ಮಾತು ಮನ ಕೆಡಿಸೀತು ಜೋಕೆ…
“ನುಡಿದರೆ ಮುತ್ತಿನ ಹಾರದಂತಿರಬೇಕು” ಅಂತ ಬಸವಣ್ಣ ಹೇಳಿದ್ದಾರೆ.ಮುತ್ತಿನ ಹಾರದಷ್ಟು ಬೆಲೆಬಾಳುವ ಮಾತುಗಳಾಡದಿದ್ದರೂ ಕತ್ತಿಯ ಮೊನೆಯಿಂದ ಚುಚ್ಚುವಂತ ಮಾತುಗಳಾಡದಿದ್ದರೆ ಸಾಕು. ಮನುಷ್ಯನನ್ನು ಇತರೆ ಜೀವಿಗಳಿಂದ ಬೇರೆ ಮಾಡಿರುವುದು ಈ ಮಾತೇ.ಆದರೆ ಮಾತು ಮಾನವತೆಯ ಪ್ರತೀಕವಾಗದೆ ಪ್ರಾಣಿತನ ತೋರಿಸಬಾರದು ಅಲ್ಲವೇ. ಒಂದು ಒಳ್ಳೇ ಮಾತು ಕೊಡುವ ಸಮಾಧಾನ, ಸಾಂತ್ವನಗಳು ನೊಂದ ಜೀವಗಳಿಗೆ ಅಮೃತ ಸಿಂಚನವೇ ಸರಿ. ಮೊದಲೇ ನೊಂದಿರುವ ಜೀವಗಳಿಗೆ ಇನ್ನೂ ಅವರ ನೋವಿಗೆ ಅವರೇ ಕಾರಣವೆನ್ನುವಂತೆ ಕುಟುಕು ಮಾತನಾಡಿ ನೋಯಿಸಿದರೆ ಅದಕ್ಕಿಂತ ಪಾಪ ಇನ್ನೇನಿದೆ. ಕೆಲವರ ಹುಟ್ಟುಗುಣವೆ ಹಾಗೆ ಚುಚ್ಚಿ ನೋಯಿಸಿ ಮಾತನಾಡದೇ ಹೋದರೆ ಉಂಡ ಅನ್ನ ಅರಗಲಾರದೆನೋ. ತಮ್ಮ ತಮ್ಮ ಕಲ್ಯಾಣ ಗುಣಗಳನ್ನು ಹೊಗಳಿಕೊಳ್ಳುವ ಭರದಲ್ಲಿ ಎದುರಿಗಿರುವವರನನ್ನು ಕೇವಲ ಮಾಡಿ ಮಾತನಾಡುವುದು ಯಾವ ನ್ಯಾಯ.
ಪ್ರಪಂಚದಲ್ಲಿನ ಯಾವ ಮನುಷ್ಯನೂ ಪರಿಪೂರ್ಣನಲ್ಲ. ಓರೆ ಕೋರೆ ಇಲ್ಲದ,ಸ್ವಭಾವದಲ್ಲಿ ಸ್ವಲ್ಪವಾದರೂ ಅಂಕುಡೊಂಕು ಇಲ್ಲದವರು ಯಾರೂ ಇಲ್ಲ. ಇದನ್ನು ಮನಸ್ಸಿನಲ್ಲಿ ಇಟ್ಟು ಕೊಂಡು ಎದುರಿಗಿರುವವರಿಗೆ ಮನ ನೋಯದಂತೆ ಮಾತನಾಡುವುದೂ ಒಂದು ಕಲೆಯೇ ಸರಿ. “ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು” ಅನ್ನೋ ಗಾದೇನೆ ಇದೆ. ಮನೆ ಮಾತ್ರವೇನು ಮನ ಕೂಡ ಕೆಡುತ್ತದೆ. ಮನುಷ್ಯ ಅನ್ನ ಬಟ್ಟೆಗೆ ಕೊರತೆಯಾದರೂ ಕೂಡ ಸಹಿಸಿಕೊಂಡಾನು ಆದರೆ ಒಂದು ಸಣ್ಣ ಅವಮಾನವನ್ನೂ ಸಹಿಸುವುದು ತುಂಬಾ ಕಷ್ಟ. ಯಾವುದೇ ಒಂದು ತಂಟೆ ತಕರಾರಿದ್ದರೆ ಜಗಳವಾಡಿ ತಮ್ಮ ಪಾಲಿನ ಹಕ್ಕು ಸಾಧಿಸುವುದೇ ಬೇರೆ ಆದರೆ ಒಬ್ಬರ ಯಶಸ್ಸು ನೋಡಿ ಕರುಬಿ ಕಾಲೆಳೆಯುವದೇ ಬೇರೆ. ನಮ್ಮಿಂದ ಒಬ್ಬರಿಗೆ ಉಪಕಾರ ಮಾಡಲು ಆಗದಿದ್ದರೆ ಬೇಡ ಅಪಕಾರವನ್ನಾದರೂ ಮಾಡಬಾರದಲ್ಲವೆ.
