ರನ್ನ ಚಿನ್ನದ ನಾಡು

Share Button

ಕನ್ನಡ ನಾಡಿದು ಚಿನ್ನದ ಬೀಡಿದು
ರನ್ನನು ಜನಿಸಿದ ಪುಣ್ಯನೆಲ|
ಪೊನ್ನನು ಪಾಡಿದ ಜನ್ನನು ಪೊಗಳಿದ
ಕನ್ನಡ ನಾಡಿನ ಪುಣ್ಯಜಲ||೧||

ತೆಂಗನು ಬೆಳೆಯುವ ಕಂಗನು ತೆಗೆಯುವ
ರಂಗಲಿ ನಾಡಿದು ರಮಣಿಯವು|
ಗಂಗೆಯ ರೂಪದಿ ತುಂಗೆಯು ಹರಿಯುವ
ಸಂಗನ ಬಸವನ ತಾಣವಿದು ||೨||

ಕಲಿಯಲು ಸರಳವು ಸುಲಿದಾ ಹಣ್ಣಿದು
ಕಲಿಗಳ ತವರಿದು ಕಲಿನಾಡು
ನಲಿವಿನ ನಂದನ ಗೆಲುವಿನ ಚೆಂದನ
ಲಲಿತೆಯ ಸೊಬಗಿನ ಕರುನಾಡು||೩||

ಕಂದನ ತೊದಲಿದು ಚೆಂದನ ಕಂಪಿದು
ಗಂಧದ ಗುಡಿಯಿದು ವನಸಮವು
ಅಂದದ ಬೆಳೆಯನು ಚೆಂದದಿ ನೀಡುವ
ಸುಂದರ ಧರೆಯಿದು ಕಲ್ಪತರು||೪||

ಬಣ್ಣದ ಹೂಗಳ ಬೆಣ್ಣೆಯ ಹೂಬನ
ಕಣ್ಣನು ಸೆಳೆವುದು ಪಯಣಿಗರ
ಮಣ್ಣಲಿ ಹುದುಗಿದೆ ಹೆಣ್ಣಿನ ಗುಣಗಳ
ಬಣ್ಣಿಸೊ ಪುಟಗಳ ಹೊತ್ತಿಗೆಯು||೫||

ಅಜ್ಜನು ಹೇಳಿದ ಸಜ್ಜನ ಭಾಷೆಯು
ಮಜ್ಜಿಗೆಯೊಳಗಿನ ಬೆಣ್ಣೆಯಿದು.
ಸಜ್ಜೆಯ ತೆನೆಗಳು ಸಜ್ಜನ ಭಾಷೆಗೆ
ಲಜ್ಜೆಯ ತೋರುತ ಬಾಗಿದವು||೬||

ಸಜ್ಜೆಯ ಹೊಲದಲಿ ಗೆಜ್ಜೆಯು ಕಟ್ಟಿದ
ಹೆಜ್ಜೆಯ ಸದ್ದದು ಮೊಳಗಿರಲು
ಅಜ್ಜಿಯ ಹಾಡಿಗೆ ಹೆಜ್ಜೆಯ ಹಾಕುತ
ಗೆಜ್ಜೆಯ ನಾರಿಯು ಕುಣಿದಿರಲು||೭||

ಹಟ್ಟಿಯ ಕರುವದು ಚಿಟ್ಟನೆ ಕೂಗಲು
ತಟ್ಟನೆ ಧಾವಿಸೊ ಗೋವಂತೆ
ಹೊಟ್ಟೆಯ ಕಟ್ಟುತ ಪುಟ್ಟನಿ ಗುಣಿಸುವ
ಬೆಟ್ಟವೆ ನಮ್ಮಯ ಹೊತ್ತವಳು||೮||

ಚಿನ್ನದ ಗಣಿಯಿದು ರನ್ನದ ಮಣಿಯಿದು
ಕನ್ನಡ ನಾಡನು ಮರೆಯದಿರಿ
ಚೆನ್ನುಡಿಯಾಡುವ ಮುನ್ನುಡಿ ಬರೆಯುವ
ಕನ್ನಡ ಮಣ್ಣನು ತೊರೆಯದಿರಿ||೯||

ಬಾರಿಸು ಡಿಂಡಿಮ ತೋರಿಸು ಸಂಗಮ
ಚಾರಣ ದಾಚೆಯ ನಾಡೊರೆಗೆ
ತೋರಣ ಕಟ್ಟಿರಿ ಕೋರಿಕೆ ಸಲ್ಲಿಸಿ
ಸಾರುವ ಮಹಿಮೆಯ ಕೊನೆವರೆಗೆ ||೧೦||

-ಶ್ರೀ ಈರಪ್ಪ ಬಿಜಲಿ. ಕೊಪ್ಪಳ.

4 Responses

  1. ಈರಪ್ಪ ಬಿಜಲಿ says:

    ಹೃತ್ಪೂರ್ವಕವಾದ ಧನ್ಯವಾದಗಳು

  2. ಶಂಕರಿ ಶರ್ಮ, ಪುತ್ತೂರು says:

    ಕನ್ನಡ ತಾಯಿಗೆ ಸಕಾಲಿಕ ಕವನದರ್ಪಣೆ‌

  3. ನಯನ ಬಜಕೂಡ್ಲು says:

    ಕನ್ನಡ ಭಾಷೆಯ ಸೊಬಗನ್ನು ವಿವರಿಸಿದ ಸಾಲುಗಳು ಇಷ್ಟವಾದವು. “ಅಜ್ಜನು ಹೇಳಿದ……..

  4. Savithri bhat says:

    ಕವನ ಅರ್ಥ ಪೂರ್ಣ..ಪ್ರಾಸಬದ್ಧ..ಸುಂದರ..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: