನು ತಮ್ಮ ಬೇಕು ಬೇಡಗಳೆಂದು ತಿಳಿಯಬೇಕು; ಮಕ್ಕಳಿಗೆ ತಾಯಿಯಾಗಿ, ಹಿರಿಯರಿಗೆ ದಾಸಿಯಾಗಿ, ಕಿರಿಯರಿಗೆ ಸೋದರಿಯಾಗಿ, ಅತಿಥಿ ಅಭ್ಯಾಗತರಿಗೆ ಅನ್ನಪೂರ್ಣೆಯಾಗಿ, ಗಂಡನಿಗೆ ಶಯನ ಸಖಿಯಾಗಿಯೂ ಆಪ್ತಸಖಿಯಾಗಿಯೂ ಇರಬೇಕು; ಧರ್ಮ, ಸಂಪ್ರದಾಯ, ಪರಂಪರೆ, ಶ್ರದ್ಧೆ, ಅಧ್ಯಾತ್ಮಗಳ ಪ್ರತೀಕವೂ ಆಗಿರಬೇಕು ಎಂಬುದು. ಈ ಆದರ್ಶಪಾಲನೆಯಲ್ಲಿ ಎದುರಾಗುವ ಅಡ್ಡಿ ಆತಂಕಗಳಿಗೆ, ಉಂಟಾಗುವ ಭ್ರಷ್ಠತೆಗೆ ಸ್ತ್ರೀಯರೇ ಹೊಣೆಗಾರರು. ಅವರೇ ಅದಕ್ಕೆ ಶಿಕ್ಷೆಯನ್ನು ಅನುಭವಿಸಬೇಕು, ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು – ಇದು ಪುರುಷರ ಬೇಡಿಕೆ ಮತ್ತು ನಿರೀಕ್ಷೆ.
ಸ್ತ್ರೀಯರು ಎದುರಿಸಬೇಕಾದ ಪಂಥಾಹ್ವಾನ:
ಅಸಮಾನ-ಅವಮಾನದ ನೆಲೆಯಲ್ಲಿ ತಮ್ಮ ವ್ಯಕ್ತಿತ್ವ, ಸ್ವಾತಂತ್ರ್ಯ, ಘನತೆ, ಗೌರವ, ಪ್ರಾವೀಣ್ಯತೆಗಳನ್ನು ಎತ್ತಿ ಹಿಡಿದುಕೊಳ್ಳಬೇಕಾಗಿರುವುದು ಪ್ರಾಚೀನಕಾಲದಿಂದಲೂ ಸ್ತ್ರೀಯರು ಎದುರಿಸಲು ಒಪ್ಪಿಕೊಂಡ ಪಂಥಾಹ್ವಾನ. ಬಹುಪಾಲು ಸ್ತ್ರೀಯರು ಕರ್ಮಸಿದ್ಧಾಂತದಡಿಯಲ್ಲಿ ಇದ್ದುದನ್ನು ಇದ್ದಂತೆ ಒಪ್ಪಿಕೊಂಡು, ತೆರೆದುಕೊಂಡ ದಾರಿಯನ್ನು ತೆರೆದಿದ್ದಂತೆ ಕ್ರಮಿಸಿ, ಒದಗಿಬಂದ ಪರಿಣಾಮಗಳನ್ನು ಧೈರ್ಯದಿಂದ ಎದುರಿಸಿ, ಅನುಭವಿಸಿ ತಮ್ಮ ಉದಾತ್ತತೆಯನ್ನು ಮೆರೆದರೆ ಕೆಲವೇ ಕೆಲವರು ಮಾತ್ರ ತಮಗಿದ್ದ ಎಲ್ಲ ಚೌಕಟ್ಟಿನೊಳಗೆ ಇದ್ದುಕೊಂಡೇ, ಎಲ್ಲ ನಿರ್ಬಂಧಗಳನ್ನು ಒಪ್ಪಿಕೊಂಡೇ ಆಳದಲ್ಲಿ ಹೂತಿದ್ದ ಬೀಜವು ಸಣ್ಣ ಬಾಯಿಯ ಉದ್ದ ಕೊಳವೆಯ ಮಾರ್ಗದಲ್ಲಿ ಚಿಗಿತು, ಗಿಡವಾಗಿ ಬೆಳೆದು, ಆಕಾಶದಲ್ಲಿ ಹೂವರಳಿಸಿ ನಕ್ಕಂತೆ ನಕ್ಕಿದ್ದಾರೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಕಟಿಸಿದ್ದಾರೆ, ಉತ್ತಮ ಫಲವನ್ನು ಕಾಣಿಕೆಯಾಗಿ ಕೊಟ್ಟಿದ್ದಾರೆ.
