ಕನ್ನಡಮ್ಮನನ್ನು ಪ್ರೀತಿಸೋಣ
ಕನ್ನಡ ವೆಂದಾಕ್ಷಣ ಹರ್ಷಗೊಂಡ ಕನ್ನಡಿಗರ ಮೈ ಮನ ಪುಳಕಿತವಾಗುತ್ತದೆ. ಕನ್ನಡಿಗರ ಮೈಮೇಲೆ ಹರಿಯುವ ರಕ್ತವೂ ಸಹ ಕನ್ನಡ ಕನ್ನಡ ಸವಿಗನ್ನಡ ವೆಂದು ಸಾರಿ ಹೇಳುತ್ತದೆ. ನಮ್ಮ ನಾಡಿನ ಯುವಕರಿಗಂತೂ, ಕನ್ನಡ ನಾಡಿನ ಹೆಮ್ಮೆಯ ದಿನವಾದ ಕನ್ನಡ ರಾಜ್ಯೋತ್ಸವದ ದಿನ ಬಂದರೆ ಸಾಕು. ಸಂಭ್ರಮದಲ್ಲಿ ಹಬ್ಬ ಆಚರಿಸುತ್ತಾರೆ. ಈ ದಿನ ನಾವೆಲ್ಲ ಯಾವುದೇ ಜಾತಿ, ಧರ್ಮವೆನ್ನದೆ ಒಗ್ಗಟ್ಟಿನಿಂದ ಕನ್ನಡಿಗರೆಲ್ಲರೂ ಸೇರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತೇವೆ. ಅರಿಶಿನ ಕುಂಕುಮದಂತೆ, ಹಳದಿ ಮತ್ತು ಕೆಂಪು ಮಿಶ್ರಿತ ಧ್ವಜವನ್ನು ಹಾರಿಸುತ್ತೇವೆ. ಜೊತೆಗೆ ಕುವೆಂಪು ರವರು ರಚಿಸಿದ ಜಯ ಭಾರತ ಜನನಿಯ ತನುಜಾತೆ ನಾಡಗೀತೆಯನ್ನು ಹಾಡುತ್ತೇವೆ. ಆ ಹಾಡು ಕಿವಿಗೆ ಬಿದ್ದರೆ ಸಾಕು, ಕನ್ನಡಿಗರ ಮನ ತಂಪಾಗುತ್ತದೆ. ಈ ದಿನ ನಾಡಿನ ಹೆಮ್ಮೆಯನ್ನು ಪ್ರತಿಬಿಂಬಿಸುವ ಇತರೆ ಗೀತೆಗಳನ್ನೂ ಹಾಡುತ್ತೇವೆ.ಈ ದಿನ ಹೊರ ದೇಶದಲ್ಲಿ ನೆಲೆಸಿರುವ ನಮ್ಮ ಕನ್ನಡಿಗರೂ ಸಹ, ಕನ್ನಡ ರಾಜ್ಯೋತ್ಸವವನ್ನು ಬಹಳ ಉತ್ಸುಕತೆಯಿಂದ ಆಚರಿಸುತ್ತಾರೆ. ಇದೆ ಅಲ್ಲವೆ ನಮ್ಮ ಒಗ್ಗಟ್ಟನ್ನು ಪ್ರತಿಬಿಂಭಿಸುವುದು.
ಕರ್ನಾಟಕದ ಹುಟ್ಟಿಗೆ ಕಾರಣರಾದ ಕನ್ನಡದ ಕುಲಪುರೋಹಿತರೆಂದೇ ಹೆಸರಾದ ಆಲೂರು ವೆಂಕಟರಾವ್ ಅವರು ಸ್ವಾತಂತ್ರ್ಯ ಪೂರ್ವವೇ ಕರ್ನಾಟಕ ಏಕೀಕರಣ ಚಳುವಳಿಯನ್ನು ಆರಂಭಿಸಿದವರು. ಈ ಏಕೀಕರಣ ಚಳುವಳಿಯಲ್ಲಿ ಅನೇಕ ಕವಿಗಳು, ಸಾಹಿತಿಗಳು, ನಟರು, ವಿಚಾರವಂತರು ಸೇರಿದ್ದರು. ಸ್ವಾತಂತ್ರ್ಯ ನಂತರ ಗಣರಾಜ್ಯವಾದ ಮೇಲೆ 1956 ನವೆಂಬರ್ 1 ರಂದು ಭಾಷೆಗಳಿಗನುಗುಣವಾಗಿ ರಾಜ್ಯಗಳ ವಿಂಗಡಣೆಯಾಯಿತು. ಆಗ ಮೈಸೂರು ರಾಜ್ಯ ಉದಯವಾಯಿತು. ಮುಂದೆ ಕರ್ನಾಟಕವೆಂದು ಮರು ನಾಮಕರಣವಾಯಿತು. ಲಕ್ಷಾಂತರ ಕನ್ನಡಿಗರ ಹೋರಾಟದ ಫಲದಿಂದ ಕನ್ನಡ ನಾಡನ್ನು ಕಟ್ಟಿಕೊಳ್ಳಲಾಯಿತು. ಇದನ್ನು ನಾವಿಂದು ಉಳಿಸಿ ಬೆಳೆಸಬೇಕಾಗಿದೆ. ನಮ್ಮ ಭಾಷೆ ನಮಗೆ ಹೆಮ್ಮೆ. ಯಾವತ್ತಿಗೂ ನಾವು ನಮ್ಮ ಭಾಷೆಯನ್ನು ಬಿಟ್ಟು ಕೊಡಬಾರದು. ಅನ್ಯ ಭಾಷೆ ಅವಶ್ಯಕತೆಗೆ ಮಾತ್ರವಿರಲಿ, ಮಾತೃಭಾಷೆ ಅಚ್ಚಳಿಯದೆ ಉಳಿಯಲಿ.
ಇತ್ತೀಚಿನ ದಿನಮಾನಗಳಲ್ಲಿ ನಮಗೆ ಇಂಗ್ಲಿಷ್ ವ್ಯಾಮೋಹ ಹಿಡಿದಿದೆ. ಇಂಗ್ಲಿಷ್ ನಲ್ಲಿ ಮಾತನಾಡುವವರನ್ನು ಬಾಯಿ ತೆರೆದು ನೋಡುತ್ತೇವೆ. ಅಲ್ಲದೇ ನಮ್ಮ ಮಕ್ಕಳೂ ಸಹ ಇಂಗ್ಲಿಷ್ ನಲ್ಲೇ ಓದಬೇಕೆಂದು ಇಂಗ್ಲಿಷ್ ಮಾಧ್ಯಮದಲ್ಲೇ ಓದಿಸುವ ಪ್ರಯತ್ನ. ಯಾಕೆ ಇಂಗ್ಲಿಷ್ ಬೇಕು ಅದು ಕೇವಲ ಆಡಳಿತಾತ್ಮಕವಾಗಿದ್ದರೆ ಸಾಕಲ್ಲವೇ. ಅದೇ ಸಂಪೂರ್ಣವಾಗಿ, ಕನ್ನಡ ಮಾತ್ರ ಬದುಕು ಕಟ್ಟಿಕೊಳ್ಳಲು ಬೇಕು. ಕನ್ನಡ ನೆಲದಲ್ಲಿದ್ದು, ಕನ್ನಡಮ್ಮನ ಮಡಿಲಲ್ಲಿ ಬೆಳೆದು, ಕನ್ನಡದ ಗಾಳಿಯ ಸೇವಿಸಿ, ಕನ್ನಡವನ್ನೇ ಮರೆಯಬೇಕೆ. ಕನ್ನಡ ಸಂಪೂರ್ಣ ಊಟವಾದರೆ ಅನ್ಯ ಭಾಷೆ ಊಟದೊಳಗಿನ ಉಪ್ಪಿನ ಕಾಯಿಯಂತಿರಬೇಕು.
ಕನ್ನಡಿಗರಲ್ಲಿ ಅದೆಷ್ಟು ಸಾಹಸಿಗಳಿದ್ದಾರೆ. ಮರೆಯಲಾರದಂತಹ ಕವಿಗಳು, ಇತಿಹಾಸಕಾರರು, ಕಲಾಕಾರರು, ಉತ್ತಮ ರಾಜಕೀಯ ಮಾಡಿದವರು, ಪ್ರತಿಭಾನ್ವಿತರು, ಇರುವಾಗ ನಮಗೇನು ಕಡಿಮೆ. ಕನ್ನಡದ ಕವಿಗಳು, ವಚನಕಾರರು, ದಾಸರು, ಕೀರ್ತನಕಾರರು, ಗಳಿಸಿರುವ ಜ್ಞಾನ ಸಾಗರದ ಬಹುದೊಡ್ಡ ಆಸ್ತಿಯನ್ನೇ ಬಿಟ್ಟು ಹೋಗಿದ್ದಾರೆ. ಅವರುಗಳು ಬಿಟ್ಟು ಹೋದ ಆಸ್ತಿಯ ಜ್ಞಾನ ಬಂಢಾರವನ್ನು ತೆರೆದು ಓದಿದರೆ ಈ ಜನ್ಮ ಸಾಕಾಗದು. ಅಷ್ಟು ಜ್ಞಾನ ಬಂಢಾರವಿದೆ ನಮ್ಮ ನಾಡಲ್ಲಿ. ಕನ್ನಡ ನಿಘಂಟುವಿನಲ್ಲಿಯ ಶಬ್ದಗಳೇ ಅಪಾರ. ಅಂತಹ ಹೊಸ ಹೊಸ ಪದಮಾಲೆಯನ್ನು ಪೋಣಿಸುತ್ತಾ ಹೋದರೆ, ಕನ್ನಡಮ್ಮನಿಗೆ ಅಲಂಕಾರ ಮಾಡಬಹುದು.
ಕನ್ನಡಿಗರಾದ ನಾವು ಸತತವಾಗಿ ಕನ್ನಡಮ್ಮನ ಸೇವೆ ಮಾಡೋಣ, ಕನ್ನಡಕ್ಕಾಗಿ ಹೊರಾಡೋಣ, ಎಂದಿಗೂ ಕನ್ನಡದ ಭಾಷೆ ಕಡಿಮೆಯಾಗಬಾರದು. ಕನ್ನಡದ ಕೀರ್ತಿಯನ್ನು ಬೆಳಗಿಸೋಣ.
*ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ*
-ಮಧುಮತಿ ರಮೇಶ್ ಪಾಟೀಲ್
ನಮ್ಮ ಸುಂದರ ಕನ್ನಡ ಭಾಷೆಯ ಬಗೆಗಿನ ಸೊಗಸಾದ ಸಕಾಲಿಕ ಲೇಖನ.
ಧನ್ಯವಾದಗಳು
ಸುಂದರವಾದ ಲೇಖನ