ಗೂಳಿಯ ಓಟವೂ ಮರಕೋತಿ ಆಟವೂ..
ನನ್ನ ಶಾಲಾ ದಿನಗಳ ಒಂದು ಪ್ರಕರಣ. ನಾನಾಗ ತುಮಕೂರಿನ ನ್ಯೂಮಿಡ್ಲ್‌ಸ್ಕೂಲಿನಲ್ಲಿ ಆರನೆಯ ತರಗತಿಯಲ್ಲಿ ಓದುತ್ತಿದ್ದೆ. ಶಾಲೆಯಲ್ಲಿ ಪಾಠ ಪ್ರವಚನಗಳೊಡನೆ ಪಠ್ಯೇತರ ಚಟುವಟಿಕೆಗಳಲ್ಲೂ ನನಗೆ ತೀವ್ರ ಆಸಕ್ತಿಯಿತ್ತು. ಹೀಗಾಗಿ ಶಾಲೆಯಲ್ಲಿ ನಡೆಸುತ್ತಿದ್ದ ಆಟೋಟಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಎಲ್ಲರಿಗಿಂತ ಒಂದು ಕೈ ಮುಂದಾಗಿರುತ್ತಿದ್ದೆ.
ಪ್ರತಿವರ್ಷದಂತೆ ಆ ವರ್ಷವೂ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ನಾಟಕ, ಕೋಲಾಟಗಳಲ್ಲಿ ನಾನೂ ಭಾಗವಹಿಸಿದ್ದೆ. ಪ್ರತಿದಿನ ತರಗತಿಗಳು ಮುಗಿದ ನಂತರ ಶಿಕ್ಷಕರು ನಮಗೆ ಶಾಲೆಯಲ್ಲೇ ಇದಕ್ಕಾಗಿ ತರಬೇತಿ ನೀಡುತ್ತಿದ್ದರು. ಒಂದುದಿನ ತರಬೇತಿ ಮುಗಿಸಿಕೊಂಡು ಸಹಪಾಠಿಗಳೊಡನೆ ಮನೆಗೆ ನಡೆದು ಬರುತ್ತಿದ್ದೆ. ಮನೆಯಿಂದ ಶಾಲೆಯು ಸುಮಾರು ಎರಡು ಕಿಲೋಮೀಟರ್ ದೂರವಿತ್ತು. ಈಗಿನಂತೆ ಸಿಟಿಬಸ್ಸುಗಳ ಸೌಲಭ್ಯವಿರಲಿಲ್ಲ. ಆದ್ದರಿಂದ ಎಲ್ಲರೂ ನಡೆದೇ ಬರುತ್ತಿದ್ದೆವು. ದಾರಿಯಲ್ಲಿ ಅವರವರ ಮನೆಗಳು ಸಮೀಪಿಸುತ್ತಿದ್ದಂತೆ ಗೆಳತಿಯರು ಒಬ್ಬೊಬ್ಬರಾಗಿ ಗುಂಪಿನಿಂದ ಬೇರೆಯಾಗಿ ತಮ್ಮ ಮನೆ ಸೇರಿಕೊಂಡರು. ಕೊನೆ ಉಳಿದವಳು ನಾನೊಬ್ಬಳೇ. ಈಗಾಗಲೇ ತಡವಾಗಿದೆಯೆಂದು ಬೇಗಬೇಗ ನಡೆಯುತ್ತಿದ್ದೆ. ಸಾಯಂಕಾಲವಾಯಿತೆಂಬ ಆತಂಕ ಬೇರೆ ಇತ್ತು. ಇನ್ನೇನು ನಮ್ಮ ಮನೆಗೆ ಸಮೀಪಕ್ಕೆ ಬಂದಿದ್ದೆ. ಅಷ್ಟರಲ್ಲಿ ಯಾರೋ ಹಿಂದಿನಿಂದ ಕೂಗಿಕೊಂಡರು. ಸದ್ದುಕೇಳಿ ಹಿಂದಿರುಗಿ ನೋಡಿದೆ. ರೊಚ್ಚಿಗೆದ್ದ ಗೂಳಿಯೊಂದು ಎರ್ರಾಬಿರ್ರಿ ನುಗ್ಗಿ ಬರುತ್ತಿದೆ. ಜನರು ಗಾಭರಿಯಿಂದ ನನ್ನನ್ನು ಪಕ್ಕಕ್ಕೆ ಸರಿದುಹೋಗೆಂದು ಎಚ್ಚರಿಸುತ್ತಿದ್ದಾರೆ. ಅದನ್ನು ಕಂಡಕೂಡಲೇ ನಾನು ನಖಶಿಖಾಂತ ಬೆವರಿದೆ. ಯೋಚಿಸಲು ವೇಳೆಯಿಲ್ಲ. ಏನು ಮಾಡಲೂ ತೋಚದೆ ಇನ್ನು ನನ್ನ ಕತೆ ಮುಗಿಯಿತು ಎನ್ನಿಸಿತು. ದಷ್ಟಪುಷ್ಟವಾದ ಗೂಳಿ, ಅದರ ಕೆಂಪಾದ ಕಣ್ಣುಗಳು, ಬಿರುಸಾದ ಕೊಂಬುಗಳು ! ಇನ್ನೇನು ನನ್ನನ್ನು ತಿವಿದೇ ಬಿಡುತ್ತದೆ ಎಂಬುದು ಖಚಿತವಾಯಿತು. ಇದ್ದಬದ್ದ ಶಕ್ತಿಯನ್ನೆಲ್ಲ ಒಟ್ಟುಗೂಡಿಸಿ ದಾರಿಬದಿಯಲ್ಲಿದ್ದ ಮರದ ಕೊಂಬೆಯೊಂದರತ್ತ ಮೇಲಕ್ಕೆ ಜಿಗಿದೆ. ಕೈಯಿಗೆ ಸಿಕ್ಕಿದ ಕೊಂಬೆಯನ್ನು ಭದ್ರವಾಗಿ ಹಿಡಿದು ನನ್ನೆರಡೂ ಕಾಲುಗಳನ್ನು ಮೇಲಕ್ಕೆತ್ತಿ ಮರದ ಕೊಂಬೆಗೆ ಹಾವಿನಂತೆ ಸುತ್ತಿಕೊಂಡೆ, ಕಣ್ಮುಚ್ಚಿಕೊಂಡೆ. ಗೂಳಿಯು ನನ್ನನ್ನು ಸೀಳಿ ಹಾಕುತ್ತದೆಂಬ ನಿರೀಕ್ಷೆಯಲ್ಲಿಯೇ ಮೈಯೆಲ್ಲ ಮರಗಟ್ಟಿತು. ಅಷ್ಟೇ ನನ್ನ ನೆನಪು.
ಜನಗಳ ಮಾತುಗಳು ನನ್ನ ಸಮೀಪದಲ್ಲೇ ಕೇಳಿಬಂತು. ‘ಹುಡುಗಿ ಪಾಪ ಬಹಳ ಗಾಭರಿಯಾಗಿದ್ದಾಳೆ, ಮರದಿಂದ ಕೆಳಗಿಳಿಯಲು ಭಯವಾಗಿರಬೇಕು. ಒಂದು ಸ್ಟೂಲನ್ನೋ, ಏಣಿಯನ್ನೋ ತನ್ನಿ. ಮೆಲ್ಲಗೆ ಇಳಿಸಿಕೊಳ್ಳೋಣ’ ಎಂದೆಲ್ಲ ಅನ್ನುತ್ತಿದ್ದರು. ಕಣ್ಣುಬಿಟ್ಟೆ. ಗೂಳಿ ಮುಂದಕ್ಕೆ ಸಾಗಿಹೋಗಿತ್ತು, ನನಗೇನೂ ಆಗಿರಲಿಲ್ಲ. ತಕ್ಷಣ ಕೈಕಾಲು ಆಡಿಸಲಾಗಲಿಲ್ಲ. ಪುಟ್ಟ ಮರದ ಕೊಂಬೆಯ ಮಧ್ಯದಲ್ಲಿ ಭದ್ರವಾಗಿ ನೇತಾಡುತ್ತಿದ್ದೆ. ಇದೆಲ್ಲ ಹೇಗಾಯ್ತೆಂದು ಅರಿವಾಗಲಿಲ್ಲ. ಗಂಟಲು ಒಣಗಿತ್ತು. ಕೆಳಗೆ ಜಮಾಯಿಸಿದ್ದ ಜನಜಂಗುಳಿಯನ್ನು ನೋಡಿ ಇನ್ನೂ ದಿಗ್ಭ್ರಾಂತಳಾದೆ.
ಅಷ್ಟರಲ್ಲಿ ಯಾರೋ ಸಮೀಪದಲ್ಲೇ ಇದ್ದ ನನ್ನ ಮನೆಗೂ ಸುದ್ಧಿ ಮುಟ್ಟಿಸಿದ್ದರು. ನನ್ನಮ್ಮ ಆ ಗುಂಪಿನಲ್ಲಿ ದಾರಿಮಾಡಿಕೊಂಡು ಮುಂದೆ ಬಂದವರು ನನ್ನ ಕಣ್ಣಿಗೆಬಿದ್ದರು. ಅವರನ್ನು ಕಂಡಾಕ್ಷಣ ಕೋತಿಯಂತೆ ಛಂಗನೆ ಕೊಂಬೆಯಿಂದ ಕೆಳಕ್ಕೆ ಜಿಗಿದು ನೆಲದ ಮೇಲೆ ಕುಪ್ಪಳಿಸಿದೆ. ಅಮ್ಮನನ್ನು ತಬ್ಬಿಕೊಂಡು ಅಳತೊಡಗಿದೆ. ಅವರು ‘ಅಯ್ಯೋ ಹುಚ್ಚಿ, ನಿನಗೇನೂ ಆಗಿಲ್ಲ. ಅನಾಹುತದಿಂದ ಬಚಾವಾಗಿದ್ದೀಯ. ಮತ್ಯಾಕೆ ಅಳು? ನೀನು ಮರಕೋತಿ ಆಟವಾಡುತ್ತಿದ್ದಾಗ ಕೊಂಬೆಯಿಂದ ಜಿಗಿಯುತ್ತಿದ್ದೆಯಲ್ಲಾ ಅದು ಈಗ ಉಪಯೋಗಕ್ಕೆ ಬಂತು ನೋಡು’ ಎಂದು ನನ್ನನ್ನು ಮನೆಗೆ ಕರೆದುಕೊಂಡು ಹೋದರು. ಬಾಲ್ಯದ ಆಟ ಆದಿನ ನನ್ನ ತಲೆ ಕಾಯ್ದಿತ್ತು. ಈಗಲೂ ಗ್ರಾಮೀಣ ಭಾಗದಲ್ಲಿ ನಡೆದಾಡುವಾಗ ಚಿಕ್ಕಚಿಕ್ಕ ಕೊಂಬೆಗಳಿರುವ ಮರಗಳ ಸಾಲನ್ನು ನೋಡಿದರೆ ನನಗೆ ಬಾಲ್ಯದ ಆ ಘಟನೆ ನೆನಪಾಗುತ್ತದೆ.
-ಬಿ.ಆರ್ ನಾಗರತ್ನ
ಸುಂದರವಾದ ಬರಹ. ಇವತ್ತಿನ ದಿನಗಳಲ್ಲಿ ಇಂತಹುದನ್ನು ಕಲ್ಪನೆ ಮಾಡಿಕೊಳ್ಳಲು ಸಿಗುವುದಿಲ್ಲ. Very nice
ತಮ್ಮ ಬಾಲ್ಯದ ನೆನಪು ಎಷ್ಟು ಭೀಕರವಾಗಿದೆ ಅಲ್ಲವೇ… ಈಗ ನೆನಪಿಸಿಕೊಂಡರೇ ಭಯವಾಗುವಂತಿದೆ. ಸೊಗಸಾದ ನಿರೂಪಣೆ ಮೇಡಂ.
ಅನಿವಾರ್ಯವಾಗಿ ಎದುರಿಸಬೇಕಾಗಿ ಬಂದ ಸಾಹಸಮಯ ನೆನಪನ್ನು ಸುಂದರವಾಗಿ ನಿರೂಪಿಸಿದ್ದೀರಿ.
ಅಭಿನಂದನೆಗಳು.