ಅಕ್ಕಾ ಕೇಳವ್ವಾ ….ಚರಣ 1-ಅಮ್ಮ ಎಂಬ ಜೀವನಾಮೃತ
ಕೌಶಿಕನ ತ್ಯಜಿಸಿ ದಿಗಂಬರೆಯಾಗಿ ಕಲ್ಯಾಣದತ್ತ ಹೆಜ್ಜೆಹಾಕಿದೆ. ನಿನ್ನಲ್ಲಿ ಆ ಆತ್ಮಸೈರ್ಯ, ಧೃಢ ಮನಸ್ಸು, ಆಧ್ಯಾತ್ಮಿಕ ಶಕ್ತಿ ಎಲ್ಲಿಂದ ಬಂತವ್ವ? ಕಲ್ಯಾಣದಲ್ಲಿ ಶರಣರ ಸಂಗದಲ್ಲಿ ಮುಗಿಲೆತ್ತರ ಬೆಳೆದೆ. ವಚನ ಸಾಹಿತ್ಯ ಲೋಕದಲ್ಲಿ ಧೃವತಾರೆಯಂತೆ ಮಿನುಗಿದೆ. ನಿನ್ನೊಲುಮೆಯ ಚನ್ನಮಲ್ಲಿಕಾರ್ಜುನನ ಅರಸುತ್ತಾ ಅಲ್ಲಿಂದ ಶ್ರೀಶೈಲದೆಡೆಗೆ ಸಾಗಿದೆ. ಅಕ್ಕಾ, ನಿನ್ನಂತೆಯೇ ಈ ಲೋಕದ ಜಂಜಾಟಗಳಿಂದ ನೊಂದು ಬೆಂದವರು, ನಿನ್ನಂತೆಯೇ ಹೋರಾಡಿ ಪರಿಪಕ್ವವಾದವರ ಕಥೆ ಕೇಳುವೆಯಾ?
ಕಥೆ ಒಂದು:- ಅಮ್ಮ ಎಂಬ ಜೀವನಾಮೃತ
ಅಮ್ಮನ ಗುಂಡಾದ ಮುಖ, ಆ ಮುಖದಲ್ಲಿನ ಕಣ್ಣು, ಮೂಗು ಎಲ್ಲವೂ ಗುಂಡೇ – ಗುಂಡು ಗುಂಡಾದ ಮೈ ಹೊತ್ತ ಅಮ್ಮ ಭೂತಾಯಿಯಂತೆ. ಭೂಮಿಯೂ ಗುಂಡೇ ಅಲ್ಲವೇ? ಜೀವನೋತ್ಸಾಹ ಪುಟಿಯುತ್ತಿತ್ತು ಅವರಲ್ಲಿ. ಬದುಕಿನಲ್ಲಿ ಸಾಕಷ್ಟು ನೋವು, ನಲಿವು ಅನುಭವಿಸಿ ಮಾಗಿದ ಚೇತನ. ಎಂದೂ ಸಂಕಟದ ಸಮಯದಲ್ಲಿ ಕೈಚೆಲ್ಲಿ ಕುಳಿತವರಲ್ಲ. ಎಂತಹ ಸಂದರ್ಭವನ್ನಾದರೂ ಎದುರಿಸುವ ಗಟ್ಟಿಗಿತ್ತಿ. ಜೀವನವಿಡೀ ಉತ್ಸಾಹ, ಲವಲವಿಕೆ ಹಾಗೂ ಚೈತನ್ಯದಿಂದ ಬದುಕಿದ ಹೆಣ್ಣು. ಅರವತ್ತೈದರ ಹರಯದಲ್ಲಿ ಎಲ್ಲರನ್ನೂ ಬಿಟ್ಟು ಆಗಸದಲ್ಲಿ ತಾರೆಯಾದ ನನ್ನಮ್ಮ.
ಹುಟ್ಟಿದ ಕೆಲವೇ ತಿಂಗಳಲ್ಲಿ ಅಮ್ಮ ಹಡೆದವ್ವನನ್ನು ಕಳೆದುಕೊಂಡಳು. ನಾಲ್ಕನೆಯ ಹೆಣ್ಣು ಮಗುವಾದ್ದರಿಂದ ಹುಡುಗರ ಅಂಗಿ ಚೆಡ್ಡಿ ಧರಿಸಿ ಅಪ್ಪನ ಹೆಗಲ ಮೇಲೆ ಬೆಳೆದ ಪೋರಿ. ಮದುವೆ ಆದಾಗ ಕೇವಲ ಹದಿನಾಲ್ಕು ವರ್ಷ. ಅವಳ ಗಂಡನ ವಯಸ್ಸು ಅವಳ ವಯಸ್ಸಿನ ದುಪ್ಪಟ್ಟು. ಐದು ಅಡಿಗಿಂತ ಕಡಿಮೆಯಿದ್ದ ಪುಟ್ಟ ಬಾಲೆ ಕೈಹಿಡಿದಿದ್ದು ಆರು ಅಡಿ ಎತ್ತರದ ಅಜಾನುಬಾಹುವನ್ನು. ಗಂಡ ವೃತ್ತಿಯಲ್ಲಿ ವೈದ್ಯರು. ಅಮ್ಮ ಕಲಿತಿದ್ದು ಕೇವಲ ಮೂರನೇ ತರಗತಿಯವರೆಗೆ. ಆದರೆ ಎಂದೂ ಅವಳನ್ನು ಮಾನಸಿಕವಾಗಿ ಕೀಳರಿಮೆ ಕಾಡಿದ್ದಿಲ್ಲ. ತನ್ನಪ್ಪನ ಜೊತೆ ಬೇಸಾಯದಲ್ಲಿ ಪಾಲುಗೊಳ್ಳತ್ತಾ ಬೆಳೆದವಳಿಗೆ ಭೂತಾಯಿ ತನ್ನೆಲ್ಲಾ ಗುಣಗಳನ್ನೂ ಧಾರೆ ಎರೆದಳೇನೋ.
ಮದುವೆ ಆದಾಗಿನಿಂದ ಎರಡು ವರ್ಷಕ್ಕೊಂದರಂತೆ ಮಕ್ಕಳನ್ನು ಹೆತ್ತಳು. ಒಂದೆರಡು ಅಬಾರ್ಷನ್ ಆದವು, ಒಂದೆರಡು ಮಕ್ಕಳು ಹುಟ್ಟಿದಾಗಲೇ ಸತ್ತವು. ಕೊನೆಗೆ ಉಳಿದ ಮಕ್ಕಳು ಆರು ಹೆಣ್ಣು, ಎರಡು ಗಂಡು. ಇಷ್ಟೊಂದು ಮಕ್ಕಳನ್ನು ಹೆತ್ತು, ಹೊತ್ತು ಅದೇನು ಸುಖ ಅನುಭವಿಸಿದಳೋ ಮಹಾತಾಯಿ. ಅವಳ ಬಾಣಂತನ ಮಾಡಲು ತಾಯಿ ಇಲ್ಲ – ತನ್ನ ಅಕ್ಕಂದಿರ ನೆರವಿನಿಂದ ಹೇಗೋ ತನ್ನ ಹಾಗೂ ಮಗುವಿನ ಆರೈಕೆ ಮಾಡಿಸಿಕೊಳ್ಳುತ್ತಿದ್ದಳು. ಮೊದಲನೆಯ ಮಗನ ಬಗ್ಗೆ ಪ್ರೀತಿ ತುಸು ಹೆಚ್ಚೇ – ಬಯಸಿ, ಬಯಸಿ ಹಡೆದ ಕುಲಪುತ್ರ ಅವನು. ಕೊನೆಯ ಮಗನನ್ನು ಪಡೆಯುವ ಹೊತ್ತಿಗೇ ಅವಳ ದೇಹ, ಮನಸ್ಸು ಎರಡೂ ಹಣ್ಣಾಗಿದ್ದವು.
ಅಂದಿನ ಗೃಹಕೃತ್ಯಗಳು ಹೆಣ್ಣಿನ ಬಹುಪಾಲು ಸಮಯವನ್ನು ಆಕ್ರಮಿಸಿ ಬಿಡುತ್ತಿದ್ದವು. ಕುಟ್ಟುವುದು, ಬೀಸುವುದು, ರುಬ್ಬುವುದು, ಕಟ್ಟಿಗೆ ಒಲೆಯಲ್ಲಿ ಅಡಿಗೆ ಮಾಡುವುದು ಇತ್ಯಾದಿ. ಜೊತೆಗೆ ವರ್ಷಕ್ಕೊಮ್ಮೆ ಆಗುವಷ್ಟು ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಹುರಿಗಾಳು, ಹುಣಿಸೇತೊಕ್ಕು, ಬಾಳಕ ಮುಂತಾದವು. ಹಿತ್ತಲಲ್ಲಿದ್ದ ಎಮ್ಮೆಯ ಚಾಕರಿ ಬೇರೆ.. ಈ ಬಿಡುವಿಲ್ಲದ ಬದುಕಿನಲ್ಲೂ ಹೇಗೋ ಬಿಡುವು ಮಾಡಿಕೊಂಡು ದಿನಪತ್ರಿಕೆ ಓದುತ್ತಿದ್ದಳು. ನಾವು ಶಾಲೆಯ ಲೈಬ್ರರಿಯಿಂದ ತರುತ್ತಿದ್ದ ಕಥೆ ಪುಸ್ತಕಗಳನ್ನೂ ಓದುತ್ತಿದ್ದಳು. ಮಧ್ಯಾಹ್ನದ ವೇಳೆ ಮಹಿಳಾ ಸಮಾಜಕ್ಕೆ ಹೋಗಿ ಟೈಲರಿಂಗ್ ಕಲಿತು ನಮಗೆ ಲಂಗ, ಜಾಕೀಟು ಹೊಲೆಯುತ್ತಿದ್ದಳು.
ಮನೆ ಮುಂಭಾಗದಲ್ಲೇ ಇದ್ದ ತಂದೆಯವರ ಆಸ್ಪತ್ರೆಯಲ್ಲಿ – ನರ್ಸ್ ಕಾರ್ಯ ನಿರ್ವಹಿಸುತ್ತಿದ್ದಳೆಂದರೆ ನೀವು ನಂಬುವಿರಾ. ಅವಳು ಓದಿದ್ದು ಕೇವಲ ಮೂರನೆಯ ತರಗತಿಯವರೆಗೆ – ಒಂದು ಇಂಗ್ಲಿಷ್ ಅಕ್ಷರವೂ ಬರುತ್ತಿರಲಿಲ್ಲ. ಕಣ್ಣಿನ ಆಪರೇಷನ್ ಆಗುವಾಗ ಓ.ಟಿ. ನರ್ಸ್, ಹೆರಿಗೆ ಆಗುವಾಗ ಸೂಲಗಿತ್ತಿ. ಹೀಗೆ ಅದೆಷ್ಟು ಪಾತ್ರ ವಹಿಸುತ್ತಿದ್ದಳೋ ಮಹರಾಯಿತಿ. ತಂದೆಯವರ ಅನುಪಸ್ಥಿತಿಯಲ್ಲಿ ಬರುವ ರೋಗಿಗಳಿಗೆ ಅಮ್ಮನೇ ವೈದ್ಯಳು. ತಲೆನೋವು, ಕೆಮ್ಮು, ನೆಗಡಿ, ಜ್ವರ. ಇತ್ಯಾದಿಗಳಿಗೆ . (ಕೆಂಪು ಬಣ್ಣದ ಔಷಧಿ, ನೇರಳೆ ಬಣ್ಣದ ಮಾತ್ರೆ ಹೀಗೆ ಇಂಗ್ಲಿಷ್ ಬಾರದ ಅಮ್ಮ ಔಷಧಿಗಳನ್ನು ನೆನಪಿಡುತ್ತಿದ್ದ ವಿಧಾನ.) ಮಾತ್ರೆ ಕೊಟ್ಟು ಕಳುಹಿಸುತ್ತಿದ್ದಳು. ಎಂದೂ ರೋಗಿಗಳಿಗೆ ತೊಂದರೆ ಆದದ್ದು ನೆನಪಿಲ್ಲ. ತಂದೆಯವರು ಮಾತ್ರ -ಏನಾದರೂ ಸಮಸ್ಯೆಯಾದರೆ ನನ್ನನ್ನು ಜೈಲಿಗೆ ಕಳುಹಿಸುತ್ತಾರೆ ಅಷ್ಟೇ’ -ಎಂದು ಎಚ್ಚರಿಕೆ ನೀಡುತ್ತಿದ್ದರು.
ಮನೆಗೆ ಬಂದು ಹೋಗುವವರ ಸಂಖ್ಯೆಯೂ ಹೆಚ್ಚೇ – ಕಾರಣ ತಂದೆಯವರು ವೈದ್ಯರು. ಆಗ ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಆಸ್ಪತ್ರೆಗಳು ಇರಲಿಲ್ಲ. ಬಂದವರನ್ನೆಲ್ಲಾ ಆತ್ಮೀಯತೆಯಿಂದ ಮಾತನಾಡಿಸುತ್ತಾ ಅವರ ಕಷ್ಟ ಸುಖ ವಿಚಾರಿಸುತ್ತಾ, ಅವರನ್ನು ಊಟ ಮಾಡಿಸಿಯೇ ಕಳುಹಿಸುತ್ತಿದ್ದ ಪರಿ ನಿಜಕ್ಕೂ ಅಚ್ಚರಿಯ ಸಂಗತಿ. ಅವರ ಬಳಿ ಸಾವಕಾಶವಾಗಿ ಮಾತನಾಡಿ ಅವರ ಸಮಸ್ಯೆಗಳಿಗೆ ಎಷ್ಟು ಸೂಕ್ತ ಪರಿಹಾರ ನೀಡುತ್ತಿದ್ದಳೆಂದರೆ – ಯಾವ ಮನೋವೈದ್ಯರಿಗಿಂತ ಕಡಿಮೆಯಿಲ್ಲದವಳಂತೆ. ಅಮ್ಮನ ಹೆಸರು ಶಾರದೆ. ಹೆಸರಿಗೆ ತಕ್ಕಂತೆ ನಮ್ಮನ್ನೆಲ್ಲಾ ಓದಿಸಿ ಮುಂದೆ ತಂದವಳು ಅವಳೇ. ಕೆಲವೊಮ್ಮೆ ತಂದೆಯವರ ಅತಿಯಾದ ಶಿಸ್ತು, ಕೋಪಗಳಿಂದ ಪಾರುಮಾಡಲು ಮಕ್ಕಳನ್ನು ತನ್ನ ಮಮತೆಯ ಮಡಿಲಲ್ಲಿ ಹುದುಗಿಸಿಕೊಂಡು ಬಿಡುತ್ತಿದ್ದಳು. ಹಳ್ಳಿಯಂದ ಬಂದ ತನ್ನ ಅಕ್ಕ ತಂಗಿಯರ ಮಕ್ಕಳನ್ನು ನಮ್ಮ ಜೊತೆ ಜೊತೆಗೇ ಓದಿಸಿದಳು. ಆ ಸಮಯದಲ್ಲಿ ಸಾಮಾನ್ಯವಾಗಿ ಎಸ್ ಎಸ್ ಎಲ್ ಸಿ ಮುಗಿದ ತಕ್ಷಣ ಹೆಣ್ಣುಮಕ್ಕಳಿಗೆ ಮದುವೆ ಮಾಡಿಬಿಡುತ್ತಿದ್ದರು. ಆದರೆ ಅಮ್ಮ ಬಹಳ ಸೂಕ್ಷ್ಮ ಮನಸ್ಸಿನವಳು- ತಾನು ಬದುಕಿನುದ್ದಕ್ಕೂ ಮಾಡಿದ ದುಡಿಮೆ ಪ್ರಪಂಚದ ವ್ಯಾವಹಾರಿಕ ದೃಷ್ಟಿಯಲ್ಲಿ ಒಂದು ದೊಡ್ಡ ಸೊನ್ನೆ, ಹಣ ಗಳಿಸಿದವರಿಗೆ ಮಾತ್ರ ಸಲ್ಲುತ್ತಿತ್ತು ಆದರ, ಪುರಸ್ಕಾರ. ಸಾಧ್ಯವಾದರೆ ತನ್ನ ಹೆಣ್ಣುಮಕ್ಕಳೂ ಉದ್ಯೋಗ ಮಾಡಲಿ – ಸಮಾಜದಲ್ಲಿ ತಮ್ಮ ದುಡಿಮೆಗೆ ಪ್ರತಿಫಲ ಪಡೆಯಲಿ ಎನ್ನುವ ಹಂಬಲ. ತಂದೆಯವರ ಕನಸೂ ಅದೇ ಆಗಿತ್ತು. ಮುಂದೆ ಜೀವನದಲ್ಲಿ ಏನಾದರೂ ಆಪತ್ತು ಬಂದರೆ ಕಲಿತ ವಿದ್ಯೆಯಿಂದ ತಮ್ಮ ಬದುಕು ಕಟ್ಟಿಕೊಳ್ಳಲಿ ಎನ್ನುವ ದೂರದೃಷ್ಟಿಯೂ ಇತ್ತು.
ತಂದೆ ತಾಯಿಯರ ಒತ್ತಾಸೆಯಿಂದ ಆರು ಹೆಣ್ಣುಮಕ್ಕಳೂ ಸ್ನಾತಕೋತ್ತರ ಪದವಿ ಗಳಿಸಿದರೆ – ನಂತರದ ದಿನಗಳಲ್ಲಿ ಮೂವರು ಡಾಕ್ಟರೇಟ್ ಪದವಿಯನ್ನೂ ಪಡೆದೆವು. ಒಬ್ಬಮಗ ಇಂಜಿನಿಯರ್ ಆದರೆ ಮತ್ತೊಬ್ಬ ಮಗ ವೈದ್ಯನಾದ. ಮಕ್ಕಳ ಮದುವೆ, ಮೊಮ್ಮಕ್ಕಳ ಆಗಮನ ಅವಳ ಜವಾಬ್ದಾರಿಯನ್ನು ಇನ್ನೂ ಹೆಚ್ಚಿಸಿತು. ನಾವೆಲ್ಲಾ ಉದ್ಯೋಗದಲ್ಲಿ ಇದ್ದುದರಿಂದ ಮೊಮ್ಮಕ್ಕಳ ಜವಾಬ್ದಾರಿ ಪೂರ್ತಿ ಅವಳದ್ದೇ ಆಗಿತ್ತು. ಅಷ್ಟು ಹೊತ್ತಿಗೆ ಅಮ್ಮನ ಆರೋಗ್ಯ ನಿಧಾನವಾಗಿ ಹದಗೆಡುತ್ತಿತ್ತು. ಮಕ್ಕಳೆಲ್ಲಾ ಮದುವೆಯಾಗಿ ಬೇರೆ ಬೇರೆ ಬಿಡಾರ ಹೂಡುತ್ತಿದ್ದ ಹಾಗೇ ಅವಳಿಗೆ ಒಂಟಿತನ ಕಾಡಲಾಂಭಿಸಿತು. ಒಮ್ಮೆ ಅಮ್ಮ ತಂದೆಯವರ ಜೊತೆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರುವಾಗ – ಸಹ ಪ್ರಯಾಣಿಕರೊಬ್ಬರು -ನಿಮಗೆ ಎಷ್ಟು ಮಕ್ಕಳು?’ – ಎಂದಾಗ ನನಗೆ ಮಕ್ಕಳೇ ಇಲ್ಲ ಎಂದರಂತೆ. ಒಮ್ಮೆ ನನ್ನ ಬಳಿ ಹೇಳಿದ್ದ ನೆನಪು- ಒಬ್ಬ ಮಗನನ್ನಾದರೂ ಓದಿಸಬಾರದಿತ್ತು. ಆಗ ಒಬ್ಬನಾದರೂ ನಮ್ಮ ಜೊತೆ ಇರುತ್ತಿದ್ದ ಅಂತ. ಒಮ್ಮೆ ಅಮ್ಮನಿಗೆ ಹುಷಾರಿಲ್ಲ ಎಂದಾಗ ನಾವೆಲ್ಲಾ ಗಾಬರಿಯಿಂದ ಊರಿಗೆ ಬಂದರೆ ಜ್ವರದಿಂದ ಬಳಲುತ್ತಿದ್ದ ಅಮ್ಮ ಹುರಳಿ ಹೂರಣ ರುಬ್ಬುತ್ತಾ ಕೂತಿದ್ದರು. ಮಕ್ಕಳಿಗೆ ಹುರುಳಿ ಸಾರು ಇಷ್ಟ ಅಂತ.
ಕೊನೆಯ ಬಾರಿ ಅಮ್ಮನ್ನ ನೋಡಿದಾಗ ಅಮ್ಮ ‘ಬಾ, ನನ್ನ ಜೊತೆ. ಎಡೆಯೂರಿಗೆ ಹೋಗಿ ಬರೋಣ ನನ್ನ ಮೈಯಲ್ಲಿ ರಕ್ತ ಹರೀತಾ ಇಲ್ಲ. .ನಿಮ್ಮಪ್ಪ ಕೊಟ್ಟ ಔಷಧಿ ಹರೀತಾ ಇರೋದು. ಅದರಿಂದಲೇ ನಾನು ಬದುಕಿರೋದು‘ ಎಂದಳು. ಆದರೆ ನನಗೆ ಅಮ್ಮನ ಪ್ರೀತಿಯ ಕರೆ ಅರ್ಥ ಆಗಲೇ ಇಲ್ಲ. ನನ್ನ ಕೆಲಸದ ಸಬೂಬು ಹೇಳಿ ಊರಿಗೆ ಬಂದು ಬಿಟ್ಟೆ. ಬೆನ್ನಲ್ಲೇ ಬಂತು ಅಮ್ಮನ ಸಾವಿನ ಸುದ್ದಿ. ಅಮ್ಮಾ, ಅಮ್ಮಾ .. ಕೇಳಿಸುತ್ತಿದೆಯಾ .. ನಾವೆಲ್ಲಾ ಸೇರಿ ನಿನ್ನನ್ನು ನೋಡಿಕೊಳ್ಳಬೇಕಿತ್ತು. ನಿನಗೂ ಗೊತ್ತಿತ್ತು ನಾವೆಲ್ಲಾ ಸ್ವಾರ್ಥಿಗಳು ಅಂತ. ಅದಕ್ಕೇ ತಟ್ಟನೇ ಹೃದಯಾಘಾತದ ನೆಪದಿಂದ ಆ ಶಿವನ ಬಳಿ ಹೊರಟೇಬಿಟ್ಟೆಯಲ್ಲವೇ?
ಅಮ್ಮ -ನಾವೆಲ್ಲರೂ ನೀನು ಕಲಿಸಿದ ಸಂಯಮ, ಸತ್ಯ, ಧರ್ಮ, ನೀತಿಯ ಹಾದಿಯಲ್ಲೇ ನಡೆಯುತ್ತಿದ್ದೇವೆ. ನೀನು ಎಲ್ಲವನ್ನೂ, ಎಲ್ಲರನ್ನೂ ಆತ್ಮೀಯತೆಯಿಂದ ಅಪ್ಪಿಕೊಳ್ಳುವ ಬಗೆ, ಬದುಕಿನ ಬಗ್ಗೆ ಇರುವ ತುಂಬು ಪ್ರೀತಿ, ಸದಾ ಪುಟಿಯುವ ಉತ್ಸಾಹ, ಸಣ್ಣ ಸಣ್ಣ ಸಂಗತಿಗೂ ಪಡುವ ಸಂಭ್ರಮ – ಎಂದೆಂದಿಗೂ ನಮಗೆ ದಾರಿದೀಪಗಳಾಗಿವೆ.
-ಗಾಯತ್ರಿ ಸಜ್ಜನ್
beautiful
ಅರ್ಥಪೂರ್ಣ ಬರಹ
ಇದ್ದಾಗ ಪ್ರೀತಿ ತೋರದೆ.. ಕಳೆದುಕೊಂಡ ಬಳಿಕ ಪರಿತಪಿಸಿದರೇನು ಫಲ?
ಆಪ್ತ ಬರಹ
ವಾವ್ ಎಂಥಹ ನೈಜತೆಯನ್ನು ಹೊರಸೊಸಿರುವ ಕಥೆ.ನಿಜಕ್ಕೂ ಹೃದಯ ತುಂಬಿ ಬಂತು.ಅಭಿನಂದನೆಗಳು ಮೇಡಂ.
ಬರಹ ಓದಿ ಮುಗಿಸುವ ಹೊತ್ತಿಗೆ ಒಂದು ಮೌನ ಮನವನ್ನು ಆವರಿಸಿತು, ಅಷ್ಟು ಹೃದಯಸ್ಪರ್ಶಿ ಬರಹ
ಬಹಳ ಆತ್ಮೀಯ ಬರಹ ಮನಮುಟ್ಟಿತು. ಹಿಂದಿನ ತಲೆಮಾರಿನ ಎಲ್ಲಾ ಅಮ್ಮಂದಿರಿಗೆ ಮುಡಿಪಾಗಿ ಇರಿಸುವಂತಿದೆ.. ಧನ್ಯವಾದಗಳು ಮೇಡಂ
ವಂದನೆಗಳು
ನಮಸ್ಕಾರ,,, ಹಿಂದಿನ ತಲೆಮಾರಿನ ಎಲ್ಲಾ ಅಮ್ಮಂದಿರೂ ಒಂದೇ,,,ರೀತಿನಾ,,ಹೆಚ್ಚು ಕಮ್ಮಿ,,
ಓದುತ್ತಾ,ಓದುತ್ತಾ ಮನತುಂಬಿ ಕಣ್ಣು ತುಂಬಿತು,,
ಆ ಕಾಲದ ತಾಯಿಯವರು ಪಟ್ಟ ಕಷ್ಟ, ದುಡಿಮೆಯ ಮುಂದೆ ನಮ್ಮದೆಲ್ಲಾ ಅಲ್ಪವೇನೋ ಅನಿಸುತ್ತದೆ