ಮಾತು ಮೀಟಿ ಹೋಗುವ ಹೊತ್ತು..
ಧಾರೆ ಎರೆದಂತೆ ಉಲಿಯುವ
ಮಾತಿನ ನಾದಕ್ಕೆ ಎಲ್ಲವೂ
ಶರಣಾಗುವಾಗ
ಸನ್ಯಾಸಿಯಂತೆ ಧ್ಯಾನಕ್ಕೆ ಕುಳಿತ
ಮೌನವೂ ಮೆಲ್ಲಗೆ ಕಂಪಿಸುತ್ತಿದೆ.
ಹುತ್ತಗಟ್ಟಿದ ಮೌನದೊಳಗೊಂದು
ಕದಲಿಕೆ;ಕನವರಿಕೆ
ಎಲ್ಲಿತ್ತು ಈ ಪರಿಯ ಬೆಡಗು
ಆವರಿಸಿಕ್ಕೊಂಡ ಮಾಯದ ಮೋಹಕ
ಸೆಳಕು.
ಗಿರಿಗಿಟ್ಟಿ ಬದುಕು ತಕಧಿಮಿ ತಕಧಿಮಿ
ತಾಳಕ್ಕೆ ತಕ್ಕಂತೆ ನರ್ತಿಸಿದರೂ
ಪ್ರಯಾಸದ ಪರಿವೇ ಇಲ್ಲ.
ಒಲವು ಸೋಕಿದ ನವಿರು ಕ್ಷಣ
ತರ್ಕಕ್ಕೆ ಒಗ್ಗದ ಮನದ ಮೌನದ
ಆಳದಲ್ಲಿ ತನನ..ತಾನನ ರಿಂಗಣ.
ಮಾತು ಮೌನವಾಗುವಾಗ
ಇಲ್ಲವೇ ಮೌನದ ತಂತಿಯೊಳಗೆ
ಮಾತು ಮೀಟಿ ಹೋಗುವ ಹೊತ್ತು
ಬೇರೊಂದು ಸೊಗದ ಇಹ ಇಹುದೇ?
ಕೇಳಿಕೊಳ್ಳುವ ತಹತಹಿಕೆ
ಉತ್ತರ ದಕ್ಕಿಸಿಕೊಳ್ಳುವ ಹಪಾಹಪಿಕೆ
ಆ ಕ್ಷಣದ ಅಂತರಂಗಕ್ಕೆ ಅನ್ವಯಿಸದ
ಮಾತು.
-ಸ್ಮಿತಾ ಅಮೃತರಾಜ್,ಸಂಪಾಜೆ.
ಕವನ ತುಂಬಾ ಅರ್ಥವತ್ತಾಗಿದ್ದು ಇಷ್ಟವಾಯಿತು 🙂
ಮಾತು ಮೌನವಾಗುವಾಗ
ಇಲ್ಲವೇ ಮೌನದ ತಂತಿಯೊಳಗೆ
ಮಾತು ಮೀಟಿ ಹೋಗುವ ಹೊತ್ತು
ಬೇರೊಂದು ಸೊಗದ ಇಹ ಇಹುದೇ?
ಕೇಳಿಕೊಳ್ಳುವ ತಹತಹಿಕೆ
ಉತ್ತರ ದಕ್ಕಿಸಿಕೊಳ್ಳುವ ಹಪಾಹಪಿಕೆ
ಆ ಕ್ಷಣದ ಅಂತರಂಗಕ್ಕೆ ಅನ್ವಯಿಸದ
ಮಾತು…ಮನಮುಟ್ಟುವ ಹಾಗು ಮನಕಾಡುವ ಕಾವ್ಯ,,
ಮೌನವೇ ಎಷ್ಟು ಚಂದ.
ಮೌನದೊಳಗಿನ ಲೋಕ, ಎಲ್ಲೋ ಅಡಗಿರುವ ಭಾವಗಳು, ಮನದ ಕದ ತಟ್ಟಿ ಕೇಳುವ ಪ್ರಶ್ನೆ ಅದರ ಉತ್ತರ…
ಎಲ್ಲವೂ ಸುಂದರ.
ಚೆನ್ನಾಗಿದೆ ಕವನ.