ಕೆಲವರಿಗೆ ಇನ್ನೊಬ್ಬರನ್ನು ಆಡಿಕೊಳ್ಳುವುದು ಒಂದು ರೋಗ.ಆಡಿ ಕೊಳ್ಳಲು ಬಣ್ಣ, ರೂಪ, ಸ್ವಭಾವದ ಒಂದು ಕೊರತೆ ಹೀಗೆ ಏನಾದರೂ ಸಿಕ್ಕರೆ ಸಾಕು ಆಡಿ ಅಣಕಿಸಿ ಖುಷಿ ಪಡುವುದು ಒಂದು ಮನೋ ವಿಕೃತಿಯಲ್ಲದೇ ಮತ್ತೇನು. ಜೊತೆಗೆ ನಮ್ಮ ಸಮಾಜದಲ್ಲಿ ಗಂಡಸಿಗೆ ಒಂದು ನ್ಯಾಯ, ಹೆಂಗಸರಿಗೆ ಒಂದು ನ್ಯಾಯ. ಏನಾದರೂ ಹೆಂಗಸು ಸಮಾಜದ ಚೌಕಟ್ಟು ಮೀರಿ ಹೋದರೆ, ಕಾಲು ಎಡವಿದರೆ ಮುಗಿಯಿತು ಬಿಡಿ, ಆಡಿ ಆಡಿ ಹಂಗಿಸಿಯೆ ಅವಳ ಜೀವನ ನರಕ ಮಾಡಿ ಬಿಡುತ್ತಾರೆ. ಗಟ್ಟಿಗಿತ್ತಿಯಾಗಿ ತಿರುಗೇಟು ನೀಡುವಂಥ ಸಾಮರ್ಥ್ಯವಿದ್ದರೆ ಮಾತ್ರ ಬದುಕುಳಿಯಲು ಸಾಧ್ಯವೇನೊ.
ಇನ್ನೂ ಕೆಲವರಿರುತ್ತಾರೆ ಎದುರಿಗೆ ಇಂದ್ರ ಚಂದ್ರ ಅಂತ ಹೋಗೊಳೋದು ಅವರು ಮರೆಯಾಗಿ ಬೆನ್ನು ಕಂಡ ಕೂಡಲೇ ಆಡಿಕೊಂಡು ನಗೋದು. ಇಂಥ ಆಷಾಡಭೂತಿತನದಿಂದ ಸಿಗುವುದಾದರೂ ಏನು? ಇನ್ನೊಬ್ಬರನ್ನು ಏನಾದರೂ ಅನ್ನುವ ಮೊದಲು ನಾವು ಏನು, ನಮ್ಮ ನಮ್ಮ ಕೊರತೆಗಳೇನು ಅನ್ನೋದು ನಮಗೆ ಗೊತ್ತಿರಬೇಕು, ನಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವಾಗ ಇನ್ನೊಬ್ಬರ ತಟ್ಟೆಯ ನೊಣ ಹುಡುಕುವ ಚಾಳಿ ಏಕೆ.
ಒಬ್ಬರಿಗೆ ಉಪಕಾರ ಮಾಡಿದ ನಂತರ ಅದನ್ನು ಮರೆತರೆ ಮಾಡಿದವರಿಗೂ, ಪಡೆದುಕೊಂಡವರಿಗೂ ಇಬ್ಬರಿಗೂ ಕ್ಷೇಮವೆ. ಅದು ಬಿಟ್ಟು ಮಾಡಿದ್ದನ್ನು ಜೀವನವಿಡೀ ಹಾಡಿದರೆ ಅದು ತರುವ ನೋವು ಸಹಿಸಲಸಾಧ್ಯ. “ಎಡಗೈಯಲ್ಲಿ ಮಾಡಿದ ದಾನ ಬಲಗೈಗೂ ತಿಳಿಯಬಾರದು” ಅಂತ ಅದಕ್ಕೇ ಏನೋ ನಮ್ಮ ಹಿರಿಯರು ಗಾದೆ ಮಾಡಿರುವುದು. ಮತ್ತೆ ಕೆಲವರಿಗೆ ತಾವೇ ಪ್ರಪಂಚದಲ್ಲಿ ಒಳ್ಳೆಯವರು ನಮ್ಮ ಬಿಟ್ಟರೆ ಇನ್ನಿಲ್ಲ ಅನ್ನೋ ಅಹಂ. ಅದು ಅವರಿಗೆ ಮಾತ್ರ ಸೀಮಿತವಾಗಿದ್ದರೆ ಸರಿ. ಆದರೆ ಇನ್ನೊಬ್ಬರೊಂದಿಗೆ ತುಲನೆ ಮಾಡಿ, ಅವರು ಕೆಟ್ಟವರು ಅವರಿಗೆ ಹೋಲಿಸಿದರೆ ತಾವೆಷ್ಟು ಒಳ್ಳೆಯವರು ಅಂತ ಪ್ರೂವ್ ಮಾಡಿ ತೋರಿಸುವ ಬುದ್ಧಿಯಂತ ಸಣ್ಣತನ ಇನ್ನೊಂದಿಲ್ಲ.
ನಾನು ಸತ್ಯವಂತೆ/ತ, ನೇರ ನಡೆ ನುಡಿ, ಒಳಗೊಂದು ಹೊರಗೊಂದು ಮಾತನಾಡಲು ಗೊತ್ತಿಲ್ಲ ಅನ್ನೋ ಹೆಮ್ಮೆಯ ಕೆಲವರ ಗುಣ ಒಳ್ಳೆಯದೇ ಆದರೂ ಆ ಗುಣ ಪ್ರದರ್ಶನದ ಭರದಲ್ಲಿ ಮಾತು ಇನ್ನೊಬ್ಬರ ಮನ ಮುರಿಯಬಾರದಲ್ಲವೆ? ಹೇಳುವುದನ್ನೇ ಮೃದು ಮಾತುಗಳಿಂದ, ಮನ ನೋಯದಂತೆ ತಿಳಿಸಿ ಹೇಳಿದರಾಗದೆ. ಕೆಲವು ಬಾರಿ ಹಾಗೆ ಇನ್ನೊಬ್ಬರಿಗೆ ಬುದ್ದಿ ಹೇಳುವುದು ಅದರಲ್ಲೂ ಮಕ್ಕಳಿಗೆ ತಿಳಿಸಿ ಹೇಳುವುದಕ್ಕೆ ಅಪಾರ ತಾಳ್ಮೆ ಬೇಕು ನಿಜ. ಆದರೆ ತಾಳ್ಮೆಗೆಟ್ಟು, ನಿಂದಿಸಿಯೋ, ಬೆದರಿಸಿಯೋ ಕೆಲಸ ಸಾಧಿಸಿದರೆ ಅದರ ಪರಿಣಾಮ ತಾತ್ಕಾಲಿಕ. ತಾಳ್ಮೆ ಕಳೆದುಕೊಳ್ಳದೆ ನೀಡಿದ ಸಲಹೆ ಸೂಚನೆಗಳು ದಾರಿದೀಪವಾಗಿ ಖಂಡಿತಾ ಕಾಪಾಡುತ್ತವೆ.
ಯಶಸ್ಸಿನ ಮಾನದಂಡ ಹಣ, ಸಾಧನೆ, ಅಂತಸ್ತುಗಳೇ ಆಗಿರುವ ಈ ಕಾಲದಲ್ಲಿ, ಕೆಲವು ಸಾಧಕರನ್ನು, ಉಳ್ಳವರನ್ನು ಅವರಿಗಿಂತ ಕಡಿಮೆಯವರು ಮಾತನಾಡಿಸದೆ ಇರುವುದೇ ಒಳ್ಳೆಯದು. ಕೆಲವರ ಯಶಸ್ಸಿನ ಹಾದಿಯಲ್ಲಿ ದಾರಿ ತೋರಿಸಿದ ಪೋಷಕರು, ಒಳ್ಳೆಯ ಶಾಲೆ, ಮಾರ್ಗದರ್ಶನ, ಅವಕಾಶ, ಎಲ್ಲಾ ದೊರೆತು ಯಶಸ್ಸಿನ ಹಾದಿ ಹೂ ಹಾಸಿನದ್ದಾಗಿದ್ದರೆ, ಕೆಲವರಿಗೆ ಕಲ್ಲು ಮುಳ್ಳಿನ ಎಡರು ತೊಡರುಗಳ ನಡೆ ಹಾಸೇ ಸಿಕ್ಕಿರಬಹುದು. ಹಾಗಾಗಿ ಜೀವನದ ಕ್ರಮಿಸುವ ದಾರಿಯಲ್ಲಿ ಕೆಲವರು ಬಹಳ ಮುಂದೆ ಸಾಗಿ
ಹೋದರೆ ಇನ್ನೂ ಕೆಲವರು ಹಿಂದುಳಿದಿರಬಹುದು. ಆದ್ದರಿಂದ ಯಾರನ್ನೇ ಆಗಲಿ ಅವರ ಪ್ರಸ್ತುತ ಸನ್ನಿವೇಶದಲ್ಲಿ ಅವರು ಗಳಿಸಿದ ಹಣ, ಆಸ್ತಿ ಪಾಸ್ತಿ, ಅಂತಸ್ತುಗಳಿಗಿಂತ, ಆ ಹಂತದಲ್ಲಿ ಅವರು ಪಡೆದಿರುವ ನೆಮ್ಮದಿ, ಇತರರ ಜೊತೆಗಿನ ಅವರ ಒಡನಾಟ ಇವುಗಳಿಂದ ಅಳತೆ ಮಾಡಬಾರದೇಕೆ.
ಇದಕ್ಕೆ ಹೊರತಾಗಿಯೂ ಕೆಲವರು ಇರುತ್ತಾರೆ, ಅವರ ಸಂಪರ್ಕವೇ ತಂಗಾಳಿ ಸೂಸಿದಂತೆ. ಎಷ್ಟೇ ಬೇಸರವಿರಲಿ ಹಂಚಿಕೊಂಡರೆ ನುಡಿಯುವ ಸಾಂತ್ವನಗಳು, ಎದುರಿನ ಜೀವಕ್ಕೆ ಸಮಾಧಾನ ನೆಮ್ಮದಿ ತರುವ ಮಾತುಗಳಾಡುವ ಇಂಥವರ ಸಂತತಿ ಸಾವಿರವಾಗಲಿ. ಬೇಸರ, ಖಿನ್ನತೆಗಳು ಆವರಿಸಿದಾಗ ತಲೆಯಿಡಲು ಹೆಗಲು ನೀಡುವವರು, ಕೈ ಹಿಡಿದು ಮೇಲೆತ್ತುವ ಕರುಣೆಯ ಕರದವರು, ಕಲ್ಲು ಮುಳ್ಳಿನ ದಾರಿಯಲ್ಲಿ ಸ್ವಲ್ಪದೂರವಾದರೂ ಜೊತೆ ನಡೆವವರು, “ಇದೂ ಕೂಡ ಕ್ಷಣಿಕ” ಎಂದು ದು:ಖದ ದಿನಗಳಲ್ಲಿ ತಬ್ಬಿ ಸಂತೈಸುವವರು ಕೂಡ ಎಷ್ಟೋ ಜನ. ಇರುತ್ತಾರೆ. ಅಂತಹ ಸ್ನೇಹ, ಬಳಗದವರು ಬಹಳಷ್ಟು ದೊರೆತರೆ ಜೀವನವೆಂಬ ರಸ್ತೆಯ ಕೈ ಮರಗಳಾಗುತ್ತಾರೆ.
“ಮನುಷ್ಯನ ಜೀವನ ಒಂದು ಮಿಂಚಿನಂತೆ, ಕ್ಷಣಿಕ” ಎಂದು ಬುದ್ಧ ಹೇಳಿದ್ದಾನೆ.ಮಿಂಚಿ ಮರೆಯಾಗುವ ಮುನ್ನ, ಸುಡುವ ಸಿಡಿಲಾಗುವುದಕ್ಕಿಂತ,ತುಸುವಾದರೂ ಬೆಳಕು ನೀಡಿ ಮರೆಯಾಗೋಣ.
-ಸಮತಾ.ಆರ್ , ಸೋಮವಾರಪೇಟೆ
ತುಂಬಾ ಚೆನ್ನಾಗಿದೆ ಎಲ್ಲರ ಮನಸ್ಸಿನಲ್ಲಿರುವ ಭಾವನೆಗಳನ್ನು ಅಚ್ಚುಕಟ್ಟಾಗಿ ನಿರೂ ಪಿಸಿದ್ದಿರ
Nice
Arthapoorna lekhana
Very nice
ಚೆನ್ನಾಗಿ ದೆ ಮನ ಮುಟ್ಟುವ ಹಾಗೆಇದೆ
ಬಹಳ ಚೆಂದ ಸಮತಾ.ಅಭಿನಂದನೆ
Very nice
ಲೇಖನ ಚೆನ್ನಾಗಿ ಮೂಡಿ ಬಂದಿದೆ.
Nice piece of work.Continue with such relishing ideas.
ಮಾತು ಬಲೃವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ
ತುಂಬಾ ಚೆನ್ನಾಗಿದೆ
Nice and thoughtful article
ತೂಕದ ಬರೆಹ ಸಮತಾ..
ಚೆನ್ನಾಗಿದೆ. ಮಾತಿನ ಹಲವು ರೀತಿಗಳು.
ಮಾತಿನ ಮಹತ್ವದ ಬಗ್ಗೆ ಚಿಂತನಾತ್ಮಕ ಲೇಖನ …ಸೊಗಸಾಗಿದೆ.
ಚಂದದ ಲೇಖನ