ಸುಮ್ಮನೇ ಮೇಳೈಸಿಲ್ಲ ಅವು..!
ಬುಟ್ಟಿಯಲ್ಲಿ ಬೀಳುತ್ತಿದ್ದವು
ಚಿವುಟಿ ಕೀಳುತ್ತಿದ್ದ ಒಂದೊಂದೇ ಹೂಗಳು
ನೋವಲ್ಲೂ ನಳನಳಿಸುವುದು
ಅಭ್ಯಾಸವಾಗಿಬಿಟ್ಪಿದೆ ಅವಕ್ಕೆ
ಬಣ್ಣ ಆಕಾರಗಳಲ್ಲಿ ಗುಂಪಾದವು
ಆಯುವ ಕೈಗಳಿಗೆ ಹಗುರವಾಗಲೆಂದು
ಎಲ್ಲವಕ್ಕೂ ಮುಡಿ ಸೇರುವ ತವಕ
ಕೆಲವು ಸೌಂದರ್ಯಕ್ಕೆ, ಕೆಲವು ಕೈಲಾಸಕ್ಕೆ
ಅಂತೂ ಏರುವುದೇ ಧ್ಯಾನ, ಧ್ಯೇಯ
ನಗಲೇಬೇಕು ಅದಕ್ಕಾಗಿ
ನಗುವ ಕಂಡಾದರೂ ಕೊಳ್ಳುವವರ
ಕೈ ಸೇರುವ ಹಂಬಲ
ಸುಗಂಧದ ಪಾರಿಜಾತ ನೆಲದ ಹಾಸಾಗಿದೆ
ಅದನ್ನೂ ಆಯುತ್ತಾರೆ ಕೆಲವರು
ಮುಡಿಗೇರುವ ಆಶಯ ಅವಕ್ಕೂ ಹೆಚ್ಚಾಗಿದೆ
ಏರಿದ್ದು ಆ ದಿನದ ಸಾರ್ಥಕತೆ
ನಾಳೆಗೆ ಬೀಳುತ್ತವೆ ರಾಶಿಯಾಗಿ
ಕಂದಿ, ಕುಂದಿ ಕಸವಾಗಿ
ಮಣ್ಣಲ್ಲಿ ಮಣ್ಣಾಗಿ ಬೆರೆತು
ಮತ್ತೆ ಫಲಿಸಲು
ಏಳು- ಬೀಳುಗಳು ಬಾಧಿಸುವುದಿಲ್ಲ
ಏರುವ ಧ್ಯಾನದಲ್ಲಿ
ಆ ನಗು, ಬಣ್ಣ, ಸೌಂದರ್ಯ
ಸುಮ್ಮನೇ ಮೇಳೈಸಿಲ್ಲ.
-ನೂತನ
ಧನ್ಯವಾದಗಳು ಪ್ರಕಟಣೆಗೆ
ಸುಂದರ ಪ್ರಸ್ತುತಿ. ಬದುಕಿಗೂ, ಪ್ರಕೃತಿಗೂ ಬಹಳ ಸಾಮ್ಯವಿದೆ ಅನ್ನುವ ಅಂಶ ಇಲ್ಲಿ ಕಾಣಿಸುತ್ತದೆ.
ಸೊಗಸಾದ ಕವನ.