ಪ್ರಯತ್ನದಲ್ಲಿ ಹೆಸರುವಾಸಿಯಾದ ಭಗೀರಥ

Share Button

 

ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸಾಗಲು ಎಡೆಬಿಡದೆ   ಓದಬೇಕಾಗುತ್ತದೆ. ಕೆಲವು ವೇಳೆ ಪ್ರಯತ್ನ ಸಾಕಾಗದೆಯೋ ನೆನಪು ಶಕ್ತಿ ಕುಂಠಿತವಾಗಿಯೋ, ಸೋಮಾರಿತನದಿಂದಲೋ, ಇನ್ಯಾವುದೇ ಕಾರಣದಿಂದಲೋ ಪರೀಕ್ಷೆಯಲ್ಲಿ ಸೋಲುವುದಿದೆ. ಮತ್ತೊಮ್ಮೆ ಪರೀಕ್ಷೆ ಕಟ್ಟಿ, ಕಷ್ಟಪಟ್ಟು ಓದಿ, ಪರೀಕ್ಷೆಯಲ್ಲಿ ಪಾಸಾಗುವ ತನಕ , ಪ್ರಯತ್ನ ಮುಂದುವರಿಸಬೇಕು. ಒಂದೊಮ್ಮೆ ಪ್ರಯತ್ನದಲ್ಲಿ ಸೋತರೆ ಮರಳಿ ಯತ್ನವ ಮಾಡು ಎನ್ನುತ್ತಾರೆ, ಗುರುಗಳು ಹಿರಿಯರು.  ಹಾಗೆಯೇ ಜೀವನದಲ್ಲೂ ಕೆಲವು ಸನ್ನಿವೇಶಗಳಲ್ಲಿ ಸೋಲು ಅನುಭವಿಸಬೇಕಾಗುತ್ತದೆ. ಅದಕ್ಕಾಗಿ ಅಂಜದೆ, ಧೃತಿಗೆಡದೆ ಮತೊಮ್ಮೆ , ಮಗದೊಮ್ಮೆ ಪ್ರಯತ್ನಿಸಿ ಗೆಲುವು ಸಾಧಿಸಿದೆ ಎನ್ನುವವರಿದ್ದಾರೆ. ಹೀಗೆ ಅತೀ ಕಷ್ಟಪಟ್ಟು ಗುರಿ ಸಾಧಿಸಿದರೆ, ‘ಪುರುಷ ಪ್ರಯತ್ನ’ ಮಾಡಿದೆ ಎನ್ನುತ್ತಾರೆ. ಪುರುಷ ಪ್ರಯತ್ನವೆಂದರೆ ಸಬಲದ ಯತ್ನ. ಇದಕ್ಕಿಂತಲೂ ಮಿಗಿಲಾದ ಇನ್ನೊಂದು ಮೇರು ಪ್ರಯತ್ನವಿದೆ. ಅದುವೇ ಭಗೀರಥ ಪ್ರಯತ್ನ. ಈ ಭಗೀರಥ ಎಂದರೆ ಯಾರು ? ಅವನು ಯಾಕಾಗಿ ? ಯಾರಿಗಾಗಿ ? ಎಂತಹ ? ಪ್ರಯತ್ನ ಮಾಡಿದ ಎಂಬುದನ್ನೆಲ್ಲ ತಿಳಿಯೋಣ.

ಸೂರ್ಯವಂಶದಲ್ಲಿ ಹೆಸರುವಾಸಿಯಾದ ಚಕ್ರವರ್ತಿ ಸಗರ. ಇವನಿಗೆ ಸುಮತಿ ಮತ್ತು ಕೇಶಿನಿ ಎಂಬ ಇಬ್ಬರು ಪತ್ನಿಯರು. ಕೇಶಿನಿಯಲ್ಲಿ ಅಸಮಂಜಸನೆಂಬ ಮಗನೂ ಸುಮತಿಗೆ ಅರುವತ್ತು ಸಾವಿರ ಪುತ್ರರೂ ಆಗಿ ಹೋದರು. ಈ ಅರುವತ್ತು ಸಾವಿರ ಪುತ್ರರೇ ಸಾಗರರು. ಅಸಮಂಜಸನ ಮಗ ಅಂಶುಮಂತ. ಇವನ ಮಗ ದಿಲೀಪ. ಈತನ ಮಗನೇ ಭಗೀರಥ, ಅರುವತ್ತು ಸಾವಿರ ಸಾಗರರು ದುಷ್ಕತ್ಯವನ್ನೇ ಮಾಡತೊಡಗಿದರು. ಅವರಿಂದ ಯಜ್ಞಾದಿ ಷಟ್ಕರ್ಮಗಳೆಲ್ಲ ನಾಶವಾದುವು. ದಿಕ್ಕುಗಾಣದೆ ದೇವತೆಗಳೆಲ್ಲ ದೇವಾಂಶ ಸಂಭೂತನಾದ ಕಪಿಲ ಮಹಾಮುನಿಗೆ ಮೊರೆಯಿಟ್ಟರು.

ಆಗ ಕಪಿಲ ಮುನಿಯು ‘ಚಿಂತಿಸಬೇಡ, ಸ್ವಲ್ಪ ಕಾಲದಲ್ಲೇ ಅವರೆಲ್ಲ ನಾಶ ಹೊಂದಲಿ’ ಎಂದನು. ಹೀಗಿರಲು ಸಗರನು ಅಶ್ವಮೇಧ ಯಾಗವನ್ನು ಕೈಕೊಂಡನು. (ಅಶ್ವಮೇಧವೆಂದರೆ, ಜಯಪತ್ರವನ್ನು ಕುದುರೆಯ ಹಣೆಗೆ ಕಟ್ಟಿ ಅದನನು ದೇಶದೆಲ್ಲೆಡೆ ತಿರುಗಲು ಬಿಡುವುದು. ಕುದುರೆಯನ್ನು ಕಟ್ಟಿಹಾಕಿದವರೊಂದಿಗೆ ಯುದ್ದ. ಅರುವತ್ತು ಸಾವಿರ ಸಾಗರರು ಕುದುರೆಯ ರಕ್ಷಣೆಗಾಗಿ ಸಾಗಿದರು. ಈ ಅಶ್ವವನ್ನು ಇಂದ್ರನು ಅಪಹರಿಸಿ ಒಂದು ಬಿಲವನ್ನು ಪ್ರವೇಶಿಸಿದನು. ಭೂಮಿಯಲ್ಲೆಲ್ಲೂ ಅಶ್ವವನ್ನು ಕಾಣದೆ ಸಾಗರರು ಪಾತಾಳ ಪ್ರವೇಶ ಮಾಡಿದರು. ಅಲ್ಲಿ ಒಂದೆಡೆ ಕುಳಿತು ಕಪಿಲಮುನಿ ತಪಸ್ಸು ಮಾಡುತ್ತಿದ್ದ. ಆತನೇ ಕುದುರೆಯ ಕಳ್ಳನೆಂದು ಅವನಿಗೆ ಹೊಡೆಯಲು ಆಯುಧಗಳನ್ನೆತ್ತಿದರು. ಆಗ ಕಪಿಲ ಋಷಿ ತೆರೆದ ಕಣ್ಣಿನಿಂದ ಅವರನ್ನೆಲ್ಲ ನೋಡಲು ಅವರೆಲ್ಲ ಅಲ್ಲೇ ಸುಟ್ಟು ಬೂದಿಯಾದರು. ಇವರ ಅಂತಿಮ ಸಂಸ್ಕಾರ ಸರಿಯಾಗಿ ಇಲ್ಲದೆ ಸದ್ಗತಿ ದೊರೆಯದಾಯ್ತು.