ಕಗ್ಗತ್ತಲ್ಲಿ ಬೆಳಗುವ ಹಣತೆ:
ಚೌಕಟ್ಟಿನೊಳಗೆ, ನಿರ್ಬಂಧದೊಳಗೆ ತಮ್ಮ ಅನನ್ಯತೆಗಾಗಿ ತುಡಿಯುತ್ತಾ ದುಡಿದವರೇ ಸ್ತ್ರೀಯರ ಸಮಾನತೆಯ ಸಾಧನೆಯ ಹಾದಿಯಲ್ಲಿಯ ಮೈಲಿಗಲ್ಲುಗಳು; ಸುಳಿ ಸುಳಿದು ನುಗ್ಗುವ ಗಾಳಿಯ ಭರಾಟೆಗೆ ತೂಗಾಡುವ ಕುಡಿಯಿಂದಲೇ ಅಗಾಧವಾದ ಕತ್ತಲೆಯಲ್ಲಿಯೂ ಬೆಳಕು ಹೊಮ್ಮಿಸುವ ಹಣತೆಗಳು. ಇವರು ಜಗತ್ತಿನಾದ್ಯಂತದ ಕತ್ತಲೆಯೊಂದಿಗೆ ಸ್ಪರ್ಧಿಸುತ್ತಾ ಮಿಣುಕು ಬೆಳಕನ್ನು ಬೀರಿದ್ದರೂ ಸ್ತ್ರೀ ಸಮೂಹಕ್ಕೆ ಸಮಾನತೆಯ ಸಾಧನೆಯ ಪರಂಪರೆಯೊಂದನ್ನು ನಿರ್ಮಿಸಿಕೊಟ್ಟಿದ್ದಾರೆ; ಆ ಪರಂಪರೆಗೆ ಪ್ರಾಣದೀಪ್ತಿಯನ್ನು ಒದಗಿಸಿದ್ದಾರೆ.
ನಮ್ಮ ಮನೆಯ ದೀಪವೇ ದಾರಿದೀಪ:
ಆಕಾಶದ ತುಂಬ ಎಣಿಸಲಾರದಷ್ಟು ನಕ್ಷತ್ರಗಳು ಮಿನುಗುತ್ತಿದ್ದರೂ ನಮ್ಮ ಮನೆಯಂಗಳದಲ್ಲಿ ನಿಂತಾಗ ನಮ್ಮ ಕಣ್ಣಿಗೆ ಕಾಣುವ ನಕ್ಷತ್ರಮಂಡಲವೇ ನಮಗೆ ದಾರಿದೀಪ. ನಮ್ಮ ಚಾರಿತ್ರಿಕ ಹಾಗೂ ಪ್ರಾದೇಶಿಕ ಇತಿಮಿತಿಯ ಒಳಗೆ ಸಮಾನತೆಯ ಸಾಧನೆಯ ಹಾದಿಯಲ್ಲಿ ಸ್ತ್ರೀಯರು ಕ್ರಮಿಸಿದುದೇ ನಮಗೆ ಗಮನಾರ್ಹ. ನಮ್ಮ ದೇಶವೇ ತಾಯಿಬೇರು, ನಮ್ಮ ಪರಂಪರೆಯೇ ನಮ್ಮ ಜೀವನದಿ, ರಸಗಂಗೆ!
(ಮುಂದುವರಿಯುವುದು….)
-ಪದ್ಮಿನಿ ಹೆಗಡೆ, ಮೈಸೂರು
ಸೊಗಸಾದ ಬರಹ. ಸ್ತ್ರೀ ಶಕ್ತಿಯ ಹಿಂದೆ ದೊಡ್ಡ ಪರಂಪರೆ, ಇತಿಹಾಸವೇ ಇದೆ.
ಅರ್ಥಪೂರ್ಣವಾದ ಬರಹ ಮುಂದಿನ ಭಾಗದ ನಿರೀಕ್ಷೆಯಲ್ಲಿ.
ಸ್ತ್ರೀ ಶಕ್ತಿಯ ಬಗೆಗೆ ಚಂದದ ಧಾರಾವಾಹಿ.