ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 14 : ದ್ವಾರಕೆಯು ಕಾಲ್ಪನಿಕ ನಗರಿಯಲ್ಲ

Share Button

ಶ್ರೀ ಕೃಷ್ಣನ ದ್ವಾರಕೆಯು ಕಾಲ್ಪನಿಕ ನಗರಿಯಲ್ಲ

ಪುರಾಣಗಳ ಪ್ರಕಾರ, ಶ್ರೀಕೃಷ್ಣನು ಸಮುದ್ರದಿಂದ 12 ಯೋಜನಗಳ ಭೂಮಿಯನ್ನು ತೆಗೆದುಕೊಂಡು ದ್ವಾರಕೆಯನ್ನು ಕಟ್ಟಿಸಿದನು. ಆದರೆ, ಗುಜರಾತ್ ಸಮುದ್ರ ತೀರದಲ್ಲಿ ನಡೆಸಿದ ಆರ್ಕಿಯಾಲಾಜಿಕಲ್ ಅಧ್ಯಯನದ ಪ್ರಕಾರ, ಅಲ್ಲಿನ ಸಮುದ್ರದಾಳದಲ್ಲಿ  ಅಪೂರ್ವವಾದ ನಗರವೊಂದರ ಅವಶೇಷಗಳನ್ನು ಕಂಡುಹಿಡಿದಿದ್ದಾರೆ. ಶ್ರೀ ಕೃಷ್ಣನ ದ್ವಾರಕೆಯು ಕಲ್ಪನೆಯಲ್ಲ.  ಮುಳುಗಿಹೋದ ಅಂದಿನ ದ್ವಾರಕೆಯಲ್ಲಿ ಚಿಕ್ಕದಾದ  ಕಟ್ಟಡಗಳು , ಬೃಹತ್ ಅರಮನೆಗಳು, ರಾಜಬೀದಿಗಳು, ಕೋಟೆಯ ಬುರುಜುಗಳು  ಇತ್ಯಾದಿ ವೈಭವೋಪೇತ ಹಾಗೂ ವ್ಯವಸ್ಥಿತವಾದ ನಗರವಾಗಿತ್ತು ಎಂದುದಕ್ಕೆ ಪುರಾವೆಗಳು ಸಿಕ್ಕಿವೆ.  ದ್ವಾರಕ ನಗರಿಯು ಉತ್ತರದ ಸಂಕೋಧರದಿಂದ ಹಿಡಿದು ದಕ್ಷಿಣದ ಒಖಾಮಂಡಿಯವರೆಗೂ, ಪೂರ್ವದ  ಪಿಂದರದಿಂದ ಪಶ್ಚಿಮದ ಸಮುದ್ರದ ವರೆಗೆ ಸುಮಾರು 36,864 ಚದರ ಕಿ,ಮೀ ವಿಸ್ತಿರ್ಣದಲ್ಲಿ ದ್ವಾರಕೆಯು ವ್ಯಾಪಿಸಿತ್ತು.

ಈ ಬಗ್ಗೆ ಹತ್ತು ವರ್ಷಕ್ಕೂ ಹೆಚ್ಚು ಕಾಲ ಅಧ್ಯಯನ ನಡೆಸಿದ ಎಸ್.ಅರ್ ರಾವ್ ರವರ  ಅಭಿಪ್ರಾಯದಲ್ಲಿ,  ಶ್ರೀಕೃಷ್ಣನ ಅಸ್ತಿತ್ವ ನಿಜ. ಈ ಅಧಾರದ ಮೇಲೆ , ಮಹಾಭಾರತವೂ ಕಾಲ್ಪನಿಕವಲ್ಲ, ಕುರುಕ್ಷೇತ್ರ ಯುದ್ದವು ಕ್ರಿ.ಪೂ 1478 ರಲ್ಲಿ  ನಡೆದಿರಬಹುದೆಂದು ಅಂದಾಜಿಸಲಾಗಿದೆ. ಇತಿಹಾಸ ತಜ್ಙರು ಹಾಗು ಸಂಶೋಧಕರು ದ್ವಾರಕೆಯ ಸಮೀಪದ ಸಮುದ್ರದೊಳಗೆ ವಸ್ತು ಸಂಗ್ರಹಾಲಯವನ್ನು ಸೃಷ್ಟಿಸಬೇಕೆಂಬ ಉದ್ದೇಶವನ್ನು ಸರಕಾರದ ಮುಂದಿಟ್ಟಿದ್ದಾರಂತೆ. ಇದು ನನಸಾದರೆ, ಸಮುದ್ರದಾಳದಲ್ಲಿರುವ ದ್ವಾರಕೆಯನ್ನು ಜನಸಾಮಾನ್ಯರು ನೋಡಲು ಅನುಕೂಲವಾಗುವ ಸಾಧ್ಯತೆಯಿದೆ.

ಈಗಿನ ದ್ವಾರಕೆಯು, ಅಭಿವ್ರುದ್ಧಿ ಹೊಂದುತ್ತಿರುವ ಪಟ್ಟಣವೆನ್ನಬಹುದು. ದೇವಾಲಯದ ಅಕ್ಕಪಕ್ಕದಲ್ಲಿ  ಪೂಜಾ ಪರಿಕರಗಳು, ಪ್ರಸಾದದ  ಪೊಟ್ಟಣಗಳು, ನವಿಲುಗರಿಯ ಬೀಸಣಿಗೆಗಳು, ಶ್ರೀಕೃಷ್ಣನ ವಿವಿಧ ಚಿತ್ರಗಳು….ಇತ್ಯಾದಿಗಳನ್ನು ಮಾರುವ ಸಾಲು ಸಾಲು ಅಂಗಡಿಗಳಿವೆ. ಅಲ್ಲಲ್ಲಿ ಭಜನೆ ಹಾಡುವ ಭಕ್ತರು ಕಾಣಸಿಗುತ್ತಾರೆ. ಪಕ್ಕದಲ್ಲಿರುವ ಗೋಮತಿ ನದಿಗೆ ಕಟ್ಟಿರುವ ದೊಡ್ಡದಾದ ಸೇತುವೆ ಹಾಗೂ ಸುತ್ತುಮುತ್ತಲಿನ ಪರಿಸರ ಚೆನ್ನಾಗಿದೆ.

ದ್ವಾರಕೆಯಲ್ಲಿ ಅಲ್ಲಲ್ಲಿ ಗೋವುಗಳು ಹಿಂಡುಹಿಂಡಾಗಿ ಇರುತ್ತವೆ. ಪಕ್ಕದಲ್ಲಿಯೇ ಪಶುಗಳಿಗೆ ಆಹಾರವಾಗಿ ಕೊಡಲು ಕಡಲೇಗಿಡಗಳು ಅಥವಾ ಬಾಳೆಹಣ್ಣು ಮಾರುವವರಿರುತ್ತಾರೆ. ಮಜ್ಜಿಗೆ/ಲಸ್ಸಿ ಮಾರುವ ಗೊಲ್ಲರೂ ಇರುತ್ತಾರೆ. ದ್ವಾರಕೆಯಲ್ಲಿ ಮಜ್ಜಿಗೆ ಕುಡಿದು, ಹಸುಗಳಿಗೆ ಮೇವು ಹಾಕಿದುದು ನಮಗೆ ಖುಷಿ ಕೊಟ್ಟಿತು.

ರುಕ್ಮಿಣಿದೇವಿ ಮಂದಿರ

20/01/2019 ರಂದು, ಬೆಳಗ್ಗೆ  ಉಪಾಹಾರವಾದ ಮೇಲೆ ನಮ್ಮನ್ನು ದ್ವಾರಕೆಯ ರುಕ್ಮಿಣಿಮಂದಿರಕ್ಕೆ ಕರೆದೊಯ್ಯಲು ‘ಪಂಡಾ’ ಅವರು ಬಂದಿದ್ದರು. ಅವರು ದ್ವಾರಕಾಧೀಶ ಮಂದಿರದಿಂದ ಬಂದವರಾದುದರಿಂದ ಬೆಳಗ್ಗೆ  ‘ಮಂಗಳ ದರ್ಶನ’ ಪ್ರಸಾದವಾದ ‘ಬೆಣ್ಣೆ ಯನ್ನು ತಂದು ನಮಗೆ ಕೊಟ್ಟರು.  ದ್ವಾರಕಾಧೀಶನ ಮಂದಿರದಲ್ಲಿ ಶ್ರೀಕೃಷ್ಣನ ಜೊತೆಗೆ ‘ರುಕ್ಮಿಣಿ’ಯ ವಿಗ್ರಹವಿಲ್ಲ. ಅಲ್ಲಿಂದ ಎರಡು ಕಿ.ಮೀ ದೂರದಲ್ಲಿ  ರುಕ್ಮಿಣಿಯ ಪ್ರತ್ಯೇಕ ಮಂದಿರವಿದೆ. ಇದಕ್ಕೆ ಹಿನ್ನೆಲೆಯಾಗಿ ಹೇಳಲಾಗುವ  ದೂರ್ವಾಸ ಮುನಿಗಳ ಶಾಪದ ಪೌರಾಣಿಕ ಕಥೆಯೂ ಇದೆ.

ಒಮ್ಮೆ ಶ್ರೀಕೃಷ್ಣನು ದೂರ್ವಾಸರನ್ನು ತನ್ನ ಅರಮನೆಗೆ ಅತಿಥಿಯಾಗಿ ಆಹ್ವಾನಿಸಿದನು. ಆಗ ದೂರ್ವಾಸರು, ತನ್ನನ್ನು ಪುರದ ಬಾಗಿಲಿನಿಂದ ರಥದಲ್ಲಿ ಒಯ್ಯಬೇಕೆಂದೂ, ಆ ರಥವನ್ನು ಅಶ್ವಗಳಿಂದ ಎಳೆಯಿಸುವ ಬದಲು, ಪತಿ-ಪತ್ನಿಯರೇ ಹೆಗಲು ಕೊಟ್ಟು ಎಳೆಯಬೇಕೆಂದೂ ಆದೇಶಿಸಿದನಂತೆ. ಅದೇ ಪ್ರಕಾರ ಶ್ರೀಕೃಷ್ಣ ಹಾಗೂ ರುಕ್ಮಿಣಿಯರು ದೂರ್ವಾಸರನ್ನು ರಥದಲ್ಲಿ  ಕುಳ್ಳಿರಿಸಿ, ತಾವೇ ರಥ ಎಳೆಯುತ್ತಾ ಬೀದಿಯಲ್ಲಿ ಬರುವಾಗ, ಬಾಯಾರಿದ ರುಕ್ಮಿಣಿಯು ಕುಡಿಯಲು ನೀರು ಬೇಕೆಂದು ಶ್ರೀಕೃಷ್ಣನಿಗೆ ತಿಳಿಸಿದಳು. ಶ್ರೀಕೃಷ್ಣನು ತನ್ನ ಉಂಗುಷ್ಠದಿಂದ ಭೂಮಿಯನ್ನು ಒತ್ತಿದಾಗ, ಅಲ್ಲಿ ಗಂಗೆ ಚಿಮ್ಮಿತು. ಬಳಲಿದ್ದ ರುಕ್ಮಿಣಿಯು ಕೂಡಲೇ ನೀರನ್ನು ಕುಡಿದಳು. ಇದನ್ನು ಕಂಡ ದೂರ್ವಾಸನು ಅತಿಥಿ ಸತ್ಕಾರ ಮಾಡದೆ ನೀರು ಕುಡಿದುದಕ್ಕಾಗಿ ತನಗೆ ಅವಮಾನವಾಯಿತೆಂದು   ‘ಪತಿ-ಪತ್ನಿಯರು ಹನ್ನೆರಡು ವರ್ಷಗಳ ಕಾಲ ಪ್ರತ್ಯೇಕವಾಗಿರಿ ಎಂದೂ, ದ್ವಾರಕೆಯ ನೀರು ಉಪ್ಪಾಗಿ ಕುಡಿಯಲು ಅಸಾಧ್ಯವಾಗಲೆಂದೂ’ ಶಪಿಸಿದರಂತೆ. ಹೀಗೆ, ರುಕ್ಮಿಣಿಗಾಗಿ ಬೇರೆ ಮಂದಿರ ಕಟ್ಟಲಾಯಿತು. ಇಂದಿಗೂ ದ್ವಾರಕೆಯ ಸುತ್ತುಮುತ್ತಲಿನ  ೧೫ ಕಿ.ಮೀ ಸುತ್ತಳತೆಯಲ್ಲಿ  ನದಿ, ಬಾವಿ, ಬೋರ್ ವೆಲ್ ಗಳ ನೀರು ಉಪ್ಪಾಗಿಯೇ ಇದೆ ಎಂಬುದು ಪ್ರಚಲಿತವಿರುವ ಕಥೆ. ಈ ಕಾರಣದಿಂದಲೇ, ರುಕ್ಮಿಣಿ ಮಂದಿರದಲ್ಲಿ ‘ಜಲದಾನ’ ಶ್ರೇಷ್ಠವಾದುದು. ದೇವಿಯ ದರ್ಶನದ ಬಳಿಕ ಪ್ರಸಾದವಾಗಿ ಒಂದು ಲೋಟ ನೀರನ್ನು ಕೊಡುತ್ತಾರೆ.

ರೂ.150/- ಕೊಟ್ಟು ಒಂದು ದಿನದ  ಜಲದಾನಕ್ಕೆ ಹೆಸರು ಕೊಡಬಹುದು. ನಮ್ಮ ತಂಡದ ಹೆಚ್ಚಿನವರು ಶಕ್ಯಾನುಸಾರ ‘ಜಲದಾನ’ ಸೇವೆಗೆ ಹಣ ಕೊಟ್ಟರು. ಸುಂದರವಾದ ವಾಸ್ತುಶಿಲ್ಪವನ್ನು ಹೊಂದಿರುವ ಈ ಮಂದಿರವು 2500 ವರ್ಷಗಳಷ್ಟು  ಹಳೆಯದೆಂಬ ನಂಬಿಕೆಯಿದೆ. ಈಗಿನ ದೇವಾಲಯವನ್ನು 12 ನೆಯ ಶತಮಾನದಲ್ಲಿ ನಿರ್ಮಿಸಲಾಯಿತು.

(ಮುಂದುವರಿಯುವುದು)

ಈ ಪ್ರವಾಸಕಥನದ ಹಿಂದಿನ ಹೆಜ್ಜೆ ಇಲ್ಲಿದೆ :    http://surahonne.com/?p=31558

-ಹೇಮಮಾಲಾ.ಬಿ

9 Responses

  1. ನಾವೂ ಮತ್ತೊಮ್ಮೆ ನಿಮ್ಮ ಜತೆ ಪ್ರವಾಸ ಮಾಡಿದ ಆನಂದವಾಯಿತು

  2. ಬಿ.ಆರ್.ನಾಗರತ್ನ says:

    ವಾವ್ ಚಂದದ ನಿರೂಪಣೆ ಗೆಳತಿ ಹೇಮಾ ಅಭಿನಂದನೆಗಳು.

  3. ನಯನ ಬಜಕೂಡ್ಲು says:

    ಅಲ್ಲಿನ ವಾತಾವರಣ ಕೂತಲ್ಲೇ ಕಲ್ಪಿಸಿಕೊಳ್ಳಬಹುದಾದಂತಹ, ಕಣ್ಣಿಗೆ ಕಟ್ಟುವಂತಹ ವಿವರಣೆ. Very nice

  4. Savithri bhat says:

    ರುಕ್ಮಿಣಿ ಮಂದಿರದ ವಿಶೇಷತೆ ಯನ್ನೂ ಒಳಗೊಂಡ ಲೇಖನ ತುಂಬಾ ಚೆನ್ನಾಗಿದೆ

  5. ಶಂಕರಿ ಶರ್ಮ says:

    ಸಮುದ್ರದಲ್ಲಿ ಮುಳುಗಿದ ದ್ವಾರಕೆಯ ಅವಶೇಷಗಳ ಲಭ್ಯತೆಯಿಂದ ನಮ್ಮ ಪುರಾಣ ಕಥೆಗಳೂ ಸತ್ಯವೆಂಬುದು ಸಾಬೀತಾದಂತಾಯ್ತು! ನಮ್ಮನ್ನು ದ್ವಾರಕೆಯಲ್ಲಿ ಸುತ್ತಿಸಿ, ರುಕ್ಮಿಣೀದೇವಿಯನ್ನು ಭೇಟಿ ಮಾಡಿಸಿ, ಬೆಣ್ಣೆ, ಮಜ್ಜಿಗೆ, ನೀರು ಕುಡಿಸಿ ಉಪಚರಿಸಿದಿರಿ.. ಬಹಳ ಸೊಗಸಾದ ಪ್ರವಾಸದ ನೆನಪುಗಳು..ಧನ್ಯವಾದಗಳು ಮಾಲಾ ಅವರಿಗೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: