‘ನೆಮ್ಮದಿಯ ನೆಲೆ’-ಎಸಳು 10

Spread the love
Share Button

(ಇದುವರೆಗಿನ ಕಥಾಸಾರಾಂಶ: ಸುಕನ್ಯಾಳ ಮನಸ್ಸಿನಲ್ಲಿ ತನ್ನ  ಗತಕಾಲದ ನೆನಪಿನ ಸುರುಳಿ ಬಿಚ್ಚಲಾರಂಭಿಸಿದೆ. ಆಕೆಯ  ಸರಳ ವಿವಾಹ, ಅಚ್ಚುಮೆಚ್ಚಿನ ಸೊಸೆಯಾಗಿ, ಆರತಿಗೊಂದು, ಕೀರುತಿಗೊಂದು ಮಕ್ಕಳಾಗಿ, ಆಧುನಿಕ ಮನೋಭಾವನೆಯೊಂದಿಗೆ ಅವರಿಷ್ಟದಂತೆಯೇ  ಬದುಕುತ್ತಿದ್ದಾರೆ ….ಮುಂದಕ್ಕೆ ಓದಿ)

“ಹಾ.. ಉಡುಪಿಯಲ್ಲಿರುವ ಅವರ ಅಜ್ಜನ ಮನೆಯಲ್ಲಿ ಮಾಗಲ್ಯಧಾರಣೆ, ನಂತರ ಮೈಸೂರಿನಲ್ಲಿರುವ ಯಾವುದಾದರೂ ಹೋಟೆಲ್ ಒಂದರಲ್ಲಿ ಗೆಟ್‌ಟುಗೆದರ್ ಪಾರ್ಟಿ ಇಟ್ಟುಕೊಳ್ಳುವುದು” ಎಂದ.

ಇದೆಲ್ಲವನ್ನೂ ಕೇಳಿದ ನನ್ನವರು ಏನು ಹೇಳುತ್ತಾರೆಯೋ ಎಂದು ಕಾತುರದಿಂದ ಅವರೆಡೆಗೆ ನೋಡಿದೆ. ಅವರು ಎಂದಿನಂತೆ ನಿರ್ವಿಕಾರವಾಗಿ “ಆಯಿತು, ನನಗೆ ಅವರ ಫೋನ್ ನಂಬರ್ ಕೊಡು” ಎಂದು ತೆಗೆದುಕೊಂಡರು. ಫೋನಿನಲ್ಲಿ ಅವರೊಡನೆ ಮಾತನಾಡಿದ್ದೂ ಆಯಿತು. ನಾವು ಉಡುಪಿಯಲ್ಲಿದ್ದ ಹುಡುಗಿಯ ಅಜ್ಜನ ಮನೆಗೆ ಮತ್ತು ಅವರು ಮೈಸೂರಿನಲ್ಲಿದ್ದ ನಮ್ಮ ಮನೆಗೊಮ್ಮೆ ಎಡತಾಕಿದ್ದಾಯಿತು. ಅವರೆಲ್ಲರೂ ಬಂದ ಸಂದರ್ಭದಲ್ಲಿ ಬಂದಿದ್ದ ನಮ್ಮಪ್ಪ ಎಲ್ಲರೂ ನಿರ್ಗಮಿಸಿದ ಮೇಲೆ ತಾವು ವಾಸವಿದ್ದ ನಿವಾಸಕ್ಕೆ ಹೊರಟು ತಮ್ಮನ್ನು ಬಿಟ್ಟು ಬರಲು ನನ್ನನ್ನು ಆಹ್ವಾನಿಸಿದರು. ಎಂದೂ ಇಲ್ಲದ ನನ್ನಪ್ಪ ಇಂದು ನನ್ನನ್ನು ಕರೆಯುತ್ತಿದ್ದಾರೆ ಎಂದಮೇಲೆ ಏನೋ ವಿಷಯವಿರಬೇಕು ಅಂದುಕೊಂಡೆ. ಅವರಿದ್ದದ್ದೂ ಒಂಟಿಕೊಪ್ಪಲ್ ಬಡಾವಣೆಯಲ್ಲಿಯೇ ನಮ್ಮ ಮನೆಯಿಂದ ಸುಮಾರು ಅರ್ಧ ಫರ್ಲಾಂಗ್ ದೂರವಷ್ಟೇ. ನನ್ನವರಿಗೆ ಹೇಳಿ ಅಪ್ಪನೊಡನೆ ಹೊರಟೆ.

ಮನೆಬಿಟ್ಟು ಸ್ವಲ್ಪದೂರ ಹೆಜ್ಜೆ ಹಾಕುತ್ತಿದ್ದ ಹಾಗೇ “ಮಗಳೇ ಸುಕನ್ಯಾ, ನಾನು ಹೀಗೆ ಹೇಳುತ್ತಿದ್ದೇನೆಂದು ಬೇಸರ ಮಾಡಿಕೊಳ್ಳಬೇಡ ನಿನ್ನ ಮಗ ಆಯ್ಕೆ ಮಾಡಿಕೊಂಡಿರುವ ಹುಡುಗಿ ವಿದ್ಯಾವಂತೆ, ಚೆಲುವೆ, ಮಿಗಿಲಾಗಿ ನಮ್ಮವರೇ. ಆಧುನಿಕ ಮನೋಭಾವದವಳು. ತನ್ನ ಬಾಳಸಂಗಾತಿಯನ್ನು ತಾನೇ ಆರಿಸಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಇದು ಒಂದು ರೀತಿಯಲ್ಲಿ ಒಳ್ಳೆಯದೇ. ಇದರ ಸಾಧಕ ಬಾಧಕಗಳೆಲ್ಲ ಅವರಿಗೇ ಸೇರಿದ್ದು. ನಾವೇನಾದರೂ ಹುಡುಕಿ ಮದುವೆ ಮಾಡಿ ಏನಾದರೂ ಎಡವಟ್ಟಾದರೆ ಸುಲಭವಾಗಿ ನಮ್ಮ ತಲೆಯಮೇಲೆ ಗೂಬೆ ಕೂಡಿಸಿಬಿಡುತ್ತಾರೆ. ನೀವುಗಳೂ ಸರಳವಾಗಿ ಮದುವೆಯಾದವರೇ ಅಲ್ಲವೇ. ಆಯ್ಕೆ ಪ್ರಕ್ರಿಯೆ ಮತ್ತು ಆಚರಣೆಯಲ್ಲಿ ಕಾಲಕ್ಕೆ ತಕ್ಕಂತೆ ಅಲ್ಪಸ್ವಲ್ಪ ಬದಲಾವಣೆಯಾಗಿದೆ. ನಿನ್ನ ನಿರಾಸೆಯನ್ನು ಬದಿಗಿಟ್ಟು ನಗುನಗುತ್ತಾ ಕರ್ತವ್ಯವನ್ನು ನಿರ್ವಹಿಸಿ ಶುಭ ಹಾರೈಸು” ಎಂದು ನನ್ನ ತಲೆ ತಡವಿ ಸಾಂತ್ವನ ಹೇಳಿದರು.

ವಾವ್ ! ಯಾವುದನ್ನೂ ಪ್ರಶ್ನಿಸದೆ, ಕೆದಕದೆ ನನ್ನ ಮುಖಚರ್ಯೆಯಿಂದಲೇ ಅರ್ಥೈಸಿಕೊಂಡು ನನಗೆ ಸಮಾಧಾನ ಹೇಳಿದ ನನ್ನಪ್ಪನ ಕೈಗಳನ್ನು ಬೊಗಸೆಯಲ್ಲಿ ಹಿಡಿದು ಕಣ್ಣಿಗೊತ್ತಿಕೊಂಡೆ. ಅವರನ್ನು ಅವರ ನಿವಾಸಕ್ಕೆ ತಲುಪಿಸಿ ಮನೆಗೆ ಹಿಂತಿರುಗಿದೆ. ಅಪ್ಪನ ಮಾತಿನಲ್ಲಿದ್ದ ಸತ್ಯತೆಯನ್ನರಿತ ನಾನು ನಿರಾಸೆಯನ್ನು ಬದಿಗಿಟ್ಟು ಮನೆಯ ಆಚರಣೆ ಸಂಪ್ರದಾಯಕ್ಕೆ ತಕ್ಕಂತೆ ನನ್ನ ಸೊಸೆಯಾಗುವವಳು ಇಷ್ಟಪಟ್ಟಂತೆ ಸಿದ್ಧತೆ ಮಾಡಿಕೊಂಡೆ.

ಫಟಾಫಟ್ ಮದುವೆ ನಡೆದೇ ಹೋಯಿತು. ಮೈಸೂರಿನ ಪ್ರೆಸಿಡೆಂಟ್ ಹೋಟೆಲಿನಲ್ಲಿ ಏರ್ಪಡಿಸಿದ ಗೆಟ್‌ಟುಗೆದರ್ ಸಮಾರಂಭದ ಖರ್ಚುವೆಚ್ಚವನ್ನು ಇಬ್ಬರೂ ಸಮನಾಗಿ ಹಂಚಿಕೊಂಡದ್ದಾಯಿತು. ಸೊಸೆಯನ್ನು ಮನೆತುಂಬಿಸಿಕೊಂಡೆವು. ಅವಳ ಗುಣ ಸ್ವಭಾವ ಹೇಗೆ ಎಂದು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ನವದಂಪತಿಗಳು ವಿದೇಶಕ್ಕೆ ಹಾರಿಹೋದರು.

ಅಷ್ಟುಹೊತ್ತಿಗೆ ವಿಜ್ಞಾನದ ಆವಿಷ್ಕಾರದ ಫಲವಾಗಿ ಹಲವಾರು ಸವಲತ್ತುಗಳು ಪ್ರಪಂಚಕ್ಕೆ ಕಾಲಿಟ್ಟಿದ್ದವು. ನಮ್ಮ ಅಂಗೈಯಲ್ಲೇ ಎಲ್ಲವನ್ನೂ ತೋರಿಸಬಲ್ಲ ಮೊಬೈಲ್ ಬಂದಿತ್ತು. ಇದ್ದ ಕಡೆಯಿಂದಲೇ ಪರಸ್ಪರ ಸಂಭಾಷಿಸುವಂತಹ ಸೌಲಭ್ಯಗಳು ಕೈಸೇರಿದ್ದವು. ವಿದೇಶಕ್ಕೆ ಹಾರಿಹೋಗಿದ್ದ ಮಗ, ಸೊಸೆಯರಿಂದ ಫೋನ್‌ಕಾಲ್‌ಗಳು ಬರುತ್ತಿದ್ದವು. ಅದಕ್ಕಾಗಿ ಕಾಯ್ದು ಕುಳಿತವರಂತೆ ನಾನು, ನನ್ನವರು, ಮಗಳು ಅವರೊಡನೆ ಮಾತನಾಡುತ್ತಿದ್ದೆವು. ವಾರಕ್ಕೊಂದು ಸಾರಿ ಅವರಿಂದ ಫೋನ್ ಬರದಿದ್ದರೆ ಚಡಪಡಿಸುವಂತಾಗುತ್ತಿತ್ತು. ಕೆಲವು ಕಾಲದ ನಂತರ ನಾನು ಅಜ್ಜಿಯಾಗಲಿರುವ ಸಿಹಿಸುದ್ಧಿ ಕೇಳಿ ನನ್ನ ಮನಸ್ಸು ಸಂತಸಗೊಂಡಿತು. ನನ್ನಪ್ಪನಿಗೆ ಈ ವಿಷಯವನ್ನು ಮುಟ್ಟಿಸಿ” ಅಪ್ಪಾ ನಮ್ಮ ಬೀಗರಿಗೆ ಸದ್ಯಕ್ಕೆ ಅಲ್ಲಿಗೆ ಹೋಗಲಾಗುತ್ತಿಲ್ಲವಂತೆ, ನನ್ನನ್ನು ಅಲ್ಲಿಗೆ ಬರಲು ತಯಾರಿ ಮಾಡಿಕೊಳ್ಳಿ ಎಂದು ಆದಿ ಹೇಳಿದ್ದಾನೆ” ಎಂದು ಹೇಳಿದೆ.

“ಹೌದೇ ! ಇಂತಹ ಸಮಯದಲ್ಲಿ ನಮ್ಮವರೆನ್ನುವವರು ಯಾರಾದರೂ ಇರಬೇಕಾದದ್ದು ಆವಶ್ಯಕ ಮಗಳೇ, ಇದೂ ನಿನ್ನ ಕರ್ತವ್ಯವೇ, ಅಂದ ಹಾಗೆ ಪಾಸ್‌ಪೋರ್ಟ್, ವೀಸಾ ಎಲ್ಲವನ್ನೂ ರೆಡಿ ಮಾಡಿಕೊಳ್ಳಬೇಕಾಗುತ್ತೆ” ಎಂದರು.

“ಅಪ್ಪಾ ಆದಿ ವಿದೇಶಕ್ಕೆ ಹೋಗುವುದಕ್ಕಿಂತ ಮುಂಚೆಯೇ ನಮ್ಮಿಬ್ಬರನ್ನೂ ಚೆನ್ನೈಗೆ ಕರೆದುಕೊಂಡು ಹೋಗಿ ಪಾಸ್‌ಪೋರ್ಟ್ ರೆಡಿ ಮಾಡಿಸಿದ್ದನ್ನು ನಿಮಗೆ ತಿಳಿಸಿದ್ದೆ. ಮರೆತು ಬಿಟ್ಟಿದ್ದೀರಾ “ಎಂದೆ.

“ಹೌದು ನೀನು ಇದಕ್ಕಾಗಿ ಹೇಗೂ ಚೆನ್ನೈಗೆ ಹೋಗುತ್ತಿದ್ದೇವೆ, ಕೆಲಸಗಳು ಮುಗಿದಮೇಲೆ ಒಂದೆರಡು ದಿವಸವಿದ್ದು ಸುತ್ತಮುತ್ತಲಿನ ಸ್ಥಳಗಳು, ದೇವಸ್ಥಾನಗಳನ್ನು ನೋಡಿಕೊಂಡು ಬರುವ ಉದ್ದೇಶವಿಟ್ಟುಕೊಂಡಿದ್ದೆ. ಆದರೆ ಮಗ, ಸೊಸೆ ಈಗ ಅದೆಲ್ಲ ಆಗುವುದಿಲ್ಲ ಎಂದು ಹಾಗೇ ಕರೆದುಕೊಂಡು ಬಂದಿದ್ದರು ಎಂದು ಹೇಳಿದ್ದೆ. ಈಗೇನು ವಿದೇಶಕ್ಕೇ ಹಾರುತ್ತಿದ್ದೀಯೆ, ಅಲ್ಲಿ ಅವರಿಗೆ ಸಿಗುವ ವೀಕೆಂಡುಗಳಲ್ಲಿ ಸಾಕಷ್ಟು ಜಾಗಗಳನ್ನು….
ಅವರ ಮಾತನ್ನು ಅರ್ಧದಲ್ಲೇ ತಡೆಯುತ್ತಾ  ” ಅಪ್ಪಾ ಸ್ಟಾಪಿಟ್, ನಾನೀಗ ಹೋಗುತ್ತಿರುವುದು ಸೊಸೆಗೆ ಬಾಣಂತನ ಮಾಡಲಿಕ್ಕಾಗಿ. ಹುಂ ನನ್ನ ಬಯಕೆಯ ಕನಸುಗಳು ಯಾವಾಗ ಸಾಕಾರವಾಗುತ್ತೋ ನಾಕಾಣೆ. ಆ ವಿಷಯ ಬಿಡಪ್ಪ, ನನ್ನ ಮಗಳು ಮಾಧವಿ ಆ ಸಮಯದಲ್ಲಿ ಅಂದರೆ ನಿಮ್ಮ ಅಳಿಯಂದಿರು ನನ್ನನ್ನು ಅಲ್ಲಿಬಿಟ್ಟು ಹಿಂತಿರುಗಿ ಬರುವವರೆಗೆ ನಿಮ್ಮ ಮನೆಯಲ್ಲಿ ಇರುತ್ತಾಳೆ. ಅವಳಿಗೆ ಹುಡುಗಾಟಿಕೆ ಹೆಚ್ಚು. ಅದು ನಿಮಗೆ ಗೊತ್ತಿದ್ದದ್ದೇ. ಆದರೆ ತಪ್ಪು ತಿಳಿಯದೆ ಸಂಭಾಳಿಸಿಕೊಂಡು ಹೋಗುತ್ತೀರಾ? ಅಪ್ಪಾ ಪ್ಲೀಸ್” ಎಂದೆ.

“ಅಲ್ಲ ಮಗಳೇ, ನೀನು ಏನೆಂದಿ? ಅಳಿಯಂದಿರು ನಿನ್ನನ್ನು ಬಿಟ್ಟು ವಾಪಸ್ಸು ಬಂದುಬಿಡುತ್ತಾರೆಯೇ? “ಎಂದು ಅಚ್ಚರಿಯಿಂದ ಕೇಳಿದರು.

ಈ ವಿಷಯದ ಬಗ್ಗೆ ವಾದವಿವಾದಗಳಾಗಿ ತೀರ್ಮಾನವಾಗಿ ಹೋಗಿದೆ. “ನೋಡು ಸುಕನ್ಯಾ ನನಗೆ ಪರದೇಶದಲ್ಲಿ ತಿಂಗಳಾನುಗಟ್ಟಲೆ ಇರಲಿಕ್ಕಾಗುವುದಿಲ್ಲ. ಜೊತೆಗೆ ಅಷ್ಟು ದಿನಗಳ ರಜೆ ಸಿಗುವುದೂ ಸಾಧ್ಯವಿಲ್ಲ. ಅಲ್ಲದೆ ನಮ್ಮ ಮಗಳನ್ನು ತಾತನ ಮನೆಯಲ್ಲಿ ಎಷ್ಟು ದಿವಸಗಳು ಬಿಡಲಿಕ್ಕಾಗುತ್ತೆ. ಈಗಿನ ಕಾಲದವಳಾಗಿ ನೀನೇ ಅವಳ ವರ್ತನೆಯ ಬಗ್ಗೆ ದಿಗಿಲು ಪಡುತ್ತಿರುತ್ತೀ. ಮನೆಗೆ ಬರುವುದು ಸ್ವಲ್ಪ ತಡವಾದರೆ ಸಾಕು ಚಡಪಡಿಸುತ್ತೀ. ಅಂತಹುದರಲ್ಲಿ ಮಾವನವರು ಮತ್ತು ಅವರ ಸಹಾಯಕರಾದ ದಂಪತಿಗಳು ಹೇಗೆ ಸಂಭಾಳಿಸುತ್ತಾರೆ. ಬೇಡ ಬೇಡ, ನಾನು ನಿನ್ನನ್ನು ಅಲ್ಲಿಗೆ ಬಿಟ್ಟು ಆದಷ್ಟೂ ಬೇಗ ಹಿಂತಿರುಗಿ ಬರಬೇಕು. ಹಾಗೆ ಏರ್ಪಾಡುಮಾಡಿಕೊಳ್ಳುತ್ತೇನೆ” ಎಂದರು. ಅವರು ಹಾಕಿದ್ದ ಕರಾರು ನನ್ನ ಕಣ್ಮುಂದೆ ಬಂತು.

ಹಾಗೇ ಮಗಳ ಬಿಡುಬೀಸಾದ ವರ್ತನೆಯ ಬಗ್ಗೆ ಅಪ್ಪನ ಜೊತೆಯಲ್ಲಿರುವ ಕೆಲಸದವರು ಇಲ್ಲದ ಸುದ್ಧಿಗೊಂದು ಗುದ್ದುಕೊಟ್ಟು ಮಾತನಾಡುವಂತಹವರು. ಮಗಳು ಮತ್ತವಳ ಪಟಾಲಂ ಮನೆಗೆ ಲಗ್ಗೆಯಿಟ್ಟರೆ ಮುಗಿದೇ ಹೋಯ್ತು. ಇನ್ನು ವಯಸ್ಸಾಗಿರೋ ಅಪ್ಪ ಮೊದಲಿನಿಂದಲೂ ಅತಿಯಾಗಿಲ್ಲವೆಂದರೂ ಸಂಪ್ರದಾಯವಾದಿಗಳೇ. ಈಗಂತೂ ಅಧ್ಯಾತ್ಮ, ಉಪನ್ಯಾಸಗಳಿಗೆ ಮನಸೋತು ಅವುಗಳಲ್ಲಿ ಅವರಿಗೆ ನಂಬಿಕೆ ಹೆಚ್ಚಾಗಿದೆ. ಅಬ್ಬಬ್ಬಾ ! ಬೇಡ, ಮಿಗಿಲಾಗಿ ಮಗನ ನೆರವಿಗೆ ನಾನು ಅಮೆರಿಕಕ್ಕೆ ಹೋಗಬೇಕೆಂದರೆ ಈ ವಿಷಯದಲ್ಲಿ ಹೆಚ್ಚು ವಾದಮಾಡದಿರುವುದೇ ಉತ್ತಮ ಎಂದು ನಮ್ಮವರು ಹೇಳಿದ್ದಕ್ಕೆ ಸಮ್ಮತಿಸಿದ್ದೆ.

“ಏ ಮಗಳೇ, ಎಲ್ಲಿ ಕಳೆದುಹೋದೆ? “ಎಂದು ಭುಜಹಿಡಿದು ಅಪ್ಪ ನನ್ನನ್ನು ಅಲ್ಲಾಡಿಸಿದಾಗ ವಾಸ್ತವಕ್ಕೆ ಮರಳಿದವಳೇ “ನಿಮ್ಮ ಅಳಿಯ ಅಲ್ಲಿ ತಿಂಗಳಾನುಗಟ್ಟಲೆ ಇದ್ದು ಏನು ಮಾಡುತ್ತಾರೆ? ಅಲ್ಲದೆ ಅವರಿನ್ನೂ ಸರ್ವೀಸ್‌ನಲ್ಲಿದ್ದಾರೆ. ಅಷ್ಟೊಂದು ರಜೆ ಹಾಕಲಾಗುತ್ತದೆಯೇ? ಮಿಗಿಲಾಗಿ ಅವರು ನಿಮ್ಮ ಖಾಸಾ ಅಳಿಯ, ನಿಮ್ಮಂತೆಯೇ, ಲೆಕ್ಕಪತ್ರವಿಡುವ ಕೆಲಸ ಬೇರೆ ಮಾಡುತ್ತಿದ್ದಾರೆ. ಇವನ್ನೆಲ್ಲ ಬಿಟ್ಟು ಅಲ್ಲಿರಲು ಅವರಿಗೆ ಸಾಧ್ಯವೇ?” ಎಂದೆ.

“ಆಯಿತು ಬಿಡು ಮಗಳೇ, ನಾನು ಅಲ್ಲಿಯವರೆಗೆ ನಿನ್ನ ಮಗಳನ್ನು ಅಂದರೆ ನನ್ನ ಮೊಮ್ಮಗಳನ್ನು ಜೋಪಾನವಾಗಿ ನೋಡಿಕೊಳ್ಳುತ್ತೇನೆ. ಆತಂಕಪಡದೆ ಹೋಗಿ ಅಲ್ಲಿ ಮಕ್ಕಳಿಗೆ ನೆರವಾಗಿ ಕೆಲಸ ಮುಗಿದಮೇಲೆ ಸುಖವಾಗಿ ಬಾ ಶುಭವಾಗಲಿ” ಎಂದು ವಿಷಯಕ್ಕೆ ಮುಕ್ತಾಯ ಹಾಡಿದರು.

ಸರಿ, ವಿದೇಶಕ್ಕೆ ಹೋಗಲು ಎಲ್ಲವೂ ಸಿದ್ಧವಾಯಿತು. ದಿನಾಂಕವೂ ನಿಗದಿಯಾಯಿತು. ಹೋಗುತ್ತಿರುವುದು ಸೊಸೆಯ ಬಾಣಂತನಕ್ಕೆ, ಅಲ್ಲಿ ಏನು ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಏನೇನು ತರಬೇಕೆಂದು ಮಗನನ್ನೇ ಕೇಳಿದರೆ? ಛೇ ಅವನಿಗೇನು ಗೊತ್ತು, ಎಂದುಕೊಂಡು ನಮ್ಮ ಬೀಗರಿಗೆ ಫೋನ್ ಮಾಡಿ ಕೇಳಿಕೊಂಡು ಅವರು ಹೇಳಿದಂತೆ ಕೆಲವು ಪದಾರ್ಥಗಳನ್ನು ಪ್ಯಾಕ್‌ಮಾಡಿಕೊಂಡೆ.


ಮೊದಲ ಸಾರಿ ವಿಮಾನದಲ್ಲಿ ಪ್ರಯಾಣ. ನೆನೆಸಿಕೊಂಡರೇ ಮೈಯಲ್ಲಿ ರೋಮಾಂಚನವಾಗುತ್ತಿತ್ತು. ಆದಿನ ಏರೋಡ್ರೋಮ್ ತಲುಪಿ ಎಲ್ಲ ಫಾರ್ಮಾಲಿಟಿಗಳನ್ನು ಪೂರೈಸಿ ವಿಮಾನಹತ್ತಿ ನಮ್ಮ ಸೀಟುಗಳಲ್ಲಿ ಕೂಡಲು ಹೋದೆವು. ನನಗೆ ಕಿಟಕಿಯ ಪಕ್ಕ ಕುಳಿತುಕೊಳ್ಳುವ ಇಚ್ಛೆ ವ್ಯಕ್ತಪಡಿಸಿದಾಗ ನನ್ನವರು ಮುಖನೋಡಿದರು. ಆಗ “ನಾನು ಟ್ರೈನು, ಬಸ್ಸು, ಕಾರುಗಳಂತೆ ಕಿಟಕಿಯ ಪಕ್ಕದಲ್ಲಿ ಎಲ್ಲವೂ ಕಾಣಿಸುತ್ತೆ ಅಂದುಕೊಂಡೆಯಾ? ಎಂಥಹ ಪೆದ್ದಿ ನನ್ನಾಕೆ ಎಂದುಕೊಳ್ಳಬೇಡಿ ಅದೆಲ್ಲವೂ ನನಗೂ ಗೊತ್ತು. ಆದರೂ ನನಗೆ ಕಿಟಕಿಯ ಹತ್ತಿರ ಬಿಡಿ ಪ್ಲೀಸ್” ಎಂದೆ. “ಎಷ್ಟು ಮಾತಾಡ್ತೀಯೆ ಮಾರಾಯ್ತೀ, ನಾನು ನಿನ್ನ ಕೈಹಿಡಿದಾಗ ಇದ್ದಂಥ ಮೌನಗೌರಿ ಇವಳೇನಾ? ಅನ್ನಿಸುತ್ತಿದೆ. ಹೋಗು ಕುಳಿತುಕೋ” ಎಂದು ನನಗೆ ಜಾಗಬಿಟ್ಟು ಪಕ್ಕದ ಸೀಟಿನಲ್ಲಿ ತಾವು ಕುಳಿತರು.

ವಿಮಾನ ಸ್ವಲ್ಪಸ್ವಲ್ಪವೇ ಮೇಲಕ್ಕೇರಿದಂತೆ ಕಿಟಕಿಯಿಂದ ಕೆಳಕ್ಕೆ ನೋಟ ಹರಿಸಿದ್ದ ನನಗೆ ಭೂಮಿಯ ಮೇಲೆ ಕಾಣುತ್ತಿದ್ದ ವಸ್ತುಗಳೆಲ್ಲಾ ಚಿಕ್ಕದಾಗುತ್ತಾ ಚಿಕ್ಕದಾಗುತ್ತಾ ಮಸುಕು ಮಸುಕಾಗತೊಡಗಿದವು. ಮೋಡಗಳೊಳಗೆ ಸಾಗುತ್ತಿದ್ದೇವೇನೋ ಎಂಬಂತ ಅನುಭವ. ಸೂರ್ಯನೂ ನಮ್ಮೆಡೆಗೆ ಬರುತ್ತಿದ್ದಾನೆಂಬ ಭ್ರಮೆ. ಆಕಾಶ ಗಳಿಗೆ ಗಳಿಗೆಗೂ ಬಣ್ಣ ಬದಲಾಯಿಸುತ್ತಿದೆಯೇನೋ ಎಂಬಂತಹ ಒಂದು ರೀತಿಯಲ್ಲಿ ಮನಕ್ಕೆ ಉಲ್ಲಾಸವನ್ನೀಯುತ್ತಿತ್ತು. ಒಂದು ಸಾರಿ ಪಕ್ಕದಲ್ಲಿ ಕುಳಿತಿದ್ದ ನನ್ನವರತ್ತ ದೃಷ್ಟಿ ಹರಿಸಿದೆ. ಸೀಟಿನ ಹಿಂದಿನ ಪ್ಯಾಕೆಟ್‌ನಲ್ಲಿಟ್ಟಿದ್ದ ಯಾವುದೋ ಮ್ಯಾಗಜಿನ್ ಓದುವುದರಲ್ಲಿ ತಲ್ಲೀನರಾಗಿದ್ದರು. ಮತ್ತೆ ನನ್ನ ನೋಟ ಹೊರಗಡೆಗೆ ಹರಿಸಿದೆ. ಎಷ್ಟುದೂರ ಬಂದೆವು, ಎಷ್ಟು ಕಡೆ ಬದಲಾಯಿಸಿದೆವು ಎಂಬುದರತ್ತ ಗಮನವಿಲ್ಲದಂತೆ ನನ್ನದೇ ಆದ ಲೋಕದಲ್ಲಿ ವಿಹರಿಸುತ್ತಿದ್ದೆ. ಅಂತೂ ನಾವಿಳಿಯುವ ತಾಣ ಬಂತು. ವಿಮಾನದಿಂದ ಕೆಳಗಿಳಿದೆವು. ಲಗ್ಗೇಜು ಬರುತ್ತಿರುವ ಕನ್ವೇಯರ್ ಕಡೆಗೆ ಹೋಗಿ ನಮ್ಮ ವಸ್ತುಗಳನ್ನು ಎತ್ತಿಕೊಂಡು ಹೊರ ಬರುವಷ್ಟರಲ್ಲಿ ಮಗನಿಂದ ಫೋನ್ ಬಂತು. ನಾನು ಇಲ್ಲೇ ಎಂಟ್ರೆನ್ಸ್ ಬಾಗಿಲ ಬಳಿ ಕಾಯುತ್ತಿದ್ದೇನೆ ಎಂದು ಹೇಳಿದ. ಹೊರಕ್ಕೆ ಕಾಲಿಡುತ್ತಿದ್ದಂತೆ ಮಗನ ಮುಖದರ್ಶನವಾಯಿತು. ಅವನು ತಂದಿದ್ದ ಕಾರಿನಲ್ಲಿ ಕುಳಿತು ಅವನ ನಿವಾಸದತ್ತ ಹೊರಟೆವು. ಅಮೆರಿಕವನ್ನು ಕುಬೇರರ ನಾಡು ಎಂದು ಕರೆಯುವುದನ್ನು ಕೇಳಿದ್ದ ನನಗೆ ಅದರ ಸುತ್ತಮುತ್ತ ಸುತ್ತಿ ನೋಡಬೇಕೆನ್ನುವ ಆಸೆ. ಇದರಲ್ಲಿ ಸುಮಾರು ನಲವತ್ತೆರಡು ರಾಜ್ಯಗಳು ಒಟ್ಟುಗೂಡಿವೆ ಎಂದು ಓದಿದ ನೆನಪು. ನನ್ನವರು ಇಲ್ಲಿರುವಷ್ಟು ಸಮಯದಲ್ಲಿ ನನ್ನ ಮಗ ತಾನಿರುವ ನ್ಯೂಜೆರ್ಸಿಯ ಆಸುಪಾಸಿನ ಒಂದಷ್ಟು ಸ್ಥಳಗಳನ್ನಾದರೂ ನೋಡಬಹುದು. ಹೇಗಾದರೂ ಇವರನ್ನು ಒಪ್ಪಿಸಬೇಕು ಎಂದು ಮನದಲ್ಲೇ ಮಂಡಿಗೆ ತಿನ್ನುತ್ತಾ ದಾರಿಯುದ್ದಕ್ಕೂ ಕಾಣುತ್ತಿದ್ದ ಭವ್ಯವಾದ ಕಟ್ಟಡಗಳನ್ನು, ಇತರೆ ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳುತ್ತಾ ದಾರಿ ಸವೆದದ್ದೇ ತಿಳಿಯಲಿಲ್ಲ.

ಮನೆ ತಲುಪಿ ಕಾರಿನಿಂದ ಇಳಿದ ನಾನು ಬಾಗಿಲಲ್ಲೇ ನಿಂತಿದ್ದ ಸೊಸೆಯನ್ನು ಕಂಡೆ. ಮೊದಲೇ ಚೆಲುವೆ, ಈಗಂತೂ ಮೈಕೈ ತುಂಬಿಕೊಂಡು ದೃಷ್ಠಿ ಬಡಿಯುವಂತಿದ್ದಳು. ಹಾಗೇ ನೋಡುತ್ತಾ ಮೈಮರೆತು ನಿಂತಿದ್ದ ನನ್ನನ್ನು ಅವಳೇ ಎಚ್ಚರಿಸಿದಳು. ಮನೆಯೊಳಕ್ಕೆ ಆಹ್ವಾನಿಸಿದಳು. ನಮಗಾಗಿ ಸಜ್ಜುಗೊಳಿಸಿದ್ದ ರೂಮಿಗೆ ನಮ್ಮ ಲಗೇಜ್‌ಗಳನ್ನು ಆದಿ ತೆಗೆದುಕೊಂಡು ಇಟ್ಟ. “ಅಮ್ಮಾ, ಅಪ್ಪ, ನೀವಿಬ್ಬರೂ ಫ್ರೆಷ್ ಆಗಿ ಬನ್ನಿ ಊಟ ಮಾಡುವಿರಂತೆ. ನಂತರ ರೆಸ್ಟ್ ತೆಗೆದುಕೊಳ್ಳಬಹುದು” ಎಂದ. ” ಅಲ್ವೋ ಆದಿ, ಸಾಮಾನುಗಳನ್ನು ತೆಗೆಯುವುದು ಬೇಡವೇ?” ಎಂದದ್ದಕ್ಕೆ “ಅವನ್ನೆಲ್ಲ ನಾಳೆ ನೋಡಿಕೊಂಡರಾಯ್ತು. ಈಗ ನಿಮಗೆ ಆಯಾಸವಾಗಿರುತ್ತೆ” ಎಂದುಪಚರಿಸಿದ.

ನಾವಿಬ್ಬರೂ ಮಕ್ಕಳು ಹೇಳಿದಂತೆ ಮಾಡಿದೆವು. ಮಾರನೆಯ ದಿನ ಎದ್ದು ಮುಖಮಾರ್ಜನೆ ಮುಗಿಸಿ ಸೊಸೆ ಕೊಟ್ಟ ಕಾಫಿ ಕಪ್ಪು ಹಿಡಿದು ಮನೆಯನ್ನೆಲ್ಲಾ ಒಂದು ಸುತ್ತು ಹಾಕಿದೆ. ಎರಡು ರೂಮುಗಳುಳ್ಳ ಸುಸಜ್ಜಿತ ಮನೆ. ಮುಂದೆ ವಿಶಾಲವಾದ ಬಯಲು. ಮಧ್ಯದಲ್ಲಿ ಹಸಿರು ಲಾನ್, ಕಾಂಪೌಂಡಿನ ಅಂಚಿನಲ್ಲಿ ಒಂದೆರಡು ಎತ್ತರವಾದ ಮರಗಳು, ಯಾವಜಾತಿಯವೋ ತಿಳಿಯದು. ಒಂದಷ್ಟು ಹೂವಿನ ಗಿಡಗಳು. ಒಟ್ಟಿನಲ್ಲಿ ಮನೆ ಸುಂದರವಾಗಿದೆ ಎನ್ನಿಸಿತು. ನಾನು ತೆಗೆದುಕೊಂಡು ಹೋಗಿದ್ದ ಸಾಮಾನುಗಳನ್ನು ಸೊಸೆಯು ಹೇಳಿದಂತೆ ಜೋಡಿಸಿಟ್ಟುಕೊಂಡೆ. ಅಲ್ಲಿನ ಅಡುಗೆಮನೆ, ಅಲ್ಲಿ ಉಪಯೋಗಿಸುವ ಪದಾರ್ಥಗಳು, ಅಡುಗೆ ಮಾಡಲು ಬಳಸುವ ಪರಿಕರಗಳ ವ್ಯವಸ್ಥೆ, ಅವನ್ನು ಬಳಸುವ ರೀತಿ ಎಲ್ಲವನ್ನೂ ಸೊಸೆಯನ್ನು ಕೇಳಿ ತಿಳಿದುಕೊಂಡೆ. ಅದೆಲ್ಲವನ್ನೂ ನೋಡಿದ ನನಗೆ ಸೊಸೆಯ ಅಚ್ಚುಕಟ್ಟು, ಮುಂದಾಲೋಚನೆ ಎಲ್ಲವೂ ಇಷ್ಟವಾಯಿತು.

ದೇಶ, ಸಮಯ, ಹವಾಮಾನ ಎಲ್ಲವೂ ವ್ಯತ್ಯಾಸವಾಗಿದ್ದರಿಂದ ನಮ್ಮಿಬ್ಬರಿಗೂ ನಿದ್ರೆ, ಊಟ ತಿಂಡಿ ಇವುಗಳೆಲ್ಲಕ್ಕೂ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಒಂದು ವಾರವೇ ಬೇಕಾಯಿತು. ಸೊಸೆಯನ್ನು ಪರೀಕ್ಷಿಸುತ್ತಿದ್ದ ಡಾಕ್ಟರರು ಕೊಟ್ಟಿದ್ದ ಅವಧಿಗಿಂತ ಕೆಲದಿನ ಮುಂಚೆಯೇ ನನ್ನ ಮೊಮ್ಮಗನ ಆಗಮನವಾಯಿತು. ಅಲ್ಲೆಲ್ಲ ಎಂತಹ ಮಗುವಾಗುತ್ತದೆಂಬುದನ್ನು ಮೊದಲೇ ಹೇಳಿಬಿಟ್ಟಿರುತ್ತಾರಂತೆ. ಹಾಗಾಗಿ ಹುಟ್ಟುವ ಮಗುವಿಗೆ ಇಡಬೇಕಾದ ಹೆಸರನ್ನು ನಿರ್ಧರಿಸಿ ಮಗು ಹುಟ್ಟಿದ ದಿನವೇ ಆಸ್ಪತ್ರೆಯಲ್ಲೇ ನೋಂದಾಯಿಸುತ್ತಾರೆ. ಅದರಂತೆ ಮಗ, ಸೊಸೆ ತಮ್ಮ ಮಗನಿಗೆ ‘ಇಶಾಂಕ್’ ಎಂಬ ಹೆಸರನ್ನು ಆರಿಸಿದ್ದರು. ನಮ್ಮವರು ಊರಿಗೆ ಹಿಂದಿರುಗುವ ಮೊದಲೇ ಮೊಮ್ಮಗನ ಆಗಮನವಾದದ್ದು ಅವರಿಗೆ ಪರಮಾನಂದವಾಗಿತ್ತು. ಆದರೆ ನನ್ನ ಸುತ್ತಾಟದ ಕನಸು ಕಲ್ಪನೆಯಲ್ಲೇ ಮುರುಟಿಹೋಗಿತ್ತು. ಮತ್ತೊಂದು ವಾರವಿದ್ದು ನನ್ನವರು ಭಾರತಕ್ಕೆ ಹಿಂತಿರುಗಿದರು. ಮಗು ಬಾಣಂತಿಯ ಕೆಲಸಕಾರ್ಯಗಳಲ್ಲಿ ನನಗೆ ಆರು ತಿಂಗಳು ಕಳೆದದ್ದೇ ಗೊತ್ತಾಗಲಿಲ್ಲ. ನನ್ನ ಬೀಗರು ಅಲ್ಲಿಗೆ ಬಂದರು. ಅವರ ಆಗಮನವಾದ ನಂತರ ನನ್ನ ನಿರ್ಗಮನ. ನನ್ನ ಸೊಸೆ ನನಗೆ ಕೊಡುಗೆಯಾಗಿ ಕಾರೊಂದನ್ನು ಕೊಳ್ಳಲು ಹಣ ನೀಡಿದಳು. ನನಗೆ ಸ್ವರ್ಗಕ್ಕೆ ಮೂರೇ ಗೇಣು ಉಳಿಯಿತು. ಹರ್ಷಚಿತ್ತಳಾಗಿ ಸ್ವದೇಶಕ್ಕೆ ಮರಳಿದೆ.

ಮಗನ ಮನೆಯಿಂದ ಬಂದ ನನಗೆ ಸಹಜಸ್ಥಿತಿಗೆ ಮರಳಲು ಒಂದು ವಾರಬೇಕಾಯಿತು. ಹಾಗೇ ಅಸ್ತವ್ಯಸ್ಥವಾಗಿದ್ದ ಮನೆಯನ್ನು ಒಂದು ಹಂತಕ್ಕೆ ತರಲು ಒಂದೆರಡು ತಿಂಗಳೇ ಹಿಡಿಯಿತು. ಒಂದುದಿನ ಮನೆಯಲ್ಲೇ ಇದ್ದ ನನ್ನ ಮಗಳನ್ನು ಕಂಡು “ಇವತ್ತೇನು ಎಲ್ಲಿಗೂ ಹೋಗದೇ ಹಾಯಾಗಿ ಮನೆಯಲ್ಲಿದ್ದೀಯಲ್ಲಾ?” ಎಂದು ಕೇಳಿದೆ. “ಇವತ್ತು ಸಾಟರ್‌ಡೇ ಅಲ್ಲವೇನಮ್ಮಾ” ಎಂದುತ್ತರಿಸಿದಳು. ನಾನು “ಅದು ಗೊತ್ತು ಆದರೆ ನೀನು ಯಾವಡೇನೂ ಮನೆಯಲ್ಲಿ ಇರುವುದಿಲ್ಲವಲ್ಲಾ ಅದಕ್ಕೇ ಕೇಳಿದೆ. ಆರಾಮವಾಗಿದ್ದೀಯ ತಾನೇ? “ಎಂದೆ. “ಹಾಗೇನಿಲ್ಲ ಚೆನ್ನಾಗಿದ್ದೇನೆ” ಎಂದಳು.

“ಮಾಧವಿ, ನಾನು ಹೀಗೆ ಹೇಳುತ್ತೇನೆಂದು ಬೇಜಾರು ಮಾಡಿಕೊಳ್ಳಬೇಡ. ನಿಮ್ಮಪ್ಪ ಬೆಳಗ್ಗೆ ಹೋದರೆ ಬರುವುದು ರಾತ್ರಿಗೇ. ಅವರ ಕೆಲಸದಲ್ಲೇ ಅವರು ಬ್ಯುಸಿ. ಆದರೆ ನೀನು ಹೆಣ್ಣುಮಗಳು, ಮದುವೆಯಾಗಿ ಗೃಹಕೃತ್ಯಗಳನ್ನು ನಿಭಾಯಿಸಬೇಕಾದವಳು ಹೀಗೇನಾ ಮನೆಯನ್ನು ಇಟ್ಟುಕೊಳ್ಳುವುದು? ಇಟ ಈಸ್ ಟೂ ಬ್ಯಾಡ್” ಎಂದೆ.

ನನ್ನ ಮಾತುಗಳು ಕಿವಿಯ ಮೇಲೆ ಬಿದ್ದೇ ಇಲ್ಲವೇನೋ ಎಂಬಂತೆ ಟಿ.ವಿ. ರಿಮೋಟ್ ಕೈಲಿಹಿಡಿದು ಚಾನಲ್ ಬದಲಾಯಿಸುವುದರಲ್ಲಿ ನಿರತಳಾಗಿದ್ದುದನ್ನು ನೋಡಿ ಬೇಸರದಿಂದ ಒಳಗಿದ್ದ ಬಟ್ಟೆಗಳನ್ನು ಎತ್ತಿಕೊಂಡು ರೂಮಿಗೆ ನಡೆದೆ. ಒಂದು ಹತ್ತು ನಿಮಿಷವಾಗಿರಬಹುದು. ಗಂಡು ಹುಡುಗರ ಗುಣಗಳನ್ನೇ ಮೈಗೂಡಿಸಿಕೊಂಡಿದ್ದ ಹೆಣ್ಣುರೂಪದ ನನ್ನ ಕುವರಿಯ ಆಗಮನವಾಯಿತು. ಬಟ್ಟೆಗಳನ್ನು ಮಡಿಸಿ ವಾರ್ಡ್‌ರೋಬಿನಲ್ಲಿ ಜೋಡಿಸುವುದರಲ್ಲಿ ನಿರತಳಾಗಿದ್ದ ನಾನು ಅವಳ ಕಡೆಗೆ ತಿರುಗಿಯೂ ನೋಡದೆ ನನ್ನ ಕೆಲಸ ಮುಂದುವರಿಸಿದೆ. ನನ್ನಹತ್ತಿರಕ್ಕೆ ಬಂದವಳೇ ತನ್ನೆರಡೂ ಕೈಗಳನ್ನು ನನ್ನ ಕತ್ತಿನ ಸುತ್ತ ಹೆಣೆದು ನನ್ನ ಮುಖವನ್ನು ತನ್ನೆಡೆಗೆ ತಿರುಗಿಸಿಕೊಳ್ಳುತ್ತಾ “ಸಾರಿ ಮಾಮ್, ಆಫೀಸಿನಲ್ಲಿ ತುಂಬಾ ಕೆಲಸವಿತ್ತು. ಹೀಗಾಗಿ ನಾನೂ ಅಪ್ಪನಂತೆ ಬೆಳಗ್ಗೆ ಹೋದರೆ ರಾತ್ರಿ ಒಂಬತ್ತು ಕೆಲವು ಸಾರಿ ಹತ್ತು ಗಂಟೆಗೆ ಬರುತ್ತಿದ್ದೆ. ಮನೆಗೆಲಸದ ಗೌರಮ್ಮನದೇ ಎಲ್ಲ ಕಾರುಬಾರು. ಅದುಬಿಡು, ಈಗ ನಾನು ಹೇಳುವುದನ್ನು ಕೇಳು. ನೀನು ಯಾವಾಗಲೂ ಮದುವೆ ಮಾಡಿಕೋ ಮಗಳೇ ಎನ್ನುತ್ತಿದ್ದೆಯಲ್ಲಾ ಅದಕ್ಕೆ ನಾನೊಂದು ತೀರ್ಮಾನಕ್ಕೆ ಬಂದಿದ್ದೇನೆ “ಎಂದಳು.

ಅವಳು ಹೇಳಿದ್ದನ್ನು ಕೇಳಿ “ವಾವ್ ! ಎಂಥಾಸುದ್ಧಿ ಹೇಳಿದೆ ಮಾಧವಿ, ಹೇಳು ನಿನಗೆ ಎಂಥಹ ಗಂಡಬೇಕು? ನಿನ್ನ ಅಭಿರುಚಿಗೆ ತಕ್ಕಂತೆ” ” ಓ.. ಅಮ್ಮಾ ನೀನು ಅವೆಲ್ಲ ತೊಂದರೆ ತೆಗೆದುಕೊಳ್ಳಬೇಡ. ನಾನಾಗಲೇ ನನ್ನ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಅಪ್ಪನಿಗೆ ಹೇಳು, ನಾಳೆ ಭಾನುವಾರ ಕ್ಲಬ್ಬಿನ ಕಡೆಗೆ ಪಾದ ಬೆಳೆಸದೆ ಮನೆಯಲ್ಲಿ ಇರಬೇಕೆಂದು”ಎಂದಳು.

ಹೂ..ನಾನೆಂತಹ ಪೆದ್ದಿ, ಅಲ್ಲಾ ಹೆಚ್ಚು ನಂಬಿಕೆಯಿಟ್ಟುಕೊಂಡಿದ್ದ ಮಗನೇ ಅದನ್ನು ಬುಡಮೇಲು ಮಾಡಿದ್ದ. ಅಂದ ಮೇಲೆ ಮೊದಲಿನಿಂದಲೂ ಬಾಲವಿಲ್ಲದ ಮಂಗನಂತಾಡುತ್ತಿದ್ದ ಮಗಳನ್ನು ನಿನಗೆಂಥಾ ಗಂಡು ಬೇಕೆಂದು ಕೇಳುತ್ತಿದ್ದೇನೆ. ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಿದ್ದಂತೆ “ಮಾಮ್, ಎಲ್ಲಿ ಕಳೆದುಹೋದಿರಿ?” ಎಂದು ಭುಜ ಅಲುಗಿಸಿದಳು. “ಹೂ ಮುಂದುವರಿಸಮ್ಮಾ “ಎಂದೆ.

“ಅವನ ಹೆಸರು ‘ಭರತ್’, ಉತ್ತರ ಭಾರತದ ಕಡೆಯವನು. ಅವನಿಗೆ ಅಪ್ಪ, ಅಮ್ಮನಿಲ್ಲ. ಪರಪುಟ್ಟನಂತೆ ಬೆಳೆದಿದ್ದಾನೆ. ನಮ್ಮ ಆಫೀಸಿನಲ್ಲೇ ಕೆಲಸ ಮಾಡುತ್ತಾನೆ”. ಆಫೀಸಿನ ಕ್ಯಾಂಟೀನಿನಲ್ಲಿ ಪರಿಚಯ ಪ್ರಾರಂಭವಾಯಿತು. ನಂತರ ಪ್ರೇಮ, “ಈಗ ಮುಂದೆ ಹೇಳುವುದೇನಿದೆ ಪರಿಣಯದ ಹಂತಕ್ಕೆ ಬಂದಿದೆ. ನಮ್ಮ ಒಪ್ಪಿಗೆಗಾಗಿ ಕಾದಿರಿಸಲಾಗಿದೆ. ಸರೀನಾ?” ಎಂದೆ. “ಎಸ್ ಮಾಮ್” ಎಂದಳು. “ಅವರು ಯಾವ ಮತಸ್ಥರು ಎಂದಾದರೂ ಹೇಳಿದ್ದಾರಾ? ಅಥವಾ ನಿನೇ ಕೇಳಿಲ್ಲವಾ? ಎಂದೆ. ನೋಡಮ್ಮಾ ಅವನ ಕುಲ, ಜಾತಿ ಯಾವುದೂ ನನಗೆ ಬೇಕಾಗಿಲ್ಲ. ನಾನು ಅವನನ್ನು ಇಷ್ಟಪಟ್ಟಿದ್ದೇನೆ, ಅವನೂ ನನ್ನನ್ನು ಇಷ್ಟ ಪಟ್ಟಿದ್ದಾನೆ ಅಷ್ಟೇ” ಎಂದಳು.

“ಸರಿಬಿಡು ಆದರೆ ಮುಂದೆ ನಿನ್ನ ಗಂಡನಾಗುವವನನ್ನು ಹೀಗೆ ಅವನು, ಇವನು ಎಂಬ ಏಕವಚನದಲ್ಲಿ ಛೇ ಛೇ”ಎಂದೆ.
“ಅಮ್ಮಾ ನಿನ್ನನ್ನು ನಾನು ಹಾಗೆತಾನೇ ಕರೆಯುವುದು” ಎಂದಳು.
“ನನ್ನನ್ನು ಬಿಡು, ನನಗದು ಇಷ್ಟವಿಲ್ಲ ಎಂದು ಎಷ್ಟು ಸಾರಿ ತಿದ್ದಲು ಪ್ರಯತ್ನಿಸಿದರೂ ನೀನು ಕೇಳಲಿಲ್ಲ. ಈಗಂತೂ ಮಾಮ್, ಗೀಮ್ ಅಂತ ಕರೀತೀಯಾ. ಹಾಗೆ ಕರೆಯುತ್ತಿದ್ದರೆ ಆತ್ಮೀಯತೆಯೇ ಬರಲ್ಲ, ಹಾಗೇ ಹೀಗೇ ಎಂದು ಬಡಿವಾರ ತೋರ್‍ತೀಯಾ. ಹಾಳಾಗಿ ಹೋಗಲಿ ಬಿಡು ಎಂದು ನಾನೇ ತೆಪ್ಪಗಾಗಿದ್ದೇನೆ. ಆದರೆ ನಿನ್ನ ಭಾವೀ ಪತಿಯನ್ನೂ ಹಾಗೆ ಕರೆಯುವುದು ಅಷ್ಟು ಸೂಕ್ತವಲ್ಲವೆಂದು ನನ್ನ ಅಭಿಪ್ರಾಯ” ಎಂದೆ.

“ಅಮ್ಮಾ, ನನ್ನತ್ತಿಗೆ ಅಣ್ಣನನ್ನು ಏಕವಚನದಲ್ಲೇ ಕರಿಯುತ್ತಾರೆ. ಈಗೆಲ್ಲ ಹಾಗೇ ರೂಢಿ. ಅದರಲ್ಲೇನಿದೆ, ಗೌರವ ಬಹುವಚನದಲ್ಲಿ ಕರೆದರೆ ಮಾತ್ರ ಬಂದುಬಿಡುತ್ತಾ? “ಸಾಕು ಮಾರಾಯಿತಿ, ನಿನ್ನ ಹತ್ತಿರ ವಾದಮಾಡಿ ಗೆಲ್ಲುವವರಾರು? ಮುಂದೇನು ಹೇಳು”
“ಹೇಳೋದೇನಿದೆ, ನಾಳೆ ಭರತ್ ನಮ್ಮ ಮನೆಗೆ ಬರುತ್ತಿದ್ದಾನೆ. ಇನ್ನೊಂದು ವಿಷಯ, ನಮ್ಮ ತಾತನಿಗೆ ಮೊದಲೇ ಹೇಳಿರು. ಅವನು ಬಂದಕೂಡಲೇ ಇವರು ಇಲ್ಲದ ಪುರಾಣ ಪ್ರಾರಂಭಿಸಿಬಿಟ್ಟಾರು. ಏಕೆಂದರೆ ನಾಳೆ ಭಾನುವಾರ ದೋಸೆ ಪ್ರೋಗ್ರಾಂ ಅಲ್ಲವಾ? ನನಗೆ ಅಪ್ಪನದು ಭಯವಿಲ್ಲ, ತಾತನದ್ದೇ ಚಿಂತೆ “ಎಂದಳು.

ನನ್ನ ಮಗಳ ಮಾತನ್ನು ಕೇಳಿ “ಇಲ್ಲ ತಾತ ನಾಳೆ ಇಲ್ಲಿಗೆ ಬರುವುದಿಲ್ಲ. ಏಕೆಂದರೆ ಅವರ ಫ್ರೆಂಡ್ ಮನೇಲಿ ಏನೋ ಪೂಜೆಯಿದೆಯಂತೆ, ಅಲ್ಲಿಗೆ ಹೋಗುತ್ತಾರೆ. ಕೆಲಸದ ಗೌರಮ್ಮನೂ ಬರುವುದಿಲ್ಲ” ಎಂದೆ. “ಅಬ್ಬಾ ! ಒಳ್ಳೆಯದೇ ಆಯಿತು ಬಿಡು” ಎಂದು ಎಲ್ಲವನ್ನೂ ಒದರಿದ್ದಾಯ್ತು ಎಂಬಂತೆ ಮತ್ತೆ ಟಿ.ವಿ.ಮುಂದೆ ಪ್ರತಿಷ್ಠಾಪನೆ ಆಗಲು ಹೊರಗೆ ನಡೆದಳು. ತಾತ ಬರುವುದಿಲ್ಲ, ಸದ್ಯ ಒಳ್ಳೆಯದೇ ಆಯಿತು ಎಂಬ ಮಾತೇ ನನಗೆ ಪ್ರತಿಧ್ವನಿಸಿದಂತಾಯಿತು.

ಹೂಂ ಇವರೆಲ್ಲ ಅವರನ್ನು ಏನು ಅರ್ಥಮಾಡಿಕೊಂಡಿದ್ದಾರೆ. ವಯಸ್ಸಾಗಿದೆ, ಏನೇನೋ ಕೆಲಸಕ್ಕೆ ಬಾರದ ಮಾತುಗಳನ್ನಾಡುತ್ತಾರೆ, ಇನ್ನೂ ಯಾವುದೋ ಕಾಲದಲ್ಲಿದ್ದಾರೆ ಹಾಗೇ ಹೀಗೇಂತ. ಅಪ್ಪ ನನ್ನ ಮಗನ ಮದುವೆಯ ಮಾತುಕತೆ ನಡೆಯುವಾಗ ಎಷ್ಟು ಚೆನ್ನಾಗಿ ನನಗೆ ಸಮಾಧಾನ ಹೇಳಿದ್ದರು. ಜಾತಿ, ಮತಕ್ಕೆ ಮಹತ್ವ ಕೊಡುತ್ತಾರೆ ನಿಜ, ಆದರೆ ಅದನ್ನೇ ಜಗ್ಗಾಡುತ್ತಾ ನಿಲ್ಲುವವರಲ್ಲ. ಹೇಗೋ ಮದುವೆಗೆ ಒಪ್ಪಿದಳಲ್ಲ ಅಷ್ಟು ಸಾಕು ಎಂದುಕೊಂಡು ನನಗೇ ಬುದ್ಧಿ ಹೇಳುತ್ತಾರೆ ಅಂದುಕೊಂಡೆ.

(ಮುಂದುವರಿಯುವುದು)

ಈ ಕಾದಂಬರಿಯ ಹಿಂದಿನ ಸಂಚಿಕೆ ಇಲ್ಲಿದೆ:    http://surahonne.com/?p=31566

-ಬಿ.ಆರ್ ನಾಗರತ್ನ, ಮೈಸೂರು

5 Responses

 1. ನಯನ ಬಜಕೂಡ್ಲು says:

  ಚೆನ್ನಾಗಿದೆ

 2. Anonymous says:

  ಧನ್ಯವಾದಗಳು ಮೇಡಂ

 3. ಶಂಕರಿ ಶರ್ಮ says:

  ವಾಹ್ .. ಕಥೆ ಓಡುತ್ತಾ..ಓಡುತ್ತಾ..ಸುಕನ್ಯಾ ಅಜ್ಜಿ ಆಗಿಯೇ ಬಿಟ್ಟಳಲ್ಲ! ಹೊಸ ತಲೆಮಾರಿನವರ ಕಥೆಯೇ ಬೇರೆ ಅಲ್ವಾ.. ಕಥೆಯು ಬಹಳ ಚೆನ್ನಾಗಿ ಓದಿಸಿಕೊಂಡು ಹೋಗುತ್ತಿದೆ.. ಧನ್ಯವಾದಗಳು ಮೇಡಂ.

 4. ಮಾಲತಿ says:

  ಕಥೆ ತುಂಬಾ ಚುರುಕಾಗಿ ಸಾಗುತ್ತಿದೆ

 5. ಬಿ.ಆರ್.ನಾಗರತ್ನ says:

  ಧನ್ಯವಾದಗಳು ಸಹೃದಯರಿಗೆ

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: