ಬೆಳಕು-ಬಳ್ಳಿ

ಬೆನ್ನು ಬಿಡದ ಅಮ್ಮ

Share Button

 

 

 

 

 

ಕಳ್ಳಹೆಜ್ಜೆ ಇಟ್ಟುಬಂದು ಮಳ್ಳನಗೆಯ ಬೀರಿಕೊಂಡು
ಪೋಪುದಿಲ್ಲ ಶಾಲೆಗೆಂದು ಮಗಳು ಮೆಲ್ಲನುಡಿದಳು
ಸುಳ್ಳುಸುಳ್ಳು ಕಾರಣಗಳ ಗುಳ್ಳೆಯಂತೆ ತೇಲಿಬಿಡಲು
ಮೂಲೆಲಿದ್ದ ಕೋಲನೆತ್ತಿ ಅಮ್ಮ ಬೆನ್ನು ಬಿದ್ದಳು

ತನ್ನ ಕಣ್ಣ ಕನಸನೆಲ್ಲ ಮಗಳ ಮುಖದಿ ನೋಡುತವಳು
ಭವದ ಭಾರವನ್ನು ಹೊತ್ತು ಸುಣ್ಣವಾಗಿರೇ
ಸಣ್ಣ ಸಣ್ಣ ಪಾದಗಳನು ಓಡಿ ಆಡಿಸುತ್ತ ಆಕೆ
ನಾಳೆಯವಳ ಬಣ್ಣದಿಂದ ತುಂಬ ಹೊರಟಿರೇ

ಎಷ್ಟು ಕೋಪ ಬಂದರೇನು ಕರುಳಬಳ್ಳಿ ಅಲ್ಲವೇನು
ಎಷ್ಟು ಹೊತ್ತು ನಿಲ್ಲಬಹುದು ಕೋಪ-ತಾಪವೂ
ತಾನು ಪಟ್ಟಕಷ್ಟವೆಲ್ಲ ಮಗಳಿಗಿರದೆ ಹೋಗಲೆಂದು
ಹೆತ್ತ ಹೊಟ್ಟೆ ಬಯಕೆಯದು ತುಂಬಾ ಸಹಜವು

ಹೀಗೆ ಇದ್ದಳೆನ್ನ ಅಮ್ಮ, ನನ್ನ ಬಾಳ ಪುಟದ ಬೊಮ್ಮ
ಹಾಡಿ ಹೊಗಳುತವಳ ನನಗೆ ಎಂದೂ ದಣಿಯದು
ಬಾಲ್ಯದಲ್ಲಿ ಬೆನ್ನುಬಿಡದೆ ಕಾಡಿದಂತ ಜೀವವೊಂದು
ಇಂದು ನನ್ನ ದೈವವಾಗಿ ನಿಂತ ಪರಿಯಿದು

-ವಿದ್ಯಾಶ್ರೀ ಅಡೂರ್, ಉಜಿರೆ 

5 Comments on “ಬೆನ್ನು ಬಿಡದ ಅಮ್ಮ

  1. ಬ್ಯೂಟಿಫುಲ್. ನಿಮ್ಮ ಕವನ ಓದಿ ಅಮ್ಮನ ನೆನಪಾಗುತ್ತಿದೆ.

  2. ಮೂರು ಮೂರು ಮಾತ್ರೆಗಳ ಉತ್ಸಾಹ ಲಯದಲ್ಲಿ ಕಟ್ಟಿಕೊಟ್ಟ ಸರಳಸುಂದರ ಹಾಡು. ವಿದ್ಯಾ,ನಿಮಗೆ ಹಾಡು ಸಹಜವಾಗಿ ಒಲಿದಿದೆ.ಖುಷಿಯಾಯಿತು ಓದಿ

  3. ತುಂಬಾ ಸೊಗಸಾಗಿದೆ.. ತಾಯಿಯ ಮಮತೆ, ಬಾಲ್ಯದ ನೆನಪುಗಳು ಮರು ನೆನೆಯುವಂತೆ ಆಯಿತು….

  4. ಕವನ‌ದಲ್ಲಿ‌ಅಮ್ಮ ಮಗಳ ಬಂಧನದ ಪ್ರೀತಿ ತುಂಬಿ ಬಂದಿದೆ ಮೇಡಂ

  5. ಮಗಳ ಬಗೆಗಿನ ಕನಸನ್ನು ಅಮ್ಮ ಕಣ್ತುಂಬಿಕೊಳ್ಳುತ್ತಾ ಮುನ್ನಡೆಯುವ ರೀತಿ ಅಮೋಘ.. ಎಲ್ಲರಿಗೂ ಅವರವರ ಅಮ್ಮನನ್ನು ನೆನಪಿಸಿದಿರಿ..ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *