ಮಹಾಮೇರು ಮಹರ್ಷಿ ವಸಿಷ್ಠ

Share Button

          ಕ್ರೋಧ ನಿಗ್ರಹ ಶಕ್ತಿ ಉಳ್ಳವನು ಯಾವುದನ್ನೂ ಜಯಿಸಬಹುದಂತೆ. ಶಾಂತಚಿತ್ತನೂ, ಜಿತಕ್ರೋಧನೂ ಮಹಾಜ್ಞಾನಿಯೂ ಆಗಿರಬೇಕಾರದ ಏಳೇಳು ಜನ್ಮದ ಸುಕೃತ ಬೇಕಂತೆ. ಅಂತಹವರಿಗೆ ವೈರಿಗಳಿಲ್ಲ. ಒಂದು ವೇಳೆ ತನಗೆ ಕೇಡುಂಟು ಮಾಡಿದರೂ ಮಾಡಿದವರಿಗೆ ಒಳ್ಳೆಯದನ್ನೇ ಬಯುಸುವ ಮಹಾಗುಣ ಜಿತಕ್ರೋಧನಿಗೆ ಇರುತ್ತದೆ. ಸಪ್ತಋಷಿಗಳಲ್ಲಿ  ಪ್ರಧಾನರಾದ ವಸಿಷ್ಠರು ಅಂತಹ ಮಹಾಮೇರು ಮಹರ್ಷಿ, ಶಾಂತಪ್ರಿಯರೂ ತ್ರಿಕಾಲಜ್ಞಾನಿಯೂ ಆದ ವಸಿಷ್ಠರು ಸೂರ್ಯವಂಶದ ಕುಲಪುರೋಹಿತರು, ವಿಶೇಷ ವಾಗಿ ಶ್ರೀ ರಾಮನ ಕುಲಗುರುಗಳು. ಶ್ರೀರಾಮನು ಧರೆಯಲ್ಲಿ ಅವತಾರವೆತ್ತಲು, ದಶರಥನ ಪುತ್ರನಾಗಿ ಜನಿಸಲು ವಸಿಷ್ಠರು ಕಾರಣವಾದರು ಎನ್ನಬಹುದು.

ವಿವಾಹದ ದಿನರಾತ್ರಿ ನೂತನ ವಧೂವರರಿಗೆ ವಸಿಷ್ಠ-ಅರುಂಧತಿಯರ ನಕ್ಷತ್ರವನ್ನು ತೋರಿಸುತ್ತಾರೆ. ಆಕಾಶದಲ್ಲಿ ಪೂರ್ವಕ್ಕೆ ಕಾಣಸಿಗುವ ಈ ಜೋಡಿ ನಕ್ಷತ್ರಗಳನ್ನು ತೋರಿಸಿ,  ಅವರಂತೆ ಪ್ರಖ್ಯಾತರಾಗಿ ಬದುಕಿ ಬಾಳಿ ಎಂದು ಹಿರಿಯರೆಲ್ಲರೂ ಹರಸುತ್ತಾರೆ. ಸಪ್ತ ಋಷಿಗಳಲ್ಲಿ ಪ್ರಧಾನರಾಗಿ, ದಂಪತಿಯರಿಗೆ ಆದರ್ಶರಾಗಿ,  ಗುಣದಲ್ಲಿ ಮೇರುಸದೃಶರಾಗಿ ವಸಿಷ್ಠರು ಬೆಳಗುತ್ತಾರೆ. ಇಂತಹ ಮಹಿಮಾನ್ವಿತ ಋಷಿಗಳ ಬಗ್ಗೆ ತಿಳಿದುಕೊಳ್ಳೋಣ.

ಪ್ರಜಾಪತಿಯಿಂದ ಮರೀಚಿ ಜನಿಸಿದ. ಮರೀಚಿಯ ಮಗ ಕಶ್ಯಪ. ಇವನಿಗೆ ಮಿತ್ರಾ, ವರುಣರೆಂಬ ಅವಳಿ ಮಕ್ಕಳು ಹುಟ್ಟಿದ್ದರು. ಇವರಿಬ್ಬರೂ ಮಾಡುವ ಯಜ್ಞಕ್ಕೆ ದೇವತೆಗಳೂ ಗಂಧರ್ವರೂ, ಪಿತೃಗಳೂ ಬಂದಂತೆ ಲಾವಣ್ಯಯುಕ್ತಳಾದ ಊರ್ವಶಿಯೂ ಬಂದಿದ್ದಳು. ಇವರ ದೃಷ್ಟಿ ಊರ್ವಶಿಯ ಮೇಲೆ ಬಿತ್ತು. ಅಖಂಡ ನಿಷ್ಠೆಯಿಂದಿದ್ದರೂ ಆಕೆಯನ್ನು ಕಂಡು ಅವರ ವೀರ್ಯಸ್ಕಲನವಾಯಿತು. ಅದನ್ನು ಒಂದು ಕುಂಭದಲ್ಲಿಟ್ಟರು. ಅದರಲ್ಲಿ ತೇಜೋವಂತರಾದ ಇಬ್ಬರೂ ಮಕ್ಕಳು ಜನಿಸಿದರು. ಮೊದಲನೆ ಮಗುವೇ ಅಗಸ್ಯ, ಆ ಮೇಲೆ ಕುಂಭದಲ್ಲಿದ್ದುದನ್ನು ಸರೋವರದಲ್ಲಿ ಚೆಲ್ಲಿದಾಗ ಎರಡನೆ ಮಗುವೇ ತೇಲುತ್ತ ಸಾಗಿ ಬಂದು ಕಮಲದ ದಳದ ಮೇಲೆ ಕುಳಿತಿತು. ಈ ಮಗುವು ವಿಶಿಷ್ಟ ರೀತಿಯಲ್ಲಿ ಜನಿಸಿದುದರಿಂದ ಇದಕ್ಕೆ ದೇವತೆಗಳು ವಸಿಷ್ಠನೆಂದು ನಾಮಕರಣ ಮಾಡಿದರು.

ವಸಿಷ್ಠನ ತಂದೆ ವರುಣ, ತಾಯಿ ಊರ್ವಶಿ ಎಂದಾಯ್ತು. ಇವನು ಬ್ರಹ್ಮನ ಮಾನಸ ಪುತ್ರ ಕರ್ದಮ ಪ್ರಜಾಪತಿಯ ಮಗಳೂ ಮಹಾಪತಿವ್ರತೆಯೂ ಆದ ಆರುಂಧತಿ ಈತನ ಪತ್ನಿ. ಈಕೆ ಅತ್ರಿಮುನಿ ಪತ್ನಿಯಾದ ಅನಸೂಯಳ ಸೋದರಿ. ಶಕ್ತಿಯು ವಸಿಷ್ಠನ ಮಗನಾದರೆ ಪರಾಶರ ಮೊಮ್ಮಗ, ಸತ್ಯ ಸಂಧತೆಗೆ ವಸಿಷ್ಠರು ಹೆಸರಾದವರು. ತನಗೆ ವಿರೋಧ ಹೇಳುವ ವಿಶ್ವಾಮಿತ್ರನನ್ನೂ ಹೊಗಳುವ ಗುಣದವರು. ತನ್ನ ಮೇಲೆ ಸೇಡು ತೀರಿಸುವ ಆತನಿಗೆ ಒಳ್ಳೆಯದೇ ಬಯಸುತ್ತಾರೆ.

ಒಮ್ಮೆ ವಿಶ್ವಾಮಿತ್ರರು, ಯಾವುದೋ ಸಿದ್ದಿಗಾಗಿ ಒಂದು ಯಜ್ಞವನ್ನು ಮಾಡುತ್ತಿದ್ದರು. ಆದರೆ ದಾನವರಾದ ಸುಬಾಹು ಮತ್ತು ಮಾರೀಚರು ಯಜ್ಞಕ್ಕೆ ಉಪಟಳ ಮಾಡುತ್ತಾ ವಿಘ್ನಗಳನ್ನುಂಟು ಮಾಡುತ್ತಿದ್ದರು. ಈ ರಾಕ್ಷಸರ ಸಂಹಾರಕ್ಕಾಗಿ, ಯಜ್ಞರಕ್ಷಣೆಗಾಗಿ, ಶ್ರೀರಾಮ -ಲಕ್ಷ್ಮಣರನ್ನು ಕಳುಹಿಸಿಕೊಡಬೇಕೆಂದು ವಿಶ್ವಾಮಿತ್ರರು ದಶರಥನಲ್ಲಿ ಯಾಚಿಸಲು ಹೋದರು. ದಶರಥನಾದರೋ ಕಳುಹಿಸಲು ಒಪ್ಪಲಿಲ್ಲ. ಈ ಸಂಗತಿ ವಸಿಷ್ಠರಿಗೆ ತಿಳಿಯಿತು. ಅದನ್ನರಿತ ಅವರು ರಾಮ-ಲಕ್ಷ್ಮಣರನ್ನು ವಿಶ್ವಾಮಿತ್ರರೊಡನೆ ಕಳುಹಿಸಲು ಏನು ಹೆದರಬೇಕಾಗಿಲ್ಲವೆಂದೂ ರಾಕ್ಷಸ ಸಂಹಾರವನ್ನೂ ಅವರು ಮಾಡಿಯೇ ಮಾಡುತ್ತಾರೆಂದೂ ಆತ್ಮವಿಶ್ವಾಸ ತುಂಬಿದರು. ಪರಿಣಾಮವಾಗಿ ಮುಂದೆ ದಶರಥನು ತನ್ನ ಮಕ್ಕಳಾದ ರಾಮ-ಲಕ್ಷ್ಮಣರನ್ನು ರಾಕ್ಷಸ ಸಂಹಾರಕ್ಕಾಗಿ ವಿಶ್ವಾಮಿತ್ರರೊಡನೆ ಕಳುಹಿಸುತ್ತಾನೆ. ಅವರು ಜಯಶಾಲಿಗಳಾಗುತ್ತಾರೆ.

