ಉಪ್ಪಿನ ಕಾಯಿಗೆ ಒಂಚೂರು ಅನ್ನ..
“ಸ್ವಲ್ಪ ಕ್ಯಾಲೆಂಡರ್ ನೋಡೆ,ಹತ್ತನೇ ತಾರೀಕು ಯಾವ ವಾರ ಅಂತ”ಎಂದು ಒಂದು ದಿನ ಇವರು ಬೆಳಿಗ್ಗೆ ಬೆಳಿಗ್ಗೆಯೇ ದೇವರ ಮನೆಯಲ್ಲಿ ಗಂಟೆ ಬಾರಿಸುತ್ತಲೆ ಕೇಳಿದರು. “ಸೋಮವಾರದಂದು ಬಂದಿದೆ,ಯಾಕೆ ಅವತ್ತು ಏನಿದೆ” ಎಂದು ಸ್ವಲ್ಪ ಕುತೂಹಲದಿಂದಲೇ ಕೇಳಿದೆ.
“ಹೌದಾ, ಏನಿಲ್ಲ ಕಣೆ, ಕೃಷ್ಣನ ಮನೇ ಗೃಹ ಪ್ರವೇಶ ಇದೆ,ಸೋಮವಾರ ಅಂದ್ರೆ ಇನ್ನು ನಾಲ್ಕೇ ದಿನ ಅಲ್ವಾ, ಯಾರಾದ್ರೂ ಒಳ್ಳೆ ಕೇಟರಿಂಗ್ ನವರು ಗೊತ್ತಿದ್ರೆ ಹೇಳು ಅಂದಿದ್ದ, ನಮ್ಮ ಮನೆ ಗೃಹಪ್ರವೇಶದಲ್ಲಿ ಅಡುಗೆ ಮಾಡಿದ್ದವರಿಗೆ ಹೇಳೋಣ ಅಂದು ಕೊಂಡಿದ್ದೇನೆ”ಎನ್ನುವ ಉತ್ತರ ಬಂತು. “ನಮ್ಮನೆ ಅಡುಗೆ ಮಾಡಿದವರ! ಬೇಡ, ಅವರು ಬರೀ ಒಂದಕ್ಕೆ ನಾಲ್ಕು ಅಳತೆ ಬರೆದು ಎಷ್ಟೊಂದು ರೇಷನ್ ಉಳಿದು ಹೋಯಿತು.ಬೇರೆ ಯಾರಿಗಾದ್ರೂ ಹೇಳಿ”ಎಂದೆ.
ಅಷ್ಟರಲ್ಲಿ ಪೂಜೆ ಮುಗಿಸಿ ಬಂದವರು “ಅಯ್ಯೋ ಕೃಷ್ಣ ಏನು ಅಂಗಡಿ ರೇಷನ್ ತಂದುಕೊಟ್ಟು ಅಡಿಗೆ ಮಾಡಿಸಲ್ಲವಂತೆ. ಪ್ಲೇಟ್ ಗೆ ಇಷ್ಟು ಅಂತ ಹೇಳಿ ಒಟ್ಟಿಗೆ ದುಡ್ಡು ಕೊಟ್ಟು ಬಿಡ್ತಾನಂತೆ. ಇನ್ನು ಖರೀದಿ,ತಯಾರಿ, ಅಡುಗೆ ಮಾಡುವುದು,ಬಡಿಸುವುದು ಎಲ್ಲಾ ಅವರ ಜವಾಬ್ದಾರಿ,ಎಷ್ಟು ಸಲೀಸು ನೋಡು. ಇನ್ನು ಮುಂದೆ ಏನಾದರೂ ನಾವು ಕಾರ್ಯ ಮಾಡುವುದಾದರೆ ನಾವೂ ಹಾಗೆ ಮಾಡಿದರಾಯಿತು, ಸುಮ್ನೆ ನಮ್ಮನೆ ಗೃಹ ಪ್ರವೇಶದಲ್ಲಿ ಎಷ್ಟೊಂದು ವೇಸ್ಟ್ ಆಯಿತು. ನಾವು ಶುರುವಿನಲ್ಲಿ ಸರಿಯಾಗಿ ಪ್ಲಾನ್ ಮಾಡಲಿಲ್ಲ” ಎಂದಿವರು ಕೊರಗಿದರು.
ಇವರು ಹೇಳೋದು ಸರಿಯೇ. ಮನೆಗಳಲ್ಲಿ ಕಾರ್ಯಗಳಾಗಬೇಕಾದರೆ ಮೊದಲಿಗೆ ಚರ್ಚೆಗೆ ಬರುವ ವಿಷಯವೇ ಭೋಜನದ ಮೆನು. ಕಾರ್ಯದ ಗಾತ್ರ, ಮಹತ್ವ, ಸೇರುವ ಜನರ ಸಂಖ್ಯೆ, ಶುಭ,ಅಶುಭ, ಸಸ್ಯಾಹಾರಿ ಸ್ವರೂಪದ್ದ ಇಲ್ಲವೇ ಮಾಂಸಾಹಾರದ ಅನುಮತಿ ಇರುವ ಕಾರ್ಯವೇ ನೋಡಿಕೊಂಡು ತಯಾರಿ ನಡೆಸಿ, ಅದನ್ನು ಕಾರ್ಯ ರೂಪಕ್ಕೆ ತಂದು ಮುಗಿಸುವಷ್ಟರಲ್ಲಿ ಜೀವ ಹೈರಾಣವಾಗಿ ಹೋಗಿರುತ್ತದೆ. ಮೊದಲನೆಯದಾಗಿ ಒಳ್ಳೆಯ ಅಡುಗೆಯವರನ್ನು ಹುಡುಕಬೇಕು. ಒಳ್ಳೆಯ ಅಂದರೆ ಬರೀ ರುಚಿಯಾಗಿ ಅಡುಗೆ ಮಾಡುವವರು ಮಾತ್ರವಲ್ಲ, ರುಚಿಯ ಜೊತೆಗೆ ಶುಚಿಯನ್ನೂ ಕಾಪಾಡಿಕೊಂಡು,ತಂದು ಕೊಡುವ ಸಾಮಗ್ರಿಗಳನ್ನು ಪೋಲು ಮಾಡದೆ, ಅಚ್ಚುಕಟ್ಟು ತನದಿಂದ ಬಡಿಸಿ,ಎಲ್ಲರಿಂದ ಸೈ ಅನಿಸಿಕೊಂಡು ಹೋಗುವವರು.ಎಲ್ಲಿ ಹುಡುಕೋದು ಅಂತಹವರನ್ನು?
ಆಗ ಕುಳಿತುಕೊಂಡು ಕಳೆದ ಸ್ವಲ್ಪ ವರ್ಷಗಳಲ್ಲಿ ನಾವು ಹೋಗಿ ಬಂದಿರುವ ಎಲ್ಲಾ ಕಾರ್ಯಗಳ ನೆನಪು ಮಾಡಿಕೊಂಡು, ಯಾವ ಕಾರ್ಯದಲ್ಲಿ ಊಟ ಚೆನ್ನಾಗಿತ್ತು ಅಂತ ತಲೆ ಕೆರೆದುಕೊಂಡು, ಗಂಡ ಹೆಂಡತಿ ಕೂತು ಚರ್ಚೆ ಮಾಡಿ,ಕೊನೆಗೆ ಒಂದು ತೀರ್ಮಾನಕ್ಕೆ ಬರುವಷ್ಟರಲ್ಲಿ ಸುಸ್ತೋ ಸುಸ್ತು. ಸರಿ, ಈಗ, ಇಂತಹವರ ಮನೇ ಇಂಥ ಕಾರ್ಯದಲ್ಲಿ ಅಡುಗೆ ಚೆನ್ನಾಗಿತ್ತು ಅನ್ನೋದು ಕಂಡುಕೊಂಡ ಮೇಲೆ, ಅವರಿಗೆ ಕರೆ ಮಾಡಿ ಅವರ ಅಡುಗೆಯವರ ಫೋನ್ ನಂಬರ್ ತೊಗೊಂಡು ಅವರನ್ನು ಮನೆಗೆ ಕರೆಯಿಸಿಕೊಂಡು ಮೆನು ಚರ್ಚೆ ನಡೆಸೋದು ಮುಂದಿನ ಸುತ್ತು.
ಸರಿ ಅಡುಗೆಯವರು ಮನೆಗೆ ಬಂದ ಮೇಲೆ ಅವರ ಸ್ಪೆಷಾಲಿಟಿ ಅಡುಗೆಗಳ ಒಂದು ಪಟ್ಟಿಯನ್ನೇ ನಮ್ಮ ಕೈಗೆ ಹಿಡಿಸುತ್ತಾರೆ. ಅದರಲ್ಲಿ ನಮ್ಮ ನಮ್ಮ ರುಚಿ ಅಭಿರುಚಿಗೆ ತಕ್ಕ ಹಾಗೆ ಖಾದ್ಯಗಳ ಆರಿಸುವುದು ಮುಂದಿನ ಹಂತ.ಇದರಲ್ಲಿ ಮಕ್ಕಳನ್ನು ಒಳಗೊಳ್ಳದೆ ಹೋದರೆ ಆದೀತೆ? ಮಕ್ಕಳು ಬಿಡಿ,ಅವರನ್ನೇ ಬಿಟ್ಟರೆ,ಅವರು ಆರಿಸುವ ಮೆನು ಖರ್ಚಿಗೆ,ಗೃಹ ಪ್ರವೇಶದ ಮನೆಯನ್ನೇ ಮಾರಿ ದುಡ್ಡು ಹೊಂದಿಸಬೇಕಷ್ಟೇ. ಅಂತೂ ಇಂತೂ ಅಳೆದು ಸುರಿದು ಅಡುಗೆಯವರಿಗೆ ತಯಾರಿಸಬೇಕಾದ ಖಾದ್ಯಗಳ ಪಟ್ಟಿ ಕೊಟ್ಟ ಮೇಲೆ, ಅವರು ಅವುಗಳ ತಯಾರಿಯ ಅಂದಾಜು ವೆಚ್ಚ ಲೆಕ್ಕಾಚಾರ ಮಾಡಿ,ಒಂದು ಪ್ಲೇಟ್ ಗೆ ತಗುಲಬಹುದಾದ ವೆಚ್ಚ ತಿಳಿಸುತ್ತಾರೆ.ವೆಚ್ಚ ತಿಳಿದ ಮೇಲೆ ಇನ್ನೂ ಒಂದೆರಡು ಖಾದ್ಯಗಳು ಎಲೆಯ ಮೇಲೆ ಬೀಳಬಹುದು ಇಲ್ಲವೇ ಮಾಯವಾಗಲೂಬಹುದು.ಅದು ಮನೆಯವರ ಬಜೆಟ್ ಆಧರಿಸಿ ನಿರ್ಧಾರವಾಗುತ್ತೆ.
ಈಗ ಕಾರ್ಯದ ಭೋಜನದ ಮೆನು ಒಂದು ಸ್ಥೂಲ ರೂಪಕ್ಕೆ ಬಂದಾಯಿತು. ಇನ್ನು ಕಾರ್ಯಕ್ಕಿಳಿಯುವುದೆ ಬಾಕಿ.ಇದರಲ್ಲೂ ಎರಡು ವಿಧ. ಒಂದೋ ನಾವೇ ಅಡುಗೆಗೆ ಬೇಕಾಗುವ ಎಲ್ಲಾ ಸಾಮಗ್ರಿ ತಂದು ಕೊಟ್ಟು,ಮನೆಯ ಒಂದು ಭಾಗದಲ್ಲಿ ಒಲೆ ಹೂಡಲು ಅನುವು ಮಾಡಿಕೊಟ್ಟು ಕಾರ್ಯದ ದಿನ ಅಡುಗೆ ಮಾಡಿಸಿ, ಬಂದವರ ಸತ್ಕರಿಸಿ ಕಳಿಸುವುದು. ಇಲ್ಲವೇ ಅಡುಗೆಯವರಿಗೆ ಎಲ್ಲಾ ಜವಾಬ್ದಾರಿ ವಹಿಸಿ, ಒಂದು ಪ್ಲೇಟ್ ಗೆ ಇಷ್ಟು,ಈ ಲೆಕ್ಕದಲ್ಲಿ ಕಾರ್ಯಕ್ಕೆ ಬರಬಹುದಾದ ಜನರ ಸಂಖ್ಯೆ ಅಂದಾಜು ಮಾಡಿ, ಅಷ್ಟು ಪ್ಲೇಟ್ ಊಟದ ಖರ್ಚು ಒಟ್ಟಿಗೇ ಕೊಟ್ಟು ಬಿಡುವುದು.
ಒಟ್ಟಿಗೇ ಖರ್ಚು ಕೊಟ್ಟು ಬಿಟ್ಟರೆ ನಮಗೆ ಕೆಲಸ ಸುಲಭ. ಇಲ್ಲದಿದ್ದರೆ ಅಂಗಡಿಯಿಂದ ಅಂಗಡಿಗೆ ಅಳೆದು,ರೇಷನ್ ತಂದು ಅದರ ಮೇಲುಸ್ತುವಾರಿ ಯಾರಾದರೂ ಮನೆಯ ಸದಸ್ಯರಿಗೆ ವಹಿಸಿ,ಅವರು ಕಳ್ಳತನವಾಗದಂತೆ,ಪೋಲಾಗದಂತೆ ಉಸ್ತುವಾರಿ ನಡೆಸಿ, ಕಾರ್ಯದ ದಿನ ಚೆನ್ನಾಗಿ ಎಲ್ಲರಿಗೂ ಬಡಿಸಿ ಹೋಗುವುದು ದೊಡ್ಡ ತಲೆನೋವಾಗಿ ಹೋಗುತ್ತದೆ. ಒಟ್ಟಿಗೇ ವಹಿಸಿದರೆ ಎಲ್ಲಾ ಅಡುಗೆಯವರ ಜವಾಬ್ದಾರಿ.ಏನೂ ಪೋಲಾಗದಂತೆ ನಿಗಾ ವಹಿಸುತ್ತಾರೆ. ಉಳಿದರೆ ವಾಪಸ್ ತೆಗೆದುಕೊಂಡು ಹೋಗಿ ವಿಲೇವಾರಿ ಮಾಡುವ ಜವಾಬ್ದಾರಿಯೂ ಅವರದೇ. ಹಾಗಾಗಿ ಇತ್ತೀಚೆಗೆ ಎಲ್ಲರೂ ಕೇಟರಿಂಗ್ ನವರ ಮೊರೆ ಹೋಗುತ್ತಿದ್ದಾರೆ. ಆದರೆ ಅಡುಗೆ ರುಚಿ? ಅದಂತೂ ಒಂದೊಂದು ಬಾರಿ ಒಂದೊಂದು ರೀತಿಯಲ್ಲಿ ನನಗೆ ಅನುಭವಕ್ಕೆ ಬಂದಿದೆ.
ಕೇಟರಿಂಗ್ ನವರು ಕೂಡ ಮಾಡೋದು ಬ್ಯುಸಿನೆಸ್ ತಾನೇ. ಹಾಗಾಗಿ ಎಲ್ಲಾ ವ್ಯಾಪಾರದವರ ಹಾಗೆ ಲಾಭ ಮಾಡಲೇ ಪ್ರಯತ್ನಿಸುವುದು ತಪ್ಪೇನಿಲ್ಲ ಬಿಡಿ. ಕೆಲವರು ನಮ್ಮ ನೀರೀಕ್ಷೆಗೆ ತಕ್ಕ ಹಾಗೆಯೇ ಅಡುಗೆ ಶುಚಿ ರುಚಿಯಾಗಿ ಮಾಡಿ, ಪೂರೈಸಿದರೆ, ಮತ್ತೆ ಕೆಲವರು ಅತಿ ಲಾಭದ ಆಸೆಯಿಂದ ಖಾದ್ಯಗಳ ರುಚಿಯಲ್ಲಿ ಇಲ್ಲವೇ ಬಡಿಸುವ ಪ್ರಮಾಣದಲ್ಲಿ ಹೊಂದಾಣಿಕೆ ಮಾಡಿಕೊಂಡು ಬಿಡುತ್ತಾರೆ. ಈ ಎರಡೂ ವಿಧದ ಕೇಟರಿಂಗ್ ನ ಸವಿ ಸವಿದಿದ್ದೇನೆ.
ಒಮ್ಮೆ ನಮ್ಮ ಭಾರಿ ಶ್ರೀಮಂತ ನೆಂಟರೊಬ್ಬರ ಮನೆಯ ಕಾರ್ಯವೊಂದರಲ್ಲಿ ಅಡುಗೆ ಎಷ್ಟು ತೆಳುಗೊಳಿಸಲು ಸಾಧ್ಯವೋ ಅಷ್ಟು ತೆಳುಗೊಳಿಸಿದ್ದರು.ಮೊಸರು ಗೊಜ್ಜು ಮಜ್ಜಿಗೆ ಗೊಜ್ಜಾಗಿ,ಪಲಾವ್ ನಲ್ಲಿ ಯಾವ ಮಸಾಲೆಯ ಘಮವೂ ಇಲ್ಲದೆ, ಸಿಹಿ ತಿಂಡಿಗಳು ತಮ್ಮ ಗಾತ್ರವನ್ನು ಒಂದೆರಡು ಸುತ್ತು ಕಡಿಮೆ ಮಾಡಿಕೊಂಡು,ಇಲ್ಲಿ ಬಿಟ್ಟರೆ ಅಲ್ಲಿ ಹರಿಯುವ ಸಾರು ಕೇಟರಿಂಗ್ ನವಂಗೆ ಲಾಭ ತಂದರೂ, ಕಾರ್ಯದ ಮನೆಯವರಿಗೆ ಕಣ್ಣಲ್ಲಿ ನೀರು ತಂದವು.
ಇನ್ನೊಂದು ಹುಟ್ಟು ಹಬ್ಬದ ಪಾರ್ಟಿಯೋ ಭರ್ಜರಿ ಅಲಂಕಾರದಿಂದ ಸಿದ್ದ ಗೊಂಡಿದ್ದ ಹಾಲ್ ವೊಂದರಲ್ಲಿ ಅದ್ಧೂರಿಯಾಗಿ ಆಚರಿಸಲು ಸಿದ್ಧ ಗೊಂಡಿತ್ತು. ಡೈನಿಂಗ್ ಹಾಲ್ ನಲ್ಲಿ ನೋಡಿದರೆ ಎಲ್ಲಾ ಕಂಚಿನ ದೊಡ್ಡ ಹರಿವಾಣಗಳಲ್ಲೆ ಬಡಿಸಲು ಸಿದ್ದಗೊಳಿಸಿದ್ದರು.ಆದ್ರೆ ಬಡಿಸುವಾಗ ಮಾತ್ರ ಟೀ ಚಮಚೆ ಗಳಲ್ಲೇ ಎಲ್ಲಾ ವ್ಯಂಜನಗಳ ಬಡಿಸಿದರು.ಅಷ್ಟು ದೊಡ್ಡ ತಟ್ಟೆಯಲ್ಲಿ, ಸುಂದರಿಯೊಬ್ಬಳ ಮುಖದ ಮೊಡವೆಗಳಂತೆ ಅಲ್ಲಿಷ್ಟು ಇಲ್ಲಿಷ್ಟು ಇದ್ದ ಖಾದ್ಯಗಳ ನೋಡಿ ಇದ್ದ ಹಸಿವೂ ಇಂಗಿಹೋಯಿತು.
ನಮ್ಮ ನೆರೆಯ ಕಟ್ಟಡವೊಂದರ ಮಾಲೀಕರು ಬೇರೆ ಊರಿನಲ್ಲಿದ್ದದ್ದರಿಂದ ತಮ್ಮ ಕಟ್ಟಡದ ಗೃಹಪ್ರವೇಶಕ್ಕೆ ಓಡಾಡುವುದು ಕಷ್ಟ ವಾಗಿ, ಸುಲಭಕ್ಕೆ ಆಗಿ ಬಿಡಲೆಂದು ಕೇಟರಿಂಗ್ ನವರಿಗೆ ಆರ್ಡರ್ ನೀಡಿದ್ದರು. ಹಿಂದಿನ ದಿನದ ವಾಸ್ತು ಹೋಮ,ಮಾರನೆಯ ಗೃಹಪ್ರವೇಶ ಎಲ್ಲದರ ಭೋಜನದ ವ್ಯವಸ್ಥೆ ಕೇಟರಿಂಗ್ ನವರದೇ. ’ಗೃಹ ಪ್ರವೇಶಕ್ಕೆ ಅಂತ ಸುಮ್ಮನೆ ಒಂದು ರಜಾ ಯಾಕೆ ವ್ಯರ್ಥ ಮಾಡುವುದು, ಹಿಂದಿನ ದಿನವೇ ವಾಸ್ತು ಹೋಮಕ್ಕೆ ಹೋಗಿ ಶುಭಾಶಯ ತಿಳಿಸಿ ಬಂದರಾಯಿತು’ ಎಂದುಕೊಂಡು, ಅದರಂತೆ ನನ್ನ ಮಗಳ ಕರೆದುಕೊಂಡು ಹೊರಟೆ.
ಕಟ್ಟಡ ಬಹಳ ಭರ್ಜರಿಯಾಗಿ ಇತ್ತು. ಒಳ ಹೋಗಿ,ಮನೆಯವರಿಗೆ ವಿಶ್ ಮಾಡಿ,ಉಡುಗೊರೆ ನೀಡಿ ಊಟಕ್ಕೆ ಹೊರಟೆವು. ಊಟದ ಪೆಂಡಾಲ್ ನಲ್ಲಿ ಎಲ್ಲೋ ಒಂದಷ್ಟು ಜನ ಇದ್ದರು. ಬಡಿಸುವವರು ಒಂದಿಬ್ಬರು ಇದ್ದರು. ಸರಿ ಎಲೆ ಹಾಕಿ ಬಡಿಸಲು ಪ್ರಾರಂಭವಾಯಿತು. ಬಡಿಸಲು ಬಂದವ ಕೇಟರಿಂಗ್ ನ ಓನರ್ ಇರಬೇಕು. ನಮ್ಮ ಬಳಿ ಮೊದಲು ಬಂದವ,”ಮೇಡಂ ಮಗುಗೆ ಉಪ್ಪು ಹಾಕೋದು ಬೇಡ ಅಲ್ಲವಾ” ಅಂದ. ನನಗೆ ಅಚ್ಚರಿಯಾದರೂ “ಓಹೋ,ಇದು ಉಳಿತಾಯದ ಪಾರ್ಟಿ “ಎನ್ನುವುದು ಹೊಳೆದು, ನಗು ಬಂದರೂ ತಡೆದುಕೊಂಡು, “ಪರವಾಗಿಲ್ಲ ಹಾಕಿ”ಎಂದು ಹಾಕಿಸಿದೆ. ನಂತರ ಏನೇ ಬಡಿಸಲು ಬಂದರೂ “ಮಗು ಸ್ವೀಟ್ ತಿನ್ನೋಲ್ಲ ಅನಿಸುತ್ತೆ, ಹಪ್ಪಳ ಬೇಡ ಅಲ್ವಾ, ಕೋಸಂಬರಿ ಮಕ್ಕಳು ತಿನ್ನೊಲ್ಲ ವೇಸ್ಟ್ ಮಾಡ್ತಾರೆ,” ಎನ್ನುತ್ತಾ ನನ್ನ ಮಗಳ ಎಲೆ ಬಹುತೇಕ ಖಾಲಿಯೆ. ಅಂತೂ ಅವಳು ಯಾವಾಗಲೂ ಮಾಡುವಂತೆ ಎಲೆಗೆ ಕೈ ಅಡ್ಡ ಹಿಡಿದು “ಬೇಡ” ಅನ್ನುವ ಕೆಲಸ ಇವನೇ ತಪ್ಪಿಸಿದ. ನನಗೆ ನಗು ಉಕ್ಕಿ ಬರಲು ಶುರುವಾಯಿತು.
ಇವನೇನು ಬರೀ ನಮ್ಮಿಬ್ಬರಿಗೆ ಮಾತ್ರವೇ ಈ ರೀತಿ ಮಾಡ್ತಾ ಇದ್ದಾನೋ, ಇಲ್ಲಾ ಬೇರೆಯವರಿಗೂ ಇದೇ ರಾಗವೇ ಎಂದು ಅತ್ತ ಇತ್ತ ನೋಡಿದೆ.ನನ್ನ ಎದುರು ಕೂತಿದ್ದ ಒಬ್ಬರು ಕೂಡಾ ನನ್ನೆಡೆಗೆ ನೋಡುತ್ತ ನಕ್ಕರು.ಅವರ ಪುಟ್ಟ ಮಗನ ಎಲೆ ಕೂಡ ಬಹಳ ಖಾಲಿಯೇ ಇತ್ತು.”ಹೋಗಲಿ ಬಿಡು.ಕಾರ್ಯಗಳಲ್ಲಿ ಆಗುವ ಆಹಾರದ ನಷ್ಟಕ್ಕೆ ಹೋಲಿಸಿದರೆ ಇದು ವಾಸಿ” ಅಂದುಕೊಂಡು ಬಡಿಸಿದ್ದನ್ನೆ ಅಚ್ಚುಕಟ್ಟಾಗಿ ತಿಂದು ಇನ್ನೇನು ಏಳುವ ಅಂತಿದ್ದೆ.
ಆಗ ಮತ್ತೆ ಬಂದ ಅವನು “ಮೇಡಂ,ನಿಮ್ಮ ಎಲೇಲಿ ಉಪ್ಪಿನಕಾಯಿ ಬಾಕಿ ಇದೆ,ಅದಕ್ಕೊಂದಿಷ್ಟು ಅನ್ನ ಬಡಿಸಲ” ಅಂತ ಕೇಳಿದಾಗ ಮಾತ್ರ ನನಗೆ ನಗು ತಡೆಯಲಾಗದೆ, “ಇನ್ನೂ ಬಿಟ್ರೆ ನೀನು,ಬಾಳೆಎಲೆ ಬೇಕಾದ್ರೂ ತಿನ್ನಿಸಿಬಿಡ್ತಿಯ, ಬಿಡು” ಅಂದು ನಕ್ಕೆ. ನನ್ನ ಮಾತು ಕೇಳಿ ಕುಳಿತಿದ್ದ ಕೆಲವರೂ ಗೊಳ್ ಎಂದು ನಕ್ಕಾಗ ಪೆಚ್ಚು ಪೆಚ್ಚಾಗಿ ಹಲ್ಲು ಕಿರಿಯುತ್ತಾ ಆತ ಹೋದ.
-ಸಮತಾ.ಆರ್
ಉಳಿತಾಯದ ಊಟದ ಕತೆ ಸೊಗಸಾಗಿದೆ
Nice
ಚಂದದ ಲೇಖನ ಸಮತ….ಕೇಟರಿಂಗ್ ಓನರ್ ನ ಉಳಿತಾಯದ ಜಾಣತನ ತಮಾಷೆಯಾಗಿ ಕಂಡರೂ, ಆಹಾರ ಪೋಲಾಗುವುದನ್ನು ತಡೆಯುವ ಪ್ರಯತ್ನ ಅಂತ ಸಮಾಧಾನ ಪಟ್ಟುಕೊಳ್ಳುವ. ಈಗೀಗ ಯಾವುದೇ ಸಮಾರಂಭಗಳಿಗೆ ಹೋದರೂ ಅಲ್ಲಿ ಆತಿಥ್ಯಕ್ಕಿಂತ ಒಣಾಡಂಬರವೇ ಮೇಲುಗೈ ಆಗಿರುತ್ತದೆ. ಸಮಾರಂಭದ ಕರ್ತೃವಿಗೆ ತನ್ನ ಡೌಲು ತೋರಿಸುವ ಹಪಾಹಪಿಯಿಂದ ನೂರೆಂಟು ಬಗೆ ಭಕ್ಷ್ಯಗಳನ್ನು ಬಡಿಸಿದರೆ, ಬಂದ ಅತಿಥಿಗಳನೇಕರು ತಮ್ಮ ಸೌಂದರ್ಯದ ಕಾಳಜಿಯ ನೆಪವೊಡ್ಡಿ ಬಡಿಸಿದ್ದೆಲ್ಲವನ್ನೂ ಪಕ್ಕ ಸರಿಸಿ ಏಳುತ್ತಾರೆ. ನೂರೆಂಟು ಬಗೆಯ ಖಾದ್ಯಗಳನ್ನು ಬಡಿಸಿ ಕಸದಬುಟ್ಟಿ ತುಂಬಿಸುವ ಪರಿಪಾಠಕ್ಕಿಂತ, ಆಹಾರದ ಬಗೆ ಹಿತಮಿತವಾಗಿದ್ದು, ಆತ್ಮೀಯತೆಯಿಂದ ಉಣಬಡಿಸಿದರೆ ಮನಸ್ಸು ತುಂಬುತ್ತದೆ.
ವಾಸ್ತವ ಮೇಡಂ. ಕ್ಯಾಟರಿಂಗ್ ವ್ಯವಸ್ಥೆ ಬಗ್ಗೆ ಸರಿಯಾಗಿ ಬರ್ದಿದ್ದೀರಿ. ಇಂದಿನ ದಿನಗಳಲ್ಲಿ ಸಮಾರಂಭಗಳ ಭೋಜನ ವ್ಯವಸ್ಥೆ ಬಗ್ಗೆ ಜಿಗುಪ್ಸೆ ಹುಟ್ಟಲಿಕ್ಕೆ ಶುರುವಾಗಿದೆ.ಎಲ್ಲರೂ ಓದಬೇಕಾದ ಲೇಖನ.
ವಾಸ್ತವ ಮೇಡಂ. ಕ್ಯಾಟರಿಂಗ್ ವ್ಯವಸ್ಥೆ ಬಗ್ಗೆ ಚೆನ್ನಾಗಿ ಬರೆದಿದ್ದೀರಿ. ಇತೀಚಿನ ದಿನಗಳಲ್ಲಿ ಸಮಾರಂಭಗಳಲ್ಲಿನ ಭೋಜನ ವ್ಯವಸ್ಥೆ ಬಗ್ಗೆ ಜಿಗುಪ್ಸೆ ಮೂಡುವಂತಾಗಿದೆ.ಎಲ್ಲರೂ ಓದಬೇಕಾದ ಲೇಖನ.
ಸೂಪರ್
ಹಾಸ್ಯ ಲೇಪನದಿಂದ ಕೂಡಿದ ವಸ್ತು ಸ್ಥಿತಿಗೆ ಕೈ ಗನ್ನಡಿ ಹಿಡಿದಿದೆ ಕಾಲದ ಓಟ ಕ್ಕೆ ಯಾರು ಹೊರತಲ್ಲ… ಉತ್ತಮ ಲೇಖನ…
Sundaravada baraha
ಪ್ರಚಲಿತ ವಿದ್ಯಮಾನಗಳಿಗೆ ಹಿಡಿದು ಕೈಗನ್ನಡಿಯಂತಿದೆ ಉಪ್ಪಿನಕಾಯಿಗೆ.. ಅನ್ನ ವಾಹ್ ಹಾಸ್ಯದ ಲೇಪನವಿದ್ದರೂ,ಉಪಚಾರದಲ್ಲಿರಬೇಕಾದ ಆತ್ಮೀಯತೆಯು ಬಗ್ಗೆ ಗಮನಹರಿಸಬೇಕೆಂಬುದನ್ನು ಮನವರಿಕೆ ಮಾಡಿ ಕೊಡುವಂತಹ ಸೊಕ್ಷತೆಯ ಅನಾವರಣ ವಿದ್ಯೆ. ಅಭಿನಂದನೆಗಳು ಮೇಡಂ.
Good Samatha
ಬ್ಯೂಟಿಫುಲ್
Thumbaa chennagide
ಕೇಟರರ್ ಕಹಾನಿ ಚೆನ್ನಾಗಿದೆ
ಅತ್ಯಂತ ಲಾಭದಾಯಕ ವ್ಯವಹಾರವಾಗಿ ಬೆಳೆದ ಈ ಕ್ಯಾಟರಿಂಗ್ ವ್ಯವಸ್ಥೆಯು ಮಾನವ ಸಂಬಂಧಗಳ ನಡುವಿನ ಆತ್ಮೀಯತೆಯನ್ನು ತೊಡೆದು ಹಾಕಿದೆ. ಮೊದಲೆಲ್ಲಾ ಮದುವೆ ಸಮಾರಂಭಗಳ ಮುನ್ನಾ ದಿನ ಬಳಗದವರೆಲ್ಲಾ ಸೇರಿ ತರಕಾರಿ ಹಚ್ಚುವ ಸಂಭ್ರಮ, ಬಡಿಸುವಾಗಿನ ಪ್ರೀತಿ ಎಲ್ಲಾ ಬೆಟ್ಟ ಹತ್ತಿ ಬಿಟ್ಟಿದೆ. ಈಗಿನ ಧಾವಂತ ಬದುಕಿಗೆ ಇದೇ ಸೂಕ್ತವೂ ಹೌದೇನೋ! ನಮ್ಮಲ್ಲಿ, ದುಡ್ಡು ಎಲ್ಲಾ ಪಾವತಿಸಿದ ಬಳಿಕ ಉಳಿದ ಸಿಹಿತಿಂಡಿಯನ್ನು ಅವರೇ ಒಯ್ದು ಡಬ್ಬಲ್ ಲಾಭ ಮಾಡಿದುದು ನೆನಪಾಯ್ತು. ಲಘುಹಾಸ್ಯ ಮಿಶ್ರಿತ ಲೇಖನ ಸೂಪರ್.
ಓದಿ ಅಭಿಪ್ರಾಯ ತಿಳಿಸಿ ದ ಎಲ್ಲರಿಗೂ ನನ್ನ ಧನ್ಯವಾದಗಳು