ಬೆಳಕು-ಬಳ್ಳಿ

ಬಿಟ್ಟ ಜಾಗ ಭರ್ತಿ ಮಾಡುವುದು ಅಷ್ಟು ಸುಲಭವಲ್ಲ

Share Button

ಬಿಟ್ಟ ಜಾಗ ಭರ್ತಿ ಮಾಡುವುದು
ಅಷ್ಟು ಸುಲಭವಲ್ಲ,
ಸರತಿಯಲ್ಲಿ ನಿಂತು
ಬ್ಯಾಂಕಿನ ಚಲನ್ ತುಂಬಿದಂತಲ್ಲ.
ಸರಳ ವಾಕ್ಯದ ಪೂರ್ವಪರವನ್ನೆಲ್ಲಾ ಅಳೆದು ಅರಿತು,
ಸಂದರ್ಭದೊಡನೆ ಬೆರೆತು,
ಹೊಂದಿಕೊಳ್ಳುವ ಪದವ
ರಿಕ್ತ ಗೆರೆಯ ಮೇಲೆ ಬರೆಯಬೇಕು.
ತುಂಬಬೇಕು ಏಕಾಗ್ರತೆಯಿಂದ
ತುಳುಕದಂತೆ ಎಣ್ಣೆ ಹಣತೆಗೆ.

ಗುಂಪಿನಲ್ಲಿ ಎಗರಾಡಿ
ಸುತ್ತಲೂ ತಳ್ಳಾಡಿ
ಕಿಟಕಿಗೆ
ಕರವಸ್ತ್ರ ತೂರಿಸಿ ಎಸೆದು
ಬಸ್ಸಿನಲ್ಲಿ ಹಿಡಿದಂತಲ್ಲ  ಸೀಟು ,
ಖಾಲಿ ಇದ್ದರೆ ಸೀಟು
ಯಾರು ಬೇಕಾದರೂ ಕೂರಬಹುದು
ಅದು ಮೀಸಲಾಗದ ಹೊರತು.
ಹೃದಯಕ್ಕೆ ಹಾಗೆಲ್ಲ
ಎಲ್ಲರನ್ನೂ ಕೂರಿಸಿಕೊಳ್ಳಲಾಗದು.
ದೇವರಿಗಷ್ಟೆ ಗರ್ಭಗುಡಿ
ದೇವರಿದ್ದರಷ್ಟೇ ಅದು ಗರ್ಭಗುಡಿ.

ಹೊಂದಿಸಿ ಬರೆಯಿರಿ ಎಂದರೇ
ಹೇಗೋ ಅಂದಾಜಿಸಿ ಬರೆದು ಬಿಡಬಹುದು.
ಖಾಲಿ ಜಾಗವನ್ನು ಭರ್ತಿ ಮಾಡುವುದು
ಬಿಟ್ಟ ಸ್ಥಳ ತುಂಬುವುದು ಒಂದೇ ಅನಿಸಿದರೂ
ಅಪ್ಪ ಅಮ್ಮನಷ್ಟೇ ಬೇರೆ ಬೇರೆ.
ಬಿಟ್ಟ ಸ್ಥಳ ಭರ್ತಿಮಾಡುವುದು ಸುಲಭದ ಮಾತಲ್ಲ
ಬಿಟ್ಟು ಹೋದ ಬಳಿಕ.

ಬಿಟ್ಟು ಹೋದ ಪದ
ಅದೆಲ್ಲಿಗೆ ಬಿಟ್ಟು ಹೋಯಿತೋ..
ಕಳೆದ ಉಂಗುರ ಕೈ ಬೆರಳಲಿ
ಗುರುತು ಉಳಿಸಿದಂತೆ,
ಕರವಸ್ತ್ರದ ಎಳೆ ಎಳೆಯಲಿ
ನೆನಪು ಮಿಳಿತಂತೆ.

ಬಿಟ್ಟು ಹೋಗಿರುವ ಪದವೆಂದರೆ
ಕೆಂಡಸಂಪಿಗೆಯಲ್ಲಿನ ಕೆಂಡ
ಅಮ್ಮನ ಹಣೆಯ ಸಿಂಧೂರ
ನೆನಪಾಗದ ಕನಸಿನ ಅಸ್ಪಷ್ಟ ವೃತ್ತಾಂತ.
ಶಂಖದೊಳಗಿನ ಹುಳು
ಮೌನದ ಮೌನ
ದೇಹದೊಳಿಗನ ಆತ್ಮ.

-ಶರತ್ ಪಿ.ಕೆ.ಹಾಸನ

22 Comments on “ಬಿಟ್ಟ ಜಾಗ ಭರ್ತಿ ಮಾಡುವುದು ಅಷ್ಟು ಸುಲಭವಲ್ಲ

  1. ಬಹಳ ಅರ್ಥಪೂರ್ಣ ವಾಗಿದೆ ಕವನ. ಅಗೆದಷ್ಟೂ ಅರ್ಥ ಮೊಗೆದಷ್ಟೂ ಜಲ ಎನ್ನುವ ಉಕ್ತಿಗೆ ಸಂವಾದಿಯಾಗಿದೆ.ಅಭಿನಂದನೆಗಳು ಸಾರ್.

  2. ತುಂಬಾ ಚೆನ್ನಾಗಿದೆ ಕವನ. ಬಹಳ ಆಳವಾದ ಅರ್ಥವನ್ನು ಹೊಂದಿದೆ.

  3. ಬಿಟ್ಟ ಸ್ಥಳಗಳಲ್ಲಿ ಸೂಕ್ತವಾದುದನ್ನು ತುಂಬುವುದರಲ್ಲಿರುವ ಏಕಾಗ್ರತೆ, ತಾಳ್ಮೆ ಇತ್ಯಾದಿಗಳ ಗಹನತೆಯ ಬಗೆಗೆ ಅರ್ಥವತ್ತಾಗಿ ರಚಿಸಲ್ಪಟ್ಟ ಸೊಗಸಾದ ಕವನ.

Leave a Reply to Khader baig Cancel reply

 Click this button or press Ctrl+G to toggle between Kannada and English

Your email address will not be published. Required fields are marked *