ಸವಿ ಸವಿ ನೆನಪು
ಆಕಾಶಕ್ಕೆ ಏಣಿ ಚಾಚುವ ಹುಚ್ಚು ಕನಸು
ಅಂಗೈಯಲ್ಲೆ ನೀರನೆಲ್ಲ ಹಿಡಿದಿಡುವ ಮನಸು
ಆಟ ತುಂಟಾಟಗಳಿಗೆ ದಣಿವಿರದ ವಯಸು
ಬೈಸಿಕಲ್ಲಿನಲೆ ಊರೆಲ್ಲ ಸುತ್ತುವುದೆ ಸೊಗಸು
ಬಾಲ್ಯದಲಿ ನಲಿದ ಆ ದಿನಗಳು
ಗೆಳೆಯರೆಲ್ಲ ಸೇರಿ ಆಡಿದ ಆಟಗಳು
ಕಾಡು ಮೇಡು ನದಿ ತೊರೆ ಅಲೆದ ಕ್ಷಣಗಳು
ಮತ್ತೆ ಮತ್ತೆ ಮನದಿ ಸವಿ ಸವಿ ನೆನಪುಗಳು
ಆ ವಯಸಿಗಿಲ್ಲ ಯಾವ ಅಡ್ಡಿ ಆತಂಕವು
ಚಿಂತೆ ಕಂತೆಗಳೆಲ್ಲ ಸುಳಿಯದು ಸನಿಹವು
ಮುದದಲಿ ನಲಿವುದೊಂದೆ ಜೀವನವು
ಮರಳಿ ಬೇಕೆನಿಸುವ ಸುಂದರ ಬಾಲ್ಯವು
ಕೊಂಕು ಬಿಂಕಗಳರಿಯದ ಜೀವ
ದ್ವೇಷ ಅಸೂಯೆಗಳಿರದ ಭಾವ
ಮದ ಮತ್ಸರ ತೋರದ ಒಲವ
ನೋಡು ಪುಟ್ಟ ಹೃದಯದ ಸಂತಸವ
ಮೇಲು ಕೀಳೆಂಬ ಬೇಧವಿರದ
ಬಡವ ಬಲ್ಲಿದನೆಂಬ ಬಿನ್ನವಿರದ
ಕೂಡಿ ಆಡಿ ನಲಿವ ಚಂದ
ಇರಲಿ ಸದಾ ಈ ಆನಂದ
-ಪ್ರತಿಭಾ ಪ್ರಶಾಂತ.
ಬಾಲ್ಯದ ಸಮಭಾವಗಳು ವ್ಯಕ್ತಗೊಂಡಿವೆ…
ಧನ್ಯವಾದಗಳು
ಬಾಲ್ಯದ ನೆನಪುಗಳು ಕವನವಾದ ಪರಿ ಅತ್ಯಂತ ಆಪ್ತವಾಯಿತು.ಅಭಿನಂದನೆಗಳು ನಿಮಗೆ
ಬಾಲ್ಯದ ದಿನಗಳ ಸುಂದರ ನೆನಪು ಬಿಚ್ಚಿಡುವ ಚಂದದ ಕವನ
ಸವಿ ಸವಿ ನೆನಪು ಮನಸಲ್ಲಿ ಸಿಹಿ ಭಾವ ತುಂಬಿತು.
ಸವಿಯಾದ ಭಾಗ್ಯ ಕಣ್ಣಮುಂದೆ ತೇಲಿಬಂತು ವಂದನೆಗಳು
ಬರಹ ಸೂಪರ್
ಸವಿ ಸವಿ ನೆನಪು..ಸಾವಿರ ನೆನಪು.. ಬಾಲ್ಯದ ಬಂಗಾರದ ದಿನಗಳು ಯಾಕಾಗಿ ಮುಗಿದವೋ ಎಂದು ಯೋಚಿಸುವ ಕಾಲ ಇದು. ಎಲ್ಲರ ಮನದ ಭಾವನೆಗಳನ್ನು ಭಟ್ಟಿ ಇಳಿಸಿ ರಚಿಸಿದ ಸರಳ ಸುಂದರ ಕವನ ನಮ್ಮೆಲ್ಲರನ್ನೂ ಮತ್ತೊಮ್ಮೆ ಮಕ್ಕಳನ್ನಾಗಿಸಿತು..ಧನ್ಯವಾದಗಳು.