ಅದೇ ವಂಶದ ದಿಲೀಪನು ತನ್ನ ತಾತಂದಿರಾದ ಸಾಗರರ ಮುನ್ನವೇ ಅವನೂ ಸದ್ಗತಿ ಹೊಂದಿದನು. ತಂದೆಯು ಹಿಡಿದ ಕೆಲಸವನ್ನು ತಾನು ಪೂರ್ತಿಗೊಳಿಸಬೇಕೆಂದು ಅವನ ಮಗನಾದ ಭಗೀರಥನು ಗಂಗೆಯನ್ನು ಭೂಮಿಗೆ ತರಬೇಕೆಂದು ಹಿಮಾಲಯಕ್ಕೆ ಹೋಗಿ ಅಲ್ಲಿ ಕಠಿಣ ತಪಸ್ಸನ್ನಾಚರಿಸತೊಡಗಿದನು. ಘೋರ ತಪಸ್ಸಿಗೆ ಗಂಗೆ ಒಲಿದಳು. ಭೂಮಿಗೆ ಬರಲು ಒಪ್ಪಿದಳಾದರೂ ತನ್ನ ವೇಗವನ್ನು ಕಡಿಮೆಗೊಳಿಸುವುದಕ್ಕಾಗಿ ಮಹಾದೇವನಲ್ಲಿ ಪ್ರಾರ್ಥಿಸುವಂತೆ ಸೂಚನೆಯಿತ್ತಳು. ಮತ್ತೆ ಭಗೀರಥನು ಬಿಡಲಿಲ್ಲ. ಶಿವನನ್ನೂ ಧ್ಯಾನ ಮಾಡಿ ಒಲಿಸಿಕೊಂಡನು. ಗಂಗೆಯ ಕೇಳಿಕೆಯನ್ನು ಶಿವನ ಮುಂದಿಟ್ಟು ಅವನ ಒಪ್ಪಿಗೆಯನ್ನು ಪಡೆದನು. ಗಂಗೆಯು ಶಿವನ ಜಡೆಯಿಂದಲಾಗಿ ಭೂಮಿಗೆ ಹರಿದಳು.

ಭಗೀರಥನು  ಬೆಟ್ಟಗಳನ್ನು ಕಡಿದು ಗಂಗೆಗೆ ಮಾರ್ಗ ಮಾಡಿ ಉತ್ತರ ಹಿಂದೂಸ್ಥಾನದ ಬಯಲಿಗೆ ತಂದನು. ಗಂಗೆಯು ಹರಿದು ಏರುವಲ್ಲೆಲ್ಲ ಸೂಕ್ಷ್ಮವಾಗಿ ಗಮನಿಸಿದರೆ ಅನೇಕ ಕಡೆ ಪರ್ವತವನ್ನು ಒಡೆದು ದಾರಿಮಾಡಿ ಕೊಟ್ಟಂತೆ ಕಾಣುತ್ತದೆ ಎಂದು ನೋಡಿದ ಅನುಭವಿಗಳು ಹೇಳುತ್ತಾರೆ. ಗಂಗಾಮಾತೆ ಶಿವನ ಜಡೆಯ ಮೂಲಕ ಭೂಮಿಗೆ ಹರಿದು ಸಾಗರರಿಗೆ ಸದ್ಗತಿಯನ್ನುಂಟುಮಾಡಿದಳು. ಗಂಗಾವತರಣವು ಮನುಷ್ಯ ಪ್ರಯತ್ನದ ಅತ್ಯಂತ ದೊಡ್ಡ ವಿಜಯವಾಗಿದೆ. ಭಗೀರಥನ ಸಾಹಸದ ದ್ಯೋತಕವಾಗಿ ಗಂಗೆಗೆ ಭಾಗೀರಥಿ ಎಂದು ಹೆಸರಿಟ್ಟರು. ಭಗೀರಥನ ಮೂಲಕ ಸಾಗರರಿಗೆ ಸದ್ಗತಿಯನ್ನುಂಟು ಮಾಡಿದ ಗಂಗೆ, ಅಲ್ಲಿಂದ ಮುಂದೆ ಮಾನವ ಕೋಟಿಗೆ ಮೋಕ್ಷ ಕರುಣಿಸುತ್ತಲೇ ಬಂದಿದ್ದಾಳೆ. ಗಂಗೆಯಲ್ಲಿ ಮಿಂದರೆ, ಪಿತೃಗಳಿಗೆ ಪಿಂಡ ಹಾಕಿದರೆ ಸಾಯುಜ್ಯ ಸೇರುತ್ತಾರೆ ಎಂದು ಸನಾತನ ನಂಬಿಕೆಯಿದೆ. ಯಾವುದೇ ಗುರಿ ಸಾಧಿಸಲು ಸತತ ಪರಿಶ್ರಮವೇ ಮುಖ್ಯ. ಪ್ರಯತ್ನದ ಕೊನೆಯಲ್ಲಿ  ಪರಮಾತ್ಮನಿದ್ದಾನೆ ಎಂದು ಪರೋಕ್ಷವಾಗಿ ಭಗೀರಥ ಬೋಧಿಸುತ್ತಲೇ ಇದ್ದಾನೆ.  ಭಗೀರಥನಿಂದಾಗಿ ಸ್ವರ್ಗದಲ್ಲಿರುವ ಗಂಗೆ ಧರೆಗೆ ಇಳಿದಳು. ಪ್ರಯತ್ನಕ್ಕೆ ಇನ್ನೊಂದು   ಹೆಸರು ಎಂದರೆ ಭಗೀರಥ.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ

3 Responses

  1. ನಯನ ಬಜಕೂಡ್ಲು says:

    ಚೆನ್ನಾಗಿದೆ. ಮೊದಲು ಯಾವಾಗಲೋ ಓದಿದ ಅರ್ಧಂಬರ್ಧ ವಿಚಾರಗಳು, ಈಗ ಮತ್ತೆ ಪೂರ್ತಿಯಾಗಿ ನೆನಪಿಗೆ ಬಂದುವು ಈ ಕಥೆಯ ಮೂಲಕ.

  2. ಬಿ.ಆರ್.ನಾಗರತ್ನ says:

    ಭಗೀರಥ ಕಥೆಯಲ್ಲಿ ಅದು ಸಾಗರ ಸಗರ . ಪುರಾಣ ಕಥೆಗಳನ್ನು ಚೆಂದವಾಗಿ ಚೌಕಟ್ಟಿನಲ್ಲಿ ಕಟ್ಟಿಕೊಡುವ ಪ್ರಯತ್ನ ಚೆನ್ನಾಗಿ ಮೂಡಿ ಬಂದಿದೆ ಮೇಡಂ.ಅಭಿನಂದಗಳು ಮೇಡಂ.

  3. ಶಂಕರಿ ಶರ್ಮ says:

    ಯಾವುದೇ ಕೆಲಸವನ್ನು ಹಟ ಬಿಡದೆ, ಎಲ್ಲಾ ಅಡೆತಡೆಗಳನ್ನು ಎದುರಿಸಿ, ಅತ್ಯಂತ ಕಷ್ಟದಿಂದ ಪೂರ್ಣಗೊಳಿಸಿ ಅತ್ಯುತ್ತಮ ಪ್ರತಿಫಲವನ್ನು ಪಡೆದಾಗ ಭಗೀರಥ ಪ್ರಯತ್ನದಿಂದ ಫಲಕಾರಿಯಾಯಿತು ಅಂತಾರೆ. ಪೂರ್ತಿ ಕಥೆಯ ನಿರೂಪಣೆ ತುಂಬ ಸೊಗಸಾಗಿದೆ ವಿಜಯಕ್ಕ..ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: