ಜಂಬುನೇರಳೆ ಸಿಕ್ಕಾಗ…..
ಎಂದಿನಂತೆ ಆ ದಿನವೂ ಬೆಳಿಗ್ಗೆ ಕಾರು ಚಲಾಯಿಸಿಕೊಂಡು ಕಾಲೇಜಿಗೆ ಹೊರಟಿದ್ದೆ. ಕಾಲೇಜಿನ ಸಮೀಪವೇ ಇರುವ ಒಂದು ಸಣ್ಣ ತರಕಾರಿ ಅಂಗಡಿ ತೆರೆಯುತ್ತಿದ್ದರು ಅದರ ಮಾಲೀಕರು. ನನ್ನ ಪಾಲಿಗೆ ಬಹು ಅಪರೂಪವಾಗಿದ್ದ ತಿಳಿ ಗುಲಾಬಿ ಬಣ್ಣ ಮಿಶ್ರಿತ ಬಿಳಿಯ ಜಂಬು ನೇರಳೆ ಹಣ್ಣುಗಳು ಸಣ್ಣ ಬುಟ್ಟಿಯಲ್ಲಿ ವಿರಾಜಮಾನವಾಗಿದ್ದವು. ಬಹುಶಃ ಆ ಹಣ್ಣುಗಳನ್ನು ತಿನ್ನದೇ ಮೂವತ್ತು ವರ್ಷಗಳ ಮೇಲಾಗಿತ್ತು. ಹಣ್ಣುಗಳ ಮೇಲೆಯೇ ನೆಟ್ಟಿತ್ತು ನನ್ನ ದೃಷ್ಟಿ. ಹಲವು ಸಿಹಿ ನೆನಪುಗಳು ಮನದೊಳಗೆ ಆಗಲೇ ದಾಂಗುಡಿ ಇಟ್ಟಾಗಿತ್ತು. ಹಣ್ಣು ಖರೀದಿ ಮಾಡುವ ನಿಶ್ಚಯವೂ ಆಯಿತು. ಸಂಜೆ ಖರೀದಿಸುವ ಆಲೋಚನೆ ಬಂತಾದರೂ, ಸಂಜೆಯ ಹೊತ್ತಿಗೆ ಹಣ್ಣುಗಳು ಖಾಲಿಯಾಗಿಬಿಟ್ಟರೆ ಅನ್ನಿಸಿತು. ಹಣ್ಣುಗಳನ್ನು ಖರೀದಿಸಿ ಕೈಯಲ್ಲಿ ಹಿಡಿದುಕೊಂಡಾಗಲೇ ಮನದೊಳಗೆ ಪುಳಕ. ಆ ಹಣ್ಣಿನ ರುಚಿ, ನೆನಪಿನ ಕೋಶದಲ್ಲಿ ಅಡಗಿ ಕುಳಿತಿತ್ತು. ಹಣ್ಣನ್ನು ತೊಳೆದು ತಿನ್ನುವಾಗ ಶಬ್ದಗಳಲ್ಲಿ ವಿವರಿಸಲಾಗದ ಸುಂದರ ಅನುಭೂತಿ. ಮನ ಬಾಲ್ಯದ ದಿನಗಳತ್ತ ಜಾರಿತ್ತು.
ಪ್ರತಿ ವರ್ಷ ಬೇಸಗೆ ರಜೆ ಬಂತೆಂದರೆ ಅಜ್ಜನ ಮನೆಗೆ ಹೋಗುವ ಸಂಭ್ರಮ. ಕನಿಷ್ಟ ಒಂದು ವಾರದ ಕಾರ್ಯಕ್ರಮವದು. ನನ್ನೊಂದಿಗೆ ತಮ್ಮ ತಂಗಿಯರೂ ಇರುತ್ತಿದ್ದರು. ಅಜ್ಜನ ಮನೆಯ ಎದುರೇ ಇದ್ದ ತೋಟದ ಬಳಿ ಒಂದು ಕೆರೆ. ತಿಳಿ ನೀಲಿ ಬಣ್ಣವನ್ನು ಪ್ರತಿಫಲಿಸುತ್ತಿದ್ದ ಆ ಕೆರೆಯ ನೀರನ್ನು ಏತದಿಂದ ಎತ್ತಿ, ತೋಟಕ್ಕೆ ಹರಿಸುವುದನ್ನು ಕೌತುಕದಿಂದ ನೋಡಲೆಂದು ಹಾಗೆಯೇ ಆ ಕೆರೆಯ ಏರಿಯ ಮೇಲೆ ಹುಲುಸಾಗಿ ಬೆಳೆದ ಜಂಬು ನೇರಳೆ ಮರದ ತಿಳಿ ಗುಲಾಬಿ ಮಿಶ್ರಿತ ಬಿಳಿಯ ಹಣ್ಣುಗಳನ್ನು ತಿನ್ನಲೆಂದು ಕೆರೆಯ ಭೇಟಿ ತಪ್ಪಿಸುತ್ತಿರಲಿಲ್ಲ. ಜೊತೆ ನೀಡಲು ಮಾವನ ಮಕ್ಕಳು! ಬಾವಲಿಯೋ ಅಥವಾ ಇನ್ಯಾವುದೋ ಹಕ್ಕಿಗಳು ತಿಂದು ಬಿಟ್ಟ ಹಣ್ಣಿನ ಒಳ್ಳೆಯ ಭಾಗವನ್ನು ಬೇರ್ಪಡಿಸಿ ತಿನ್ನಲೂ ಯಾವುದೇ ರೀತಿಯ ಅಸಹ್ಯ ಅನಿಸುತ್ತಿರಲಿಲ್ಲ. ಜಂಬು ನೇರಳೆ ಹಣ್ಣಿನ ಜೊತೆ, ಅದೇ ದಿನ ಅರಳಿದ ಅದರ ಗಾಢ ಗುಲಾಬಿ ಬಣ್ಣದ ಹೂವುಗಳನ್ನು ತಿನ್ನುವುದು ಕೂಡಾ ತುಂಬಾ ಇಷ್ಟವಾಗುತ್ತಿತ್ತು. ಮರ ಹತ್ತುವುದರಲ್ಲಿ ನಿಸ್ಸೀಮನಾಗಿದ್ದ ಮಾವನ ಮಗ, ಹಣ್ಣುಗಳನ್ನು ಕಿತ್ತು ಕೊಡುತ್ತಿದ್ದ. ಕೆಲವೊಮ್ಮೆ ಹಣ್ಣುಗಳು ಕೆರೆಯ ನೀರಿಗೆ ಬಿದ್ದಾಗ ಈಜಿನಲ್ಲಿಯೂ ನಿಪುಣನಾಗಿದ್ದ ಅವನೇ ಕೆರೆಗೆ ಹಾರಿ ಹಣ್ಣುಗಳನ್ನು ತಂದು ಕೊಡುತ್ತಿದ್ದ. ಒಟ್ಟಿನಲ್ಲಿ ಅಜ್ಜನ ಮನೆಯ ಭೇಟಿಯನ್ನು ಹೃದ್ಯವಾಗಿಸುವಲ್ಲಿ ಜಂಬು ನೇರಳೆಯ ಪಾತ್ರವೂ ಇತ್ತು.
ಮುಂದೆ ಕಾಲೇಜು ಶಿಕ್ಷಣ, ಉನ್ನತ ಶಿಕ್ಷಣ, ಉದ್ಯೋಗ, ಮದುವೆ, ಮಕ್ಕಳು….ಇವೆಲ್ಲದರ ನಡುವೆ ಅಜ್ಜನ ಮನೆಯ ಭೇಟಿಯೂ ಕಡಿಮೆ ಆಯ್ತು. ಅತಿ ಅಗತ್ಯ ಸಮಾರಂಭಗಳಿಗೆ ಮಾತ್ರ ಸೀಮಿತವಾದ ಅಜ್ಜನ ಮನೆಯ ಭೇಟಿಯ ನಡುವೆ ಜಂಬು ನೇರಳೆ ಹಣ್ಣುಗಳು ಸಿಕ್ಕಿರಲಿಲ್ಲ. ತನ್ನ ತವರು ಮನೆಯ ನೆನಪಿಗಾಗಿ, ಆ ಹಣ್ಣಿನ ಬೀಜದಿಂದ ಗಿಡ ಮಾಡಿ ಮರ ಮಾಡುವಲ್ಲಿ ನನ್ನ ಅಮ್ಮ ಯಶಸ್ವಿಯಾಗಿದ್ದರೂ, ಯಾವಾಗಾದರೊಮ್ಮೆ ಅಮ್ಮನ ಮನೆಗೆ ಹೋಗುವ ನನಗೆ ಆ ಮರದ ಹಣ್ಣುಗಳು ತಿನ್ನಲು ಸಿಕ್ಕಿರಲಿಲ್ಲ. ಜಂಬು ನೇರಳೆ ಜಾತಿಗೆ (Syzygium) ಸೇರಿದ ಕಪ್ಪು ದ್ರಾಕ್ಷೆಯಂತೆ ತೋರುವ ನೇರಳೆ ಹಣ್ಣುಗಳು, ಸಿಹಿ ಪನ್ನೇರಳೆ ಹಣ್ಣುಗಳು (ಬಿಳಿ, ಹಸಿರು, ಗುಲಾಬಿ ಬಣ್ಣದಲ್ಲಿ ಸಿಗುತ್ತವೆ), ಸಿಹಿ ಹಾಗೂ ಹುಳಿ ಮಿಶ್ರಿತ ನಕ್ಷತ್ರ ನೇರಳೆ (ಬಿಳಿ, ಕೆಂಪು ಮಿಶ್ರಿತ ಗುಲಾಬಿ ಬಣ್ಣದ ಹಣ್ಣುಗಳು) ಆಗಾಗ ತಿನ್ನಲು ಸಿಕ್ಕರೂ ನಾನು ಮೊದಲ ಬಾರಿಗೆ ಸವಿದ ಜಂಬು ನೇರಳೆ ಹಣ್ಣು ಸಿಕ್ಕಿರಲೇ ಇಲ್ಲ. ಎಲ್ಲಾ ಜಾತಿಯ ಜಂಬು ನೇರಳೆ ಹಣ್ಣುಗಳ ಹಾಗೆಯೇ ಅದರ ಬೀಜಗಳ ಸೇವನೆಯಿಂದ ಮಧುಮೇಹ ನಿಯಂತ್ರಣ ಸಾಧ್ಯ ಅನ್ನುವ ಉತ್ತಮ ಮಾಹಿತಿ ಸಿಕ್ಕಿತು. ಇಡಿಯ ಗಿಡವೇ ಔಷಧದ ಭಂಡಾರ ಅಂದರೆ ಉತ್ಪ್ರೇಕ್ಷೆಯ ಮಾತಲ್ಲ.
ಮಧ್ಯಾಹ್ಞದ ಊಟಕ್ಕೆ ಜೊತೆಯಾಗುತ್ತಿದ್ದ ನನ್ನ ಸಹೋದ್ಯೋಗಿ ಮಿತ್ರೆಗೂ ಹಣ್ಣನ್ನು ಕೊಟ್ಟಾಗ, ಅವರೂ ಕೂಡಾ ಮಗುವಿನಂತೆ ಸಂಭ್ರಮಿಸಿದರು. “ಬಾವಲಿ ತಿಂದುಳಿದ ಅರ್ಧ ಹಣ್ಣನ್ನೂ ಅದೆಷ್ಟು ಆಸ್ಥೆಯಿಂದ ತಿನ್ನುತ್ತಿದ್ದೆವಲ್ಲಾ” ಅನ್ನುವಾಗ ಅವರ ಕಣ್ಣಿನಲ್ಲಿ ಕಂಡ ಹೊಳಪು ಅವರ ಬಾಲ್ಯವನ್ನು ಪ್ರತಿಫಲಿಸಿತ್ತು. ಒಂದು ಕೋನದಲ್ಲಿ ಯೋಚನೆ ಮಾಡಿದಾಗ, ನಾವೆಷ್ಟು ಪುಣ್ಯವಂತರು ಅನ್ನಿಸುವುದು. ಯಾವುದೇ ಭಯವಿಲ್ಲದೆ ಅನೇಕ ಹಣ್ಣುಗಳನ್ನು ತೊಳೆಯದೆ ಸಹಾ ತಿನ್ನುತ್ತಿದ್ದೆವಲ್ಲಾ? ಈಗ ಎಲ್ಲವೂ ಕಲುಷಿತ. ಈಗಿನ ಮಕ್ಕಳಿಗೆ ಹಲವು ಹಣ್ಣುಗಳನ್ನು ನೋಡಿಯೂ ಗೊತ್ತಿಲ್ಲ. ಕೊಟ್ಟರೂ ತಿನ್ನುವ ಆಸಕ್ತಿಯೂ ಇಲ್ಲ. ಔಷಧೀಯ ಗುಣಗಳ ಭಂಡಾರವಾದ ಜಂಬು ನೇರಳೆ ಹಣ್ಣು ಸಿಕ್ಕಿದರೆ ತಿಂದು ನೋಡಿ.
-ಡಾ. ಕೃಷ್ಣಪ್ರಭ ಎಂ, ಮಂಗಳೂರು
(ಜಂಬು ನೇರಳೆ ಜಾತಿಗೆ ಸೇರಿದ ನಕ್ಷತ್ರ ನೇರಳೆ ಹಣ್ಣಿನ ಬಗ್ಗೆ ಬರೆದ ನನ್ನ ಒಂದು ಲೇಖನದ ಕೊಂಡಿ : http://surahonne.com/?p=23564)
ಜಂಬು ನೇರಳೆ ಹಣ್ಣಿನ ಜೊತೆ ಯಲ್ಲಿ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿ ಬರೆದಿರುವ ಲೇಖನ ಬಹಳ ಚೆನ್ನಾಗಿದೆ ಮೂಡಿ ಬಂದಿದೆ ಮೇಡಂ ಅಭಿನಂದನೆಗಳು.
ಮತ್ತೆ ತಿನ್ನಲು ಸಿಕ್ಕಿರಲಿಲ್ಲ ಈ ಹಣ್ಣು…ಮೆಚ್ಚುಗೆಗೆ ಧನ್ಯವಾದಗಳು
ಜಂಬು ನೇರಳೆಯ ಸೀಸನ್ ಅಲ್ಲಿ ಆ ಮರದ ಕೆಳಗೆಯೇ ಹೆಚ್ಚಿನ ಹೊತ್ತು ಠಿಕಾಣಿ ಬಾಲ್ಯದಲ್ಲಿ. ಬಾಲ್ಯದ ನೆನಪುಗಳನ್ನು ಮತ್ತೆ ನೆನೆಯುವಂತೆ ಮಾಡಿದ ಸುಂದರ ಬರಹ.
ಮತ್ತೆ ಮತ್ತೆ ತಿನ್ನಬೇಕೆಂದು ಅನ್ನಿಸುವ ಹಣ್ಣು..ಪ್ರತಿಕ್ರಿಯೆಗೆ ಧನ್ಯವಾದಗಳು
ಜಂಬುನೇರಳೆಯ ಕುರಿತ ಲೇಖನ. ಓದುವಾಗ ಬಾಯಲ್ಲಿ ನೀರು ಬಂತು.ಯಾಕೆ ಗೊತ್ತಾ?ಅದನ್ನು ತಿಂದವರಿಗೆ ಮಾತ್ರ ಅದರ ರುಚಿ ಗೊತ್ತಾಗುವುದು.ಶಾಲೆಗೆ ಹೋಗುವಾಗ ನನ್ನ ಗೆಳತಿಯೊಬ್ಬಳು ತಂದು ಕೊಡುತ್ತಿದ್ದಳು.ನಾವು ಅದಕ್ಕೂ ಜಗಳ ಮಾಡಿ ತಿನ್ನುತ್ತಿದ್ದೆವು.ಏಲಕ್ಕಿ ಜಂಬು ನೇರಳೆ ನಕ್ಷತ್ರ ಜಂಬುನೇರಳೆ
ದೊಡ್ಡ ಜಂಬು ನೇರಳೆ. ನಮ್ಮಲ್ಲಿ ಈಗ. ಬಿಳಿ ಮತ್ತು ಕೆಂಪು ಜಂಬು ನೇರಳೆ ಇದೆ.ಸ್ವಲ್ಪ ಆಗುತ್ತದೆ.ಬಾವಲಿಗಳು ತಿಂದು ಉಳಿದದ್ದು ನಮಗೆ.
ಜಂಬುನೇರಳೆ ಸವಿ ಬಲ್ಲವರೇ ಬಲ್ಲರು….
ಪ್ರತಿಕ್ರಿಯಿಸಿದ ನಿಮಗೆ ಧನ್ಯವಾದಗಳು ಅಕ್ಕ
ಓದಿದೆ. ಚೆನ್ನಾಗಿದೆ. ಬಾಲ್ಯದಲ್ಲಿ ನಾವು ಸವಿದ ಅನೇಕ ಹಣ್ಣುಗಳಲ್ಲಿ ಇದೂ ಒಂದು. ಸಾಕಷ್ಟು ಔಷಧಿ ಗುಣಗಳೂ ಇವೆ. ಇವನ್ನೆಲ್ಲಾ ಸಂರಕ್ಷಿಸುವುದು ಹೇಗೆ? ಕೆಲವರು ಶ್ರದ್ಧೆಯಿಂದ ಸಂಗ್ರಹಿಸಿ, ಬೆಳೆಸುತ್ತಿದ್ದಾರೆ. ಅಂತಹವರಿಗೆ ಹೆಚ್ಚಿನ ಪ್ರೋತ್ಸಾಹ ಬೇಕು.
ನಿಮ್ಮ ಅನುಭವ ನನ್ನದೂ ಆಗಿದೆ .ಶಾಲೆಗೆ ಹೋಗುತ್ತಿರುವಾಗ ಕಳೆಂಜಿ ಮಲೆಯ ತಪ್ಪಲಲ್ಲಿ ಜೊಂಬೆ ಜೊಂಬೆಯಾಗಿರುವ ನೇರಳೆಯನ್ನು ತಿಂದದ್ದು ಹಾಗೂ ನಾಲಿಗೆ ಹೊರಚಾಚಿ ಕಲರ್ ಬಂತೆ ಎಂದು ಸಹಪಾಟಿಗಳೊಡನೆ ಕೇಳುತ್ತಿದ್ದುದು ನನ್ನ ಸವಿನೆನಪುಗಳಲ್ಲಿ ಒಂದು. ಚಂದವಾದ ಲೇಖನ .
ಚೆನ್ನಾಗಿದೆ ಓದಿ ತುಂಬಾ ಖುಷಿ ಆಯಿತು.
ಹಕ್ಕಿ ಅರ್ಧ ತಿನ್ನುವಶ್ಟರಲ್ಲಿ ಹಣ್ಣು ಕೆಳಗೆ ಬೀಳುತ್ತದೆ, ಬಿದ್ದ ಹಣ್ಣನ್ನು ಹಕ್ಕಿ ತಿನ್ನುವುದಿಲ್ಲ! ಹಕ್ಕಿ ಅತ್ಯುತ್ತಮ ಹಣ್ಣು ಆರಿಸಿಕೊಳ್ಳುತ್ತದೇ ಅಂತ ಆ ಅರೆತಿಂದ ಹಣ್ಣಿನ ರುಚಿ ಹೇಳುತ್ತದೆ!
ಗೆಳತಿ ಸರೋಜ ಅವರ ಪ್ರತಿಕ್ರಿಯೆ
ಸವಿಯಾದ ಲೇಖನ…ನಾನೂ ಬಾಲ್ಯದಲ್ಲಿ ಜಂಬುನೇರಳೆ ತಿಂದಿದ್ದೇನೆ.
ಮೆಚ್ಚುಗೆಗೆ ಧನ್ಯವಾದಗಳು ಹಾಗೂ ಲೇಖನ ಪ್ರಕಟಿಸಿದ ನಿಮಗೆ ಧನ್ಯವಾದಗಳು ಅಕ್ಕ
ಲೇಖನ ಮೆಚ್ಚಿದ ಎಲ್ಲರಿಗೂ ವಂದನೆಗಳು
ನಮ್ಮಲ್ಲಿ ಕೆಲವು ಜಾತಿಯ ಜಂಬುನೆರಲೇ ಗಿಡಗಳಿವೆ. ಹಣ್ಣುಗಳನ್ನು ತಿನ್ನುವಾಗ ಬಾಲ್ಯದಲ್ಲಿ ತಿಂದ ಹಣ್ಣುಗಳ ಸವಿ ಇನ್ನೂ ನಾಲಿಗೆಯಲ್ಲಿ ಇದೆ. ಈಗಿನ ಹಣ್ಣುಗಳು ಸಪ್ಪೆ ಎನಿಸುತ್ತದೆ..ನಿಮ್ಮ ಲೇಖನ ತುಂಬಾ ಸವಿಯಾಗಿದೆ..
ಹೌದು..ಜಂಬುನೇರಳೆ ಹಣ್ಣಿನ ಸವಿ ತಿಂದವರಿಗೇ ಗೊತ್ತು. ನಮ್ಮ ಮಗಳ ಕೋರಿಕೆಯಂತೆ ನಕ್ಷತ್ರ ನೇರಳೆಯ ಗಿಡ ನೆಟ್ಟು ಈಗ ಭರ್ ಪೂರ್ ಹಣ್ಣುಳನ್ನು ತಿನ್ನುವ ಯೋಗ. ವರ್ಷದಲ್ಲಿ ಮೂರು ಬಾರಿ ಹಣ್ಣು ಬಿಡುವ ಮರ ಈಗ ಆಕಾಶದೆತ್ತರ ಬೆಳೆದಿದೆ. ಅಕ್ಕಪಕ್ಕ ಕೊಟ್ಟು ಮುಗಿಯದಾಗ ಹೊಸರುಚಿಯಾಗಿ ಅದರ ಜಾಮ್ ಮಾಡಿ ಸವಿದೆವು. ಚಂದದ ಆತ್ಮೀಯ ಲೇಖನ.. ಧನ್ಯವಾದಗಳು.
ನನಗೂ ನಿಮ್ಮದೇ ಅನುಭವ.ಓದಿ ತುಂಬಾ ಸಂತೋಷ ಪಟ್ಟೆ,ನಾನು ಕೂಡ ಮದುವೆಯ ಮೊದಲು 28 ವರ್ಷಗಳ ಹಿಂದೆ ತಾಯಿ ಮನೆಯಲ್ಲಿ ತುಂಬಾ ತಿನ್ನುತ್ತಿದ್ದೆ,ಈಗ ನೆನಪು ಮಾತ್ರ,ನಾನೂ ಗಿಡ ಬೆಳೆಸಿದ್ದೇನೆ ಇನ್ನೂ ಫಲ ಬರಲು ಪ್ರಾರಂಭವಾಗಿಲ್ಲ