ಸವಿ, ಸಿಹಿ ನೆನಪುಗಳ ಚಿತ್ತಾರ ಮೂಡಿಸಿದ 2020
ವರ್ಷ ವರ್ಷವೂ ಸಹ ಹೊಸದಾದ ವರ್ಷ ಒಂದಲ್ಲ ಒಂದು ರೀತಿಯಲ್ಲಿ ಹೊಸ ಹೊಸ ಅನುಭವಗಳನ್ನು ತರುತ್ತದೆ. ನೋವು-ನಲಿವುಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ.ಎಲ್ಲವನ್ನು ಸಹ ನಾವು ಸಮಾನವಾಗಿ ಸ್ವೀಕರಿಸುವ ಮನಸ್ಸಿದ್ದರೆ ಮಾತ್ರ ಅದರ ಸೊಗಸು ಹೆಚ್ಚುತ್ತದೆ. 2020 ನೇ ಇಸ್ವಿ ಒಂದು ರೀತಿಯಲ್ಲಿ ಟಿ-20 ಮ್ಯಾಚ್ ನಂತೆ ಇತ್ತು!ಎರಡು ತಿಂಗಳು ನೆಮ್ಮದಿ ನೀಡಿ, ಯುಗಾದಿ ಹಬ್ಬದ ನಂತರ ತನ್ನತಗಾದೆಯನ್ನು ಪ್ರಾರಂಭಿಸಿ, ಇವತ್ತಿನವರೆಗೂ ಸಹ ದೇಶ-ವಿದೇಶಗಳ ಜನರಿಗೆಲ್ಲ ಒಂದೊಂದು ರೀತಿಯಲ್ಲಿ ಆತಂಕ ಸೃಷ್ಟಿಸಿತು.
ಮುಖ್ಯವಾಗಿ ಕೋವಿಡ್-19 (ಕರೋನ) ತನ್ನ ಕಬಂಧಬಾಹು ಚಾಚಿ ಮಾರಣಹೋಮ ಮಾಡಿತು. ಇದು ಒಂದು ಪೀಠಿಕೆ ಅಷ್ಟೇ. ನಂತರದಲ್ಲಿ ಲಾಕ್ಡೌನ್ ಪರಿಕಲ್ಪನೆಯೇ ಇಲ್ಲದ ನಮಗೆ ಮನೆಯಲ್ಲಿಯೇ ಒಂದು ರೀತಿಯಲ್ಲಿ ಸೆರೆಮನೆ ವಾಸ ಅನುಭವಿಸುವ ಸರದಿ ಬಂತು!ಅಬಾಲವೃದ್ಧರಾದಿಯಾಗಿ ಎಲ್ಲರೂ ಸಹ ಮನೆಯಲ್ಲಿಯೇ ಇರುವ ಒಂದು ಸದಾವಕಾಶ ಕಲ್ಪಿಸಿತು! ಬೇಸಿಗೆ ರಜಾ… ದಸರಾ ರಜಾ… ಅಥವಾ ಇನ್ನಿತರ ರಜಾಗಳಲ್ಲಿ ಮಕ್ಕಳನ್ನು ತಡೆಯುವುದೇ ಒಂದು ದೊಡ್ಡ ತಪಸ್ಸು ಆಗಿತ್ತು. ಆದರೆ ದೀರ್ಘಕಾಲದಲ್ಲಿ ಮಕ್ಕಳೊಂದಿಗೆ ಪೋಷಕರು ಸಹ ಪರದಾಡುವಂತಾಯಿತು. ಒಂದು ರೀತಿಯಲ್ಲಿ ಶಾಲಾ ಆವರಣ ಮಕ್ಕಳಿಗೆ ಮರೆತುಹೋಯಿತು. ಎಲ್ಲವೂ ಆನ್ಲೈನ್ ತರಗತಿಗಳು. ಇನ್ನು ನನ್ನ ಪಾಲಿಗೆ ಲಾಕ್ ಡೌನ್ ಸಮಯ ನೋವಿಗಿಂತ ಹೆಚ್ಚು ನಲಿವು ನೀಡಿದೆ!!.
ಏಕೆಂದರೆ ನಮ್ಮ ಸ್ವಂತ ಊರಾದ ಕಾಳಿಹುಂಡಿಯಲ್ಲಿ ಹೆಚ್ಚು ಕಾಲಕಳೆದು,ಬಾಲ್ಯದ ದಿನಗಳನ್ನು ನೆನಪಿಸಿ ಅದು ಮರುಕಳಿಸುವಂತೆ ಮಾಡಿತು!ನಿಜಕ್ಕೂ ಇದೊಂದು ಮರೆಯಲಾಗದ ಅನುಭವ. ಕರೋನ ಒಂದು ರೀತಿಯಲ್ಲಿ ಶಿಸ್ತನ್ನು ಕಲಿಸಿತು….. ನಮ್ಮ ಆರೋಗ್ಯದ ಕಡೆಗೆ ಅಥವಾ ನಮ್ಮ ವೈಯಕ್ತಿಕ ಬದುಕಿನ ಕಡೆಗೆ ಕಾಳಜಿ ಮೂಡಿಸಿತು…… ಪರಸ್ವರ ಬಾಂಧವ್ಯದ ಬೆಸುಗೆಯನ್ನು ಏರ್ಪಡಿಸಿತು……. ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವಂತೆ ಮಾಡಿತು.
ಮೊದಲೇ ನಾನು ಸಮಯಕ್ಕೆ ಹೆಚ್ಚು ಆದ್ಯತೆ ಕೊಡುತ್ತಿದ್ದರಿಂದ…. ಜೊತೆಗೆ ಹಲವು ಹವ್ಯಾಸಗಳನ್ನು ಮೈಗೂಡಿಸಿಕೊಂಡಿದ್ದರಿಂದ….. ಸಮಯ ಮತ್ತು ಹವ್ಯಾಸಕ್ಕೆ ಮತ್ತೊಂದಷ್ಟು ಬೋನಸ್ ನೀಡಿತು!. ಅದನ್ನು ಸಮರ್ಪಕವಾಗಿ ಬಳಸಿಕೊಂಡ ತೃಪ್ತಿಯಿದೆ. ಇದರ ಜೊತೆಜೊತೆಗೆ ಮತ್ತೊಂದೆಡೆ ಟಿವಿಗಳಲ್ಲಿ ಕರೋನ ಸಾವು-ನೋವಿನ ಬಗ್ಗೆ….. ಜನರು ಪಡುತ್ತಿರುವ ಬವಣೆಯ ಬಗ್ಗೆ ನೋಡಿ ಮನಸ್ಸು ಖಿನ್ನತೆಗೆ ಒಳಗಾಗಿದ್ದು ನಿಜ. ಆದರೆ ಏನು ಮಾಡುವುದು? ಎಲ್ಲವೂ ನಮ್ಮ ಕೈಯಲ್ಲಿ ಇಲ್ಲವಲ್ಲ.
ಪತ್ರಿಕೆಗಳು ಕೂಡ ಕೆಲವು ದಿನ ಬರಲಿಲ್ಲ.ಮುಖ್ಯವಾಗಿ ಆಕಾಶವಾಣಿ ನಮ್ಮೆಲ್ಲರ ನಡುವೆ ಸುಮಧುರ ಬಾಂಧವ್ಯವನ್ನು ಏರ್ಪಡಿಸಿತು. ಫೋನ್ ಇನ್ ಕಾರ್ಯಕ್ರಮಗಳ ಮೂಲಕ ನೊಂದ ಮನಗಳಿಗೆ ಸಾಂತ್ವನ ನೀಡಿದ ಮೈಸೂರು ಆಕಾಶವಾಣಿ ಒಳಗೊಂಡಂತೆ ರಾಜ್ಯದ ಇನ್ನಿತರ ಆಕಾಶವಾಣಿಗಳು ಕೂಡ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದವು.ಮೈಸೂರು ಆಕಾಶವಾಣಿಯ ಜೊತೆ ನಾವು ಕೂಡ ಕೈಜೋಡಿಸಿದೆವು. ಸಮುದ್ಯತಾ ಶ್ರೋತೃ ಬಳಗದ ಜೊತೆ ಆಕಾಶವಾಣಿಯು ಸೇರಿ ಕೋವಿಡ್ 19 ವೈರಸ್ನಿಂದ ನೊಂದ ಮನಸ್ಸುಗಳಿಗೆ ತಕ್ಕಮಟ್ಟಿಗೆ ಪರಿಹಾರದ ಕಿಟ್ಟನ್ನು ಕೂಡ ವಿತರಿಸಿದ್ದು ಸ್ವಲ್ಪಮಟ್ಟಿಗೆ ನೆಮ್ಮದಿ ತಂದಿತು. ನಂತರದಲ್ಲಿ ಫೋನ್-ಇನ್ ಕಾರ್ಯಕ್ರಮದಲ್ಲಿ ಕೇಳುಗರ ಸಹಾಯ ನೆರವು ದಾಖಲೆ ರೀತಿಯಲ್ಲಿ ನಡೆಯಿತು.
ಈ ಬಾರಿಯೂ ಸಹ ಎಲ್ಲಾ ರಂಗಗಳಲ್ಲೂ ಹಲವು ಪ್ರಮುಖ ಗಣ್ಯರು ಗಳನ್ನು, ಸ್ನೇಹಿತರುಗಳನ್ನು ಕಳೆದುಕೊಂಡೆವು. ಇವೆಲ್ಲ ಘಟನೆಗಳಿಂದ ನನ್ನ ಮನಸ್ಸು ಒಂದು ರೀತಿಯಲ್ಲಿ ಜರ್ಜರಿತಗೊಂಡಿತು. ಮನುಷ್ಯನ ಜೀವನವೇ ಒಂದು ರೀತಿಯಲ್ಲಿ ನೀರಿನ ಮೇಲೆ ಗುಳ್ಳೆ ಎಂದೆನಿಸಿತು. “ಬರುವಾಗಲೂ ಏನು ತರದ….. ಹೋಗುವಾಗಲೂ ಏನು ಕೊಂಡೊಯ್ಯದ…..” ಈ ಮಾನವ ಹುಟ್ಟು -ಸಾವಿನ ನಡುವೆ ತನ್ನ ಬದುಕನ್ನು ಒಂದು ರೀತಿಯಲ್ಲಿ ಸುವರ್ಣಸೇತುವೆ ಯನ್ನಾಗಿ ಮಾಡಿಕೊಳ್ಳಬೇಕೇ ಹೊರತು, ನನಗೆ ಅದು ಬೇಕು ಇದು ಬೇಕು, ನನಗೆ ಅದು ಸಿಗಲಿಲ್ಲ ಇದು ಸಿಗಲಿಲ್ಲ, ಜೊತೆಗೆ ತನಗೆ ಸಿಕ್ಕ ಬದುಕನ್ನು ತೃಪ್ತಿ ಪಡದೆ, ಬೇರೆಯವರೊಂದಿಗೆ ಹೋಲಿಸಿಕೊಂಡು ಇರುವ ಸವಲತ್ತುಗಳ ಜೊತೆಗೆ ಬದುಕದೆ ಮಾನಸಿಕ ನೆಮ್ಮದಿ ಕಳೆದುಕೊಂಡು ಮತ್ತಷ್ಟು ಜನರಿಗೆ ತೊಂದರೆ ಕೊಡುತ್ತಾ ಬದುಕು ಸಾಗಿಸುವವರಿಗೆ ಕಡಿಮೆಯೇನೂ ಇಲ್ಲ.
ಈ ಕಷ್ಟ ಎನ್ನುವುದು ಮನುಷ್ಯನಿಗೆ ಬರದೆ ಮರಕ್ಕೆ ಬರುತ್ತದೆಯೇ? ಎಂಬುದನ್ನು ನಾವು ಮನಗಂಡು, “ಹಾಸಿಗೆ ಇದ್ದಷ್ಟು ಕಾಲು ಚಾಚು” ಎನ್ನುವಂತೆ ಸಣ್ಣಸಣ್ಣ ಘಟನೆಗಳನ್ನು ನೆನಪಿಸಿಕೊಂಡು ಖುಷಿಪಡುತ್ತಾ ಬದುಕ ಸಾಗಿಸಬೇಕು. ಆದರೆ “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ” ಎನ್ನುವಂತಾಗಿದೆ!. ಮೊದಲು ಇದರಿಂದ ಹೊರಬರಬೇಕು.
ನಾನು ಸಾಮಾನ್ಯವಾಗಿ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ. ಮನೆಯವರೆಲ್ಲರ ಒತ್ತಾಯದ ಮೇರೆಗೆ ಒಂದು ಹೊಸ ಬಟ್ಟೆಯೋ ಅಥವಾ ಕೇಕ್ ಕಟ್ ಮಾಡಿ ಅವರಿಗೆ ಸ್ವಲ್ಪ ಮಟ್ಟಿಗೆ ಖುಷಿ ಕೊಡುತ್ತೇನೆ. ಆದರೆ ಈ ಬಾರಿ ಅಂದರೆ ಸೆಪ್ಟೆಂಬರ್ 25 ಹುಟ್ಟುಹಬ್ಬವನ್ನು ಕರೋನ ಕರಿನೆರಳಿನ ಛಾಯೆಯಿಂದ ಆಚರಿಸುವುದೇ ಬೇಡ ಎಂದು ನನ್ನ ಮನಸ್ಸು ಸಾರಿ ಸಾರಿ ಹೇಳಿತ್ತು. ಆದರೂ ಕೂಡ ಸರಳವಾಗಿ ಆಚರಿಸಲು ಮನೆಯವರೊಂದಿಗೆ ಹೇಳಿದ್ದೆ.
ನಮಗೆ ಇಷ್ಟವಾದವರನ್ನು ಇಷ್ಟವಾದ ದಿನದಂದು ಕಳೆದುಕೊಳ್ಳುತ್ತೇವೆ ಎಂಬ ಮಾತಿದೆ. ಅಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಸಹ ಸಂಭ್ರಮದಲ್ಲಿದ್ದ ನನಗೆ 01: 30 ನಂತರ ಗಾನಮಾಧುರ್ಯ ದೈತ್ಯಪ್ರತಿಭೆ ಎಸ್. ಪಿ. ಬಾಲಸುಬ್ರಹ್ಮಣ್ಯ ಅವರ ನಿಧನದ ಸುದ್ದಿ ಕೇಳಿ ನಿಜಕ್ಕೂ ನನ್ನ ಮನಸ್ಸು ಮರುಗಿತು. ಏನೋ ಒಂದು ರೀತಿಯಲ್ಲಿ ಹೇಳಿಕೊಳ್ಳಲಾಗದ ಭಾವನೆ. ಹುಟ್ಟಿದ ವ್ಯಕ್ತಿ ಸಾಯಲೇಬೇಕು ಆದರೆ ಕೊರೋನಕ್ಕೆ ಒಳಗಾಗಿ ಸತ್ತಿದ್ದು ತುಂಬಲಾರದ ನಷ್ಟ. ಇದರಿಂದ ಹೊರಬಂದಿದ್ದರೆ ಅವರು ಮತ್ತಷ್ಟು ವರ್ಷ ಬದುಕಿ, ನಮ್ಮ ಮನಸ್ಸುಗಳಿಗೆ ಖುಷಿ ನೀಡುತ್ತಿದ್ದರು. ಈ ಟಿವಿ ಖಾಸಗಿ ವಾಹಿನಿಯ “ಎದೆ ತುಂಬಿ ಹಾಡುವೆನು” ಕಾರ್ಯಕ್ರಮದಲ್ಲಿ ಅವರನ್ನು ಭೇಟಿ ಮಾಡಿದ…. ಅವರ ಜೊತೆ ಫೋಟೋ ತೆಗೆಸಿಕೊಂಡ…. ಹಸ್ತಾಕ್ಷರ ಪಡೆದ ದಿನವನ್ನು ನಾನೆಂದಿಗೂ ಮರೆಯುವುದಿಲ್ಲ.
ಇನ್ನು ಕೊರೋನಾ ಬಂದ ನಂತರ ಎಲ್ಲವೂ ಸಹ ಲಾಕ್ ಡೌನ್ ಆದವು!. ಹಲವು ಸಾಹಿತ್ಯ ಕಾರ್ಯಕ್ರಮಗಳು ನಡೆಯಲೇ ಇಲ್ಲ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮಾಸ್ಕ್, ಸ್ಯಾನಿಟೈಸರ್ ಬಳಸುವುದು ನಮ್ಮ ಜೀವನದ ಒಂದು ಭಾಗವಾಗುತ್ತಾ ಬಂದಿತು. ಈ ನಡುವೆ ಮಕ್ಕಳಿಗೂ ಸಹ ಆನ್ಲೈನ್ ತರಗತಿಗಳು. ಖಾಸಗಿ ಕಂಪನಿಗಳು ಸಹ ಮನೆಯಲ್ಲಿಯೇ ಕೆಲಸ ಮಾಡುವಂತೆ ನೋಡಿಕೊಂಡವು. ಇನ್ನು ಇದೇ ರೀತಿ ವಾಟ್ಸಪ್ ಮೂಲಕ ಸಹ ಆನ್ಲೈನ್ ಸಾಹಿತ್ಯ ವಿಶಿಷ್ಟ ರೀತಿಯಲ್ಲಿ ಪ್ರಾರಂಭವಾಯಿತು.
ಅದರಲ್ಲೂ ರಾಜ್ಯದ ತುಂಬಾ ಹಲವು ವಾಟ್ಸಪ್ ಬಳಗ ನಿಜಕ್ಕೂ ಸಮಯವನ್ನು ಸಮರ್ಪಕವಾಗಿ, ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಮೂಲಕ ನಮ್ಮೆಲ್ಲರ ಮನಸೆಳೆದವು. ಈ ನಿಟ್ಟಿನಲ್ಲಿ ಗ್ರೂಪ್ನ ಎಲ್ಲಾ ಅಡ್ಮಿನ್ ರವರುಗಳಿಗೆ ಅಭಿನಂದನೆಗಳನ್ನು ಸಲ್ಲಿಸಲೇಬೇಕು. ಇದೇ ರೀತಿ 50 ಕ್ಕೂ ಹೆಚ್ಚು ವ್ಯಾಟ್ಸಪ್ ಬಳಗದಲ್ಲಿ ನಾನು ನಿರಂತರವಾಗಿ ಕ್ರಿಯಾಶೀಲತೆಯಿಂದ ಅಲ್ಲಿ ನೀಡುವ ವಿವಿಧ ಬಗೆಯ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ವಿಶಿಷ್ಟರೀತಿಯಲ್ಲಿ ಅನುಭವವಾಯಿತು. ಇದೊಂದು ಹೆಮ್ಮೆಯ ವಿಷಯ. ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಹುಮಾನ, ಸರ್ಟಿಫಿಕೇಟ್ಗಳನ್ನು ಪಡೆದ ಹೆಮ್ಮೆ ನನಗೆ.
ಅದರಲ್ಲೂ ಮೈಸೂರು ಆಕಾಶವಾಣಿ ಪ್ರಸಾರ ಮಾಡಿದ ಲಾಕ್ಡೌನ್ ಕಥೆಗಳು ಈ ಮಾಲಿಕೆಯಲ್ಲಿ ನನ್ನದೊಂದು ಕಥೆ “ಬದಲಾವಣೆ” ಪ್ರಸಾರವಾಯಿತು. ಮೊಬೈಲ್ ಯಾಪ್ ಮೂಲಕ ಸಮಯ ಹೆಚ್ಚು ಇದ್ದುದರಿಂದ ರಾಜ್ಯದ ಬೇರೆ ಬೇರೆ ಆಕಾಶವಾಣಿ ಗಳನ್ನು ಕೇಳುವ ಅವಕಾಶವನ್ನು ಪಡೆದುಕೊಂಡೆ. ಹಲವು ಸ್ನೇಹಿತರೊಂದಿಗೆ ಸುಮಧುರ ಬಾಂಧವ್ಯವನ್ನು ವಿಸ್ತರಿಸಿದೆ. ಹೀಗೆ ಬರೆಯುತ್ತಾ ಹೋದರೆ ಮತ್ತಷ್ಟು ಸಿಹಿ ಕಹಿ ನೆನಪುಗಳು ನನ್ನ ಮನದಲ್ಲಿ ಚಿತ್ತಾರ ಮೂಡುತ್ತಲೇ ಇರುತ್ತವೆ!.
ವಿಶಿಷ್ಟರೀತಿಯಲ್ಲಿ ಅನುಭವ ನೀಡಿದ 2020ರ ವರ್ಷ ಇನ್ನೇನು ಕೆಲವೇ ದಿನಗಳಲ್ಲಿ…. ಕ್ಷಣಗಳಲ್ಲಿ… ಕಾಲಘಟ್ಟಕ್ಕೆ ಸೇರಲಿದೆ!. ವರ್ಷವರ್ಷವೂ ಕಾಲಚಕ್ರ ಸಿಹಿ-ಕಹಿಗಳ ಮಿಶ್ರಣದೊಂದಿಗೆ ನೋವು-ನಲಿವುಗಳನ್ನು ನೀಡುತ್ತಲೇ ಬಂದಿದೆ. ಅಂತಹ ಸಂದರ್ಭದಲ್ಲಿ ನಾವು ಹೇಗೆ ಬದುಕುತ್ತೇವೆ…. ಹೇಗೆ ವರ್ತಿಸುತ್ತೇವೆ…. ಆ ಸಮಯವನ್ನು ಹೇಗೆ ಉಪಯೋಗಿಸಿಕೊಳ್ಳುತ್ತೇವೆ…. ಎನ್ನುವುದು ಮುಖ್ಯವಾಗುತ್ತದೆ. ನಾವು ಸಮಯದ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲೇಬೇಕು!
ಬರಲಿರುವ 2021ನೇ ಹೊಸವರ್ಷ ಎಲ್ಲರ ಬಾಳಿಗೆ ಸನ್ಮಂಗಳವನ್ನುಂಟು ಮಾಡಲಿ. ನಾವು ಹಾಕಿಕೊಂಡಿರುವ ಯೋಜನೆಗಳನ್ನು ನೆರವೇರಲಿ ಮತ್ತೆ ಎಲ್ಲರ ಬಾಳಲ್ಲಿ ನವವಸಂತದ ಉತ್ಸಾಹದ, ನವಚೈತನ್ಯದ ಬದುಕು ಹಸನಾಗಲಿ ಎಂದು ಆಶಿಸುತ್ತೇನೆ. ಹೊಸ ವರ್ಷಕ್ಕೆ ನನ್ನ ಸಂಕಲ್ಪಗಳು ಏನೂ ಇರುವುದಿಲ್ಲ. ಹಳೆಯ ಸಂಕಲ್ಪಗಳ ಬೆಟ್ಟದಷ್ಟು ಇವೆ! ಅವುಗಳನ್ನು ಸ್ವಲ್ಪಮಟ್ಟಿಗೆ ಕಾರ್ಯರೂಪಕ್ಕೆ ತರುವ ಯೋಚನೆ…. ಯೋಜನೆ…. ಇದೆ. ಇನ್ನು ನೀವು ಏನಂತೀರಿ?
-ಕಾಳೀಹುಂಡಿ ಶಿವಕುಮಾರ್, ಮೈಸೂರು.
ಸಿಹಿ – ಕಹಿ ನೆನಪುಗಳಿಂದ ಮಿಶ್ರಿತ ಬರಹ. ಚೆನ್ನಾಗಿದೆ.
ಕಳೆದುಹೋದ ವರುಷದ ಈ ಸಿಹಿ ಕಹಿ ನೆನಪುಗಳು ಎಲ್ಲರ ಮನದ ಮಾತಾಗಿ ಮೂಡಿಬಂದಿದೆ. ಕೆಲವು ಬಾಂಧವ್ಯಗಳು ಬೆಸೆದರೂ, ಎಲ್ಲೂ ಹೋಗಲಾಗದುದರಿಂದ ಕೆಲವು ಸಂಬಂಧಗಳು ದೂರವಾದಂತೆಯೂ ಎನಿಸಿರುವುದು ಸುಳ್ಳಲ್ಲ. ಕಳೆದ ವರುಷದ ಪೂರ್ತಿ ಸಿಂಹಾವಲೋಕನದ ಬರಹವು ಸೊಗಸಾಗಿದೆ.. ಧನ್ಯವಾದಗಳು.
ಲೇಖನ ಬಹಳ ಚೆನ್ನಾಗಿ ಮೂಡಿ ಬಂದಿದೆ.