ಸಮೃದ್ಧ ಸಂಕ್ರಾಂತಿ

Share Button

ದೇಹ ತ್ಯಜಿಸುವ ಸುಮುಹೂರ್ತ ಸಾಮಿಪ್ಯ
ಅದುವೇ ಉತ್ತರಾಯಣ ಪುಣ್ಯಕಾಲ!
ಶರಶಯ್ಯೆಯಲ್ಲಿ ಹರಿಸ್ಮರಣೆ!!
ಮಹಾಭಾರತದಿ ಇಚ್ಚಾಮರಣಿ ಭೀಷ್ಮ..!!
ತೆರೆದಿರಲಂದು ನಾಕದ್ವಾರ….!!!

ಮತ್ತಿಲ್ಲಿ ಉತ್ತಿ ಬಿತ್ತಿದ ಬೆಳೆ
ಬೆಳೆದು ಹಸನಾಗಿ ರೈತನೆದೆಯಲಿ ಸುಗ್ಗಿ!
ಹರುಷದಿ ಲೋಗರ ಮನ ಹಿಗ್ಗಿ!!
ಇಳೆ ಬೆಳಗಿ ಮಳೆ ಸುರಿಸಿ ಜೀವೋತ್ಪತ್ತಿ
ಸೂರ್ಯದೇವನ ಹಬ್ಬ !ಬೀರಿ ಕಬ್ಬ!!
ಜಗವ ಬೆಳಗುವ ಭಾನು, ಪಥವ
ಬದಲಿಸುತ…
ಬದಲಾವಣೆಯ ಸಾರೋ ಸಂಸ್ಕೃತಿಯ ಹಬ್ಬ…!

ಪೀಪಿ ,ಕತ್ತಿನಹುರಿ, ಚೆಂದದ ಘಂಟೆ
ಕಳಸ ,ಕುಚ್ಚು ,ಹಾರ ತುರಾಯಿ ರಿಬ್ಬನ್ನು!!
ಸಿಂಗರಿಸಲಷ್ಟು ತರಹೇವಾರಿ ಬಣ್ಣ
ಗೊರಸು ಕಾಲಿಗೆ
ಘಲ್ಲೆನ್ನೊ ಕಾಲ್ಗೆಜ್ಜೆ ಚೆನ್ನ.. !
ಕಿಚ್ಚನು ಹಾಯಿಸಿ ಬೆಚ್ಚನೆ ಕಾಯಿಸಿ
ದನಕರುಗಳ ಪೂಜಿಸೋ ರೀತಿಯೇನಣ್ಣ…!

ಜರತಾರಿ ಲಂಗ ‌ ಝಗಮಗಿಸೊ ರವಿಕೆ
ಹೆಂಗಳೆಯರಲ್ಲೆಂತಾ ಲವಲವಿಕೆ!?
ಹಬ್ಬದ ಸಲುವು ಎಳ್ಳು ಬೆಲ್ಲ ಬೀರಿದಷ್ಟು ಗೆಲುವು..!!
ನಗುವ ಬೀರುವ ಚೆಲುವೆಯರ ಹಬ್ಬ..!

ಮಂಜಿನೋಕುಳಿಯಲ್ಲಿ ಮಿಂದೆದ್ದ ಬೆಳಗು
ಮೇಘಗಳೊಡನಾಟ ಕಣ್ಣಮುಚ್ಚಾಲೆಯಾಟ..!
ಚಳಿಗಾಳಿ ಬೀಸುತ ಶಿಶಿರ ಋತು ಸಾಗುತ
ಪತಂಗಗಳ ಬೀಡು ಆಗಸದ ನಾಡು..
ಮೋಡಗಳ ಮರೆಯಲ್ಲಿ ಇಣುಕುವ ರವಿಯು
ಹೊಸತನದ ಹೊನಲನ್ನು ಹರಿಸುವ ಪರಿಯು!!
ಎಳ್ಳು ಬೆಲ್ಲ, ರಸಬಾಳೆ ಸವಿಕಬ್ಬಿನ ಲಗ್ಗೆ
ಸಂಕ್ರಾತಿ ಸ್ಫುರಿಸುತಲಿ ಸಮೃದ್ಧಿ ಸಂಭ್ರಮದ ಬುಗ್ಗೆ..!!

-ಅರ್ಚನಾ. ಹೆಚ್, ಬೆಂಗಳೂರು

8 Responses

  1. Umesh Mundalli ನಿನಾದ ವಾಹಿನಿ says:

    ಸತ್ವ ಪೂರ್ಣ ಕವಿತೆ. ಧನ್ಯವಾದಗಳು ತಮಗೆ

  2. ನಯನ ಬಜಕೂಡ್ಲು says:

    ಸಂಕ್ರಾಂತಿಯ ಪೂರ್ತಿ ಆಚರಣೆಗಳ ವಿವರವನ್ನೊಳಗೊಂಡ ಸುಂದರ ಕವನ

  3. ಅಂಬ್ರೀಶ್ says:

    ಸೂಪರ್ ಸಂಕ್ರಾಂತಿ ಕವಿತೆ….

  4. Savithri bhat says:

    ಸಂಕ್ರಾಂತಿಯ ಆಚರಣೆ, ವೈಶಿಷ್ಟ್ಯವಾನ್ನು ವಿವರಿಸಿದ ಸುಂದರ ಕವನ

  5. ಸುನೀಲ says:

    ತುಂಬ ಇಷ್ಟ ಆಯ್ತು

  6. Dharmanna dhanni says:

    ಅರ್ಥಪೂರ್ಣವಾದ ಕವನ. ಧನ್ಯವಾದಗಳು

  7. ಶಂಕರಿ ಶರ್ಮ says:

    ಸಂಕ್ರಾಂತಿ ಹಬ್ಬದ ಮಹತ್ವ, ದಿನದ ವಿಶೇಷತೆಗಳು ಕವನದಲ್ಲಿ ಸೊಗಸಾಗಿ ಮೂಡಿಬಂದಿದೆ. ಧನ್ಯವಾದಗಳು ಮೇಡಂ.

  8. ಚಂಸು ಪಾಟೀಲ says:

    ಸಂಕ್ರಾಂತಿಯ ಸವಿವರ ಚಿತ್ರಣದ ಸೊಗಸಾದ ಕವನ!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: