ನೆನಪು 17 : ವಿದ್ವಾಂಸ ಎ ಕೆ ರಾಮಾನುಜನ್ ಹಾಗೂ ಕೆಎಸ್ ನ

Share Button

 

ಕವಿ ಕೆಎಸ್ ನ

ಕವಿ,ವಿಮರ್ಶಕ,ವಿದ್ವಾಂಸ,ಭಾಷಾಂತರಕಾರ, ಹಾಗೂ ಷಿಕಾಗೊ ವಿಶ್ವವಿದ್ಯಾಲಯದಲ್ಲಿ ದ್ರಾವಿಡ ಭಾಷಾ ಅಧ್ಯಯನ ಪೀಠದ ಮುಖ್ಯಸ್ಥರಾಗಿದ್ದ ಎ ಕೆ ರಾಮಾನುಜನ್ ಅವರಿಗೆ ಅಮೆರಿಕೆಯಲ್ಲಿದ್ದರೂ ಕನ್ನಡದ್ದೇ ಕನವರಿಕೆ. ಅಲ್ಲಿದ್ದುಕೊಂಡೇ ಕನ್ನಡ ಸಾಹಿತ್ಯದ ವಿಶೇಷವಾಗಿ ಕಾವ್ಯದ ಬೆಳವಣಿಗೆಯನ್ನು ಬಹಳ ಜತನದಿಂದ ಗಮನಿಸುತ್ತಿದ್ದ ಅಧ್ಯಯನಜೀವಿ ಎ ಕೆ ಆರ್.

.ಭಾರತಕ್ಕೆ ಆಗಾಗ್ಗೆ ಬಂದಾಗಲೆಲ್ಲ ನಮ್ಮತಂದೆಯವರನ್ನು ತಪ್ಪದೆ ಭೇಟಿಯಾಗುತ್ತಿದ್ದರು.ಬೆಂಗಳೂರಿಗೆ ಬಂದೊಡನೆ ಇಂಥ ದಿನ ,ವೇಳೆ ಮನೆಗೆ ಬರುತ್ತೇನೆಂದು ಒಂದು ಪೋಸ್ಟ್ ಕಾರ್ಡ್ ಹಾಕುತ್ತಿದ್ದರು.ಅಪ್ಪಟ ಹಳೆ ಮೈಸೂರಿನ ಆಡುಮಾತಿನ ಕನ್ನಡ ಶೈಲಿಯಲ್ಲಿ. ನಿಯಮಿತ ವೇಳೆಯಲ್ಲೇ ಅವರ ಹಾಜರಿ ಇರುತ್ತಿತ್ತು.ವಾಮನಾಕಾರ,ಸೌಮ್ಯ ನಡೆ, ಭಾರತೀಯ ಶೈಲಿಯ ಜುಬ್ಬ, ತುಂಬಾ ಸರಳ ವ್ಯಕ್ತಿ.

ಬಂದೊಡನೆ ತಂದೆಯವರೊಡನೆ ಕುಶಲೋಪರಿ ನಡೆಸುತ್ತ,”ನರಸಿಂಹಸ್ವಾಮಿಗಳೆ ಇತ್ತೀಚೆಗೆ ಯಾವುದಾದರೂ ಪದ್ಯ ಬರೆದಿರಾ?”ಎಂದು ಪ್ರಶ್ನಿಸುತ್ತಿದ್ದರು.1960ರಿಂದ 1976ರವರೆಗೆ ನಮ್ಮತಂದೆ ಯಾವುದೇ ಸಂಕಲನ ಪ್ರಕಟಣೆ ಮಾಡದೆ ಇದ್ದುದರಿಂದ ಕಾವ್ಯಾಸಕ್ತರೆಲ್ಲ ಈ ಪ್ರಶ್ನೆ ಕೇಳುವುದು ಸರ್ವೇಸಾಧಾರಣವಾಗಿತ್ತು. ನಮ್ಮ ತಂದೆ “ಇಂಥ ಪದ್ಯಗಳನ್ನು ಬರೆದಿದ್ದೇನೆ “ ಎಂದರೆ,”ನನಗೆ ಅವುಗಳ ಪ್ರತಿ ಬೇಕಲ್ಲಾ?”ಎಂದು ಕೇಳುತ್ತಿದ್ದರು ರಾಮಾನುಜನ್.

ಸಾಮಾನ್ಯವಾಗಿ ನಮ್ಮ ತಂದೆ ಎರಡು ,ಮೂರು ಕಾರ್ಬನ್ ಪ್ರತಿ ಸ್ಪಷ್ಟವಾಗಿ ಬರುವಂಥ ಗಟ್ಟಿ ಕೈಬರಹ ಹೊಂದಿದ್ದರು ಮತ್ತು ಅಂಥದೊಂದು ಕಾರ್ಬನ್ ಪ್ರತಿ ರಾಮಾನುಜನ್ ಅವರಿಗೆ ನೀಡುತ್ತಿದ್ದರು. ಪ್ರತಿಗಳನ್ನು ಪಡೆದು ಒಮ್ಮೆ ಅವುಗಳ ಮೇಲೆ ಕಣ್ಣಾಡಿಸಿ ಅವುಗಳನ್ನು ತಮ್ಮ ಬ್ರೀಫ್ ಕೇಸಿನಲ್ಲಿ ಕಾವ್ಯದ ಚರ್ಚೆ ಮುಂದುವರೆಸುತ್ತಿದ್ದರು.

ಎ ಕೆ ರಾಮಾನುಜನ್

ಒಮ್ಮೆ ಹೆಚ್ಚುವರಿ ಕಾರ್ಬನ್ ಪ್ರತಿ ಇರಲಿಲ್ಲ. ನನ್ನನ್ನು ಕರೆದು “ಬೇರೆ ಹಾಳೆಯಲ್ಲಿ ಇದನ್ನೊಂದು ಪ್ರತಿ ಮಾಡಿಕೊಡು”ಎಂದರು. ನಾನು ಸಂತಸದಿಂದ ಹಾಗೂ ನನ್ನ ಕೈಬರಹ ರಾಮಾನುಜನ್ ಅವರ ಷಿಕಾಗೊ ವಿವಿ ದ್ರಾವಿಡ ಅಧ್ಯಯನ ಪೀಠದಲ್ಲಿ ಪ್ರದರ್ಶನಕ್ಕೆ ಈಡಲಾಗುತ್ತದೆಯೋ ಎಂಬ ಭ್ರಮೆಯಲ್ಲಿ  ನಿಧಾನವಾಗಿ ನಕಲು ಮಾಡುತ್ತಿದ್ದೆ ಒಂದೆರಡು ನಿಮಿಷದಲ್ಲೇ ನಮ್ಮ ತಂದೆ ಬಂದು “ನಿನ್ನ ಮಾಮೂಲಿ ಕೈಬರಹದಲ್ಲೇ ಬೇಗ ಬರೆದುಕೊಡು.ನೀನು ಬರೆದಿದ್ದನ್ನು ರಾಮಾನುಜನ್ ಅವರಿಗೇನೂ ಕೊಡುವುದಿಲ್ಲ.”ಎಂದರು.  ನನಗೆ ಭ್ರಮನಿರಸನವಾಯಿತು ಮತ್ತು ಆ ಮಾತು ನನ್ನ ಕೈಬರಹದ ಬಗ್ಗೆ ಭಾಷ್ಯವೂ ಆಗಿತ್ತು. ನಮ್ಮ

ಮನೆಯಲ್ಲಿ ನನ್ನ ಹಿರಿಯಣ್ಣ ಕೆ ಎನ್ ಹರಿಹರ ಮಾತ್ರ ನಮ್ಮ ತಂದೆಯವರಂತೆಯೇ ಉತ್ತಮವಾದ ಕೈಬರಹ ಹೊಂದಿರುವುದು.

ಬಹಳ ಕಡಿಮೆ ಬಾರಿ ಮುಖತಃ ಭೇಟಿಯಾಗಿದ್ದರೂ ನಮ್ಮ ತಂದೆಯವರ ಕಾವ್ಯದ ನಿರಂತರ ಹಾಗೂ ನಿಕಟ ಸಂಪರ್ಕ ಹೊಂದಿದ್ದವರು ರಾಮಾನುಜನ್.

(ಮುಂದುವರಿಯುವುದು….)

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ:   http://surahonne.com/?p=30005

-ಕೆ ಎನ್  ಮಹಾಬಲ
(ಕೆ ಎಸ್ ನ  ಪುತ್ರ, ಬೆಂಗಳೂರು )

3 Responses

  1. km vasundhara says:

    ಕುತೂಹಲಕಾರಿ ಸರಣಿ

  2. ನಯನ ಬಜಕೂಡ್ಲು says:

    ಸರ್, ಚೆನ್ನಾಗಿದೆ

  3. ಶಂಕರಿ ಶರ್ಮ, ಪುತ್ತೂರು says:

    ಹಿರಿಯ ಸಾಹಿತಿಗಳ ಒಡನಾಟದ ಬದುಕು..ಬರಹ ಬಹಳ
    ಉತ್ತಮವಾಗಿದೆ ಸರ್..ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: