ಬೆಳಕ ಮಾರುವವರು
ದೀಪಾವಳಿಯ ದಿನ ಬುಟ್ಟಿಯಲಿ ಬೆಳಕ ಹೊತ್ತು
ಮಾರುತ್ತಾ ಬಂದರು.
ಬಾಗಿಲಲಿ ನಿಂತ ನನಗೆ
ಕಡ ಕೊಡುವೆನು ಬೆಳಕನು ಬೇಕೇ? ಎಂದರು
ಸುತ್ತಲಿದ್ದವರು ತಮ್ಮೆದೆಯ ಬೆಳಕ ಕುಡಿಯ ಕಿತ್ತು
ಉಡಿ ತುಂಬುವುವೆಂದರು.
ಕಣ್ಣಲಿದ್ದ ಬೆಳಕನು ನಗೆಯಲೊಂದಷ್ಟು ತುಳುಕಿಸಿ
ಹಿಡಿದುಕೊಳ್ಳಿ ಬೊಗಸೆಯಲಿ ಎಂದರು
ಕೈ ಸುಟ್ಟು ನಿಮಗೂ ಪಾಡು ನನಗೂ ಪಾಡು
ಬೇಡವೆಂದೆ
ಅಯ್ಯೋ ದಡ್ಡೀ..ಬೆಳಕು ಸುಡುವುದೆಂದು ಹೇಳಿದವರಾರು?
ನಾವು ಕೊಡುವುದು ಬೆಳಕನ್ನು….. ಬೆಂಕಿಯಲ್ಲ!
ಖಾಲಿ ಎದೆಯ ಗೂಡಿನಲಿ, ಕತ್ತಲೆಯ ಭಿತ್ತಿಗಳಲಿ
ಧಮನಿಗಳನೊಂದಷ್ಟು ಹೊಸೆದು ಜೀವರಾಗವ ತುಂಬಿ
ಕಣ್ಣ ಪಾಪೆಯಲಿ ಕಾಣದಾಗಿಹ ಗೊಂಬೆಯ ಹುಡುಕು
ನಾವಿತ್ತ ಹಣತೆಯಲಿ, ಬೆಳಗಿಕೊಂಡು
ಮತ್ತೆ ಹಿಂದಿರುಗಿಸು
ಮಂಕಳಂತೆ ಮುದುರಿ ಕೂರುವುದೇಕೆ?
ಬೆಳಕು……
ನಿನ್ನ ಹಕ್ಕು!
ಬಲಿ ಬರುವನು, ನರಕನು ನಲಿವನು
ಮಂಗಳದ ಮಹಾಲಕ್ಷ್ಮಿ ಹೆಜ್ಜೆಯಿಡುವಳು
ನೀರು ತುಂಬಿಲ್ಲವೇ?
ಕಜ್ಜಾಯ ಕರಿದಿಲ್ಲವೇ ಇನ್ನೂ?
ಹೋಗು ಹೋಗು ಸಿದ್ಧ ಮಾಡು
ಒಂದಿಷ್ಟು ಬೆಳಕ ಹೊತ್ತಿಸಿ ಮನ ಬೆಳಗಿ
ಕತ್ತಲೆಯ ಕಾಣದಾಗಿಸು.
ನೀನೂ ನಾಳೆ
ಕಡ ಕೊಡುವೆಯಂತೆ
ಬೆಳಕಿಲ್ಲದವರಿಗೆ….. ಬೆಳಕಿಗಾಗಿ ಕಾಯುವವರಿಗೆ!
– ಬಿ.ಕೆ.ಮೀನಾಕ್ಷಿ, ಮೈಸೂರು.
ಬೆಳಕ ಮಾರುವವರು ಕವನ ಬಹಳ ಅರ್ಥಪೂರ್ಣ ವಾದ ಕವನ ನಾವು ಕೊಡುವುದು ಬೆಳಕನ್ನು ಬೆಂಕಿಯನ್ನಲ್ಲ ಎನ್ನುವಲ್ಲೇ ಬದುಕಿ ಗೆ ಭರವಸೆ ನೀಡುವುದು ಬೆಳಕೇ ಹೊರತು ಬೆಂಕಿಯಲ್ಲ..ನೀವು ಅದನ್ನು ತಿಳಿದು ಇನ್ನೊಬ್ಬರ ಬದುಕಿಗೆ ರವಾನಿಸಿ ಎನ್ನುವುದನ್ನು ಸೊಚ್ಯವಾಗಿ .ಕವನದ ಮೂಲಕ ವ್ಯಕ್ತಪಡಿಸಿದ್ದಾರೆ.ಅಭಿನಂದನೆಗಳು ಮೀನಾ.
ಸೊಗಸಾಗಿದೆ ಕವನ
ಬೆಳಕ ಮಾರುವವರು.. ಬಹಳ ಅರ್ಥವತ್ತಾದ, ಸೊಗಸಾದ ಕವನ.. ಧನ್ಯವಾದಗಳು ಮೇಡಂ.
ಮೇಡಂ, ನನ್ನ ಕವನ ಬೆಳಕ ಮಾಡುವವರು ಪ್ರಕಟಿಸಿದ್ದಕ್ಕೆ ಧನ್ಯವಾದ ಗಳು.
ಅರ್ಥಪೂರ್ಣವಾದ ಕವನ. ಧನ್ಯವಾದಗಳು
ಸೊಗಸಾದ, ಅರ್ಥಗರ್ಭಿತ ಕವನ..ಇಷ್ಟವಾಯಿತು