ನನ್ನ ಮುಖ ಮಾರಾಟಕ್ಕಿದೆ
ನನ್ನ ಮುಖ ಮಾರಾಟಕ್ಕಿದೆ
ಸಕಲ ಕುಟಿಲಗಳನ್ನು ಸ್ಪುರಿಸುವ ಮುಖ
ಮಾರ್ಜಾಲ ನ್ಯಾಯಾಧೀಶನ ಮುಖ
ಊಸರಬಳ್ಳಿಯಂತೆ ಬದಲಾಗುವ ಮುಖ
ಜನವಿದ್ದಲ್ಲಿ ಸರಳುವ ಮುಖ
ವೇದಿಕೆಯಲ್ಲಿ ನಟಿಸುವ ಮುಖ
ಹಗರಣಗಳ ಮಾಲೆಯ ತೊಡುವ ಮುಖ
ರಹಸ್ಯಜಾಲವ ಹೆಣೆಯುವ ಮುಖ
ದೋಚಿದ ಗಂಟನು ಮರೆಮಾಚುವ ಮುಖ
ದಾಹದ ಹುಯಿಲನು ಸಂಭಾಳಿಸೋ ಮುಖ
ಸತ್ತರೂ ಪತ್ತೆಯಾಗದ ಮುಖ
ನೆತ್ತರಿನಲ್ಲಿ ಬದುಕುವ ಮುಖ
ಅನುಮಾನ ಬಾರದೇ ವಂಚಿಸುವ ಮುಖ
ದ್ರೋಹದ ಕತ್ತಿಯ ಅಲಗಿನ ಮುಖ
ಸತ್ಯವ ಸಮಾಧಿ ಮಾಡುವ ಮುಖ
ಗೋರಿಯ ಕಟ್ಟುವ ಖಾರದ ಮುಖ
ನಗುವಿನ ಸುಳಿಯಲಿ ಸೆಳೆವಾ ಮುಖ
ಧಗಧಗ ಬೆಂಕಿಯ ನುಂಗುವ ಮುಖ
ಮಂದಿಯ ಚಪ್ಪಾಳೆ ಗಿಟ್ಟಿಸೋ ಮುಖ
ಯಾರಿಗೂ ತಿಳಿಯದೇ ಬೆಂಕಿಯ ಹಚ್ಚೋ ಮುಖ
ಕಟ್ಟುಕತೆಗಳ ಕಟ್ಟಿ ಗಿಂಜುವ ಮುಖ
ಕೋಪದ ಜನಗಳ ರಮಿಸೋ ಮುಖ
ನಾಚಿಕೆ ಬಿಟ್ಟು ನುಲಿಯುವ ಮುಖ
ದ್ವೇಷದ ಕಾವಿಗೆ ಜಗ್ಗದ ಮುಖ
ಹಾದಿ ಬೀದಿಯಲಿ ನಗುವ ಮುಖ
ಕಟೌಟ್ ಗಾಗಿ ಕಳ್ಳನಗುವಿನ ಮುಖ
ಮೋಸದ ಜಾಲದ ಮೋಹಕ ಮುಖ
ನನ್ನ ಮುಖ ಮಾರಾಟಕ್ಕಿದೆ.
ನಂಬುವ ಸಮಾಜದ ವಂಚಕ ಮುಖ
ಹದ್ದಿನ ನೆರಳಿನ ನನ್ನದೇ ಮುಖ
ರೈತನ ಹೆಣದಲಿ ನನ್ನದೇ ಬಿಂಬ
ಹಾಹಾಕಾರದೇ ನಗುತಿಹ ಮುಖ
ಸತ್ಯದ ಸಂತೆಯ ಸುಳ್ಳಿನ ಮುಖ
ಕೊಲೆಗಳ ಕಲೆಯಲ್ಲೂ ಪಳಗಿದ ಮುಖ
ರಾಜಕೀಯ ರಂಗದ ವಿಧೂಷಕ ಮುಖ
ನನ್ನ ಮುಖ ಮಾರಾಟಕ್ಕಿದೆ
ಬೆಲೆಯೇನೂ ದುಬಾರಿಯಲ್ಲ
ಒಂದೇ ಒಂದು ಗುಂಡಿಯ ಒತ್ತಿ
ನಿಮ್ಮ ಗುಂಡಿಗೆಯನು ಖರೀದಿಸುವೆ
ನನ್ನ ಮುಖ ಮಾರಾಟಕ್ಕಿದೆ.
-ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ
ಮುಖವಾಡಗಳ ಅನಾವರಣ ಮಾಡಿರುವ ವಿಡಂಬನಾತ್ಮಕ ಕವನ ಚೆನ್ನಾಗಿದೆ ಮೂಡಿ ಬಂದಿದೆ.ಅಭಿನಂದನೆಗಳು ಸಾರ್.
ಧನ್ಯವಾದಗಳು ಮೇಡಂ
ಸೊಗಸಾದ ಕವನ, ಬದುಕಿನ ಹಲವು ಮುಖವಾಡಗಳ ಅನಾವರಣ.
ಧನ್ಯವಾದಗಳು ಮೇಡಂ
ಮನುವಿನ ಆಂತರ್ಯದ ಬಗೆಗಿನ ಕಾವ್ಯ ಸುಂದರವಾಗಿದೆ
ಕುಟಿಲ ಮಾನವನ ನೂರಾರು ಮುಖಗಳ ಸ್ಪಷ್ಟ ಚಿತ್ರಣ ಮೂಡಿಸಿದ ಕವನ ಚಿಂತಿಸುವಂತೆ ಮಾಡಿದೆ.