ಬದಲಾಗಿಸು ನನ್ನ
ಅಡುಗೆಯಾಟದ ಮಡಿಕೆ ಕುಡಿಕೆಗಳ
ದೂರಕೆಸೆದುಬಿಡೆ ಅಮ್ಮ,
ಮುಂದೆಂದು ತರಬೇಡ ಇವುಗಳ
ಸೌಟು ಸ್ಪೂನುಗಳ ತಟ್ಟೆ ಲೋಟಗಳ
ಗೊಡವೆ ಬೇಡಿನ್ನು ನನಗೆ
ಜರಿಲಂಗ ರವಿಕೆಗಳ ತಳ್ಳು ದೂರ
ಆಕಾಶದ ಚುಕ್ಕಿ ಚಂದ್ರರ ತೋರಿಸಬೇಡ
ಪೊರಕೆ ಮೈಲಿಗೆ ಬಟ್ಟೆಗಳ ಕೈಗಿಡಬೇಡ
ಬಚ್ಚಲರೊಚ್ಚನು ತೊಳೆಯೆನಬೇಡ
ಅಣ್ಣನೆದುರಿಗೆ…..
ಇವಳು ಪಾಪ ಹುಡುಗಿ ಕಣೋ
ಎನುತ ನಾನು ಹೆಣ್ಣೆಂದು ಹೀಗಳೆಯಬೇಡ
ಅಪ್ಪನೆದುರು ನನ್ನ ಮದುವೆಯ
ಪ್ರಸ್ತಾಪಿಸಬೇಡ
ಎಲ್ಲಕಿಂತ ಮೊದಲು
ಬೇಗ ಮನೆ ಸೇರಿಕೊ ಎನಬೇಡ
ಸಾಕು ಓದಿದ್ದು ಮುಸುರೆತಿಕ್ಕುವುದಷ್ಟೇ
ಮುಂದಿರುವ ಕೆಲಸವೆನಬೇಡ
ಸಾಕಾಗಿದೆ ನನಗೆ
ಈಗ…………
ನನ್ನ ಕೈಗೆ ಕೊಡಿಲ್ಲಿ ನನಗೂ ಅಸ್ತ್ರಗಳ
ಅಡುಗೆ ಬದಲಿಗೆ ನಿಭಾವಣೆಯ ಕಲಿಸು
ಗೃಹಿಣಿ ಗೃಹಮುಚ್ಯತೇ ಅನಬೇಡ
ಕುಕೃತ್ಯಗಳಿಗೆ ಸಡ್ಡು ಹೊಡೆಯುವುದ ಬೆಳೆಸು
ಧೈರ್ಯದೊಂದಿಗೆ ಛಲ ತುಂಬಿ
ಬದುಕನು ಬದುಕಿಸು
ಮೇಲೇರಿಬರುವ ಕಿಡಿಗೇಡಿಗಳ ಕಿಡಿಗೆ
ಪ್ರತಿಬೆಂಕಿಯಾಗುವುದ ಕಲಿಸು
ಮುಂದೆ ಮುಂದೆ ಕಾಲವಿನ್ನೂ ಕೆಡಲಿದೆ
ನಿರ್ಭಯದ ಗುಂಡಿಗೆಗೆ ಮನವೊಲಿಸು
ಗಂಡಾಗಿಸು ಅಮ್ಮಾ.. ನನ್ನ ಗಂಡಾಗಿಸು!
-ಬಿ.ಕೆ.ಮೀನಾಕ್ಷಿ, ಮೈಸೂರು.
ವಾಸ್ತವಿಕ ಬದುಕಿನತ್ತ ಹೆತ್ತವರ ಹೊಣೆಗಾರಿಕೆ ಯನ್ನು ತಿಳಿಸಿ ಹೇಳಿ ರುವ ಈ ಕವನ ಚೆನ್ನಾಗಿದೆ ಮೂಡಿ ಬಂದಿದೆ ಗೆಳತಿ ಮೀನಾಕ್ಷಿ ನಿಮಗೆ ಅಭಿನಂದನೆಗಳು.
ಇವತ್ತಿನ ದಿನಗಳಲ್ಲಿ ಇಂತಹ ಒಂದು ಬದಲಾವಣೆಯ ಅಗತ್ಯ ಇದೆ. ಹೆಣ್ಣಿನ ಅಂತರಂಗದ ಅಳಲು ಚೆನ್ನಾಗಿ ಅನಾವರಣ ಗೊಂಡಿದೆ.
Thank you madam.
ಸಮಾಜದ ಈಗಿನ ವ್ಯವಸ್ಥೆಗೆ ಸಡ್ಡು ಹೊಡೆದು ಹೊರಬರಬೇಕಾಗಿದೆ ಹೆ ಣ್ಣು ಎನ್ನುವ , ಅವಳಿಗೆ ಮಾನಸಿಕ ಶಕ್ತಿ ತುಂಬುವ ಸೊಗಸಾದ ಕವನ..ಧನ್ಯವಾದಗಳು ಮೀನಾಕ್ಷಿ ಮೇಡಂ.