ವಸಿಷ್ಠ-ವಿಶ್ವಾಮಿತ್ರರು ಎಂದರೆ ಪರಸ್ಪರ ವಿರೋಧಿಗಳು ಎಂದೇ ಅರ್ಥ. ವಿಶ್ವಾಮಿತ್ರ  ಮೂಲತಃ ಕ್ಷತ್ರಿಯ ರಾಜನಾಗಿದ್ದ. ಆಗ ಅವನ ಹೆಸರು ವಿಶ್ವರಥ, ಒಮ್ಮೆ ವಿಶ್ವರಥನು ಎಲ್ಲಾ ರಾಜರನ್ನೂ ಸೋಲಿಸಿ ರಾಜಧಾನಿಗೆ ಹಿಂತಿರುಗುತ್ತಿದ್ದಾಗ ದಾರಿಯಲ್ಲಿ   ವಸಿಷ್ಠರ ಆಶ್ರಮ ಗೋಚರಿಸಿತು. ಸೈನ್ಯ ಸಮೇತನಾಗಿ ವಸಿಷ್ಠನ ಆಶ್ರಮದಲ್ಲಿ ವಿಶ್ವರಥ  ತಂಗಿದ.ಕೇಳಿದ್ದನ್ನು ಕೊಡುವ ದೇವಲೋಕದ ಕಾಮಧೇನು ವಸಿಷ್ಠನೊಡನೆ ಇತ್ತು. ಹೀಗಿರುವಾಗ  ಚಿಂತೆಯೇಕೆ ?  ಕ್ಷಣ ಮಾತ್ರದಲ್ಲೇ ವಿಶ್ವರಥನ ಪರಿವಾರದವರೆಲ್ಲರಿಗೂ ವಸಿಷ್ಠ ಉಣಬಡಿಸಿದ. ಈ ರಹಸ್ಯವನ್ನರಿತ ವಿಶ್ವರಥನು ಅದನ್ನು ತನಗೆ ಕೊಡಬೇಕೆಂಬದೂ, ಅಂತಹ ವೈಶಿಷ್ಟ್ಯವುಳ್ಳ ಧೇನುವು ಅರಮನೆಯಲ್ಲಿರಬೇಕಾದ್ದು  ಧರ್ಮವೆಂದೂ ಹೇಳಿದ. ಆದರೆ ವಸಿಷ್ಠನು ಅದು ದೇವಲೋಕದ ಕಾಮಧೇನು. ಅದನ್ನು ತಮಗೆ ಕೊಡುವುದಕ್ಕೆ ತನಗೆ ಅಧಿಕಾರವಿಲ್ಲವೆಂದೂ ನಿರಾಕರಿಸಿದ.

ಪರಿಣಾಮವಾಗಿ ಇಬ್ಬರೊಳಗೆ ಯುದ್ಧವಾಯಿತು. ಯುದ್ಧದಲ್ಲಿ ವಿಶ್ವರಥ ಸೋತ. ಕೇವಲ ಒಂದು ಬ್ರಹ್ಮದಂಡ ಮಂತ್ರಿಸಿ ಕಾಮಧೇನುವ ಬಳಿ ಇರಿಸಿದ ಮಾತ್ರಕ್ಕೆ ತನ್ನ ಸೇನೆಯವರಿಗೆ ಅದನ್ನು ಚಲಿಸುವುದಕ್ಕೆ ಆಗುವುದಿಲ್ಲ ! ಪರಮಾಶ್ಚರ್ಯ !! ಬ್ರಹ್ಮರ್ಷಿಗೆ ಇಷ್ಟೂ ಶಕ್ತಿಯಿದೆಯೇ!!! ಯೋಚಿಸಿದ ರಾಜ, ಎಲ್ಲವನ್ನೂ ತೊರೆದು ತಪಸ್ವಿಯಾಗಲು ಹೊರಟ. ತಪಸ್ಸು ಸಿದ್ಧಿಸಿದ ಮೇಲೆ ಮುಂದೆ ವಸಿಷ್ಠನೇ ಆತನಿಗೆ ಬ್ರಹ್ಮರ್ಷಿಯಾಗುವಂತೆ ಅನುಗ್ರಹಿಸುತ್ತಾನೆ. ವಿಶ್ವರಥನೇ ವಿಶ್ವಾಮಿತ್ರನೆನಿಸಿಕೊಳ್ಳುತ್ತಾನೆ.

ಸೂರ್ಯವಂಶದ ದಿಲೀಪರಾಜನಿಗೆ ಸಂತತಿಯಾಗದಿರಲು ಕಾಮಧೇನುವಿನ ಪೂಜೆ ಮಾಡಲು ಪ್ರೇರೇಪಿಸುವವನೇ ವಸಿಷ್ಠ. ಮುಂದೆ ದಿಲೀಪನಿಗೆ ಪುತ್ರ ಸಂತತಿಯಾಗುತ್ತದೆ. ಅವನೇ ರಘು, ಹೀಗೆಯೇ ದಶರಥ ಮಹಾರಾಜನಿಗೂ ಹಲವು ಕಾಲ ಮಕ್ಕಳಾಗದಿರಲು, ಕುಲಪುರೋಹಿತನಾದ ವಸಿಷ್ಠನು ಚಿಂತಿಸಿ ‘ಪುತ್ರಕಾಮೇಷ್ಟಿಯಾಗ’ ಮಾಡಲು ಸೂಚಿಸುತ್ತಾನೆ. ಯಾಗದ ಫಲವಾಗಿ ರಾಮ, ಲಕ್ಷ್ಮಣ, ಭರತ, ಶತ್ರುಘ್ನ ಜನಿಸುತ್ತಾರೆ.

ಸ್ವರ್ಗದಲ್ಲಿ ಇಂದ್ರನೊಮ್ಮೆ ‘ಭೂಲೋಕದಲ್ಲಿ ಸತ್ಯವಂತನು ಯಾರು? ‘ ಎಂದು ವಸಿಷ್ಠರನ್ನು ಕೇಳಲು ಆತನು ಹರಿಶ್ಚಂದ್ರನೇ ಸತ್ಯವಂತನೆನ್ನುತ್ತಾನೆ. ಆ ಮಾತನ್ನು ಅಲ್ಲಗಳೆಯುತ್ತಾರೆ. ಮುಂದೆ ಹರಿಶ್ಚಂದ್ರನ ಸತ್ಯ ಪರೀಕ್ಷೆಗಾಗಿ ಅದೆಷ್ಟೋ ಕಷ್ಟತಮ ಪರೀಕ್ಷೆಗಳನ್ನೊಡ್ಡುತ್ತಾರೆ. ರಾಜ್ಯ, ಕೋಶ, ಪತ್ನಿ, ಸುತ ಎಲ್ಲವನ್ನೂ ಕಳೆದು ಸ್ಮಶಾನ ಕಾಯುವ ಕೆಲಸ ಹಿಡಿಯುತ್ತಾನೆ ಹರಿಶ್ಚಂದ್ರ, ಅಲ್ಲಿಯೂ ಪತ್ನಿಯ ಶಿರಚ್ಛೇದನ  ಮಾಡುವ ಪ್ರಸಂಗ ಬಂದರೂ ಸತ್ಯ ಬಿಡುವುದಿಲ್ಲ. ಹರಿಶ್ಚಂದ್ರನ ಸತ್ಯವೇ ಗೆಲ್ಲುತ್ತದೆ. ತನ್ಮೂಲಕ ವಸಿಷ್ಠನ ಮಾತು ಉಳಿಯುತ್ತದೆ.

ವನವಾಸ ಮುಗಿಸಿ ಸೀತಾದೇವಿ ಸಹಿತ ಅಯೋಧ್ಯೆಗೆ ಹಿಂತಿರುಗಿದ ಸೀತಾರಾಮನಿಗೆ ಪಟ್ಟಾಭಿಷೇಕ ಮಾಡುತ್ತಾರೆ. ಕ್ರೋಧ, ಬುದ್ದಿಯನ್ನು ತಿನ್ನುತ್ತದೆ. ಅಹಂಕಾರ ಜ್ಞಾನವನ್ನು ತಿನ್ನುತ್ತದೆ ಎಂಬ ಶ್ರೀಮಂತ ವಿಚಾರ ಧಾರೆಯನ್ನು ವಸಿಷ್ಠರು ಕಾಮಧೇನುವಿಗಾಗಿ  ಮಾಡಿದ ಯುದ್ದದ ಮೂಲಕ ಜನತೆಗೆ ಪರೋಕ್ಷವಾಗಿ ತಿಳಿಸುತ್ತಾರೆ. ವಸಿಷ್ಠನ ಕುಲದವರು ವಾಸಿಷ್ಠಗೋತ್ರದವರೆಂದು ಗುರುತಿಸಲ್ಪಡುತ್ತಾರೆ. ಇಂತಹ ಮಹಾಮೇರು ಮಹರ್ಷಿ ವಸಿಷ್ಠರನ್ನು ಲೋಕ ನಿರಂತರ ನೆನೆಯುತ್ತದೆ. ವಸಿಷ್ಠ ವೇದ ದೃಷ್ಟಾರ, ಋಗೈದದ ಒಂದು ಮಂಡಲದ ಪೂರ್ತಿ ಇವನ ವಂಶಜರು ರಚಿಸಿದ ಮಂತ್ರಗಳಿವೆ. ವಸಿಷ್ಠನ ಸಂಹಿತೆ, ಶೃತಿ, ಗ್ರಹ್ಯಸೂತ್ರಗಳು, ಪುರಾಣಶಾಸ್ತ್ರಗಳು ಪ್ರಸಿದ್ಧವಾಗಿವೆ. ಬ್ರಹ್ಮಮಾನಸ ಪುತ್ರನಾದ ವಸಿಷ್ಠ ಶ್ರೀರಾಮ ಧರೆಗಿಳಿಯಲು ದಶರಥನಿಗೆ ‘ಪುತ್ರಕಾಮೇಷ್ಟಿ’  ಮಾಡುವುದರ ಮೂಲಕ ಕಾರಣರಾದರೆ ಇನ್ನು ಮಹಾಭಾರತದ  ವೇದವ್ಯಾಸರೆಂದರೆ ವಸಿಷ್ಠನ ಮುಂದಿನ ಪೀಳಿಗೆ. ಪರಾಶರಮುನಿ ವಸಿಷ್ಠನ ಮೊಮ್ಮಗ. ಪರಾಶರನ ಮಗನೇ ವೇದವ್ಯಾಸ. ಹೀಗೆ ರಾಮಾಯಣ ಮಹಾಭಾರತ ಪುರಾಣಗಳಲ್ಲೂ ವಸಿಷ್ಠರ ಸಹಭಾಗಿತ್ವವಿದೆ.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ

5 Responses

  1. Anonymous says:

    ಧನ್ಯವಾದಗಳು ಸುರಹೊನ್ನೆಯ ಸಂಪಾದಕಿ ಹೇಮಮಾಲಾ ಹಾಗೂ ಓದುಗ ಬಳಗಕ್ಕೆ

  2. ನಯನ ಬಜಕೂಡ್ಲು says:

    ಅಪರೂಪದ ವಿಚಾರಗಳನ್ನೊಳಗೊಂಡ ಪುರಾಣ ಕಥೆಗಳ ಸರಣಿ

  3. Krishnaprabha says:

    ಪುರಾಣ ಕಥೆಗಳ ಪಾತ್ರಗಳ ಸೊಗಸಾದ ನಿರೂಪಣೆ

  4. ಶಂಕರಿ ಶರ್ಮ says:

    ಪುರಾಣ ಕಥೆಗಳು ಅದ್ಭುತ… ನಮ್ಮ ಬೌದ್ಧಿಕ, ಹಾಗೂ ಜ್ಞಾನದ ಬೆಳವಣಿಗೆಗೆ ಬಹಳ ಸಹಕಾರಿ. ಗುರು ವಸಿಷ್ಠರ ದಿವ್ಯ ಚರಿತೆ ಕುತೂಹಲಕಾರಿಯಾಗಿದೆ. ಚಂದದ ನಿರೂಪಣೆಯ ಬರಹ ಇಷ್ಟವಾಯ್ತು. ವಿಜಯಕ್ಕನವರಿಗೆ ಧನ್ಯವಾದಗಳು.

  5. ಓದುಗ ಅಭಿಮಾನಿಗಳಿಗೆ ಹಾಗೂ ಸಂಪಾದಕಿ ಹೇಮಮಾಲಾ ಇವರಿಗೆ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: